ಸ್ವಾತಂತ್ರ್ಯದ ರಣಕಲಿ ಸುಭಾಷ್ ಚಂದ್ರ ಬೋಸ್
“ನೇತಾಜಿ ಸುಭಾಷ್ ಚಂದ್ರ ಬೋಸ್” ಹೆಸರು ಕೇಳಿದೊಡನೆ ಪುಟ್ಟ ಮಕ್ಕಳಿಂದ ವಯೋ ವೃದ್ಧರ ತನಕ ರೋಮಾಂಚನ ಗೊಳ್ಳುವರು. ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿ ತುಂಬುವಂತದ್ದು.

“ಸ್ವಾತಂತ್ರ‍್ಯವನ್ನು ಯಾರೂ ಕೊಡುವುದಿಲ್ಲ, ಅದನ್ನು ನಾವೇ ಪಡೆದುಕೊಳ್ಳಬೇಕು”,
“ನನಗೆ ರಕ್ತ ನೀಡಿ ನಿಮಗೆ ನಾನು ಸ್ವಾತಂತ್ರ‍್ಯವನ್ನು ತಂದುಕೊಡುತ್ತೇನೆ”,
“ನಮ್ಮ ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ವಾತಂತ್ರ‍್ಯ ಒಂದೇ ಪರಿಹಾರ”
ಸ್ವಾತಂತ್ರ‍್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಪ್ರಖರ ಮಾತುಗಳಿವು. ಇವರ ಪ್ರಖರ ನಿಲುವುಗಳು, ದೇಶ ಪ್ರೇಮದ ಕಿಚ್ಚು ಬ್ರಿಟಿಷರ ಎದೆಯಲ್ಲಿ ನಡುಕ ಉಂಟು ಮಾಡಿದ್ದರಲ್ಲಿ ಆಶ್ಚರ್ಯವೆನಿಲ್ಲ.

1897 ಜನವರಿ 23ರಂದು ಒಡಿಶಾದ ಕಟಕ್ ನಗರದಲ್ಲಿ ಜಾನಕಿನಾಥ್ ಬೋಸ್ ಮತ್ತು ಪ್ರಭಾವತೀ ದೇವಿ ದಂಪತಿ ಪುತ್ರನಾಗಿ ಜನಿಸಿದ ಸುಭಾಷ್ ಭಾರತದ ಅಪ್ರತಿಮ ಸ್ವಾತಂತ್ರ‍್ಯ ಹೋರಾಟಗಾರ. ಗೃಹಬಂಧನದಲ್ಲಿದ್ದರೂ ಕೂಡ ಬ್ರಿಟಿಷರ ಕಣ್ಣಿಗೆ ಮಣ್ಣೆರಚಿ ಭಾರತ ದೇಶದಾಚೆ ಹೋಗಿ ಅಲ್ಲಿ “ಆಜಾದ್ ಹಿಂದ್ ಫೌಜ್” (ಇಂಡಿಯನ್ ನ್ಯಾಷನಲ್ ಆರ್ಮಿ–INA) ಎಂಬ ಸೇನೆಯನ್ನು ಕಟ್ಟಿದ ಸುಭಾಷ್ ಚಂದ್ರ ಬೋಸ್ ಒಬ್ಬ ಕ್ರಾಂತಿಕಾರಿ ನಾಯಕರಾಗಿದ್ದರು. ಭಾರತದ ಸ್ವಾತಂತ್ರ‍್ಯ ಹೋರಾಟಕ್ಕೆ ನೇತಾಜಿ ಅವರ ಮಹತ್ತರ ಕೊಡುಗೆಯನ್ನು ಗೌರವಿಸುವ ಸಲುವಾಗಿ ಅವರ ಜನ್ಮದಿನವಾದ ಜನವರಿ 23ರಂದು ದೇಶದಾದ್ಯಂತ ‘ಪರಾಕ್ರಮ ದಿವಸ’ವಾಗಿ ಆಚರಿಸಲಾಗುತ್ತಿದೆ.
ಭಾರತೀಯ ರಾಷ್ಟ್ರೀಯ ಸೇನೆ (INA):

1939ರಲ್ಲಿ, ಎರಡನೆಯ ಮಹಾಯುದ್ಧ ಸಂದರ್ಭದಲ್ಲಿ ನೇತಾಜಿ ತನ್ನ ದೇಶದ ಸ್ವಾತಂತ್ರಕ್ಕಾಗಿ ಇಡೀ ಪ್ರಪಂಚದ ಸಹಾಯ ಪಡೆಯಲು ಬಯಸಿದ್ದರು. ಇದರಿಂದ ಬ್ರಿಟಿಷರು ಒತ್ತಡಕ್ಕೆ ಒಳಗಾಗಿ ದೇಶವನ್ನು ತೊರೆಯುತ್ತಾರೆಂದು ತಿಳಿದಿದ್ದರು. ಶುಭಾಷರ ಈ ಯೋಜನೆಯಿಂದಾಗಿ ಬ್ರಿಟಿಷ್ ಸರ್ಕಾರ ಎಚ್ಚೆತುಕೊಂಡು ಸುಭಾಷ್ ರವರನ್ನು ಜೈಲಿಗೆ ಹಾಕಿತು. ಜೈಲಿನಲ್ಲಿ ಸುಮಾರು ಎರಡು ವಾರಗಳವರೆಗೆ ಆಹಾರವನ್ನಾಗಲೀ ಅಥವಾ ನೀರನ್ನಾಗಲೀ ಸೇವಿಸದೆ ಶುಭಾಷರು ಪ್ರತಿಭಟಿಸಿದ್ದರಿಂದ ಅವರ ಆರೋಗ್ಯ ಹದಗೆಡುತ್ತಿದ್ದ ಕಾರಣ ದೇಶದಲ್ಲಿನ ಇತರೇ ಯುವ ಹೋರಾಟಗಾರರು ಅವರ ಬಿಡುಗಡೆಗೆ ಒತ್ತಾಯಿಸಿದಾಗ ಬ್ರಿಟೀಷ್ ಸರ್ಕಾರ ಅವರನ್ನು ಗೃಹಬಂಧನದಲ್ಲಿ ಇರಿಸಿತು.

ಅಲ್ಲಿಂದ 1941ರಲ್ಲಿ ನೇತಾಜಿ ತನ್ನ ಸೋದರಳಿಯ ಶಿಶಿರ್ ಸಹಾಯದಿಂದ ಅಲ್ಲಿಂದ ತಪ್ಪಿಸಿಕೊಂಡು, ಬಿಹಾರದ ಗೋಮಾದಿಂದ ಪಾಕಿಸ್ತಾನದ ಪೇಶಾವರ, ಸೋವಿಯತ್ ಒಕ್ಕೂಟದ ಮೂಲಕ ಜರ್ಮನಿಯನ್ನು ತಲುಪಿ ಅಲ್ಲಿನ ಆಡಳಿತಗಾರ ಅಡಾಲ್ಫ್ ಹಿಟ್ಲರನನ್ನು ಭೇಟಿಯಾದರು. ಅವರಿಗೆ ಹಿಟ್ಲರ್ ಮತ್ತು ಜರ್ಮನಿಯ ಶತ್ರು ಇಂಗ್ಲೆಂಡ್ ಎಂದು ತಿಳಿದಿತ್ತು, ಬ್ರಿಟಿಷರ ಮೇಲೆ ಯುದ್ಧ ಸಾರುವ ಈ ರಾಜತಾಂತ್ರಿಕ ಮಾರ್ಗವನ್ನು ಅವರು ಕಂಡುಕೊಂಡರು. ಶತ್ರುವಿನ ಶತ್ರುವನ್ನು ಸ್ನೇಹಿತನನ್ನಾಗಿ ಮಾಡಿಕೊಳ್ಳುವುದು ಸೂಕ್ತವೆಂದು ಭಾವಿಸಿದ್ದರು ಭೋಸ್.
1943ರಲ್ಲಿ ಸುಭಾಷ್ ಜರ್ಮನಿಯನ್ನು ತೊರೆದು ಜಪಾನಿಗೆ ಹೋದರು. ಇಲ್ಲಿ ಅವರು ಆ ಸಮಯದಲ್ಲಿ ಆಜಾದ್ ಹಿಂದ್ ಫೌಜ್ ಮುಖ್ಯಸ್ಥರಾಗಿದ್ದ ಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ‘ಆಜಾದ್ ಹಿಂದ್ ಫೌಜ್’ ಅನ್ನು ಪುನರ್ನಿರ್ಮಿಸಿ ‘ಆಜಾದ್ ಹಿಂದ್ ಸರ್ಕಾರ್’ ಪಕ್ಷವನ್ನೂ ರಚಿಸಿದರು. ಅಲ್ಲಿ ನೇತಾಜಿ ಸುಭಾಷ್ ಆಜಾದ್ ಹಿಂದ್ ಫೌಜ್ ಸೈನಿಕರಿಗೆ ‘ನೀವು ನನಗೆ ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ’ ಎಂಬ ಘೋಷಣೆಯನ್ನು ನೀಡಿದಾಗ ಅದು ಭಾರತದಾದ್ಯಂತ ಹೊಸ ಕ್ರಾಂತಿಯನ್ನು ತಂದಿತು. ನಂತರ ನೇತಾಜಿ ಇಂಗ್ಲೆಂಡಿಗೆ ಭೇಟಿ ನೀಡಿ ಅಲ್ಲಿ ಬ್ರಿಟಿಷ್ ಲೇಬರ್ ಪಕ್ಷದ ಅಧ್ಯಕ್ಷರು ಮತ್ತು ರಾಜಕೀಯ ಮುಖ್ಯಸ್ಥರನ್ನು ಭೇಟಿಯಾದರು. ಅಲ್ಲಿ ಅವರು ಭಾರತದ ಸ್ವಾತಂತ್ರ‍್ಯ ಮತ್ತು ದೇಶದ ಭವಿಷ್ಯದ ಬಗ್ಗೆ ಮಾತನಾಡಿ ಭಾರತವನ್ನು ತೊರೆಯುವಂತೆ ಬ್ರಿಟಿಷರಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವು:

1945ರಲ್ಲಿ ನೇತಾಜಿ ಜಪಾನ್‌ಗೆ ಪ್ರಯಾಣಿಸುತ್ತಿದ್ದ ವಿಮಾನವು ತೈವಾನ್‌ನಲ್ಲಿ ಅಪಘಾತಕ್ಕೀಡಾಯಿತು. ಆದರೆ ಸ್ವಲ್ಪ ಸಮಯದ ನಂತರ ಅವರು ಸಾವಿಗೀಡಾಗಿದ್ದಾರೆಂದು ಘೋಷಿಸಲ್ಪಟ್ಟಿತು. ಅವರ ದೇಹ ಇದುವರೆಗೂ ಪತ್ತೆಯಾಗಿಲ್ಲ. ಈ ಅಪಘಾತದ ಬಗ್ಗೆ ಭಾರತ ಹಲವಾರು ತನಿಖಾ ಸಮಿತಿಗಳನ್ನು ರಚಿಸಿತು, ಆದರೆ ಇಂದಿಗೂ ಇದನ್ನು ದೃಢೀಕರಿಸಲಾಗಿಲ್ಲ.
ನವ ಭಾರತ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ಭೋಸ್:
ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಥಮ ಬಾರಿಗೆ ದಾಸ್ಯಮುಕ್ತವನ್ನಾಗಿ ಮಾಡಿದ್ದ ಸುಭಾಷ್ ಸದಾ ಕ್ರಿಯಾಶಿಲರಾಗಿದ್ದು, ದೇಶಕ್ಕಾಗಿ ತಮ್ಮ ಬದುಕನ್ನೇ ಮುಡುಪಿಟ್ಟವರು. ರಾಷ್ಟ್ರ ನಿರ್ಮಾಣದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ರಾಷ್ಟ್ರ ಹಿತಕ್ಕೆ ಧಕ್ಕೆಯಾಗುವ ಯಾವುದೇ ವಿಷಯಗಳಲ್ಲಿ ದುರ್ಬಲನೀತಿ ಹೊಂದಿರಬಾರದೆಂಬ ಸುಭಾಷರ ದಿಟ್ಟನಿಲುವಿನ ಪ್ರತಿಧ್ವನಿಯಾಗಿತ್ತು ಆ ಮಾತು. ತಾನು ಕಷ್ಟಪಟ್ಟು ಗಳಿಸಿದ್ದ ಐ.ಸಿ.ಎಸ್ ಪದವಿಯನ್ನೇ ತಿರಸ್ಕರಿಸಿ, ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಧುಮುಕಿದ ಬೋಸರಿಗಿದ್ದ ರಾಜಕೀಯ ಚಿಂತನೆಯ ವೈಶಾಲ್ಯತೆ ಆ ಕಾಲಮಾನದ ಯಾರೊಬ್ಬರಲ್ಲೂ ಇರಲಿಲ್ಲ. ಆಷ್ಟ್ರೀಯ, ಇಂಗ್ಲೆಂಡ್, ಜರ್ಮನಿ, ಜಪಾನ್ ಸೇರಿದಂತೆ ಹತ್ತಾರು ರಾಷ್ಟ್ರಗಳಲ್ಲಿ ಮಿಂಚಿನಂತೆ ಸಂಚಾರ ನಡೆಸಿ ಭಾರತೀಯ ಸ್ವರಾಜ್ಯ ಹೋರಾಟದ ಧ್ವನಿಗೆ ಕ್ರಾಂತಿಯ ತೀವ್ರತೆ ತಂದಿದ್ದ ಬೋಸರು, ತಾನು ನಂಬಿದ್ದ ಕ್ರಾಂತಿಪಥದಲ್ಲಿ ಎಂದೂ ರಾಜಿಯಾದವರಲ್ಲ.
ನೇತಾಜಿ ಬಗ್ಗೆ ಕುತೂಹಲಕಾರಿ ಸಂಗತಿಗಳು:
- 1942ರಲ್ಲಿ, ನೇತಾಜಿಯು ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ಬಳಿಗೆ ಹೋಗಿ ಭಾರತವನ್ನು ಸ್ವತಂತ್ರಗೊಳಿಸುವ ವಿಚಾರವನ್ನು ಅವರಲ್ಲಿ ಪ್ರಸ್ತಾಪಿಸಿದರು. ಆದರೆ ಹಿಟ್ಲರ್ ಭಾರತವನ್ನು ಸ್ವತಂತ್ರಗೊಳಿಸುವ ಬಗ್ಗೆ ಆಸಕ್ತಿ ಹೊಂದಿರಲಿಲ್ಲ ಮತ್ತು ನೇತಾಜಿಗೆ ಈ ಕುರಿತು ಯಾವುದೇ ಸ್ಪಷ್ಟ ಭರವಸೆ ನೀಡಲಿಲ್ಲ.
- ನೇತಾಜಿಯು ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಅವರನ್ನು ಉಳಿಸಲು ಬಯಸಿದ್ದರು ಮತ್ತು ಅವರು ಬ್ರಿಟೀಷರಿಗೆ ನೀಡಿದ ಅಹಿಂಸೆಯ ಭರವಸೆಯನ್ನು ಮುರಿಯುವಂತೆ ಗಾಂಧೀಜಿಯನ್ನು ಕೇಳಿಕೊಂಡರು. ಆದರೆ ಅವರು ತಮ್ಮ ಉದ್ದೇಶದಲ್ಲಿ ವಿಫಲರಾಗಿ ಭಗತ್ ಸಿಂಗ್‌ರನ್ನು ಉಳಿಸಿಕೊಳ್ಳಲಾಗಲಿಲ್ಲ.
- ನೇತಾಜಿಯು ಭಾರತೀಯ ನಾಗರಿಕ ಪರೀಕ್ಷೆಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದ್ದರು, ಆದರೆ ದೇಶದ ಸ್ವಾತಂತ್ರ‍್ಯದ ದೃಷ್ಟಿಯಿಂದ ಅವರು ಆ ಆರಾಮದ ಕೆಲಸವನ್ನು ಬಿಡುವ ಮಹತ್ತರವಾದ ನಿರ್ಧಾರ ತೆಗೆದುಕೊಂಡರು.
- ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಹೃದಯ ಕಲಕುವ ದೃಶ್ಯದಿಂದ ನೇತಾಜಿ ಬಹಳ ನೊಂದುಕೊಂಡರು ಮತ್ತು ನಂತರ ಭಾರತದ ಸ್ವಾತಂತ್ರ ಸಂಗ್ರಾಮದಲ್ಲಿ ತಾವು ತೊಡಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಾಗಲಿಲ್ಲ.
- 1943ರಲ್ಲಿ ‘ನೇತಾಜಿ ಆಜಾದ್ ಹಿಂದ್ ರೇಡಿಯೋ’ & ‘ಫ್ರೀ ಇಂಡಿಯಾ ಸೆಂಟ್ರಲನ್ನು’ ಬರ್ಲಿನಲ್ಲಿ ಸ್ಥಾಪಿಸಿದರು.
- 1943ರಲ್ಲೇ ‘ಆಜಾದ್ ಹಿಂದ್ ಬ್ಯಾಂಕ್’ ರೂ.10 ರ ನಾಣ್ಯದಿಂದ ರೂ.1 ಲಕ್ಷ ವರೆಗಿನ ನೋಟುಗಳನ್ನು ನೀಡಿತ್ತು ಮತ್ತು ನಾಯಕ ನೇತಾಜಿ ಅವರ ಚಿತ್ರವನ್ನೂ ಒಂದು ಲಕ್ಷ ರೂಪಾಯಿ ನೋಟಿನಲ್ಲಿ ಮುದ್ರಿಸಲಾಯಿತು.
- ನೇತಾಜಿಯು ಮೊದಲ ಬಾರಿಗೆ ಗಾಂಧಿಯವರನ್ನು ರಾಷ್ಟ್ರದ ಪಿತಾಮಹ ಎಂದು ವಿಭಿನ್ನವಾಗಿ ಸಂಬೋಧಿಸಿದರು.
- ಬೋಸ್ ಅವರನ್ನು 1921-1941ರ ನಡುವೆ ದೇಶದ ವಿವಿಧ ಕಾರಾಗೃಹಗಳಲ್ಲಿ 11 ಬಾರಿ ಬಂಧಿಸಿಡಲಾಗಿತ್ತು.
- ಸುಭಾಷ್‌ರು 2 ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
- ಸುಭಾಷರು ಆಸ್ಟ್ರೇಲಿಯಾದ ಎಮಿಲಿಯನ್ನು ಮದುವೆಯಾಗಿ ಬರ್ಲಿನ್‌ನಲ್ಲಿ ವಾಸಿಸುತ್ತಿದ್ದರು. ಅವರಿಗೆ ಅನಿತಾ ಬೋಸ್ ಎಂಬ ಮಗಳೂ ಇದ್ದಳು.
ಯಕ್ಷ ಪ್ರಶ್ನೆಯಾಗಿ ಉಳಿದಿರುವ ನೇತಾಜಿ ಸಾವಿನ ರಹಸ್ಯ:
1945ರ ಆಗಸ್ಟ್ 18ರಂದು ದಕ್ಷಿಣ ವಿಯೆಟ್ನಾಂನ ಸೈಗಾನ್‌ನಿಂದ ವಿಮಾನ ಏರಿದ ಸುಭಾಷ್ ವಿಮಾನ ಸ್ಫೋಟದಿಂದ ನಿಧನರಾದರು ಎಂಬುದು ನಿಗೂಢ ರಹಸ್ಯವಾಗಿ ಉಳಿದಿದೆ. ಸ್ಪಷ್ಟಗೊಳ್ಳದ ಅನೇಕ ವಿವಾದಗಳು ಇಂದಿಗೂ ಇದ್ದು, ಅನ್ವೇಷಣಾ ಸಮಿತಿಗಳನ್ನು ನೇಮಿಸಿದರೂ ಅವರ ಸಾವನ್ನೊಪ್ಪದ ಅನೇಕ ಮಂದಿ ಬಹಳ ವರ್ಷ ನೇತಾಜಿ ಬದುಕಿದ್ದರೆಂದೇ ತಿಳಿದಿದ್ದಾರೆ.
ಇನ್ನೂ ಇದೇ………

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160