ರಘೋತ್ತಮ ತೀರ್ಥರು
ನಾರಾಯಣನ ಅವತಾರ ರೂಪಗಳೆಲ್ಲವೂ ದ್ವೈತ ಮತದ ಅನುನಾಯಿಗಳಿಗೆ ಮೋಕ್ಷ ಕೊಡುವ ರೂಪಗಳಾಗಿವೆ. ಸಾಮಾನ್ಯರನ್ನು ಪರಮಾತ್ಮನೆಡೆಗೆ ಕರೆದೊಯ್ಯುವ ಸಾಧನ, ಮಾಧ್ವ ಪರಂಪರೆಯಲ್ಲಿ ಬರುವ ಮಠಗಳು ಹಾಗೂ ಪೀಠಾಧಿಪತಿಗಳು, ನರಹರಿ ತೀರ್ಥರಿಂದ ಹಿಡಿದು ಶ್ರೀ ವಿಶ್ವೇಶತೀರ್ಥ ಶ್ರೀಪಾದರವರೆಗೆ ಅನೇಕ ಮಾಧ್ವ ಮಹಿಮಾನ್ವಿತ ಯತಿವರೇಣ್ಯರು ಪಾಮರರನ್ನು ಮೋಕ್ಷದೆಡೆಗೆ ಕೊಂಡೊಯ್ಯುವ ಕೆಲಸ ಮಾಡಿದ್ದಾರೆ. ಅಂಥಹವರಲ್ಲಿ ಶ್ರೀಮಧ್ವಾಚಾರ್ಯರು, ಶ್ರೀರಾಘವೇಂದ್ರತೀರ್ಥರು, ಶ್ರೀಸತ್ಯಭೋದ ತೀರ್ಥರು, ಶ್ರೀವಾದಿರಾಜರು, ಶ್ರೀ ಸತ್ಯಪ್ರಮೋದ ತೀರ್ಥರು ಮುಂತಾದವರಿದ್ದಾರೆ. ಇಂಥಹ ಮಹಾಮಹಿಮರ ಸಾಲಿನಲ್ಲಿ ನಿಲ್ಲುವವರು ಸರ್ವ ಮಾಧ್ವರಿಂದ ಪೂಜೆಗೊಳ್ಳುವವರು ಆದ ಮತ್ತೊಬ್ಬರೆಂದರೆ ಶ್ರೀರಘೋತ್ತಮತೀರ್ಥರು. ಶ್ರೀಉತ್ತರಾದಿ ಮಠದ ಪರಂಪರೆಯಲ್ಲಿ ಬರುವ ಗುರುಗಳಲ್ಲಿ ಇವರದ್ದು ಅಗ್ರಮಾನ್ಯವಾದ ಸ್ಥಾನ. ಮಧ್ವಸಿದ್ದಾಂತದ ಪ್ರಸಾರದಲ್ಲಿ ಅಗ್ರಶ್ರೇಣಿಯಲ್ಲಿ ನಿಲ್ಲುವವರು ಶ್ರೀ ರಘೂತ್ತಮತೀರ್ಥರು.
ಪಲಿಮಾರು ಮಠದ ಪರಂಪರೆಯಲ್ಲಿ ಹತ್ತೊಂಭತ್ತನೆಯ ಯತಿಗಳಾಗಿ, ಮಾಧ್ವ ಪರಂಪರೆಯಲ್ಲಿ ಅಪ್ರತಿಮ ಪಂಡಿತರೆಂದು ಖ್ಯಾತರಾದವರು ಶ್ರೀರಘೋತ್ತಮ ತೀರ್ಥರು. ಓಮ್ಮೆ ಶ್ರೀ ರಘುವರ್ಯ ತೀರ್ಥರು ಸಂಚಾರದಲ್ಲಿದ್ದಾಗ ಸ್ವರ್ಣಾವಟ (ಸುವರ್ಣಗಡ) ಎಂಬ ಗ್ರಾಮಕ್ಕೆ ಬಂದಿರುತ್ತಾರೆ. ಅಲ್ಲಿ ರಘುವರ್ಯತೀರ್ಥರ ಪೂರ್ವಾಶ್ರಮದ ಸಹೋದರಿ ಲಕ್ಷ್ಮಿ ಭಾಯಿ ಹಾಗೂ ಆಕೆಯ ಪತಿ ಶ್ರೀವಿಠ್ಠಲಾಚಾರ್ಯ ದಂಪತಿಗಳು ವಾಸವಾಗಿರುತ್ತಾರೆ. ಇವರ ಮನೆಗೆ ಬಂದ ಶ್ರೀರಘುವರ್ಯ ತೀರ್ಥರು ಅವರ ಮನದ ಇಂಗಿತವನ್ನು ಅರಿತು, ನಿಮ್ಮ ತಪಸ್ಸು ಫಲಿಸಿದೆ, ನಿಮಗೊಬ್ಬ ವಂಶೋದ್ದಾರಕ ಜನಿಸುವ ಸಮಯ ಬಂದಿದೆ. ಮುಂದೆ ನಿಮಗೆ ಹುಟ್ಟುವ ಮಗವನ್ನು ಮಠಕ್ಕೆ ನೀಡಬೇಕೆಂದು ಹೇಳಿದಾಗ ಮಕ್ಕಳಿಲ್ಲದ ದಂಪತಿಗಳು ಇದನ್ನು ಕೇಳಿ ಸಂತೋಷ ದುಖಃಗಳೆರಡು ಆಗುತ್ತದೆ, ಅದರೆ ಗುರುವಾಣಿ ಅವರಿಗೆ ದೈವವಾಣಿಯಾಗಿರುತ್ತದೆ. ತಕ್ಷಣ ತಮ್ಮ ಒಪ್ಪಿಗೆಯನ್ನು ಸೂಚಿಸುತ್ತಾರೆ.
ಜನನ ಬಾಲ್ಯ: ಇದಾದ ಕೆಲವೇ ಸಮಯದಲ್ಲಿ ಅವರಿಗೆ ಗಂಡುಮಗುವಾಗುತ್ತದೆ. ಭೂಸ್ಪರ್ಶವಿಲ್ಲದೇ ಮಗುವಿನ ಜನನವಾಗಬೇಕೆಂಬ ಕಾರಣಕ್ಕೆ ಶ್ರೀರಘುವರ್ಯರು ಪ್ರಸವ ಸಮಯಕ್ಕೆ ಚಿನ್ನದ ಹರಿವಾಣವನ್ನು ಕಳಿಸಿದ್ದರಂತೆ. ಮಗು ಹುಟ್ಟಿದ ಮೇಲೆ ಮಗುವಿನ ಪೋಷಣೆಗೆಂದು ದಿನನಿತ್ಯ ಭಗವಂತನಿಗೆ ಅಭಿಷೇಕ ಮಾಡಿದ ಹಾಲನ್ನೇ ವ್ಯವಸ್ಥೆ ಮಾಡಿದ್ದರು. ಮನುಷ್ಯ ಹುಟ್ಟುವ ಜಾಗ ಹಾಗೂ ತಿನ್ನುವ ಆಹಾರ ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇಂಥಹ ಅಪೂರ್ವ ಸನ್ನೀವೇಷಗಳಿಂದಾಗಿ ಮಗುವಿನ ವರ್ಚಸ್ಸು ದಿನದಿಂದ ದಿನಕ್ಕೆ ಹುಣ್ಣಿಮೆಯ ಚಂದ್ರನಂತೆ ವರ್ಧಿಸತೊಡಗಿತ್ತು. ಮಗುವಿಗೆ ರಾಮಚಂದ್ರ ಎಂದು ನಾಮಕರಣ ಮಾಡಲಾಗಿತ್ತು. ಉಪನಯನವಾಗುವವರೆಗೂ ರಘೂತ್ತಮರು ತಮ್ಮ ತಂದೆ ತಾಯಿಯ ಬಳಿಯೆ ಬೆಳೆದರು. ಐದನೇ ವರ್ಷಕ್ಕೆ ಉಪನಯನವಾದ ನಂತರ ಗುರುಗಳ ಆದೇಶದಂತೆ ಲಕ್ಷ್ಮಿ ಭಾಯಿ ದಂಪತಿಗಳು ಮಗುವನ್ನು ಮಠಕ್ಕೆ ಒಪ್ಪಿಸಿದರು. ಮಗುವನ್ನು ಮಠಕ್ಕೆ ಒಪ್ಪಿಸಿ ಸ್ವಲ್ಪಕಾಲದಲ್ಲಿಯೇ ಇವರ ಭಕ್ತಿಗೆ ಮೆಚ್ಚಿ ಅವರಿಗೆ ಹೆಣ್ಣು ಮಗುವೊಂದು ಜನಿಸಿತು.
ಸನ್ಯಾಸ ವಿದ್ಯಾಭ್ಯಾಸ: ಐವತೈದು ವರ್ಷಗಳಷ್ಟು ಧೀರ್ಘಕಾಲ ಪೀಠವನ್ನು ಅಲಂಕರಿಸಿದ್ದ ಮಹಾಮಹಿಮ ಶ್ರೀರಘುವರ್ಯರಿಗೆ ತಮ್ಮ ಶಿಷ್ಯನ ಭವಿಷ್ಯದ ಬಗ್ಗೆ ಗೊತ್ತಿತ್ತು. ಅದಕ್ಕೆ ಅವರು ತಡ ಮಾಡದೇ ಕ್ರಿ.ಶ 1554 ಮಾರ್ಚ 5 ರ ಶುಕ್ರವಾರ ಆನಂದನಾಮ ಸಂವತ್ಸರದ ರೇವತಿನಕ್ಷತ್ರದಲ್ಲಿ ವಟುವಿಗೆ ಸನ್ಯಾಸವನ್ನು ನೀಡಿ ಶ್ರೀರಘೂತ್ತಮತೀರ್ಥ ಎಂದು ನಾಮಕರಣ ಮಾಡಿದರು. ಉತ್ತರಾದಿ ಮಠದ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಹಾಗೂ ಬ್ರಹ್ಮಚರ್ಯಾಶ್ರಮದಿಂದಲೇ ಸನ್ಯಾಸತ್ವವನ್ನು ಸ್ವೀಕರಿಸಿದ ಅಪೂರ್ವ ದಾಖಲೆಯಾಯಿತು. ಸನ್ಯಾಸತ್ವ ನೀಡಿದ ನಂತರ ಬರಿ ಶಾಸ್ತ್ರ ವಿದ್ಯಾಪಾಠಗಳೊಂದಿಗೆ ಮಠವನ್ನು ನಿರ್ವಹಿಸುವ ಆಡಳಿತ ಕೌಶಲವನ್ನು ಸಹ ಹೇಳಿಕೊಟ್ಟರು. ಶ್ರೀರಘುವರ್ಯರು ಶ್ರೀರಘೂತ್ತಮರಿಗೆ ಪ್ರಕರಣಗ್ರಂಥಗಳೇ ಅಲ್ಲದೇ ತತ್ವಪ್ರಕಾಶಿಕಾ ಗ್ರಂಥವೂ ಸೇರಿ ಎಲ್ಲಾ ಧರ್ಮ ಕೃತಿಗಳ ಪಾಠಗಳನ್ನು ಹೇಳಿಕೊಟ್ಟರು. ಈ ವೇಳೆಗಾಗಲೇ ಶ್ರೀರಘುವರ್ಯರಿಗೆ ಮೋಕ್ಷಕಾಲ ಸಮೀಪಿಸತೊಡಗಿತ್ತು. ಇದನ್ನು ತಿಳಿದ ಅವರು ಸಂಸ್ಥಾನವನ್ನು ಶ್ರೀರಘೂತ್ತಮರಿಗೆ ವಹಿಸಿದರು. ತಮ್ಮ ಶಿಷ್ಯರಾದ ಆದ್ಯವರದರಾಜಾಚಾರ್ಯರೆಂಬ ವಿದ್ವನ್ಮಣಿಯನ್ನು ಕರೆಸಿ ತಮ್ಮ ಮನದ ಇಂಗಿತವನ್ನು ತಿಳಿಸಿದರಲ್ಲದೇ, ಶ್ರೀರಘೂತ್ತಮರ ಮುಂದಿನ ವಿದ್ಯಾಭ್ಯಾಸವನ್ನು ನೀವು ನೋಡಿಕೊಳ್ಳಬೇಕೆಂದು ಆದೇಶ ನೀಡಿ ಆನೆಗೊಂದಿಯಲ್ಲಿ ಇಹಲೋಕವನ್ನು ತ್ಯಜಿಸಿದರು.
ದ್ವೈತ ಮತ ಪ್ರಸಾರ: ತಮ್ಮ ಹತ್ತನೆಯ ವಯಸ್ಸಿನಲ್ಲಿಯೇ ತಮ್ಮ ಮಠದ ವಿದ್ಯಾರ್ಥಿಗಳಿಗೆ ತತ್ವಪ್ರಕಾಶಿಕಾ ನ್ಯಾಯಸುದೆಯ ಪಾಠಗಳನ್ನು ಮಾಡುತ್ತಿದ್ದರಲ್ಲದೇ, ಇವರು ಪಾಠಮಾಡಲು ಪೂರ್ವತಯಾರಿ ಮಾಡಿಕೊಳ್ಳುವಾಗ ಯಾವುದಾದರೂ ಭಾಗ ಅರ್ಥವಾಗದಿದ್ದಾಗ ಕನಸಿನಲ್ಲಿ ಶ್ರೀರಘುವರ್ಯರು ಬಂದು ಶಿಷ್ಯನ ಸಂದೇಹವನ್ನು ನಿವಾರಣೆ ಮಾಡುತ್ತಿದ್ದರೆಂದರೆ ಗುರುಶಿಷ್ಯರ ಸಂಭAದ ಹೇಗಿರಬಹುದು? ಶ್ರೀ ರಘೂತ್ತಮರ ಪಾಠಪ್ರವಚನದಿಂದಾಗಿ ಅವರ ಶಿಷ್ಯ ಸಂಪತ್ತು ಅಘಾದವಾಗಿ ಬೆಳೆಯಿತು. ಇವರ ಗರಡಿಯಲ್ಲಿ ಬೆಳೆದ ಶಿಷ್ಯರು ಪ್ರಕಾಂಡ ಪಂಡಿತರೆನಿಸಿದರು. ಇವರ ಶಿಷ್ಯರೆಲ್ಲಾ ಬೇರೆ ಬೇರೆ ಸ್ಥಳಗಳಿಗೆ ತೆರಳಿ ದ್ವೈತ ಸಿದ್ದಾಂತ ಪ್ರಸಾರದಲ್ಲಿ ತೊಡಗಿಸಿಕೊಂಡರಲ್ಲದೇ ಅಪಾರ ಜನಮನ್ನಣೆಗೆ ಪಾತ್ರರಾದರು. ದ್ವೈತ ಮತ ಮಹಾ ತಪಸ್ವಿಗಳ ಸಾಲಿನಲ್ಲಿ ಶ್ರೀರಘೂತ್ತಮತೀರ್ಥರು ಮಹಾಮಹಿನ್ವಾತಿಗಾಗಿ ಮುಂಪಕ್ತಿಯಲ್ಲಿ ನಿಲ್ಲುತ್ತಾರೆ. ಪಾಠಪ್ರವಚನಕಾರ್ಯದಲ್ಲಿ ಇವರು ಮಾಡಿದ ವಿಶಿಷ್ಟ ಕ್ರಾಂತಿಯಿಂದಾಗಿ ಶ್ರೀವೇದವ್ಯಾಸತೀರ್ಥರು, ಶೀವೇದೇಶತೀರ್ಥರು, ಶೀವ್ಯಾಸನಾರಾಯಣಚಾರ್ಯರು, ತರಂಗಿಣೀ ರಾಮಾಚಾರ್ಯರು, ಪಾಂಡುರಂಗಿ ಆನಂದಭಟ್ಟಾರಕರು, ರೊಟ್ಟಿ ವೇಂಕಟಾದ್ರಿ ಭಟ್ಟರು ಮೊದಲಾದ ಪ್ರಕಾಂಡ ಪಂಡಿತರು ಮಹಾನುಭಾವರು ದ್ವೈತ ಮತ ಪ್ರಸಾರದಲ್ಲಿ ತೊಡಗಿಕೊಂಡರು ಅಲ್ಲದೇ ಅವರೆಲ್ಲರ ಶಿಷ್ಯ ಪರಂಪರೆಯೂ ಸುಧೀರ್ಘಕಾಲ ಉಳಿದುಬಂದಿತು. ಅಷ್ಟೇ ಅಲ್ಲದೇ ಭೋಜನಕ್ಕೆಂದು ಭಿಕ್ಷೆಗೆ ತೆರಳುವ ಪದ್ದತಿಯನ್ನು ಬದಲಾಯಿಸಿ ಶ್ರೀಮಠದಲ್ಲೇ ಪಾಕಕಾರ್ಯ ನೆಡೆಸಿ ಅದನ್ನು ಭಗವಂತನಿಗೆ ನಿವೇದಿಸಿ ಪ್ರಸಾದವನ್ನು ಸ್ವೀಕರಿಸಬೇಕೆಂಬ ಪರಿಪಾಠವನ್ನು ಬೆಳೆಸಿದವರು, ಗುರುಪೀಠಕ್ಕೆ ವರ್ಚಸ್ಸು ತಂದುಕೊಟ್ಟವರು ಶ್ರೀರಘೂತ್ತಮರು.
ಮಹಾಮಹಿಮರು ಶ್ರೀರಘೂತ್ತಮರು: ಇವರು ಬರಿ ಜ್ಞಾನನಿಧಿಗಳಾಗಿದ್ದಂತೆ ತಪೋನಿಧಿಗಳೂ ಆಗಿದ್ದ ಮಹನೀಯರು. ದೇಹಿ ಎಂದು ಬೇಡಿ ಬಂದವರಿಗೆ ಶ್ರೀ ವಾದಿರಾಜರಂತೆ ಹಾಗೂ ಶ್ರೀರಾಘವೇಂದ್ರ ತೀರ್ಥರಂತೆ ಕಲ್ಪವೃಕ್ಷ ಕಾಮಧೇನು ಎನ್ನಿಸಿದ್ದರು ಶ್ರೀರಘೂತ್ತಮರು. ಹುಟ್ಟು ಮೂಗನಾದ ಅಂಬಿಗನೊಬ್ಬನು ಇವರನ್ನು ಭಕ್ತಿಯಿಂದ ಪ್ರಾರ್ಥಿಸಿದಾಗ ಅವನಿಗೆ ಕಮಡಲೋದಕವನ್ನು ನೀಡಿ ಮಾತು ಬರುವಂತೆ ಅನುಗ್ರಹಿಸಿದವರು ಇವರು. ಇಂದಿಗೂ ತಿರುಕ್ಕೊಯಿಲೂರಿನಲ್ಲಿರುವ ಅವರ ಬೃಂದಾವನದ ಮುಂದೆ ಭಕ್ತಿಯಿಂದ ಬೇಡಿ ಮೂಕತ್ವ ಕಳೆದುಕೊಂಡ ಭಕ್ತರಿದ್ದಾರೆ. ಬ್ರಿಟಿಷರ ಕಾಲದಲ್ಲಿ ಅಧಿಕಾರಿಯೊಬ್ಬ ದಕ್ಷಿಣ ಪಿನಾಕಿನಿ ಸೇತುವೆಯ ವಿಸ್ತರಣ ಕಾರ್ಯಕ್ಕಾಗಿ ವೃಂದಾವನ ಜಾಗವನ್ನು ವಶಪಡಿಸಿಕೊಳ್ಳಲು ಮುಂದಾದಾಗ ಅವನ ಸ್ವಪ್ನ ದರ್ಷನವಿತ್ತು ಆ ಕೆಲಸವನ್ನು ಅಲ್ಲಿಗೆ ನಿಲ್ಲಿಸಬೇಕೆಂದು ಸೂಚಿಸಿದ್ದರು. ಬೆರಗಾದ ಅವನು ಹಾಗೆಯೇ ಮಾಡಲು ಸಂತಾನವಿಲ್ಲದವನು ಪುತ್ರಸಂತಾನ ಪಡೆದು ಸಂತಸಪಟ್ಟ. ಈಗಲೂ ಇಲ್ಲಿಗೆ ಬರುವ ಭಕ್ತರು ಆರೋಗ್ಯ, ಉದ್ಯೋಗ, ಸಂತಾನ ಪಡೆದು ಕೃತಾರ್ಥಗಾಗಿ ಬದುಕುತ್ತಿರುವ ನಿದರ್ಷನಗಳಿವೆ. ಎಲ್ಲಾ ಧರ್ಮೀಯರೂ ತಿರುಕ್ಕೋಯಿಲೂರಿಗೆ ಬಂದು ಶ್ರೀರಘೂತ್ತಮರ ಸೇವೆ ಮಾಡಿ ತಮ್ಮ ಕಷ್ಟಗಳನ್ನು ಕಳೆದುಕೊಂಡಿರುವ ಅಪೂರ್ವ ನಿದರ್ಷನಗಳಿವೆ.
ಗ್ರಂಥರಚನೆ: ಗ್ರಂಥರಚನೆಯಲ್ಲಿ ಸಹ ಶ್ರೀರಘೂತ್ತಮತೀರ್ಥರದು ಮತ್ತೊಂದು ವಿಕ್ರಮವೇಂದೆ ಹೇಳಬೇಕು. ಟಿಪ್ಪಣಿಗ್ರಂಥಗಳನ್ನೇ ಹೆಚ್ಚಾಗಿ ರಚಿಸಿ ಗ್ರಂಥರಚನೆಯ ಪರಂಪರೆಗೆ ಹೊಸ ಆಯಾಮ ನೀಡಿದ ಕೀರ್ತಿ ರಘೂತ್ತಮ ತೀರ್ಥರಿಗೆ ಸಲ್ಲುತ್ತದೆ. ಭಾವ ಭೋದಗಳೆಂದೇ ಪ್ರಖ್ಯಾತವಾದ ಅವರ ಟಿಪ್ಪಣಿಗ್ರಂಥಗಳು ಮೂಲಗ್ರಂಥಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ತುಂಬಾ ಸಹಾಯವಾಗುತ್ತದೆ. ಇವರು ರಚಿಸಿದ ಗ್ರಂಥಗಳಲ್ಲಿ ಮುಖ್ಯವಾಗಿ ತತ್ವಪಕಾಶಿಕಾಭಾವಭೋದ,(ಶ್ರೀಜಯತೀರ್ಥರ ತತ್ವಪ್ರಕಾಶಿಕೆಗೆ ರಚಿತವಾಗಿರುವ ಟಿಪ್ಪಣಿಗ್ರಂಥ) ಸನ್ಯಾಸವೃತಿಭಾವಭೋದ ಎಂಬ ಮಹೊನ್ನತ ಕೃತಿ, ಅನುವ್ಯಾಖ್ಯಾನನ್ಯಾಯಮಾಲಾಬ್ರಹ್ಮಸೂತ್ರಸಂಬಂಧಪ್ರದೀಪ ಎಂಬ ಗ್ರಂಥ, ವಿವರಣೋದ್ದಾರ, ತಾರತಮ್ಯಸ್ತೋತ್ರ, ತಿಥಿತ್ರಯವಿನಿರ್ಣಯ, ವಿಷ್ಣುತತ್ವನಿರ್ಣಯಟೀಕಾಭಾವಭೋದ, (ಇದು ಶ್ರೀಜಯತೀರ್ಥರ ವಿಷ್ಣುತತ್ವನಿರ್ಣಯಟೀಕೆಯ ಮೇಲೆ ರಚಿತವಾಗಿರುವ ಟಿಪ್ಪಣಿ), ಗೀತಾಭಾಷ್ಯಪ್ರಮೇಯದೀಪಿಕಾಭಾವಭೋದ ಹಾಗೂ ಬೃಹದಾರಣ್ಯಕೋಪನಿಷದ್ಬಾಷ್ಯಭಾವಭೋದ ಎಂಬ ಮಾಹಾಗ್ರಂಥಗಳನ್ನು ಮಾಧ್ವ ಸಮಾಜಕ್ಕೆ ನೀಡಿದ್ದಾರೆ. ಭವಭೋದಗಳೆಂದೇ ಪ್ರಸಿದ್ದವಾದ ಟಿಪ್ಪಣಿ ಗ್ರಂಥಗಳನ್ನು ರಚಿಸಿದ್ದರಿಂದ ಅವರು “ಭವಭೋದಾಚಾರ್ಯ”ರೆಂದೇ ಖ್ಯಾತರಾಗಿದ್ದಾರೆ.
ಬೃಂದಾವನಪ್ರವೇಶ: ತಮಿಳುನಾಡಿನ ಅರುಣಾಚಲ(ತಿರುವಣ್ಣಾಮಲೈ) ಇಂದ ಸುಮಾರು ನಲವತ್ತು ಕಿಮೀ ದೂರದಲ್ಲಿರುವ ತಿರುಕ್ಕೋಯಿಲೂರಿನಲ್ಲಿ ಶ್ರೀರಘೂತ್ತಮ ತೀರ್ಥರ ಬೃಂದಾವನವಿದೆ. ವಾಮನವತಾರದಲ್ಲಿ ಬಲಿಚಕ್ರವರ್ತಿಯನ್ನು ದಮನ ಮಾಡಿದ ಸ್ಥಳ ಇದು ಎಂದು ಸ್ಥಳ ಪುರಾಣ ಹೇಳುತ್ತದೆ. ದಕ್ಷಿಣ ಪಿನಾಕಿನೀ ಎಂಬ ಹೆಸರಿನಿಂದಲೂ ಈ ಕ್ಷೇತ್ರ ಪ್ರಸಿದ್ಧವಾಗಿದೆ. ಧರ್ಮಪ್ರಸಾರ ಮಾಡುತ್ತಾ ಸಂಚಾರದಲ್ಲಿದ್ದಾಗ ಇಲ್ಲಿಗೆ ಬಂದ ಶ್ರೀರಘೂತ್ತಮರು ಸ್ವಲ್ಪದಿನಗಳ ಕಾಲ ಅಲ್ಲಿಯೇ ಉಳಿದುಕೊಂಡಿದ್ದರು. ಕೊನೆಗೆ ತಮ್ಮ ಶಿಷ್ಯರಾದ ಶ್ರೀವೇದವ್ಯಾಸತೀರ್ಥರಿಗೆ ಸಂಸ್ಥನವನ್ನು ಒಪ್ಪಿಸಿ 1596ನೇ ಮನ್ಮಥನಾಮ ಸಂವತ್ಸರದ ಪುಷ್ಯ ಶುಕ್ಲ ಏಕಾದಶಿ ಗುರುವಾರದಂದು ವೈಕುಂಠಯಾತ್ರೆ ಮಾಡಿದರು. ಇಲ್ಲಿರುವ ಬೃಂದಾವನಕ್ಕೆ ಮೇಲ್ಛಾವಣಿ ಇರುವುದಿಲ್ಲ. ಪುಷ್ಯ ಶುಕ್ಲ ದಶಮಿ ಹಾಗೂ ದ್ವಾದಶಿಯಂದು ಶ್ರೀರಘೋತ್ತಮ ತೀರ್ಥರ ಆರಾದನೆ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಇಲ್ಲಿ ನಡೆಯುತ್ತದೆ.
ಡಾ. ಪ್ರಕಾಶ್ ಕೆ ನಾಡಿಗ್