ವಂಶವೃಕ್ಷ – ಡಾ. ಎಸ್. ಎಲ್. ಭೈರಪ್ಪ
ಪುಸ್ತಕ : ವಂಶವೃಕ್ಷ
ಲೇಖಕರು : ಡಾ. ಎಸ್.ಎಲ್. ಭೈರಪ್ಪ
ಲೇಖಕರ ಬಗ್ಗೆ ನಾನು ಏನನ್ನೂ ಹೇಳುವ ಅವಶ್ಯಕತೆಯೇ ಇಲ್ಲ. ಇವರ ಹೊಸ ಪುಸ್ತಕ ಪ್ರಕಟವಾಗುತ್ತದೆ ಎಂದರೆ ಅದನ್ನು ಓದಲು ಸಾಹಿತ್ಯಾಸಕ್ತರು ಕಾಯುತ್ತಿರುತ್ತಾರೆ. ಪುಸ್ತಕ ಬಿಡುಗಡೆಯಾದ ಮೇಲೂ ಅದರದ್ದೇ ಚರ್ಚೆ. ಇವರ ಪುಸ್ತಕಗಳು ಚರ್ಚೆಗೊಳಗಾದಷ್ಟು ಬೇರಾವ ಪುಸ್ತಕವೂ ಚರ್ಚೆಗೊಳಗಾಗಿಲ್ಲ ಎಂದೇ ಹೇಳಬಹುದು. ಇವರು ಒಟ್ಟು ೨೪ ಕಾದಂಬರಿಗಳನ್ನು ( ಧರ್ಮಶ್ರೀ, ತಬ್ಬಲಿ ನೀನಾದೆ ಮಗನೆ, ನಾಯಿ ನೆರಳು, ಗೃಹಭಂಗ, ದಾಟು ಸಾರ್ಥ, ಪರ್ವ, ಮಂದ್ರ, ಯಾನ, ಮತದಾನ, ಹೇಳಲು ಹೊರಟರೆ ಯಾವುದನ್ನೂ ಬಿಡಲು ಮನಸಾಗುವುದಿಲ್ಲ. ಅಷ್ಟೇ ಅಲ್ಲದೆ ಪ್ರಬಂಧಗಳು ಹಾಗು ಜೀವನ ಚರಿತ್ರೆಯನ್ನು ಇವರು ಬರೆದಿದ್ದಾರೆ. ಇವರ ಬಹುತೇಕ ಕೃತಿಗಳು ಅನೇಕ ಭಾಷೆಗೆ ಅನುವಾದವಾಗಿದೆ.

೧೯೬೫ರಲ್ಲಿ ಮೊದಲ ಮುದ್ರಣ ಕಂಡ ‘ವಂಶವೃಕ್ಷ’ , ಇಂಗ್ಲಿಷ್ ತೆಲಗು, ಮರಾಠಿ, ಹಿಂದಿ, ಉರ್ದು ಭಾಷೆಗಳಿಗೆ ಅನುವಾದವಾಗಿರುವುದಲ್ಲದೆ ೧೯೭೨ರಲ್ಲಿ ಚಲನಚಿತ್ರವಾಗಿಯೂ ಜನಪ್ರಿಯವಾಯ್ತು.
ಮಾನವನ ಸೂಕ್ಷ್ಮ. ಮನದ ಆಳಕ್ಕಿಳಿದು, ವೈಚಾರಿಕ, ತಾತ್ವಿಕ ಮತ್ತು ಮಾನವೀಯ ಅಂಶಗಳನ್ನು ಶೋಧಿಸುವ ಕಾದಂಬರಿಯಿದು.
ಮಾನವನ ಮನಸ್ಸಿನ ತಾಕಲಾಟವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಐತಿಹಾಸಿಕ ಸ್ಮಾರಕಗಳ ಮೂಲಕ ಇತಿಹಾಸವನ್ನು ಸಂಶೋಧಿಸುವ ಬಗ್ಗೆ ವಿವರಗಳಿವೆ.

ವಿಧವಾ ಮರು ವಿವಾಹ, ಅದರಿಂದ ಸಾಂಸ್ಕಾರಿಕವಾಗಿ ಉಂಟಾಗಬಹುದಾದ ಅಡ್ಡಿ ಆತಂಕಗಳು, ತಲ್ಲಣಗಳನ್ನು ಕಾತ್ಯಾಯನಿಯೆಂಬ ಪಾತ್ರದ ಮೂಲಕ ಮನಮುಟ್ಟುವಂತೆ ಬರೆದಿದ್ದಾರೆ.
ಮಾಡುವ ಯಾವುದೇ ಕೆಲಸ ತಪ್ಪು ಎಂದು ನಮ್ಮ ಮನಸ್ಸಿಗೆ ತಿಳಿದೂ ನಾವು ತಪ್ಪು ಮಾಡಿ, ಬೇರೆಯವರೆದುರು ಅದನ್ನು ಸರಿಯೆಂದು ನಾವು ಸಮರ್ಥಸಿಕೊಂಡರೂ ನಮ್ಮ ಮನಃಸಾಕ್ಷಿ ಅದನ್ನು ಒಪ್ಪದೆ, ಮನಸ್ಸು ಅನುಭವಿಸುವ ನೋವನ್ನು ಕಾತ್ಯಾಯನಿ ಮತ್ತು ಸದಾಶಿವರಾಯರ ಪಾತ್ರಗಳ ಮೂಲಕ ಸಶಕ್ತವಾಗಿ ಬಿಂಬಿಸಿದ್ದಾರೆ.
ತಮ್ಮ ವಂಶದ ಬಗ್ಗೆ ವಿಶೇಷ ಗೌರವ, ಹೆಮ್ಮೆಯಿದ್ದರೂ ಸಾತ್ವಿಕ ಸ್ವಭಾವದಿಂದ ಗಮನ ಸೆಳೆವ ಪಾತ್ರ ಶ್ರೀನಿವಾಸ ಶೋತ್ರಿಯವರದು. ಆದರೆ ತಮ್ಮ ಹುಟ್ಟಿನ ರಹಸ್ಯವನ್ನು ಅರಿತಾಗ ಅವರಿಗಾಗುವ ಆಘಾತ, ಆ ನಂತರ ಅವರು ತೆಗೆದುಕೊಳ್ಳುವ ನಿರ್ಧಾರ ಇದೆಲ್ಲಾ ಈ ಕಾದಂಬರಿಯ ವಿಶೇಷವಾಗಿದೆ.ಆದರೆ ಅವರು ನಿರ್ಧಾರ ತೆಗೆದುಕೊಳ್ಳುವ ವೇಳೆಗೆ ಆದ ಅನಾಹುತಗಳು ಮನಸ್ಸನ್ನು ಕಲಕುತ್ತದೆ.
ಇನ್ನು ತಮ್ಮ ತಪ್ಪಿಲ್ಲದಿದ್ದರೂ ಜೀವನದಲ್ಲಿ ನೋವನ್ನು ಅನುಭವಿಸುವ ಮುಗ್ಧ ಭಾಗೀರತಮ್ಮ, ಲಕ್ಷ್ಮಿ, ರಾಜ, ನಾಗ ಲಕ್ಷ್ಮಿ, ಕರುಣ ಇವರೆಲ್ಲರ ಪಾತ್ರಗಳೂ ಕತೆಗೆ ಪೂರಕವಾಗಿದೆ. ಶ್ರೀನಿವಾಸ ಶೋತ್ರಿಯವರ ಪಾತ್ರ ಕಾದಂಬರಿ ಓದಿ ಮುಗಿಸಿದ ಮೇಲೂ ಬಹಳಷ್ಟು ಕಾಡುತ್ತದೆ. ಒಟ್ಟಿನಲ್ಲಿ ಈ ಕಾದಂಬರಿಯನ್ನು ಬರೆದ ಕಾಲಘಟ್ಟವನ್ನು ಗಮನದಲ್ಲಿಟ್ಟು ಕೊಂಡು ಓದಿದರೆ, ಇದು ನಿಜಕ್ಕೂ ಒಂದು ಉತ್ತಮ ಕಥಾವಸ್ತು, ನಿರೂಪಣೆ ಇರುವ ಅತ್ಯುತ್ತಮ ಕಾದಂಬರಿ.
೨೪-೦೯-೨೦೨೫ ರಂದು ನಮ್ಮನ್ನು ಅಗಲಿದ ಎಸ್ ಎಲ್ ಬೈರಪ್ಪ ಅವರಿಗೆ ಅಕ್ಷರ ನಮನಗಳು.

ಶ್ರೀವಲ್ಲಿ ಮಂಜುನಾಥ