“ಋಣಭಾರ” ಕಥಾಸಂಕಲನಕ್ಕೆ ಸಾಹಿತ್ಯ ಶರಭ ಪ್ರಶಸ್ತಿ
ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಅಪ್ಪಟ ಹಳ್ಳಿ ಪ್ರತಿಭೆ ಅನಂತ ಅವರ ಚೊಚ್ಚಲ ಕೃತಿ ಋಣಭಾರ ಕಥಾಸಂಕಲನ ಇದೀಗ ಮೂರನೆಯ ಪ್ರಶಸ್ತಿ ಪಡೆದುಕೊಂಡಿದೆ. 2020 ರಲ್ಲಿ ಪ್ರಕಟಗೊಂಡ ಈ ಕಥಾಸಂಕಲನವು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಯುವಬರಹಗಾರ ಚೊಚ್ಚಲ ಕೃತಿ ಬಹುಮಾನ ಹಾಗೂ ಹೆಬ್ಬಗೋಡಿ ಗೋಪಾಲ್ ದತ್ತಿ ಪ್ರಶಸ್ತಿ ಪಡೆದುಕೊಂಡಿತ್ತು. ಇದೀಗ ಗುರುಕುಲ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಸಾಹಿತ್ಯ ಶರಭ ಪ್ರಶಸ್ತಿಗೆ ಕೃತಿ ಆಯ್ಕೆಯಾಗಿದೆ ಎಂದು ಗುರುಕುಲ ಪ್ರತಿಷ್ಠಾನದ ರಾಜ್ಯಾಧ್ಯಕ್ಷರಾದ ಹುಲಿಯೂರುದುರ್ಗ ಲಕ್ಷ್ಮಿನಾರಾಯಣ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನಂತ ಅವರು ರಂಗಕಲಾವಿದರಾಗಿದ್ದು, ವಿಜ್ಞಾನದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಸಧ್ಯ ಕನ್ನಡ ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ತೊಡಗಿಕೊಂಡಿದ್ದಾರೆ. ಕನ್ನಡ ಕಲರವ, ಅವ್ವ ಪುಸ್ತಕಾಲಯ ಹಾಗೂ ರಂಗವೈವಿಧ್ಯ ತಂಡಗಳ ಸಂಸ್ಥಾಪಕ ಅಧ್ಯಕ್ಷರು ಕೂಡ ಹೌದು. ‘ಮೂರನೆಯವಳು’ ಎಂಬ ಕವನ ಸಂಕಲನವನ್ನು ಎರಡನೆಯ ಕೃತಿಯಾಗಿ ಪ್ರಕಟಿಸಿ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದ್ದಾರೆ. ಇವರ ಸಾಹಿತ್ಯ ಹಾಗೂ ರಂಗಭೂಮಿ ಕಲಾಸಕ್ತಿಯನ್ನು ಗುರುತಿಸಿ ಶ್ರೀನಿವಾಸ ಚಾರಿಟಬಲ್ ಟ್ರಸ್ಟ್ ವತಿಯಿಂದ ‘ರಾಜ್ಯ ಯುವರತ್ನ ಪ್ರಶಸ್ತಿ’ ನೀಡಿ ಅಭಿನಂದಿಸಲಾಗಿದೆ. ಈವರೆಗೆ ಅವಧಿ, ವಿಶ್ವವಾಣಿ, ಉದಯವಾಣಿ, ಜನಮಿಡಿತ, ಬುಕ್ ಬ್ರಹ್ಮ, ಕೆಂಡಸಂಪಿಗೆ, ಪಂಜು, ಸಾಹಿತ್ಯಮೈತ್ರಿ, ಅವ್ವ ಪುಸ್ತಕಾಲಯ, ನಸುಕು ಸೇರಿದಂತೆ ಇನ್ನಿತರ ಪತ್ರಿಕೆಗಳಲ್ಲಿ ಇವರ ಕವನಗಳು ಹಾಗೂ ಲೇಖನಗಳು ಪ್ರಕಟಗೊಂಡಿವೆ.
ಅನಂತ್ ರವರು ತನ್ನ ತಂದೆಯ ಸ್ಮರಣಾರ್ಥವಾಗಿ “ಅವ್ವ ಪುಸ್ತಕಾಲಯ” ಎಂಬ ಡಿಜಿಟಲ್ ಲೈಬ್ರರಿ ಹಾಗು ಅಂತರ್ಜಾಲ ಬ್ಲಾಗ್ https://avvapustakaalaya.blogspot.com/ ನೆಡೆಸುತ್ತಿದ್ದಾರೆ. ಯುವ ಬರಹಗಾರರನ್ನು ಉರಿದುಂಬಿಸಿ ಸಾಹಿತ್ಯ ಸೇವೆ ಮಾಡಿಸಿ ವರ್ಷಕ್ಕೊಮ್ಮೆ ಅವರುಗಳಿಗೆ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡುತ್ತಾ ಗೌರವಿಸುತ್ತ ಬಂದಿದ್ದಾರೆ. ಜೊತೆಗೆ ಪ್ರಕಟಗೊಂಡ ಪುಸ್ತಕಗಳಲ್ಲಿ ಸೃಜನಶೀಲ ಪುಸ್ತಕಗಳನ್ನು ಗುರುತಿಸುತ್ತ ಅದಕ್ಕೂ ಕೂಡ ಪ್ರಶಸ್ತಿಯನ್ನು ಘೋಷಿಸುತ್ತ ತಮ್ಮ ನಿರಂತರ ಬೆಂಬಲವನ್ನು ಬರಹಗಾರರಿಗೆ ನೀಡುತ್ತಿದ್ದಾರೆ.
ಶ್ರೀ ಅನಂತ್ ರವರ ಸೃಜನಶೀಲ ಬರವಣಿಗೆ ಹಾಗು ಬರಹಗಾರರಿಗೆ ಅವರು ನೀಡುತ್ತಿರುವ ಪ್ರೋತ್ಸಾಹ ಇನ್ನಷ್ಟು ಹೆಚ್ಚಲಿ ಎಂದು ನಮ್ಮ ಸಾಹಿತ್ಯಮೈತ್ರಿ ವತಿಯಿಂದ ಹಾರೈಸೋಣ.
ಸಾಹಿತ್ಯ ಮೈತ್ರಿ ತಂಡ