ವಿಜಯೀಭವ – ಗೆಲ್ಲಲು ಸಿದ್ದರಾಗಿ
ಕನ್ನಡದಲ್ಲಿ ನ್ಯಾನೋಕಥೆಗಳನ್ನು ರಚಿಸುವ ಮೂಲಕ ಸಾಹಿತ್ಯದಲ್ಲಿ ಹೊಸ ಅಲೆ ಎಬ್ಬಿಸುತ್ತಾ ನಮ್ಮೆಲ್ಲರಿಗೂ ಪರಿಚಿತರಾದ ವಿ ಗೋಪಕುಮಾರ್ ಅವರ ನಾಲ್ಕನೆ ಕೃತಿ ‘ವಿಜಯೀಭವ’ ಟೀನೇಜ್ ಮಕ್ಕಳ ಶಿಸ್ತು, ಏಕಾಗ್ರತೆ ಮತ್ತು ಪೊಟೆನ್ಶಿಯಾಲಿಟಿಯನ್ನು ಕಾಪಾಡಿಕೊಳ್ಳಲು ಒಬ್ಬೊಳ್ಳೆ ಗೆಳೆಯನಾಗಿ, ಮಾರ್ಗದರ್ಶಕನಾಗಿ ಸಹಕರಿಸುತ್ತದೆ.
ಎಲ್ಲ ಅಧ್ಯಾಯಗಳನ್ನು ಮಕ್ಕಳ ಮನಸ್ಸಿಗೆ ಹತ್ತಿರವಾಗುವಂತೆ ಸೂಕ್ತ ಉದಾಹರಣೆಗಳ ಮುಖಾಂತರ ವಿಶ್ಲೇಷಿಸಿದ್ದಾರೆ. ಪ್ರೌಢಶಾಲ ಹಾಗೂ ಕಾಲೇಜು ಮಕ್ಕಳ ವ್ಯಕ್ತಿತ್ವವನ್ನು ಅಚ್ಚುಕಟ್ಟಾಗಿ ರೂಪಿಸುವಲ್ಲಿ ಈ ಪುಸ್ತಕ ಖಂಡಿತ ಕೆಲಸ ಮಾಡುತ್ತದೆ. ಓದಲು ಅಷ್ಟೇ ಅಲ್ಲದೆ ಅಳವಡಿಸಿಕೊಳ್ಳಲು ಸುಲಭವಾಗುವಂತೆ ಎಷ್ಟೋ ಕ್ಲಿಷ್ಟಕರ ಸಂಗತಿಗಳನ್ನು ಸರಳೀಕರಿಸಿ ನಮ್ಮುಂದಿಟ್ಟಿದ್ದಾರೆ. ಒಂದು ಅದ್ಭುತ ಕೃತಿ ಎನ್ನುವುದಕ್ಕಿಂತ ಒಬ್ಬೊಳ್ಳೆ ಗೆಳೆಯ ಅಥವಾ ಶಿಕ್ಷಕನಾಗಿ ಮಕ್ಕಳಿರುವ ಮನೆಯಲ್ಲಿರಬೇಕಾದ ಕೃತಿ ಇದಾಗಿದೆ.
ಬರಿ ಫಿಕ್ಷನ್ ಗಳನ್ನೇ ಓದಿಕೊಂಡು ಬಂದ ನನಗೆ ಈ ಪುಸ್ತಕ ಬಹಳ ಹತ್ತಿರವಾಗಿದ್ದಂತೂ ನಿಜ. ನಾನೊಬ್ಬ ಎನ್.ಎಸ್.ಎಸ್ ಸ್ವಯಂಸೇವಕನಾಗಿದ್ದರಿಂದಲೂ ಇದು ಹತ್ತಿರವಾಗಿರಬಹುದು. ಎಲ್ಲರಿಗೂ ಗೊತ್ತಿರುವ ವಿಷಯಗಳೇ ಆದರೂ ಅವುಗಳನ್ನು ಆಳವಾಗಿ ಮತ್ತು ಕ್ರಮವಾಗಿ ಅರ್ಥಮಾಡಿಕೊಂಡು, ಅಳವಡಿಸಿಕೊಳ್ಳಲು ಈ ಪುಸ್ತಕ ಸಹಕಾರಿಯಾಗುತ್ತದೆ. ಈಗಲೇ ಪುಸ್ತಕವನ್ನು ನಿಮ್ಮ ಮಕ್ಕಳ ಕೈಗೆ ಇಟ್ಟುಬಿಡಿ. ಪುಸ್ತಕದೊಳಗೆ ಇರುವ ವಿಷಯಗಳು ಮಕ್ಕಳ ಮನಸ್ಸಿಗೆ ನಾಟುವಂತೆ ನೋಡಿಕೊಂಡರೆ ಸಾಕು. ನಿಮ್ಮ ಮಕ್ಕಳು ಒಂದಲ್ಲಾ ಒಂದು ವಿಷಯದಲ್ಲಿ ಖಂಡಿತ ವಿಜೇತರಾಗುತ್ತಾರೆ.
ಮತ್ತಷ್ಟು ಪುಸ್ತಕಗಳು ಬರಲಿ ಸರ್..
ಅನಂತ್ ಕುಣಿಗಲ್