ವಿಭಿನ್ನ ಪ್ರವಾಸ ಕೃತಿ “ಕಗ್ಗತ್ತಲೆಯ ಖಂಡದಲ್ಲಿ” ಕೃತಿ ಲೋಕಾರ್ಪಣೆ
ಫೆಬ್ರವರಿ 5 ನೇ ತಾರೀಕು ಭಾನುವಾರ ಮೈಸೂರಿನ “ದಿ ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್” ಸಭಾಂಗಣದಲ್ಲಿ ಡಾ. ಅರಕಲಗೂಡು ನೀಲಕಂಠಮೂರ್ತಿ ಯವರ ಕೃತಿ ಲೋಕಾರ್ಪಣೆಯ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಶ್ರೀಯುತ ಡಾ.ಕೆ ಎಸ್. ರಂಗಪ್ಪ ನವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
“ಸಾಮಾನ್ಯವಾಗಿ ಪ್ರವಾಸ ಕಥನಗಳಲ್ಲಿ ಲೇಖಕರು ಆಯಾ ದೇಶದ ಸಂಸ್ಕೃತಿ ಪರಂಪರೆಯನ್ನು ವೈಭವೀಕರಿಸುವುದೇ ಹೆಚ್ಚು, ಆದರೆ ಡಾ. ಅರಕಲಗೂಡಿನ ನೀಲಕಂಠಮೂರ್ತಿಯವರು ಆಫ್ರಿಕಾ ಖಂಡದಲ್ಲಿ ತಮ್ಮ ವೈದ್ಯ ವೃತ್ತಿಯನ್ನು ಹದಿಮೂರು ವರ್ಷಗಳ ದೀರ್ಘಾವಧಿಯ ತಮ್ಮ ಅನುಭವದಲ್ಲಿ ಆ ದೇಶಗಳಲ್ಲಿನ ಮಹಿಳೆಯರ ಮೇಲೆ ನೆಡೆಸುತ್ತಿದ್ದ ಸುನ್ನತಿಯಂತಹ ಅವೈಜ್ಞಾನಿಕ ಪದ್ಧತಿಯನ್ನು, ಅಲ್ಲದೆ ಸೋಮಾಲಿಯಾ ದೇಶದ ಐತಿಹಾಸಿಕ, ಭೌಗೋಳಿಕ, ರಾಜಕೀಯ ಹಾಗು ಯುದ್ಧದ ಪೂರ್ವಸಿದ್ಧತೆ ನೆಡದ ಆತಂಕಕಾರಿ ಸಂಗತಿಗಳನ್ನು ಬಹಳ ವಿಶಿಷ್ಟವಾಗಿ “ಕಗ್ಗತ್ತಲೆಯ ಖಂಡದಲ್ಲಿ” ದಾಖಲಿಸಿದ್ದಾರೆ. ಆ ನಿಟ್ಟಿನಿಂದ ಈ ಪ್ರವಾಸ ಕಥನ ವಿಶಿಷ್ಟತೆಯಿಂದ ಕೂಡಿದೆ” ಎಂದು ಖ್ಯಾತ ವಿಜ್ಞಾನ ಲೇಖಕರಾದ ಶ್ರೀಯುತ ಕೊಳ್ಳೇಗಾಲ ಶರ್ಮ ರವರು “ಕಗ್ಗತ್ತಲೆಯ ಖಂಡದಲ್ಲಿ” ಕೃತಿಯ ಲೋಕಾರ್ಪಣೆಯ ನಂತರ ಕೃತಿಯ ಬಗ್ಗೆ ಹೇಳಿದ ಮಾತಿದು.
“ವೈದ್ಯವೃತ್ತಿಯಲ್ಲಿ ಇದ್ದುಕೊಂಡು ಕವಿತೆ – ಕವನ, ಕಥೆಗಳನ್ನು ಬರೆಯುತ್ತ ಸಾಹಿತ್ಯಲೋಕದಲ್ಲಿ ಸದಾ ಸಕ್ರಿಯರಾಗಿರುವ “ಡಾ. ಅರಕಲಗೂಡು ನೀಲಕಂಠಮೂರ್ತಿ” ಯವರು ಅಪರೂಪದಲ್ಲಿ ಒಬ್ಬರು. ಇವರ ಈ ಸಾಹಿತ್ಯಾಸಕ್ತಿ, ಬರವಣಿಗೆ ವೈದ್ಯಲೋಕದಲ್ಲಿ ಒಂದು ಹೆಮ್ಮೆಯ ವಿಷಯ” ಎಂದು ಸಾರ್ವಜನಿಕ ಗ್ರಂಥಾಲಯ ನಿರ್ದೇಶಕರಾದ ಶ್ರೀಯುತ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ ಯವರು ಕೃತಿಯ ಲೋಕಾರ್ಪಣೆಯನ್ನು ಮಾಡುತ್ತಾ ನುಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಚುಟುಕು ಯುಗಾಚಾರ್ಯರೆಂದೇ ಪ್ರಸಿದ್ಧರಾಗಿರುವ ಡಾ. ಎಂ ಜಿ ಆರ್ ಅರಸ್ (ವೈದ್ಯವಾರ್ತ ಪ್ರಕಾಶನ”) ಹಾಗು ಶ್ರೀಮತಿ ದೇವಕಿ ಲಕ್ಷ್ಮಿ ಅಚ್ಚುಕಟ್ಟಾಗಿ ನೆಡೆಸಿಕೊಟ್ಟರು. ವೃತ್ತಿಯಲ್ಲಿ ವೈದ್ಯರು ಹಾಗು “ಕಗ್ಗತ್ತಲೆಯ ಖಂಡದಲ್ಲಿ” ಕೃತಿಯ ಲೇಖಕರಾದ ಡಾ. ಅರಕಲಗೂಡು ನೀಲಕಂಠಮೂರ್ತಿ ಮಾತನಾಡುತ್ತ ಆಫ್ರಿಕಾ ಖಂಡದಲ್ಲಿನ ತಮ್ಮ ಅನುಭವಗಳು ಹೇಗೆ ಕೃತಿಯಾಗಿ ಮೂಡಿಬಂದಿದೆ ಎಂದು ವಿವರಿಸುತ್ತಾ ಕೃತಿ ಹೊರಬರಲು ಕಾರಣರಾದ ಎಲ್ಲರನ್ನು ಮನಪೂರ್ವಕವಾಗಿ ಅಭಿನಂದಿಸಿ ಸನ್ಮಾನಿಸಿದರು.
ಕಿಕ್ಕಿರಿದು ತುಂಬಿದ ಸಮಾರಂಭದಲ್ಲಿ, ಶ್ರೀಯುತ ಅಮರ್ನಾಥ್ ರಾಜೇ ಅರಸ್, ಶ್ರೀ ಇಳಯ ಆಳ್ವರ್ ಸ್ವಾಮೀಜಿ, ಶ್ರೀ ಲಿಂಗರಾಜೇ ಅರಸ್, ನೀಲಕಂಠ ಮೂರ್ತಿಯವರ ಧರ್ಮಪತ್ನಿ, ಸಾಹಿತ್ಯಮೈತ್ರಿಯ ಚಂದ್ರಶೇಖರ್ ಹಾಗು ನಿಕಿತಾ ಅಡವೀಶಯ್ಯ ಉಪಸ್ಥಿತರಿದ್ದರು.
ಸಾಹಿತ್ಯಮೈತ್ರಿ ತಂಡ