ರಕ್ಷಾಬಂಧನ

ರಕ್ಷಾ ಬಂಧನ
(ಸ್ನೇಹ ಪ್ರೀತಿಗಿಂತ ಮಿಗಿಲಾದದ್ದು)

ನೂಲ ಹುಣ್ಣಿಮೆಯ ಪವಿತ್ರವಾದ ವಿಶೇಷ ದಿನ
ಅಣ್ಣ-ತಂಗಿ ಅಕ್ಕ-ತಮ್ಮರು ಭೇಟಿಯಾಗುವ ಕ್ಷಣ
ಸಹೋದರಿಯರ ಕಷ್ಟ ಕಾರ್ಪಣ್ಯಗಳು ನೆನಪಾಗದ ದಿನ
ಮನದ ಭಾವನೆಗೆ ಜೀವ ತುಂಬುವ ರಕ್ಷಾ ಬಂಧನ

ಕಟ್ಟುವ ರಾಖಿ ಚಿನ್ನದ್ದಾದರೇನು ಬೆಳ್ಳಿಯದ್ದಾದರೇನು
ಪ್ರೀತಿ ವಾತ್ಸಲ್ಯ ತುಂಬಿರುವ ನೂಲುದಾರ ಹೆಚ್ಚಲ್ಲವೇನು
ತವರಿಗೆ ಖುಷಿಯಲಿ ಬರುವ ಸಹೋದರಿಯರ ಕಂಡೆನು
ಅವರ ಕರುಣೆ ಮಮತೆ ಕಾಳಜಿಗೆ ನಾ ಮೌನಿಯಾದೆನು

ರಾಖಿಯ ಕಟ್ಟುವ ಆ ಸುಮಧುರ ಘಳಿಗೆಯಲಿ
ತಾಯಿಯ ಕಾಣುವೆವು ಸಹೋದರಿಯ ಮುಖದಲಿ
ಸಂಬಂಧದ ಜವಾಬ್ದಾರಿ ಹೆಚ್ಚಿಸಿದರು ಪುರುಷರಲಿ
ಪಾದ ಸ್ಪರ್ಶಿಸಿ ಋಣಮುಟ್ಟಿಸುವೆನೆಂದು ಬೇಡಿರಿ ಅಕ್ಕ ತಂಗಿಯರಲಿ

ತವರಿಗೆ ಓಡೋಡಿ ಬಂದಾಗ ತೋರಿಸಿ ಕನಿಕರ
ಕಷ್ಟದಲ್ಲಿರುವ ಸಹೋದರಿಯರಿಗಿರಲಿ ನಿಮ್ಮ ಪ್ರೀತಿ ಮಮಕಾರ
ಭೂಲೋಕದ ಪವಿತ್ರವಾದ ಸಂಬಂಧ ಸಹೋದರಿ-ಸಹೋದರ
ಸೂರ್ಯ ಚಂದ್ರರಂತೆ ನಾವೆಂದಿಗೂ ಅಜರಾಮರ

ಹಣೆಗೆ ಕುಂಕುಮವಿಟ್ಟು ನನಗೆ ಕಾವಲಿರು ಎಂದವಳು
ನೀನೇ ನನ್ನ ಬದುಕಿನ ಶ್ರೀರಕ್ಷೆಯೆಂದು ರಾಖಿ ಕಟ್ಟಿದಳು
ತಬ್ಬಿಕೊಂಡು ನನ್ನನ್ನು ತಬ್ಬಲಿ ಮಾಡಬೇಡ ಎಂದಳು
ಸಿಹಿಯ ತಿನಿಸಿ ನಿನ್ನ ಬಾಳು ಸಿಹಿಯಾಗಿರಲೆಂದು ಹರಸಿದಳು

ಶ್ರೀ ಮುತ್ತು.ಯ.ವಡ್ಡರ
(ಶಿಕ್ಷಕರು)
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಿರೇಮಳಗಾವಿ
ಬಾಗಲಕೋಟ
9845568484

Related post