ವಿಶ್ವದ ಅತ್ಯಂತ ಅಪರೂಪದ ಮೂರು ಕಣ್ಣಿನ ಹಾವು
ಪ್ರಕೃತಿಯಲ್ಲಿ ಮತ್ತು ಜೀವರಾಶಿಯ ಸೃಷ್ಟಿಯಲ್ಲಿ ಆಗಿಂದಾಗ್ಗೆ ಹಲವಾರು ವೈಚಿತ್ರ್ಯಗಳು ಸಂಭವಿಸುತ್ತಲೇ ಇರುತ್ತವೆ. ಸಯಾಮಿ ಮನುಷ್ಯ, ಎರಡು ತಲೆಯ ಹಸು, ಮೂರು ಕಿವಿಯ ಪ್ರಾಣಿಗಳು ಇತ್ಯಾದಿ ವಿಚಿತ್ರ ಜನನಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ವಿಚಿತ್ರವಾದ ಸೃಷ್ಟಿಯು ಉರಗ ಜಾತಿಯಲ್ಲೂ ಕಂಡುಬಂದಿದ್ದು, ಈ ಹಾವು ಮೂರು ಕಣ್ಣನ್ನು ಹೊಂದಿತ್ತು.
ಬಹುಶಃ ಈ ಹಾವು ಏನಾದರೂ ನಮ್ಮಲ್ಲಿದ್ದಿದ್ದರೆ ಇದನ್ನು ಈಶ್ವರನ ಪ್ರತಿರೂಪವೆಂದು ಎಲ್ಲರೂ ಭಕ್ತಿಯಿಂದ ಪೂಜಿಸುತ್ತಿದ್ದೆವು. ಆದರೆ ಈ ವಿಶಿಷ್ಟ ಮೂರು ಕಣ್ಣಿನ ಹಾವು ಉತ್ತರ ಆಸ್ಟ್ರೇಲಿಯಾದ ಅರ್ನ್ಹೆಮ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಪತ್ತೆಯಾಗಿತ್ತು. ಆಸ್ಟ್ರೇಲಿಯಾದ ಉತ್ತರ ಪ್ರಾಂತ್ಯದ ಉದ್ಯಾನವನ ಮತ್ತು ವನ್ಯಜೀವಿ ಸೇವೆಗಳ ಅಧಿಕಾರಿಗಳು ಇದೊಂದು ಸೃಷ್ಟಿಯ ಅತ್ಯಂತ ಅಪರೂಪದ ಮತ್ತು ಕೌತುಕದ ವಿಚಾರವೆಂದು ಹಾವಿನ ಫೋಟೊವನ್ನು ತಮ್ಮ ಫೇಸ್ಬುಕ್ ಜಾಲತಾಣದಲ್ಲಿ ಹಂಚಿಕೊಂಡು ಬರೆದಿದ್ದಾರೆ. ಬಿ ಬಿ ಸಿ ಸುದ್ಧಿವಾಹಿನಿಯು ಸೃಷ್ಟಿಯ ವಿಚಿತ್ರ ಎಂಬ ಹೆಡ್ಲೈನ್ಲ್ಲಿ ಕಾರ್ಯಕ್ರಮ ಪ್ರಸಾರ ಮಾಡಿತ್ತು.
‘ಮಾಂಟಿ ಪೈಥಾನ್’ ಪ್ರಬೇಧಕ್ಕೆ ಸೇರಿರುವ ಈ ಹಾವು ಕಳೆದ 2018ರ ಮಾರ್ಚ್ ತಿಂಗಳಿನಲ್ಲಿ ಪತ್ತೆಯಾಗಿತ್ತು. ಡಾರ್ವಿನ್ ನಗರದ ಆಗ್ನೇಯ ಭಾಗದಿಂದ 40 ಕಿ.ಮೀ ದೂರದ ಹಮ್ಟಿಡೂನಲ್ಲಿ ಕಂಡುಬಂದಿದ್ದ ಈ ಹಾವು 40 ಸೆಂ.ಮೀ ಉದ್ದವಿತ್ತು. ಖ್ಯಾತ ಉರಗ ತಜ್ಞರಾದ ಪ್ರೊಫೆಸರ್ ಬ್ರಯಾನ್ ಈ ಹಾವಿನ ತಲೆಯ ಮೇಲಿದ್ದ ಮೂರನೇ ಕಣ್ಣು ಮನುಷ್ಯರಲ್ಲಿ ಸಯಾಮಿ ಅವಳಿಗಳಂತೆಯೇ ಸ್ವಾಭಾವಿಕವಾದ ವಿಕಾಸದ ವ್ಯತ್ಯಯವಷ್ಟೇ ಎಂದಿದ್ದಾರೆ. ಎರಡು ತಲೆಯ ಹಾವನ್ನು ಪ್ರಪಂಚದ ಕೆಲವೊಂದು ಪ್ರದೇಶದಲ್ಲಿ ಕಾಣಬಹುದಾದರೂ ಇಂತಹ ಮೂರು ಕಣ್ಣಿನ ಹಾವನ್ನು ಇದುವರೆಗೂ ನಾನು ನೋಡಿಲ್ಲ ಎಂದು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ತನ್ನ ಮೂರನೇ ಕಣ್ಣು ಹಾವಿನ ನೆತ್ತಿಯ ಭಾಗದಲ್ಲಿದ್ದುದರಿಂದ ಹಾಗೂ ತನ್ನ ತಲೆಯ ವಿರೂಪತೆಯ ಕಾರಣದಿಂದ ಆಹಾರವನ್ನು ಸರಿಯಾಗಿ ತಿನ್ನಲಾಗದೇ ತನ್ನ ಜೀವವನ್ನು ಉಳಿಸಿಕೊಳ್ಳಲು ಹರಸಾಹಸಪಡುತ್ತಿತ್ತು.
ಈ ವ್ಯತ್ಯಾಸದಿಂದ ಈ ಹಾವು ಕೆಲವು ಸಮಯದ ನಂತರ ಬಹುದೂರ ತೆವಳಿಕೊಂಡು ಹೋಗಲಾರದೇ ಮತ್ತು ಆಹಾರವನ್ನು ಸರಿಯಾಗಿ ಸ್ವೀಕರಿಸಲಾರದೇ ಮೃತಪಟ್ಟಿತೆಂದು ಅಲ್ಲಿನ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಹಾವಿನ ಸಾವಿನ ನಂತರ ಇದರ ಕಳೇಬರದ ಕ್ಷ-ಕಿರಣ ಚಿತ್ರ ತೆಗೆದಾಗ ಈ ಹಾವಿಗೆ ಹೆಚ್ಚುವರಿಯಾಗಿ ಅಂಟಿಕೊಂಡಿದೆ ಎಂದುಕೊಳ್ಳಲಾಗಿದ್ದ ಎರಡನೆಯ ತಲೆ ಪತ್ತೆಯಾಗಿರಲಿಲ್ಲ. ಬದಲಿಗೆ ಹಾವಿನ ತಲೆಬುರುಡೆಗೆ ಒಂದು ಹೆಚ್ಚುವರಿ ಕಣ್ಣಿನ ಗೂಡು ಮತ್ತು ಮೂರು ಕಣ್ಣುಗಳಿರುವ ರಂದ್ರವು ಚರ್ಮದಲ್ಲಿ ಪತ್ತೆಯಾಗಿದ್ದು, ಮೂರನೆಯ ಕಣ್ಣು ಹಾವು ಬದುಕಿದ್ದಲ್ಲಿಯವರೆಗೂ ಕೆಲಸ ನಿರ್ವಹಿಸುತ್ತಿತ್ತೆಂದು ತಜ್ಞರು ಹೇಳಿದ್ದಾರೆ. ಅಪರೂಪದಲ್ಲಿ ಅಪರೂಪವೆಂಬಂತೆ ಇಂತಹ ವ್ಯತ್ಯಾಸಗಳು ಹಾಗೂ ಕೌತುಕಗಳು ಭೂಮಿಯಲ್ಲಿ ಸಂಭವಿಸುತಿದ್ದು, ಹಾವನ್ನು ಉಳಿಸಿಕೊಳ್ಳುವ ಕಾಳಜಿಯನ್ನು ಯಾವುದೇ ಸಂಸ್ಥೆ ಮತ್ತು ಇಲಾಖೆಗಳು ತೆಗೆದುಕೊಳ್ಳದೇ ಇದ್ದದ್ದು ವಿಷಾದನೀಯ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ.-574198
ದೂ: 9742884160
ಚಿತ್ರಗಳು: ಅಂತರ್ಜಾಲ