ರೈಲು ಪ್ರಯಾಣಕ್ಕೆ ವಿಸ್ಟಾಡೋಮ್ ಸ್ಪರ್ಶ
ರೈಲು ಪ್ರಯಾಣವೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹೆಚ್ಚು ಕುಲುಕಾಟವಿಲ್ಲದ ಸುಖ ನಿದ್ರೆಯ ಪ್ರಯಾಣಕ್ಕೆ ಎಲ್ಲರೂ ಹೆಚ್ಚಾಗಿ ಅವಲಂಬಿಸುವುದು ರೈಲನ್ನೇ. ಭಾರತೀಯ ರೈಲ್ವೆಯಲ್ಲಿ ಇಂದು ಹಲವಾರು ವಿನೂತನ ಆವಿಷ್ಕಾರಳು ಬಂದಿದ್ದು, ಅತ್ಯಂತ ವೇಗದ ತೇಜಸ್, ಬುಲೆಟ್ ರೈಲು, ವಿದ್ಯುತ್ ರೈಲು ಮತ್ತು ಐಶಾರಾಮಿ ಗೋಲ್ಡನ್ ರಥ್ ಇತ್ಯಾದಿ ಪ್ರಮುಖವಾದವುಗಳು. ಈ ಸಾಲಿಗೆ ಇದೀಗ ಹೊಸ ಮಾದರಿಯೊಂದು ಸೇರ್ಪಡೆಯಾಗಿದ್ದು, ಅದುವೇ ವಿಸ್ಟಾಡೋಮ್ ರೈಲು.
ಸಾಮಾನ್ಯ ರೈಲು ಸಂಪೂರ್ಣ ಕಬ್ಬಿಣದ ಬಾಡಿಯನ್ನು ಹೊಂದಿದ್ದರೆ, ವಿಸ್ಟಾಡೋಮ್ ರೈಲು ಸಂಪೂರ್ಣ ಗಾಜಿನ ಬಾಡಿ ಮತ್ತು ಕವಚವನ್ನು ಹೊಂದಿರುತ್ತದೆ. ರೈಲು ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಭಾರತೀಯ ರೈಲ್ವೆಯು ತನ್ನ ಕೆಲವು ಪ್ರಮುಖ ರೈಲುಗಳಿಗೆ ವಿಸ್ಟಾಡೋಮ್ ಬೋಗಿಗಳನ್ನು ಜೋಡಿಸಿದೆ. ಸಾಮಾನ್ಯವಾಗಿ ರೈಲಿನ ಕಿಟಕಿಯ ಬಳಿ ಕುಳಿತವರಿಗಷ್ಟೇ ರೈಲಿನ ಹೊರಭಾಗದ ಸೌಂದರ್ಯವನ್ನು ಸವಿಯುವ ಅವಕಾಶವಿತ್ತು. ಆದರೆ ವಿಸ್ಟಾಡೋಮ್ ಬೋಗಿಗಳ ಸಂಪೂರ್ಣ ಕವಚವು ಪಾರದರ್ಶಕವಾಗಿದ್ದು, ರೈಲಿನ ಒಳಗೆ ಕುಳಿತುಕೊಂಡು ಪ್ರತಿಯೊಬ್ಬರೂ ಹೊರ ಜಗತ್ತಿನ ಸೌಂದರ್ಯವನ್ನು ಸವಿಯಬಹುದು.
ವಿಸ್ಟಾಡೋಮ್ ಎಂದರೇನು?
ಭಾರತ ದೇಶವು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ಆ ಪೈಕಿ ಪಶ್ಚಿಮಘಟ್ಟಗಳು ಮತ್ತು ವಿವಿಧ ಪರ್ವತ ಸಾಲುಗಳು ಪ್ರಮುಖವಾದವುಗಳು. ಈ ಪರ್ವತ ಸಾಲಿನ ರಮಣೀಯ ನೋಟವನ್ನು ಮತ್ತು ಪ್ರಕೃತಿಯ ಸೌಂದರ್ವನ್ನು ಪ್ರಯಾಣಿಕರು ತಮ್ಮ ಪ್ರಯಾಣದ ಅವಧಿಯಲ್ಲೂ ಕಣ್ತುಂಬಿಕೊಳ್ಳುವ ವಿಭಿನ್ನವಾದ ಅವಕಾಶವನ್ನು ಭಾರತೀಯ ರೈಲ್ವೆಯು ತನ್ನ ಆಯ್ದ ಕೆಲವೊಂದು ಮಾರ್ಗಗಳ ಕೆಲವೊಂದು ಬೋಗಿಗಳನ್ನು ಪಾರದರ್ಶಕ ಬೋಗಿಗಳನ್ನಾಗಿ ಪರಿವರ್ತಿಸುವ ಮೂಲಕ ಒದಗಿಸಿದೆ. ಭಾರತೀಯ ರೈಲ್ವೆಯ ಚೆನ್ನೈ ನ ಇಂಟಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಂತ್ರಜ್ಞಾನ ಮಾದರಿಯಲ್ಲಿ ಐರೋಪ್ಯ ದೇಶಗಳಲ್ಲಿ ಇರುವಂತಹ ರೈಲಿನ ಬೋಗಿಗಳನ್ನು ಉತ್ಪಾದಿಸಲಾಗಿದೆ.
ಪ್ರತೀ ಬೋಗಿಗಳ ಎರಡೂ ಬದಿಗಳಲ್ಲಿ ಐದೈದು ದೊಡ್ಡ ಗಾತ್ರದ ಗಾಜಿನ ಕಿಟಕಿಗಳು, ಗಟ್ಟಿಯಾದ ಗಾಜಿನ ಮೇಲ್ಛಾವಣಿ, ಹವಾನಿಯಂತ್ರಣ ವ್ಯವಸ್ಥೆ, ಎಲ್.ಇ.ಡಿ ದೀಪ, ಜಿ.ಪಿ.ಎಸ್ ಆಧಾರಿತ ಮಾಹಿತಿ ವ್ಯವಸ್ಥೆ, 180 ಡಿಗ್ರಿ ಕೋನದಲ್ಲಿ ಸುತ್ತುವ 44 ಪುಶ್ಬ್ಯಾಕ್ ಆಸನ ವ್ಯವಸ್ಥೆಗಳಿವೆ. ಈ ಬೋಗಿಗಳಲ್ಲಿ ಮೈಕ್ರೋವೇವ್ ಓವನ್, ಸಣ್ಣದಾದ ರೆಫ್ರಿಜರೇಟರ್ಗಳು, ಸ್ವಯಂಚಾಲಿತ ಬಾಗಿಲುಗಳು, ವಿಮಾನದಲ್ಲಿದ್ದಂತೆ ಸೀಟಿನ ಹಿಂದೆ ಚಹಾ ಮತ್ತು ತಿಂಡಿ ಇಡುವ ಪುಟ್ಟದಾದ ಮಡಚಬಹುದಾದ ಸ್ನಾಕ್ಸ್ ಟೇಬಲ್, ಪ್ರತೀ ಸೀಟಿನ ಮುಂಭಾಗದಲ್ಲಿ ಡಿಜಿಟಲ್ ಡಿಸ್ಪ್ಲೇ ಸ್ಕ್ರೀನ್, ಮೊಬೈಲ್ ಚಾರ್ಜಿಂಗ್ ಸಾಕೆಟ್, ಆಡಿಯೋ ಸ್ಪೀಕರ್, ತಂಪಾದ ನೀರು, ಕಾಫಿ ಮಾಡುವ ಕೆಟಲ್, ಲಗೇಜ್ ಇಡಲು ದೊಡ್ಡ ಜಾಗ, ಇಂಟರ್ನೆಟ್ ವ್ಯವಸ್ಥೆಗಾಗಿ ವೈ ಫೈ, ಪ್ರಯಾಣದ ಅವಧಿಯಲ್ಲಿ ವಿವಿಧ ಸ್ಥಳಗಳ ವೀಕ್ಷಕ ವಿವರಣೆ ನೀಡಲು ಅನುಭವಿ ಗೈಡ್ಗಳು, ಸಿ.ಸಿ ಕ್ಯಾಮರಾ, ಅಗ್ನಿಶಮನ ವ್ಯವಸ್ಥೆ, ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲು ಮತ್ತು ಜೈವಿಕ ಶೌಚಾಲಯ ಇವೇ ಮೊದಲಾದ ಅತ್ಯಾಧುನಿಕ ಸೌಲಭ್ಯಗಳನ್ನು ವಿಸ್ಠಾಡೋಮ್ನಲ್ಲಿ ಅಳವಡಿಸಲಾಗಿದೆ.
ಯಾವೆಲ್ಲಾ ಮಾರ್ಗದಲ್ಲಿ ವಿಸ್ಟಾಡೋಮ್ ಇದೆ?
ವಿವಿಧ ಪ್ರವಾಸಿ ತಾಣಗಳನ್ನು ಬೆಸೆಯುವ ಮಾರ್ಗಗಳ ರೈಲು ಪ್ರಯಾಣದಲ್ಲಿ ವಿಸ್ಟಾಡೋಮ್ ಮಾದರಿಯನ್ನು ಸಾಮಾನ್ಯವಾಗಿ ಅಳವಡಿಸಲಾಗುತ್ತದೆ. ಅದರಂತೆ ಸಧ್ಯಕ್ಕೆ ಆಂಧ್ರಪ್ರದೇಶದ ಅರಕು ಕಣಿವೆ ಪ್ರದೇಶ, ದಾದಾರ್-ಮಡಗಾಂವ್, ಕಾಶ್ಮೀರ, ಡಾರ್ಜಲಿಂಗ್, ಶಿಮ್ಲಾ, ನೀಲಗಿರಿ ಮುಂತಾದ ಸ್ಥಳಗಳನ್ನು ಸಂಪರ್ಕಿಸುವ ರೈಲುಗಳಲ್ಲಿ ವಿಸ್ಟಾಡೋಮ್ ಕೋಚ್ಗಳನ್ನು ಅಳವಡಿಸಿ ಯಶಸ್ವಿಯೂ ಆಗಿದೆ. ಇದೀಗ ಬೆಂಗಳೂರು-ಮಂಗಳೂರು-ಕಾರವಾರ ರೈಲಿನಲ್ಲೂ ಈ ವಿಶಿಷ್ಟ ವಿಸ್ಟಾಡೋಮ್ ಬೋಗಿಗಳನ್ನು ಅಳವಡಿಸಲಾಗಿದೆ.
ಮಂಗಳೂರು ಬೆಂಗಳೂರು ವಿಸ್ಟಾಡೋಮ್:
ಬೆಂಗಳೂರು-ಮಂಗಳೂರು ರೈಲು ಪ್ರಯಾಣದಲ್ಲಿ ಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗಿನ 55 ಕಿ.ಮೀ. ರೈಲು ಮಾರ್ಗದಲ್ಲಿ ಶಿರಾಡಿ ಘಾಟ್ ಪ್ರದೇಶವು ನಿಸರ್ಗದ ರಮಣೀಯ ದೃಶ್ಯವನ್ನು ಪ್ರಯಾಣಿಕರಿಗೆ ಒದಗಿಸುತ್ತದೆ. ಆದರೆ ಈ ಅವಕಾಶ ರೈಲಿನಲ್ಲಿ ಕಿಟಕಿ ಬದಿಗೆ ಕುಳಿತವರಿಗಷ್ಟೇ ಲಭಿಸುತ್ತಿತ್ತು. ಇದೀಗ ಮಂಗಳೂರಿನಿಂದ ಬೆಂಗಳೂರಿಗೆ ಪಶ್ಚಿಮಘಟ್ಟ ಸಾಲುಗಳನ್ನು ಸೀಳಿಕೊಂಡು ಚಲಿಸುವ ಮೂರು ರೈಲುಗಳ ತಲಾ ಒಂದೊಂದು ದ್ವಿತೀಯ ದರ್ಜೆಯ ಸಾಮಾನ್ಯ ಬೋಗಿಗಳನ್ನು ತೆಗೆದು ತಲಾ ಎರಡೆರಡು ವಿಸ್ಟಾಡೋಮ್ ಬೋಗಿಗಳನ್ನು ಜೋಡಿಸಲಾಗಿದೆ. ಬೆಂಗಳೂರು ಮಂಗಳೂರು ನಡುವೆ 413 ಕಿ.ಮೀ. ಚಲಿಸುವ ಶತಾಬ್ದಿ ರೈಲಿನ ಎಕ್ಸಿಕ್ಯೂಟಿವ್ ದರ್ಜೆ ಪ್ರಯಾಣದರ ರೂ.1,470/- ನ್ನು ಒಬ್ಬರ ವಿಸ್ಟಾಡೋಮ್ ಪ್ರಯಾಣಕ್ಕೆ ನಿಗದಿಗೊಳಿಸಲಾಗಿದೆ. ಈ ರೈಲಿಗೆ ಜುಲೈ 11ರಂದು ಮಂಗಳೂರು ಸಿಟಿ ರೈಲ್ವೇ ನಿಲ್ದಾಣದಿಂದ ಚಾಲನೆ ದೊರೆತಿದ್ದು, ವಿಷ್ಟಾಡೋಮ್ನ ಎರಡೂ ಬೋಗಿಗಳ ಆಸನಗಳು ಭರ್ತಿಗೊಂಡಿದ್ದು, ಈ ಮೂಲಕ ವಿಸ್ಟಾಡೋಮ್ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ದೊರೆತಿದೆ.
ಯಾವೆಲ್ಲಾ ರೈಲುಗಳಿಗೆ ವಿಸ್ಟಾಡೋಮ್ ಅಳವಡಿಸಲಾಗಿದೆ?
ಯಶವಂತಪುರ ಮತ್ತು ಕಾರವಾರ ಮಧ್ಯೆ ವಾರಕ್ಕೆ 3 ದಿನ ಚಲಿಸುವ ರೈಲು (ರೈಲು ಸಂಖ್ಯೆ: 06211/06212), ಯಶವಂತಪುರ ಮತ್ತು ಮಂಗಳೂರು ಜಂಕ್ಷನ್ ಮಧ್ಯೆ ವಾರಕ್ಕೆ 3 ದಿನ ಚಲಿಸುವ ರೈಲು (ರೈಲು ಸಂಖ್ಯೆ: 06575/06576), ಯಶವಂತಪುರ ಮತ್ತು ಮಂಗಳೂರು (ರೈಲು ಸಂಖ್ಯೆ:06539) ಹಾಗೂ ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್ಪ್ರೆಸ್ ರೈಲು (ರೈಲು ಸಂಖ್ಯೆ: 06540) ಇವುಗಳಿಗೆ ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿದ್ದು, ವಿದೇಶಿ ರೈಲಿನಂತೆ ಇದು ಗೋಚರಿಸಲಿದೆ.
ಪ್ರಾಕೃತಿಯ ಸೌಂದರ್ಯದ ಖನಿ ಶಿರಾಡಿ ಪ್ರಯಾಣ:
ಈ ರೈಲು ಮಾರ್ಗದಲ್ಲಿ ಪ್ರಯಾಣಿಸುವವರಿಗೆ ಶಿರಾಡಿ ಪರ್ವತ ಶ್ರೇಣಿಯ ಸೊಬಗನ್ನು ರೈಲಿನಲ್ಲಿ ಕುಳಿತೇ ಅನುಭವಿಸುವ ಅವಕಾಶ ದೊರೆಯಲಿದೆ. ಈ ಪ್ರಯಾಣದಲ್ಲಿ ಪಶ್ಚಿಮಘಟ್ಟದ ದಟ್ಟಾರಣ್ಯ, ಆಳವಾದ ಕಣಿವೆಗಳು, ಪ್ರಾಣಿಪಕ್ಷಿಗಳು, ಭೊರ್ಗರೆವ ಜಲಪಾತಗಳು, ಕತ್ತಲಲ್ಲಿ ಸಾಗುವ ಸುರಂಗ, ಮಳೆಗಾಲದ ಕಾರ್ಮೋಡ ಮತ್ತು ಗಾಢ ಮಳೆಯ ಸೊಬಗು, ಆಳವಾದ ಸೇತುವೆಗಳ ಅಂದವನ್ನು ಕಣ್ತುಂಬಿಕೊಳ್ಳಬಹುದು. ಮಳೆಗಾಲದಲ್ಲಂತೂ ಇಲ್ಲಿನ ಸೌಂದರ್ಯಕ್ಕೆ ಪಾರವೇ ಇಲ್ಲ. ಬ್ರಹ್ಮಗಿರಿ ಶ್ರೇಣಿಯ ಶೃಂಗವಾದ ಸಿರಿಬಾಗಿಲು ಪ್ರದೇಶವು ಪಶ್ಚಿಮ ಘಟ್ಟದ ಸೌಂದರ್ಯದ 180 ಡಿಗ್ರಿ ನೋಟವನ್ನು ನೀಡುತ್ತದೆ. ಇಲ್ಲಿನ ಈ ಅದ್ಭುತ ದೃಶ್ಯವನ್ನು ಪ್ರಯಾಣಿಕರು ವೀಕ್ಷಿಸಲು ವಿಸ್ಟಾಡೋಮ್ ರೈಲನ್ನು ಇಲ್ಲಿ 10 ನಿಮಿಷಗಳ ಕಾಲ ನಿಲ್ಲಿಸಲಾಗುತ್ತದೆ. ಇಂತಹ ನೋಟವನ್ನು ನೀಡುವ ಮತ್ತೊಂದು ರೈಲು ಮಾರ್ಗವೆಂದರೆ ಕರ್ನಾಟಕದ ಹುಬ್ಬಳ್ಳಿ ಮತ್ತು ಗೋವಾದ ಪೊಂಡಾ ನಡುವಿನ ದೂಧ್ಸಾಗರ್ ಜಲಪಾತದ ನೋಟ ಮಾತ್ರ.
ಪ್ರವಾಸೋದ್ಯಮಕ್ಕೆ ಅಗಾಧವಾದ ಅವಕಾಶಗಳಿರುವ ಕರ್ನಾಟಕ ರಾಜ್ಯದ ಪಶ್ಚಿಮಘಟ್ಟಗಳ ಸೌಂದರ್ಯವನ್ನು ಸವಿಯುವ ವಿಭಿನ್ನವಾದ ಅವಕಾಶವನ್ನು ಭಾರತೀಯ ರೈಲ್ವೆಯು ಈ ಮಾರ್ಗದಲ್ಲಿ ಚಲಿಸುವ ರೈಲುಗಳಿಗೆ ಯುರೋಪ್ ಮಾದರಿಯ ವಿಸ್ಟಾಡೋರ್ ಬೋಗಿಯನ್ನು ಅಳವಡಿಸಿದೆ. ಈ ಮೂಲಕ ಈ ಮಾರ್ಗದಲ್ಲಿ ಚಲಿಸುವ ಪ್ರಯಾಣಿಕರಲ್ಲಿ ಪರಿಸರ, ಇಲ್ಲಿನ ವಾತಾವರಣ ಮತ್ತು ಇಲ್ಲಿನ ಜೀವವೈವಿಧ್ಯದ ಕಾಳಜಿಯನ್ನು ತಕ್ಕ ಮಟ್ಟಿಗಾದರೂ ಮೂಡಿಸುವ ಪ್ರಯತ್ನ ಮಾಡಿರುವುದು ಸಂತಸದ ವಿಚಾರ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160