ವೀರಲೋಕ ಪುಸ್ತಕ ಸಂತೆ
‘ಒಬ್ಬ ಒಳ್ಳೆಯ ಓದುಗ ಮಾತ್ರ ಒಳ್ಳೆಯ ಬರಹಗಾರ’ ಆಗಲು ಸಾಧ್ಯ. ಹೇಗೆ ಒಬ್ಬ ಶಿಕ್ಷಕ, ಹಾಗೂ ಒಂದು ಪುಸ್ತಕ, ಮಗುವಿನ ಜೀವನದಲ್ಲಿ ಪ್ರಮುಖ ಪಾತ್ರವೋ ಹಾಗೆಯೇ ಪ್ರತಿಯೊಬ್ಬರಿಗೂ ಜೀವನದಲ್ಲಿ ಮಾರ್ಗದರ್ಶನದ ಅಗತ್ಯವಿದೆ. ಅದು ಒಳ್ಳೆಯ ಪುಸ್ತಕ ಓದುವುದರಿಂದ ಮಾತ್ರ ಸಾಧ್ಯ.
ಇಂದಿನ ಜನತೆ ಒಳ್ಳೆಯ ಪುಸ್ತಕಗಳನ್ನು ಓದುವ ಅಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಕಾರಣ ಇಷ್ಟೇ, ಕೈಯಲ್ಲೇ ಸದಾ ಕಾಲ ರಾರಾಜಿಸುವ ಮೊಬೈಲ್, ಅದರಲ್ಲಿ ಇಡೀ ಪ್ರಪಂಚವನ್ನೇ ಕಾಣುವ ನಾವು ಯಾವುದೇ ಪುಸ್ತಕ ಓದುವುದು ಅಥವಾ ತಮಗೆ ಗೊತ್ತಿರುವುದನ್ನು ಗೀಚುವ ಹವ್ಯಾಸದಿಂದ ದೂರವಾಗುತ್ತಿದ್ದೇವೆ. ಇದು ನಿಜಕ್ಕೂ ಆತಂಕದ ವಿಷಯವೇ ಆದರೆ ಯಾವ ಕಾಲಕ್ಕೂ ಒಂದು ಒಳ್ಳೆಯ ಪುಸ್ತಕಕ್ಕೆ ಯಾವ ತಂತ್ರಜ್ಞಾನವೂ, ಸಮವಾಗಲಾರದು. ನಮ್ಮ ಹಿರಿಯರ ಜೀವನದ ಅನುಭವವೇ ಇಲ್ಲಿ ಪುಸ್ತಕವಾಗಿದೆ. ಅದರಲ್ಲಿ ಮುನ್ನಡೆಯಲು ಬೇಕಾದ ಸಾಕಷ್ಟು ಅಂಶಗಳ ಬುತ್ತಿ ಇದೆ. ಅಷ್ಟೇ ಅಲ್ಲ, ಜೀವನಕ್ಕೆ ಬೇಕಾದ ಅಮೂಲ್ಯವಾದ ಮೌಲ್ಯಗಳು, ಮತ್ತು ಆತ್ಮವಿಶ್ವಾಸವೂ, ಸ್ವಕೌಶಲ್ಯವು, ಜೀವನದ ಒಳನೋಟವು, ಪುಸ್ತಕದ ರೂಪದಲ್ಲಿದೆ. ಅದಿಲ್ಲದೇ ಭವಿಷ್ಯದ ಅಭಿವೃದ್ಧಿಯಾಗಲೀ, ದೇಶದ ಉನ್ನತಿಯಾಗಲೀ, ಸಾಧ್ಯವಿಲ್ಲ. ಒಂದೇ ಮಾತಲ್ಲಿ ಹೇಳುವುದಾದರೆ ‘ಖಡ್ಗಕ್ಕಿಂತ ಲೇಖನಿ ಹರಿತ ‘ ಎಂಬಂತೆ ಒಂದೊಂದು ಉತ್ತಮ ಪುಸ್ತಕವೂ, ನಮಗೆ ಜೀವನದ ಅನೇಕ ಮಜಲುಗಳಲ್ಲಿ ದಾರಿದೀಪವಾಗಿದೆ. ದಿನನಿತ್ಯ ಅನುಭವಿಸುವ ಹಲವು ಸವಾಲುಗಳಿಗೆ ಉತ್ತರವೂ ಆಗಿದೆ.
ಬಹು ಜನರಿಗೆ ಪುಸ್ತಕ ಓದುವುದು ಜೀವನದ ದೈನಂದಿನ ಅಂಶ. ‘ದೇಶ ಸುತ್ತು ಕೋಶ ಓದು’ ಎಂಬ ನಮ್ಮ ಹಿರಿಯರ ಗಾದೆ ಮಾತೇ ಹೇಳುವಂತೆ, ಜ್ಞಾನ ಸಂಪಾದನೆಯೇ ಇದರ ಮೂಲ ಉದ್ದೇಶ. ‘ನೂರು ಗೆಳೆಯರಿಗೆ ಒಂದು ಪುಸ್ತಕ ಸಮ ಎಂಬಂತೆ ಇಲ್ಲಿ ಕಲಿಕೆ ಅಷ್ಟೇ ಅಲ್ಲದೆ, ಗೆಳೆಯರಿಲ್ಲದವರಿಗೂ, ಒಂಟಿತನ ಹೋಗಲಾಡಿಸುವ ಸಾಧನವಾಗಿದೆ. ಎಷ್ಟೋ ಖಿನ್ನತೆಗೊಳಗಾದ ಮನಸ್ಸುಗಳಿಗೆ ಒಂದು ಕಪ್ ಕಾಫಿಯ ಜೊತೆ ತಮಗಿಷ್ಟವಾದ ಯಾವುದೇ ಪುಸ್ತಕ ಎಂಥಾ ಒತ್ತಡವನ್ನೂ ಸಹ ಮೆಟ್ಟಿ ನಿಲ್ಲಬಹುದು. ಇದು ವೈಜ್ಞಾನಿಕವಾಗಿಯೂ ದೃಢೀಕೃತವಾಗಿದೆ. ಅದಕ್ಕೆ ಇರಬೇಕು, ‘ಬದುಕು ಬರಿದಾದಾಗ ಪುಸ್ತಕ ತೆರೆದು ನೋಡು’ ಎಂದು ಕೆಲ ಪುಸ್ತಕ ಪ್ರೇಮಿಗಳ ಪ್ರಸಿದ್ಧ ಘೋಷಣೆ ಅಷ್ಟು ಮಹತ್ವ ಪಡೆದಿರುವುದು.
ಓದುಗರನ್ನು ಉತ್ತೇಜಿಸುವ ಸಲುವಾಗಿ ಆಗಾಗ ಹಮ್ಮಿಕೊಳ್ಳುವ ಪುಸ್ತಕ ಸಂತೆ, ಅಥವಾ ಸಾಹಿತ್ಯ ಹಬ್ಬಗಳು, ಆಶಾದಾಯಕವಾಗಿ ಪರಿಣಮಿಸಿವೆ. ಅಲ್ಲಿ ಸಂಭವಿಸುವುದು ಒಂದು ಸುಂದರ ಜಗತ್ತು, ಅಲ್ಲಿರುವ ಪುಸ್ತಕಗಳೇ ನಮ್ಮೆಲ್ಲರ ಸಂಪತ್ತು. ಒಂದೇ ಕಡೆ ಎಲ್ಲರ ಅಭಿರುಚಿಗೆ ತಕ್ಕಂಥ ಹಲವು ಪ್ರಾಕಾರದ ಸಾಹಿತ್ಯ ಒದಗಿಸುವಲ್ಲಿ ಇಂಥಹ ಪುಸ್ತಕ ಸಂತೆಗಳು ಸಹಕಾರಿಯಾಗಿವೆ. ವೀರಲೋಕ ಪುಸ್ತಕ ಸಂಸ್ಥೆಯು ಈ ತರಹದ ಒಂದು ಪುಸ್ತಕ ಸಂತೆಯನ್ನು ಆಯೋಜಿಸಿದ್ದಾರೆ. ಇದೇ ನವೆಂಬರ್ 15, 16, ಮತ್ತು 17 ರಂದು ಜಯನಗರದ ಶಾಲಿನಿ ಮೈದಾನದಲ್ಲಿ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಪುಸ್ತಕ ಸಂತೆ ವೀರಲೋಕ ಪುಸ್ತಕ ಸಂಸ್ಥೆಯಿಂದ ಆಯೋಜಿಸಲ್ಪಟ್ಟಿದೆ ಇದರಿಂದ ಹೊಸ ಹೊಸ ಬರಹಗಾರರಿಗೂ ಓದುಗರಿಗೂ ಸಂಬಂಧ ಗಟ್ಟಿಯಾಗುವುದಷ್ಟೇ ಅಲ್ಲ, ಓದುಗರು, ಲೇಖಕರು, ಪ್ರಕಾಶಕರಿಗೂ ಎಲ್ಲಾ ವರ್ಗಕ್ಕೂ ಲಾಭವಾಗುವ ಏಕೈಕ ಉದ್ದೇಶ ಈ ಪುಸ್ತಕ ಸಂತೆಗೆ ಇದೆ.
ವೃತ್ತಿ, ಪ್ರವೃತ್ತಿ ಎರಡೂ ಒಂದೆಡೆ ಸೇರಿದ್ದರಿಂದ, ಹಲವು ವಿಚಾರದ ವಿನಿಮಯಗಳು ಬಹಳ ಪ್ರಯೋಜನಕಾರಿಯಾಗಿವೆ. ಪ್ರತಿಯೊಬ್ಬರಿಗೂ ತಾನೂ ಸಹ ಪುಸ್ತಕ ಓದಬೇಕು, ಓದಿ ಏನಾದರೂ ಬರೆಯಬೇಕೆಂಬ ಆಸೆ ಹುಟ್ಟಿಸುವುದು, ಅಷ್ಟಾದರೆ ಪುಸ್ತಕ ಸಂತೆಯ ಉದ್ದೇಶ ನೆರವೇರಿದಂತೆ. ಅನೇಕ ಸುಶಿಕ್ಷಿತ ವರ್ಗದ ಸದಸ್ಯರು ಸೇರುವುದರಿಂದ ಆಲೋಚನಾ ಪ್ರಕ್ರಿಯೆ ಉತ್ತಮಗೊಳ್ಳುವುದರಲ್ಲಿ ಸಂದೇಹವಿಲ್ಲ.
ಪುಸ್ತಕ ಪ್ರಕಟಣೆ ಅದೆಷ್ಟೋ ಲೇಖಕ ಲೇಖಕಿಯರ ಕನಸು, ಆ ಕನಸನ್ನು ನನಸಾಗಿಸುವುದು ಹೇಗೆ ಎಂಬುದನ್ನು ಒಂದು ಕಾರ್ಯಗಾರದ ಮೂಲಕ ಶ್ರೀಯುತ ಅನಂತ್ ಕುಣಿಗಲ್ ಪುಸ್ತಕ ಸಂತೆಯಲ್ಲಿ ನೆಡೆಸಿಕೊಡುತ್ತಿದ್ದಾರೆ, ಬರಹಗಾರರು ಇದರ ಉಪಯೋಗವನ್ನು ಸಹ ಪಡೆದುಕೊಳ್ಳಬಹುದು.
ಹಾಗಿದ್ದರೆ ಬನ್ನಿ ವೀರಲೋಕ ಪುಸ್ತಕ ಸಂತೆಗೆ ಭೇಟಿ ನೀಡಿ ನಮಗಿಷ್ಟದ ಪುಸ್ತಕಗಳನ್ನು ತರೋಣ ಹಾಗೆ ಪರಸ್ಪರ ಭೇಟಿಯಾಗಿ ಪರಿಚಯಿಸಿಕೊಳ್ಳೋಣ. ಓದುವ ಆಸಕ್ತಿ ಇಲ್ಲದವರಿಗೂ, ಪುಸ್ತಕದ ಮಹತ್ವ ಅರಿಯಲು ನೆರವಾಗೋಣ. ಓದುವುದು ಹವ್ಯಾಸವಷ್ಟೇ ಅಲ್ಲ ಜೀವನದ ಭಾಗವಾಗಿಸೋಣ.
ಶೈಲಾ
ಬೆಂಗಳೂರು