ವಾರಕ್ಕೊಂದು ಕಗ್ಗ – 2

ಕಗ್ಗ ಮಾಲಿಕೆ – 2

ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು I
ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು II
ಒಂದೇ ಗಾಳಿಯನುಸಿರ್ವ ನರಜಾತಿಯೋಳಗೆಂತು I
ಬಂದುದೀ ವೈಷಮ್ಯ? – ಮಂಕುತಿಮ್ಮ

ಒಂದೇ ಗಗನವ (ಆಕಾಶ) ಕಾಣುತ + ಒಂದೇ ನೆಲವನು ತುಳಿಯುತ + ಒಂದೇ ದ್ಯಾನವನು ಉಣ್ಣುತ್ತಾ (ತಿನ್ನುತಾ) + ಒಂದೇ ಗಾಳಿಯನು + ಉಸಿರ್ವ (ಉಸಿರಾಡುವ) + ನರಜಾತಿಯಳೊಗೆ + ಎಂತು + ಬಂದುದೀ ವೈಷ್ಯಮ್ಯ ?

ನಾವೆಲ್ಲರೂ ಕಾಣುವ ಆಕಾಶ ಒಂದೇ, ತುಳಿಯುವ ನೆಲವು ಒಂದೇ, ತಿನ್ನುವ ಧಾನ್ಯವು (ಆಹಾರ ಎಂಬ ರೂಪ) ಒಂದೇ, ಹಾಗೆ ಉಸಿರಾಡುವ ಗಾಳಿಯು ಒಂದೇ ಯಾಗಿದ್ದರು ಸಹ ಅದು ಹೇಗೆ ಮನುಷ್ಯನಲ್ಲಿ ದ್ವೇಷವೆಂಬುದು ಹುಟ್ಟಿತು ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದ ಮೂಲಕ ತಮಗೆ ತಾವೇ ಪ್ರಶ್ನಿಸಿಕೊಂಡು ವಿಚಾರವನ್ನು ಎಲ್ಲರ ಮುಂದೆ ಇಟ್ಟಿದ್ದಾರೆ.

ಈ ಭೂಮಿ ಮೇಲಿರುವ ಎಲ್ಲ ಸಕಲ ಜೀವಿಗಳಿಗೂ (ಮನುಷ್ಯನೂ ಒಳಗೊಂಡು) ತಲೆಯ ಮೇಲೆ ಕಾಣಲು ಇರುವುದು ಒಂದೇ ಆಕಾಶ,  ಧಾನ್ಯವೆಂಬುದು ಒಂದೇ ತಿನ್ನಲು (ಅದು ವಿವಿಧ ತಿನಿಸಾಗಿದ್ದರು ಸಹ) ಉಸಿರಾಡುವ ಗಾಳಿಯೆಂಬುದು ಒಂದೇ, ನೀರೆಂಬುದು ಒಂದೇ, ಇವೆಲ್ಲವೂ ಭಗವಂತ ಸಕಲ ಜೀವಿಗಳಿಗೂ ಸೃಷ್ಟಿಸಿರುವಂತಹುದು. ಇವೆಲ್ಲವೂ ಎಲ್ಲ ಜೀವಿಗಳಿಗೂ ಬದುಕಲು ಎಷ್ಟು ಬೇಕೋ ಅಷ್ಟನ್ನು ಭಗವಂತ ದಯಪಾಲಿಸಿದ್ದರು ಸಹ “ದ್ವೇಷವೆಂಬುದು” ಮನುಷ್ಯನ ನರನಾಡಿಗಳಲ್ಲೂ ಹರಿದಾಡುತ್ತಿದೆ. ಆಸೆ ಇದ್ದರು ಅತಿಯಾಸೆ ಇರಬಾರದು ಅಲ್ಲವೇ. ಆಸೆಯಿಂದ ದುಃಖ ಎಂಬುದು ಬುದ್ಧನ ನುಡಿ, ಅತಿಯಾಸೆ ಯಿಂದ ಸ್ವಾರ್ಥ, ಸ್ವಾರ್ಥವನ್ನು ನೀಗಿಸಿಕೊಳ್ಳಲು ದ್ವೇಷ. ಇದನ್ನೇ ಗುಂಡಪ್ಪನವರು ಪ್ರಶ್ನಿಸಿದ್ದಾರೆ ಹಾಗೆ ಈ ಚಿಂತನೆಯು ಅನಾದಿ ಕಾಲದಿಂದಲೂ ಎಲ್ಲಾ ಚಿಂತಕರು ಚಿಂತಿಸಿ, ಮಥಿಸಿ, ಈಗಲೂ ಅನೇಕ ರೂಪದಲ್ಲಿ ವಿಚಾರ ಮಾಡುತ್ತಿರುವ ವಿಷಯವೇ. ಮನುಷ್ಯ ಸಂಘ ಜೀವಿಯಾಗಿದ್ದರು ತಮ್ಮ ತಮ್ಮಲ್ಲೇ, ಬಾತೃತ್ವದಲ್ಲಿ, ಗೆಳೆತನದಲ್ಲಿ ಈ ದ್ವೇಷ, ಅತಿಯಾಸೆಗಳೆಂಬ ಬೀಜಗಳನ್ನು ಬಿತ್ತಿ ಅದು ಹೆಮ್ಮರವಾಗಿ ಅದೆಷ್ಟೋ ಪ್ರಾಣ  ಹಾಗು ಪ್ರಕೃತಿ ಹಾನಿಗಳಿಗೆ ಮತ್ತು ಯುದ್ಧಗಳಿಗೆ ಅನಾವಶ್ಯಕ ಕಾರಣನಾಗಿದ್ದಾನೆ.

ಕನ್ನಡ ಚಲನಚಿತ್ರ ನಿರ್ದೇಶಕರಾದ “ಜಯತೀರ್ಥ” ರವರು ಮನುಷ್ಯನ ಅತಿಯಾಸೆಯನ್ನೇ ಚಿತ್ರದ ವಿಷಯವನ್ನಾಗಿಸಿ “ಟೋನಿ” ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಆ ಚಿತ್ರದಲ್ಲಿನ ಒಂದು ಉಪಕಥೆಯನ್ನು ಇಲ್ಲಿ ಸ್ಮರಿಸಬಹುದು,

“ಊರಿನ ಯಜಮಾನ (ಗೌಡ, ಹಿರಿಯ) ಊರಿನ ಕೆಲ ಬಂಡಾಯವೆದ್ದ ರೈತಾಳುಗಳಿಗೆ ಅವನಲ್ಲಿರುವ ಎಲ್ಲಾ ಭೂಮಿಯನ್ನು ತಮ್ಮದಾಗಿಸಿಕ್ಕೊಳ್ಳುವ ಅವಕಾಶವೊಂದನ್ನು ಒಂದು ಸ್ಪರ್ಧೆಯ ಮೂಲಕ ಕೊಡುತ್ತಾನೆ. ಕೊನೆಯೇ ಕಾಣದ ಉಳುಮೆಯ ಭೂಮಿಯನ್ನು ತೋರಿಸಿ ಯಾರು ಸೂರ್ಯ ಮುಳುಗುವ ಒಳಗೆ ಉದ್ದಕ್ಕೂ ಓಡಿ ಸಾಕೆಂದಾಗ ನಿಂತು ತಮ್ಮ ಕೈಲಿದ್ದ ಕೋಲನ್ನು ನೆಟ್ಟು ಹಿಂದಿರುಗಿ ಬರಬೇಕು ಆಗ ಅಲ್ಲಿಯವರೆಗಿನ ಭೂಮಿಯು ಆ ರೈತನ ಪಾಲಾಗುತ್ತದೆ ಎಂದು ಘೋಷಿಸುತ್ತಾನೆ. ಆಗ ಆಳೊಬ್ಬ ಓಡುತ್ತ ಓಡುತ್ತ ಹೆಚ್ಚು ಭೂಮಿಯ ಒಡೆಯನಾಗಬೇಕೆಂದು ಅತಿಯಾಸೆಯಿಂದ ಓಡಲು ಪ್ರಾರಂಭಿಸುತ್ತಾನೆ. ಓಡಿ ಓಡಿ ಎಲ್ಲರನ್ನು ಹಿಂದಿಕ್ಕಿದ್ದರು ಸಹ ಅವನ ಅತಿಯಾಸೆ ಅವನನ್ನು ನಿಲ್ಲಲು ಬಿಡುವುದಿಲ್ಲ, ಇನ್ನೂ ಹೆಚ್ಚು ದೂರ ಓಡಿ ಕೊನೆಗೊಮ್ಮೆ ಹಿಂದೆ ಯಾರು ಬರುತ್ತಿಲ್ಲಾ ಎಂದು ಮನಗೊಂಡು ಖುಷಿಯಿಂದ ನಿಲ್ಲುತ್ತಾನೆ. ಆದರೆ ಹಿಂದಿರುಗಲಾರದಷ್ಟು ದೂರ ಓಡಿರುತ್ತಾನೆ ಅವನ ಕೈಕಾಲಲ್ಲಿ ತ್ರಾಣವೇ ಇರುವುದಿಲ್ಲ, ಆದರೂ ಸಹ ಕಷ್ಟಪಟ್ಟು ನರಳುತ್ತಾ, ತೆವಳುತ್ತಾ ಹಿಂದಿರುಗಿದಾಗ ಸೂರ್ಯ ಮುಳುಗಿಹೋಗಿರುತ್ತಾನೆ ಮತ್ತೆ ಅಲ್ಲಿ ಯಾರೂ ಇರುವುದಿಲ್ಲ”.

ಇದೇ ಅತಿಯಾಸೆಗೆ ಬಲಿಯಾದ “ಅಲೆಕ್ಸಾಂಡರ್” ನ ಕಥೆಯು ಇಲ್ಲಿ ಸ್ಮರಿಸುವಂತಹುದು. ಸಣ್ಣ ವಯಸ್ಸಿಗೆ ಇಡೀ ವಿಶ್ವವನ್ನೇ ಗೆಲ್ಲಬೇಕೆಂದು ಅತಿಯಾಸೆಯಿಂದ ಅಲೆಕ್ಸಾಂಡರ್ ಗ್ರೀಕ್ ನಿಂದ ಹಿಡಿದು ಈಜಿಪ್ಟ್, ಸಿರಿಯ, ಪರ್ಶಿಯ, ಆಗಿನ ಪ್ಯಾಲಸ್ತಿನ್, ಮುಂತಾದವೆಲ್ಲವನ್ನು ಗೆದ್ದು ಹಿಂದುಸ್ತಾನಕ್ಕೆ ಬಂದು ಪುರೂರವನ ಜೊತೆ ಕಾದಾಡಿದ್ದೇ ಅವನ ಕೊನೆಯ ಯುದ್ಧವಾಯಿತು. ಜೈತಯಾತ್ರೆಗಳಿಂದ, ಸಾವು ನೋವುಗಳಿಂದ ಬಳಲಿ ಹೈರಾಣಾಗಿದ್ದ ಸೈನಿಕ ಪಡೆಗಳು ದಂಗೆಯೆದ್ದವು. ನಂದರ ಸಾಮ್ರಾಜ್ಯವನ್ನು ಗೆಲ್ಲುವುದು ಸುಲಭವಲ್ಲ, ನಂದರ ಪ್ರತಿಭೆ ಅಸಾಧಾರಣವಾದದ್ದು ಎಂದು ಮನಗೊಂಡು ಎಲ್ಲರ ಮಾತಿಗೆ ಇಷ್ಟವಿಲ್ಲದೆಯೂ ಒಪ್ಪಿ ಹಿಂದಿರುಗಲು ಶುರುಮಾಡಿದ ಅಲೆಕ್ಸಾಂಡರ್ ತನ್ನ ತಾಯಿ ನಾಡಿನ ಮಡಿಲನ್ನು ಸೇರಿದರೆ ಸಾಕು ಎಂದು ತೊಳಲಾಡಿ ಹೈರಾಣಾಗಿ ಕೊನೆಗೆ ಬ್ಯಾಬಿಲೋನ್ ನಗರದಲ್ಲಿ ಒಂದು ಸಣ್ಣ ಜ್ವರ ಬಂದು ಅದೇ ನೆಪವಾಗಿ ಕೊನೆಯುಸಿರೆಳೆದ. ತನ್ನ ಜೈತಯಾತ್ರೆಗಳಿಂದ ಅಲೆಕ್ಸಾಂಡರ್ ಇತಿಹಾಸವನ್ನೇ ಸೃಷ್ಟಿಸಿದನಾದರು ಇದಕ್ಕಾಗಿ ಅವನು ಮಾಡಿದ ಸಾವು ನೋವುಗಳು ಎಣಿಸಲಾರದಷ್ಟು. ಕೊನೆಗೂ ತನ್ನ ತಾಯಿನಾಡನು ಸಹ ಕಾಣದೆ ಮಧ್ಯದಲ್ಲೇ ಸಾಯಬೇಕಾಯಿತು.

ಇರುವ ಹಾಸಿಗೆಯಷ್ಟೇ ಕಾಲನ್ನು ಚಾಚಲಾರದ ಮನುಷ್ಯ ಮತ್ತಷ್ಟು ಮಗದಷ್ಟು ಎಂದು ಅತಿಯಾಸೆಪಟ್ಟು ಬೇಡದ ಸಾವು ನೋವುಗಳು ಪ್ರಕೃತಿ ಹಾಗು ಮುಂತಾದ ಹಾನಿಗಳಿಗೆ ಕಾರಣನಾಗಿದ್ದಾನೆ. ನಮ್ಮ ಬದುಕಿಗೆ ಜೀವಿಸುವುದಕ್ಕೆ ಪಾಲಿಗೆ ಬಂದಷ್ಟನ್ನು ಭಗವಂತ ಪ್ರತಿ ಜೀವಿಗಳಿಗೂ ಕೊಟ್ಟಿರುತ್ತಾನೆ ಇದರಿಂದ ದ್ವೇಷ, ಅಸೂಯೆ, ಅತಿಯಾಸೆ ಇವೆಲ್ಲ ಮನುಷ್ಯ ಯಾಕಾದರೂ ಮಾಡಬೇಕು ಎಂಬುದು ಈ ಕಗ್ಗದ ಒಂದು ರೂಪದ ಅಭಿಪ್ರಾಯ.

ಮುಂದಿನವಾರ ಮತ್ತೊಂದು ಕಗ್ಗದೊಂದಿಗೆ.

ಕು ಶಿ ಚಂದ್ರಶೇಖರ್

Related post

Leave a Reply

Your email address will not be published. Required fields are marked *