ವಿಶಿಷ್ಟ ಪ್ರಾಣಿ ಘೇಂಡಾಮೃಗ
ಸಾಮಾನ್ಯವಾಗಿ ಪ್ರಾಣಿಗಳಿಗೆ ತಲೆಯಲ್ಲಿ ಕೋಡುಗಳಿದ್ದು, ಈ ಕೋಡುಗಳಿಂದ ತಮ್ಮ ವೈರಿಗಳನ್ನು ಹಿಮ್ಮೆಟ್ಟಿಸುತ್ತವೆ. ಆದರೆ ಇಲ್ಲೊಂದು ವಿಭಿನ್ನವಾಗಿ ಮುಖದ ಮುಂಭಾಗದಲ್ಲಿ ಚೂಪಾದ ಕೋಡುಗಳಿರುವ ಮತ್ತು ನೀರನ್ನು ಹೆಚ್ಚು ಇಷ್ಟಪಡುವ ಪ್ರಾಣಿಯೊಂದಿದ್ದು, ಈ ಕೋಡಿನ ಮೂಲಕ ತಿವಿದು ಶತ್ರುಗಳನ್ನು ಹಿಮ್ಮೆಟ್ಟಿಸುತ್ತದೆ.
ಅದುವೇ ಘೇಂಡಾಮೃಗ. ಇದು ಆಫ್ರಿಕ ಮತ್ತು ಏಷ್ಯಾ ಖಂಡಗಳ ಉಷ್ಣ ಹಾಗೂ ಸಮಶೀತೋಷ್ಣವಲಯಗಳಲ್ಲಿ ವಾಸಿಸುವ ಬೃಹತ್ ಗಾತ್ರದ ಸಸ್ತನಿ. ಘೇಂಡಾಮೃಗ ಪರ್ಯಾಯನಾಮ. ಇದು ‘ಮ್ಯಾಮೇಲಿಯ’ ಪ್ರಬೇಧಕ್ಕೆ ಸೇರಿದ ‘ಪೆರಿಸೊಡ್ಯಾಕ್ಟಿಲ’ ಜಾತಿಯ ‘ರೈನೊಸೆರಾಟಿಡೀ’ ಕುಟುಂಬಕ್ಕೆ ಸೇರಿದೆ. ಮೂರು ಬೆರಳುಗಳುಳ್ಳ ಗೊರಸುಗಳು ಮತ್ತು ಮೂತಿಯ ಮೇಲೆ ಒಂದು ಅಥವಾ ಎರಡು ಕೊಂಬುಗಳನ್ನು ಹೊಂದಿರುವುದು ಈ ಪ್ರಾಣಿಯ ವಿಶಿಷ್ಟ ಲಕ್ಷಣಗಳು. ಘೇಂಡಾಮೃಗವು ‘ಪೆರಿಸೊಡ್ಯಾಕ್ಟಿಲ’ ಗಣಕ್ಕೆ ಸೇರಿದ ಕುದುರೆ, ಝೀಬ್ರಾ, ಟಾಪಿರ್ ಮುಂತಾದ ಪ್ರಾಣಿಗಳ ಬಹು ಹತ್ತಿರದ ಹತ್ತಿರದ ಸಂಬಂಧಿ ಇವುಗಳ ಮುಖದ ಮೇಲೆ ಖಡ್ಗ ಯಾ ಕತ್ತಿಯ ರೂಪದ ಕೋಡುಗಳು ಇರುವುದರಿಂದಲೇ ಇದಕ್ಕೆ ‘ಖಡ್ಗಮೃಗ’ ಎಂಬ ಅನ್ವರ್ಥನಾಮವೂ ಬಂದಿದೆ.
ಪ್ರಬೇಧಗಳು
ಖಡ್ಗಮೃಗಗಳಲ್ಲಿ ಒಟ್ಟು 4 ಜಾತಿಗಳಿಗೆ ಸೇರಿದ 5 ಪ್ರಭೇದಗಳಿವೆ. ಆಫ್ರಿಕದ (ಉಗಾಂಡ, ಕಾಂಗೊ, ಜೂಲೂ ಲ್ಯಾಂಡ್, ಕೀನ್ಯ) ಸವಾಸ ಹುಲ್ಲುಗಾವಲುಗಳು ಮತ್ತು ದಟ್ಟ ಕಾಡುಗಳಲ್ಲಿ ‘ಡೈಸೆರಾಸ್ ಬೈಕಾರ್ನಿಸ್’ (ಕಪ್ಪುಬಣ್ಣದ ಖಡ್ಗಮೃಗ) ಮತ್ತು ‘ಸೆರಟೊತೀರಿಯಂ ಸೈಮಸ್’ (ಬಿಳಿ ಖಡ್ಗಮೃಗ) ಪ್ರಭೇದಗಳೂ, ಭಾರತದ ಅಸ್ಸಾಂನ ಕಾಡುಗಳಲ್ಲಿ ‘ರೈನಾಸರಾಸ್ ಯೂನಿಕಾರ್ನಿಸ್’ ಪ್ರಭೇದ, ಜಾವದಲ್ಲಿ ‘ರೈನಾಸರಾಸ್ ಸೋಂಡೇಕಸ್’ ಪ್ರಭೇದ, ಸುಮಾತ್ರದಲ್ಲಿ ‘ಡೈಡರ್ಮೊಸೆರಾಸ್ (ಡೈಸೆರಾರೈನಸ್) ಸುಮಾತ್ರೆನ್ಸಿಸ್’ ಪ್ರಭೇದಗಳು ಕಾಣಸಿಗುತ್ತವೆ.
ದೇಹದ ರಚನೆ ಮತ್ತು ಗಾತ್ರ
ಖಡ್ಗಮೃಗದ ದೇಹವು ಬಹಳ ದೊಡ್ಡದಾಗಿದ್ದು, ಪೂರ್ಣ ಬೆಳೆದ ಗಂಡು ಖಡ್ಗಮೃಗದ ಉದ್ದವು ಸುಮಾರು 2 ರಿಂದ 4.2ಮೀ., 1 ರಿಂದ 2 ಮೀ. ಎತ್ತರ ಮತ್ತು 1 ರಿಂದ 3.5 ಮೆಟ್ರಿಕ್ ಟನ್ ತೂಕವಿರುತ್ತವೆ. ಆನೆಯನ್ನು ಬಿಟ್ಟರೆ ಆಫ್ರಿಕದ ‘ಸೆರಟೊತೀರಿಯಮ್ ಸೈಮಸ್’ ಪ್ರಭೇದವೇ ಭೂಮಿಯಲ್ಲಿ ವಾಸಿಸುವ ಅತ್ಯಂತ ದೊಡ್ಡದಾದ ಪ್ರಾಣಿಯೆಂದು ದಾಖಲಾಗಿದೆ. ಹೆಣ್ಣು ಘೆಂಡಾಮೃಗವು ಗಂಡಿಗಿಂತ ಚಿಕ್ಕದಾಗಿದ್ದು, ಇವುಗಳ ಚರ್ಮವು ಬಹಳ ದಪ್ಪ ಹಾಗೂ ಗಡುಸಾಗಿರುತ್ತದೆ. ಆಫ್ರಿಕದ ಪ್ರಭೇದದ ಘೇಂಡಾಮೃಗಗಳಲ್ಲಿ ಚರ್ಮವು ತುಸು ನಯವಾಗಿದ್ದು, ಭಾರತ ಹಾಗೂ ಜಾವದಲ್ಲಿ ವಾಸಿಸುವ ಖಡ್ಗಮೃಗಗಳ ಚರ್ಮವು ಅವುಗಳ ಕತ್ತು ಹಾಗೂ ಕಾಲುಗಳ ಬಳಿ ಮಡಚಿ ಕೊಂಡಿರುವುದರಿಂದ ಯುದ್ಧದ ಕವಚದಂತೆ ಗೋಚರಿಸುತ್ತದೆ. ಇವುಗಳ ಕಿವಿಯ ಅಂಚು, ಬಾಲದ ತುದಿಗಳನ್ನು ಬಿಟ್ಟರೆ ದೇಹದ ಮೇಲೆಲ್ಲೂ ಕೂದಲುಗಳಿರುವುದಿಲ್ಲ.
ಇವುಗಳ ದೇಹವು ಬೂದು ಅಥವಾ ಕಂದು ಬಣ್ಣದಿಂದ ಕೂಡಿದ್ದು, ಆಫ್ರಿಕದ ‘ಡೈಸೆರಾಸ್’ ಪ್ರಭೇದವನ್ನು ‘ಕರಿ ಖಡ್ಗಮೃಗ’ವೆಂದೂ ‘ಸೆರಟೊತೀರಿಯಂ’ ಪ್ರಭೇದವನ್ನು ‘ಬಿಳಿ ಖಡ್ಗಮೃಗ’ವೆಂದೂ ಕರೆಯುತ್ತಿದ್ದರೂ ವಾಸ್ತವವಾಗಿ ಬಿಳಿ ಖಡ್ಗಮೃಗಗಳು ಶುದ್ಧ ಬಿಳಿ ಬಣ್ಣವನ್ನು ಹೊಂದಿರುವುದರಿಲ್ಲ. ಬಿಳಿ ಬಣ್ಣದ ಖಡ್ಗಮೃಗವೆಂದು ಕರೆಯಲಾಗುವ ಖಡ್ಗಮೃಗದ ಮೈಬಣ್ಣವು ಬೇರೆ ಬಗೆಗಳಿಗೆ ಹೋಲಿಸಿದರೆ ಕೊಂಚ ತಿಳಿಯಾಗಿರುತ್ತದೆ. ಖಡ್ಗಮೃಗಗಳ ದೇಹದ ಮೇಲೆ ಅಲ್ಲಲ್ಲಿ ಎತ್ತರ ತಗ್ಗುಗಳಿದ್ದು, ಇವುಗಳ ದೇಹದ ಗಾತ್ರಕ್ಕೆ ಹೋಲಿಸಿದರೆ ಇವುಗಳ ಕಾಲುಗಳು ತೀರಾ ಗಿಡ್ಡಗಿರುತ್ತವೆ. ಕಾಲುಗಳು ನೋಡಲು ಕಂಬದಂತಿದ್ದು, ಮುಂಗಾಲು ಮತ್ತು ಹಿಂಗಾಲುಗಳಲ್ಲಿ ತಲಾ ಮೂರು ಬೆರಳುಗಳಿರುತ್ತವೆ. ಒಂದೊಂದು ಬೆರಳಲ್ಲೂ ಪರಸ್ಪರ ಬಿಡಿಬಿಡಿಯಾದ ಗೊರಸುಗಳಿದ್ದು, ಇವುಗಳ ಕತ್ತು ಚಿಕ್ಕದಾಗಿರುತ್ತದೆ ಇಗಳ ತಲೆಯ ಗಾತ್ರವು ಬಹಳಷ್ಟು ದೊಡ್ಡದಾಗಿದ್ದು, ಮೇಲ್ಮುಖವಾಗಿ ತುಸು ಬಾಗಿದಂತೆ ಇರುವ ಮೂತಿಯ ಮೇಲೆ ಕೊಂಬುಗಳಿರುತ್ತವೆ.
ಆಫ್ರಿಕ ಮತ್ತು ಸುಮಾತ್ರದಲ್ಲಿ ಕಂಡುಬರುವ ಖಡ್ಗಮೃಗಗಳಲ್ಲಿ ಒಂದರ ಹಿಂದೆ ಮತ್ತೊಂದು ಇರುವ 2 ಕೊಂಬುಗಳು, ಭಾರತ ಹಾಗೂ ಜಾವದಲ್ಲಿ ಕಂಡುಬರುವ ಖಡ್ಗಮೃಗದ ಪ್ರಭೇದಗಳಲ್ಲಿ ಒಂದೇ ಕೊಂಬು ಇರುತ್ತದೆ. ಇವುಗಳ ಮೂತಿಯಲ್ಲಿರುವ ಕೊಂಬುಗಳಿಗೆ ಮತ್ತು ತಲೆಬುರುಡೆಯ ಮೂಳೆಗಳಿಗೆ ಪರಸ್ಪರ ಸಂಬಂಧವಿರುವುದಿಲ್ಲ. ಇವುಗಳ ಮೂತಿಯ ಮೇಲಿರುವ ಕೆಲವು ವಿಶಿಷ್ಟ ರೀತಿಯ ಕೂದಲುಗಳು ಒಂದಕ್ಕೊಂದು ಒತ್ತೊತ್ತಾಗಿ ಪರಸ್ಪರ ಹೆಣೆದುಕೊಂಡು, ಗಡುಸಾಗಿ ಉಂಟಾದ ರಚನೆಗಳೇ ಕೊಂಬುಗಳಾಗಿ ಮಾರ್ಪಟ್ಟಿವೆ. ಆದ್ದರಿಂದ ಖಡ್ಗಮೃಗದ ಕೊಂಬುಗಳು ಬೇರೆ ಪ್ರಾಣಿಗಳ (ದನ, ಜಿಂಕೆ, ಜಿರಾಫೆ ಇತ್ಯಾದಿ) ಕೊಂಬುಗಳಿಂದ ತೀರಾ ವಿಭಿನ್ನವಾಗಿದೆ. ಭಾರತದಲ್ಲಿ ಕಂಡುಬರುವ ಖಡ್ಗಮೃಗಗಳು ತನ್ನ ಕೊಂಬನ್ನು ಗಟ್ಟಿಯಾದ ಮರಗಳು ಮತ್ತು ಕಲ್ಲುಗಳಿಗೆ ಉಜ್ಜಿ ಚಪ್ಪಟೆ ಮಾಡಿಕೊಳ್ಳುವುದರಿಂದ ಇವುಗಳ ಕೊಂಬುಗಳು ಚೂಪಾಗಿರುವುದಿಲ್ಲ. ಆಫ್ರಿಕದಲ್ಲಿ ಕಂಡುಬರುವ ಪ್ರಭೇದದ ಖಡ್ಗಮೃಗಗಳು ಈ ರೀತಿ ಮಾಡುವುದಿಲ್ಲವಾದ್ದರಿಂದ ಇವುಗಳ ಕೊಂಬುಗಳು ಚೂಪಾಗಿಯೇ ಇರುತ್ತವೆ. ಆಫ್ರಿಕದ ಪ್ರಭೇದಗಳಲ್ಲಿ ಮುಂದಿನ ಕೊಂಬು ಹೆಚ್ಚು ಉದ್ದವಾಗಿದ್ದು, ಇವು ಸುಮಾರು 3.5 ಮೀ. ಉದ್ದವಿರುತ್ತವೆ. ಖಡ್ಗಮೃಗಗಳು ಎದುರಾಳಿಯ ಮೇಲೆ ಆಕ್ರಮಣ ಮಾಡಲು ಮತ್ತು ವೈರಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ತಮ್ಮ ಕೊಂಬನ್ನು ಆಯುಧವನ್ನಾಗಿ ಬಳಸಿಕೊಳ್ಳುತ್ತವೆ. ‘ರೈನಾಸೆರಾಸ್’ ಮತ್ತು ‘ಡೈಸರಾಸ್’ ಪ್ರಭೇದಗಳ ಖಡ್ಗಮೃಗಗಳ ಮೇಲಿನ ತುಟಿಯು ತುಸು ಮುಂದಕ್ಕೆ ಚಾಚಿದಂತಿತೆ ಇರುವುದರಿಂದ ಅವುಗಳಿಗೆ ಅಲ್ಲಿ ಆಹಾರವನ್ನು ಹಿಡಿದುಕೊಳ್ಳುವ ಸಾಮಥ್ರ್ಯವಿರುತ್ತದೆ. ಉಳಿದ ಪ್ರಭೇದಗಳಲ್ಲಿ ಮೇಲ್ದುಟಿಯು ಮೊಂಡಾಗಿದ್ದು, ತಲೆಯ ಇಕ್ಕೆಲಗಳಲ್ಲಿ ಪುಟ್ಟ ಗಾತ್ರದ ಕಣ್ಣುಗಳಿರುತ್ತವೆ. ಕಿವಿಗಳು ಚಿಕ್ಕವಾಗಿದ್ದು, ಕಿವಿಗಳ ತುದಿಯಲ್ಲಿ ಕೂದಲುಗಳ ಕುಚ್ಚು ಇರುತ್ತದೆ.
ಜೀವನ ವಿಧಾನ
ಖಡ್ಗಮೃಗವು ಸಾಮಾನ್ಯವಾಗಿ ಒಂಟಿಯಾಗಿ ವಾಸಿಸುತ್ತದೆ. ಖಡ್ಗಮೃಗಗಳು ನಿಶಾಚರಿಗಳಾಗಿದ್ದು, ಸಂಜೆಯಿಂದ ಮುಂಜಾವಿನವರೆಗೂ ಆಹಾರವನ್ನು ಹುಡುಕುತ್ತಾ ಇರುವುದಲ್ಲದೆ ಹಗಲಲ್ಲಿ ಅಜ್ಞಾತ ಸ್ಥಳದಲ್ಲಿ ಅಡಗಿಕೊಂಡಿರುತ್ತವೆ. ಇವುಗಳು ಬಲು ಒತ್ತೊತ್ತಾದ ಪೆÇದೆಗಳಲ್ಲಿ ಅವಿತಿಟ್ಟುಕೊಂಡು ಹೆಚ್ಚಾಗಿ ನಿಂತುಕೊಂಡು ಅಥವಾ ನೆಲದ ಮೇಲೆ ಒರಗಿ ನಿದ್ರಿಸುತ್ತಿರುತ್ತವೆ. ಇವುಗಳು ಬಿಸಿಲಿನ ತಾಪ ಹೆಚ್ಚಾದಾಗ ಕೆಸರು ನೀರಿನಲ್ಲಿ ಹೊರಳಾಡುತ್ತಾ, ನದಿಗಳಲ್ಲಿ ಈಜುತ್ತಾ ಕಾಲಕಳೆಯುತ್ತವೆ. ಜಗತ್ತಿನಲ್ಲಿ ಬದುಕಿರುವ ಎಲ್ಲ ಬಗೆಯ ಖಡ್ಗಮೃಗಗಳೂ ಸಂಪೂರ್ಣ ಸಸ್ಯಹಾರಿಗಳಾಗಿದ್ದು, ‘ಸೆರಟೋತೀರಿಯಂ’ ಜಾತಿಯ ಖಡ್ಗಮೃಗಗಳು ಹುಲ್ಲನ್ನು ಮೇಯುತ್ತವೆ. ಉಳಿದವುಗಳು ಗಿಡಮರಗಳ ಎಳೆಚಿಗುರನ್ನು ಮತ್ತು ಮೊಗ್ಗುಗಳನ್ನು ತಿನ್ನುತ್ತವೆ. ಖಡ್ಗಮೃಗಗಳು ಬಲು ಸ್ಥೂಲ ಗಾತ್ರದವಾಗಿದ್ದರೂ, ಗಂಟೆಗೆ ಸುಮಾರು 45 ಕಿಮೀ. ವೇಗದಲ್ಲಿ ಓಡಬಲ್ಲವು. ಇವುಗಳ ಓಟವು ಕುದುರೆಯ ಓಟವನ್ನೇ ಹೋಲುತ್ತದೆ. ಖಡ್ಗಮೃಗದ ದೃಷ್ಟಿಯು ಮಂದವಾಗಿದ್ದರೂ ಇವುಗಳ ಆಘ್ರಾಣಿಸುವ (ವಾಸನೆ ಗ್ರಹಿಸುವ) ಶಕ್ತಿ ಹಾಗೂ ಶ್ರವಣಶಕ್ತಿಗಳು ಬಹಳ ಚುರುಕಾಗಿರುತ್ತದೆ. ಖಡ್ಗಮೃಗಗಳಿಗೆ ಮನುಷ್ಯನನ್ನು ಬಿಟ್ಟರೆ ಬೇರಾವ ಶತ್ರುಗಳಿಲ್ಲ ಎನ್ನಬಹುದು. ಆಫ್ರಿಕದ ಕಪ್ಪುಬಣ್ಣದ ಖಡ್ಗಮೃಗವನ್ನು ಬಿಟ್ಟರೆ ಉಳಿದವೆಲ್ಲ ಸ್ವಭಾವದಲ್ಲಿ ಸಾಧುಗಳಾಗಿರುತ್ತವೆ. ಇವುಗಳನ್ನು ಅಂಜುಬುರುಕ ಪ್ರಾಣಿಗಳೆಂದೂ ಕರೆಯುತ್ತಾರೆ. ಆದರೆ ಇವುಗಳನ್ನು ವೈರಿಗಳು ಸುತ್ತುವರೆದು ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಇವುಗಳು ಎದುರಾಳಿಯೊಂದಿಗೆ ಅತ್ಯಂತ ಕ್ರೂರವಾಗಿ ಹೋರಾಡುತ್ತಾ ವೇಗವಾಗಿ ಶತ್ರುಗಳ ಮೇಲೆ ನುಗ್ಗಿ ಕೊಂಬಿನಿಂದ ತಿವಿಯುತ್ತವೆ.
ಆವಾಸಸ್ಥಾನ
ಎಲ್ಲಿ ನೀರಿನ ಆಸರೆ ಚೆನ್ನಾಗಿರುತ್ತದೋ ಅಂತಹ ಸ್ಥಳಗಳೇ ಖಡ್ಗಮೃಗಗಳ ವಾಸಸ್ಥಾನ. ಇವುಗಳು ದಟ್ಟ ಪೊದೆಗಳ ನಡುವೆ ಸುರಂಗದ ರೀತಿಯಲ್ಲಿ ದಾರಿಯನ್ನು ಮಾಡಿಕೊಂಡು ತಾವು ಆಹಾರವನ್ನು ಮೇಯುವ ಸ್ಥಳಗಳಿಂದ ನೀರಿನ ಸೆಲೆಯಿರುವ ಸ್ಥಳಗಳಿಗೆ ಹೋಗಿಬರುತ್ತವೆ. ಸಾಧಾರಣವಾಗಿ ಒಂದೊಂದು ಖಡ್ಗಮೃಗವೂ ಒಂದು ನಿರ್ದಿಷ್ಟ ಪ್ರದೇಶವನ್ನು ಆರಿಸಿಕೊಂಡು ಅದರ ಮೇಲೆ ತನ್ನ ಹಕ್ಕನ್ನು ಸಾಧಿಸುವುದಲ್ಲದೇ ಇತರ ಖಡ್ಗಮೃಗಗಳನ್ನು ಅಲ್ಲಿಗೆ ಬರಲು ಅವಕಾಶವನ್ನು ನೀಡುವುದಿಲ್ಲ. ಅವುಗಳು ತಮ್ಮ ಪ್ರದೇಶದ ಚೌಕಟ್ಟನ್ನು ಗುರುತಿಸಲು ತಾವಿರುವ ನಿರ್ದಿಷ್ಟ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಮಲ ಮತ್ತು ಮೂತ್ರವನ್ನು ವಿಸರ್ಜಿಸುತ್ತವೆ. ಇದನ್ನು ಗಮನಿಸಿದ ಇತರ ಖಡ್ಗಮೃಗಗಳು ಆ ಪ್ರದೇಶದತ್ತ ಸುಳಿಯುವುದಿಲ್ಲ.
ಸಂತಾನೋತ್ಪತ್ತಿ
ಸಂತಾನೋತ್ಪತ್ತಿಯ ಕಾಲದಲ್ಲಿ ಮಾತ್ರ ಗಂಡು ಮತ್ತು ಹೆಣ್ಣು ಖಡ್ಗಮೃಗಗಳು ಜೊತೆಯಾಗಿ ವಾಸಿಸುತ್ತವೆ. ಹೀಗೆ ಸುಮಾರು 4 ತಿಂಗಳುಗಳ ಕಾಲ ಇವುಗಳು ಜೊತೆಯಾಗಿರುತ್ತವೆ. ಹೆಣ್ಣು ಖಡ್ಗಮೃಗದ ಗರ್ಭಧಾರಣೆಯ ಅವಧಿ ಬಹು ದೀರ್ಘವಾಗಿದ್ದು, ಒಂದು ಬಾರಿಗೆ ಕೇವಲ ಒಂದೇ ಮರಿಗೆ ಜನ್ಮನೀಡುತ್ತದೆ. ಇವುಗಳ ಗರ್ಭಧಾರಣೆಯ ಅವಧಿಯು ವಿವಿಧ ಪ್ರಬೇಧಗಳಲ್ಲಿ ವಿಭಿನ್ನವಾಗಿದೆ. ‘ಯೂನಿಕಾರ್ನಿಸ್’ ಪ್ರಭೇದದಲ್ಲಿ 19 ತಿಂಗಳು, ‘ಸೋಂಡೇಕಸ್’ ಪ್ರಭೇದದಲ್ಲಿ 17 ತಿಂಗಳು, ಸುಮಾತ್ರ ದೇಶದ ಖಡ್ಗಮೃಗದಲ್ಲಿ 7 ರಿಂದ 8 ತಿಂಗಳು, ಆಫ್ರಿಕದ ‘ಬೈಕಾರ್ನಿಸ್’ ಹಾಗೂ ‘ಸೆರಟೊತೀರಿಯಂ’ ಪ್ರಭೇದದಲ್ಲಿ 18 ತಿಂಗಳು ಆಗಿದೆ. ಇವುಗಳು ಮರಿಗೆ ಜನ್ಮನೀಡಿದ ಕೆಲವೇ ಗಂಟೆಗಳಲ್ಲಿ ಮರಿಯು ಚುರುಕಾಗಿ ಓಡಾಡಲು ಪ್ರಾರಂಭಿಸುತ್ತದೆ. ಇವುಗಳ ಬಾಲ್ಯಾವಸ್ಥೆಯಲ್ಲಿ ಮುಖದ ಮೇಲೆ ಕೊಂಬುಗಳು ಮೂಡಿರುವುದಿಲ್ಲ. ತಾಯಿ ಖಡ್ಗಮೃಗವು ಮತ್ತೊಂದು ಮರಿಗೆ ಜನ್ಮನೀಡುವವರೆಗೂ ಮರಿಯು ತಾಯಿಯೊಂದಿಗಿದ್ದು, ನಂತರ ತಾಯಿಯಿಂದ ಪ್ರತ್ಯೇಕಗೊಂಡು ಒಂಟಿ ಜೀವನ ಆರಂಭಿಸುತ್ತದೆ. ಖಡ್ಗಮೃಗಗಳು ಸರಾಸರಿಯಾಗಿ 50 ವರ್ಷಗಳ ಕಾಲ ಬದುಕುತ್ತವೆ ಎಂದು ಅಧ್ಯಯನಗಳು ಹೇಳಿವೆ.
ವಿನಾಶದ ಭಯ
ಖಡ್ಗಮೃಗಗಳನ್ನು ಬಹು ಹಿಂದಿನಿಂದಿಂದಲೂ ಮನುಷ್ಯನು ಬೇಟೆಯಾಡುತ್ತ ಬಂದಿದ್ದು, ಆಫ್ರಿಕದ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಇದರ ಮಾಂಸವು ರುಚಿಯಾದ ಆಹಾರವೆನಿಸಿದೆ. ಇಲ್ಲಿನ ಜನರಿಗೆ ಇದರ ಯಕೃತ್ತಂತೂ ನೆಚ್ಚಿನ ಖಾದ್ಯವಾಗಿದೆ. ಇದರ ಚರ್ಮವು ಬಹಳ ಒರಟಾಗಿರುವುದರಿಂದ ಇದರಿಂದ ಚಾವಟಿಯನ್ನು, ಸೋಮಾಲಿಯದ ಜನರು ಇದರ ಚರ್ಮದಿಂದ ಗುರಾಣಿಗಳನ್ನು ತಯಾರಿಸುತ್ತಾರೆ. ಖಡ್ಗಮೃಗಗಳ ಕೊಂಬಿಗೆ ಕಾಮೋತ್ತೇಜಕ ಗುಣವಿದೆ ಎಂದು ಚೀನದಲ್ಲಿ ನಂಬಲಾಗಿದ್ದು, ಇದರಿಂದಾಗಿ ಇವುಗಳ ಬೇಟೆಯು ಅವ್ಯಾಹತವಾಗಿ ಸಾಗಿ ಇವುಗಳ ಸಂತತಿಯು ನಿರ್ನಾಮವಾಗುವ ಸ್ಥಿತಿಯಲ್ಲಿದೆ. ಆದ್ದರಿಂದ ವಿಶ್ವದ ಎಲ್ಲಾ ದೇಶಗಳೂ ಖಡ್ಗಮೃಗಗಳ ಬೇಟೆಯನ್ನು ಕಾನೂನಿನ ಮೂಲಕ ನಿಷೇದಿಸಿವೆ.
ಸಸ್ಯಹಾರಿ ಪ್ರಾಣಿಯಾಗಿರುವ ಘೇಂಡಾಮೃಗವು 5 ಪ್ರಬೇಧಗಳಲ್ಲಿ ಕಂಡು ಬರುತ್ತಿದ್ದು, ಬಿಳಿ ಮತ್ತು ಕಪ್ಪು ಘೇಂಡಾಮೃಗ, ಒಂಟಿ ಕೊಂಬಿನ ಘೇಂಡಾಮೃಗ, ಸುಮಾತ್ರ ಘೇಂಡಾಮೃಗ ಹಾಗೂ ಜಾವನ್ ಘೇಂಡಾಮೃಗ ಎಂದು ವಿಂಗಡಿಸಲಾಗಿದೆ. ವಿಶ್ವದಲ್ಲಿ ಈಗ ಕೇವಲ 30 ಸಾವಿರ ಘೇಂಡಾಮೃಗಗಳಷ್ಟೇ ಉಳಿದಿದ್ದು, ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದೆ. ಭಾರತದಲ್ಲಿ ಒಟ್ಟು 2,600 ಘೇಂಡಾಮೃಗವಿದ್ದು, ಅಸ್ಸಾಂ ಹೆಚ್ಚಿನ ಸಂಖ್ಯೆಯ ಘೇಂಡಾಮೃಗಗಳನ್ನು ಹೊಂದಿರುವ ರಾಜ್ಯವಾಗಿದೆ. ಈ ಪ್ರಾಣಿಗಳನ್ನು ಕೊಂಬಿಗಾಗಿ ಬೇಟೆಯಾಡುತ್ತಿದ್ದು, ಇವುಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಉಳಿಸುವ ಸಲುವಾಗಿ ವಿಶ್ವ ವನ್ಯಜೀವಿ ನಿಧಿ ಸಂಸ್ಥೆಯು 2010ನೇ ವರ್ಷದಿಂದ ಪ್ರತೀ ವರ್ಷವೂ ಸೆ.22ನ್ನು ‘ವಿಶ್ವ ಘೇಂಡಾಮೃಗ ದಿನ’ ವಾಗಿ ಆಚರಿಸುವ ಮೂಲಕ ಇದರ ಸಂತತಿಯ ಉಳಿವಿನ ಕುರಿತು ಜಾಗೃತಿ ಮೂಡಿಸುತ್ತಿದೆ. ಕರ್ನಾಟಕದ ಮೈಸೂರು ಮೃಗಾಲದಲ್ಲಿ ಒಂದು ಜೊತೆ ಬಿಳಿಬಣ್ಣದ ಘೇಂಡಾಮೃಗ ಮತ್ತು ಒಂದು ಜೊತೆ ಭಾರತೀಯ ಘೇಂಡಾಮೃಗಗಳಿವೆ.
ಅತ್ಯಂತ ಬಲಿಷ್ಠ ಪ್ರಾಣಿಗಳಿವು
ಕೋಪ ಬಂದಾಗ ಕಾಡುಪ್ರಾಣಿಗಳು ಏನು ಮಾಡುತ್ತವೆಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಶಕ್ತಿಶಾಲಿ ಪ್ರಾಣಿಯಾದ ಖಡ್ಗಮೃಗದ ಕೋಪವೆಂದರೆ ಹೇಳಬೇಕೇ? ಜರ್ಮನಿಯ ಹೂಡೆನ್ ಹೆಗೆನ್ ಎಂಬಲ್ಲಿ ಘೇಂಡಾಮೃಗಕ್ಕೆ ಕೋಪಬಂದಿದ್ದು, ತನ್ನ ಎದುರಿಗೆ ಸಿಕ್ಕಿದ ಕಾರನ್ನು ಮೂರು ಬಾರಿ ಪಲ್ಟಿ ಮಾಡಿ ಹಾಕಿದೆ. ಕ್ಯುಸಿನಿ ಹೆಸರಿನ 30ವರ್ಷ ವಯಸ್ಸಿನ ಈ ಗಂಡು ಖಡ್ಗಮೃಗ ಇಲ್ಲಿನ ಸೆರೆಂಗೆಟಿ ಸಫಾರಿ ಪಾರ್ಕ್‍ಗೆ ಸೇರಿದ್ದಾಗಿದೆ. ಕಾರನ್ನು ಚಾಲನೆ ಮಾಡಿಕೊಂಡು ಇಲ್ಲಿನ ಸಫಾರಿಯ ಪಾಲಕಿಯು ಬಂದಿದ್ದು, ಆಕೆ ಕಾರಿನಲ್ಲಿದ್ದಾಗಲೇ ಎದುರಾದ ಖಡ್ಗಮೃಗ ತನ್ನ ತಾಕತ್ತನ್ನು ಕಾರಿನ ಮೇಲೆ ಪ್ರದರ್ಶಿಸಿತ್ತು. ಅದರ ಕೋಪಕ್ಕೆ ಕಾರು ಪೂರ್ತಿಯಾಗಿ ಜಖಂಗೊಂಡಿದ್ದು, ಕ್ಯುಸಿನಿ ಏಕೆ ಹೀಗೆ ಮಾಡಿದೆ ಎಂದು ತಿಳಿದಿಲ್ಲ.
ಜಗತ್ತಿನಲ್ಲಿ ಈಗ ಬದುಕಿ ಉಳಿದಿರುವ, ಭೂಮಿಯ ಮೇಲೆ ಓಡಾಡಿಕೊಂಡಿರುವ ವಿವಿಧ ಜೀವಿಗಳ ಪೈಕಿ ಭೂಮಿಯಲ್ಲಿ ಆನೆ, ನೀರಿನಲ್ಲಿ ತಿಮಿಂಗಿಲವನ್ನು ಬಿಟ್ಟರೆ ಎರಡನೇ ಅತಿದೊಡ್ಡ ಪ್ರಾಣಿಯಾಗಿ ಖಡ್ಗಮೃಗ ಅಥವಾ ಘೇಂಡಾಮೃಗವು ಗುರುತಿಸಿಕೊಂಡಿದೆ. ಸೃಷ್ಟಿಯ ವೈಚಿತ್ರ್ಯಗಳ ಪೈಕಿ ಈ ಪ್ರಾಣಿಯೂ ಒಂದಾಗಿದ್ದು, ಪ್ರಾಚೀನ ಸಿಂಧೂ ನಾಗರೀಕತೆಯ ಕಾಲದ ಪಶುಪತಿಯ ಚಿತ್ರದಲ್ಲಿ ಘೇಂಡಾಮೃಗದ ಚಿತ್ರವಿದೆ. ಈ ಚಿತ್ರವು ಭಾರತದ ದೀರ್ಘ ಕಾಲದಿಂದಲೂ ಅಸ್ಥಿತ್ವದಲ್ಲಿದ್ದ ಜೀವಜಾಲದ ಚರಿತ್ರೆಯನ್ನು ಉಲ್ಲೇಖಿಸಿದೆ. ಒಂದು ಕಾಲದಲ್ಲಿ ಭಾರತದ ಗಂಗಾನದಿಯ ಮುಖಜ ಭೂಮಿಯ ಎಲ್ಲೆಡೆಯೂ ತಮ್ಮ ಆವಾಸಸ್ಥಾನವನ್ನು ಹೊಂದಿದ್ದ ಒಂದು ಕೊಂಬಿನ ಘೇಂಡಾಮೃಗಗಳು ಇಂದು ಈಶಾನ್ಯ ರಾಜ್ಯಗಳ ಕೆಲವೇ ಅರಣ್ಯ ಪ್ರದೇಶಗಳಿಗೆ ಸೀಮಿತವಾಗಿವೆ. ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ತಮ್ಮ ಹಿಂದಿನ ಹಲವು ಆವಾಸಸ್ಥಾನಗಳಲ್ಲಿ ನೆಲೆಯನ್ನು ಕಳೆದುಕೊಂಡು ಇವು ಅಳಿವಿನಂಚಿಗೆ ತಲುಪಿವೆ. ಈಗಾಗಲೇ ಭಾರತ ಅರಣ್ಯಗಳು ಚೀತಾ ಎನ್ನುವ ಪ್ರಾಣಿಯನ್ನು ಶಾಶ್ವತವಾಗಿ ಕಳೆದುಕೊಂಡಿದ್ದು, ಭಾರತವು ಕೆಲವೇ ಸಂಖ್ಯೆಯಲ್ಲಿರುವ ಒಂದು ಕೊಂಬಿನ ಘೇಂಡಾಮೃಗಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿಯನ್ನು ತೋರಬೇಕಾಗಿದೆ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ:9742884160