ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ
ಆಧುನೀಕತೆಯ ಧಾವಂತದಲ್ಲಿ ಹಳ್ಳಿಗಳು ಪಟ್ಟಣಗಳಾಗುತ್ತಿವೆ, ಕಾಂಕ್ರಿಟೀಕರಣಗೊಂಡು ಕಾಡೇ ನಶಿಸಿ ಹೋಗುತ್ತಿದೆ. ಅರಣ್ಯ ಸಂರಕ್ಷಣೆಯ ಕುರಿತು ಯುವ ಪೀಳಿಗೆಗೆ ಜಾಗೃತಿ ಬೇಕಿರುವ ಇಂದಿನ ದಿನದಲ್ಲಿ ಇಲ್ಲೊಬ್ಬಾಕೆ ಸದ್ದಿಲ್ಲದೇ ವೃಕ್ಷ ಕ್ರಾಂತಿಯನ್ನು ಮಾಡಿದ್ದಾರೆ. ಅವರೇ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನಳ್ಳಿ ಗ್ರಾಮದ “ತುಳಸಿ ಗೌಡ”. ಮರ ಗಿಡಗಳೆಂದರೆ ಮಕ್ಕಳಂತೆ ಕಾಣುವ ಇವರ ಈ ಸಾಧನೆಗೆ ಭಾರತ ಸರ್ಕಾರವು ಪ್ರತಿಷ್ಟಿತ ‘ಪದ್ಮಶ್ರೀ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಈಕೆ ಈ ಶತಮಾನ ಕಂಡ ನಿಜವಾದ ಪರಿಸರಪ್ರೇಮಿ. ವೃಕ್ಷಮಾತೆ ಎಂದೆನಿಸಿಕೊಂಡಿರುವ ಈಕೆ ಬೆಳೆಸಿದ ಮರಗಳು ಒಂದಲ್ಲಾ, ಎರಡಲ್ಲ ನಲ್ವತ್ತು ಸಾವಿರಕ್ಕೂ ಅಧಿಕ. ತುಳಸಿ ಗೌಡ ಇವರು 1944 ರಲ್ಲಿ ಹೊನ್ನಳ್ಳಿ ಗ್ರಾಮದ ನಾರಾಯಣ ಹಾಗೂ ನೀಲಿ ದಂಪತಿಗೆ ಮಗಳಾಗಿ ಜನಿಸಿದರು. ಬಡತನದ ಜತೆಗೆ ತನ್ನ ಎರಡನೆಯ ವಯಸ್ಸಿಗೇ ತಂದೆಯನ್ನು ಕಳೆದುಕೊಂಡು ಶಾಲೆಗೂ ಹೋಗಲಾಗಲಿಲ್ಲ. ಸಂಸಾರ ನಿರ್ವಹಣೆಗಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಇವರಿಗೆ ಗೋವಿಂದೇ ಗೌಡರ ಜೊತೆಗೆ ಬಾಲ್ಯ ವಿವಾಹವಾಯಿತು. ತನ್ನ ಎಳೆಯ ವಯಸ್ಸಿನಲ್ಲೇ ಗಂಡನನ್ನೂ ಕಳೆದುಕೊಂಡು ವಿಧವೆಯಾದರು. ಮನಸ್ಸಿಗಾದ ಆಘಾತದಿಂದ ಹೊರಬರಲು ಮತ್ತು ಮನಸ್ಸಿನ ಬೇಸರ ಕಳೆಯಲು ಇವರು ಗಿಡಗಳ ಸಂರಕ್ಷಣೆಯ ಕಾಯಕವನ್ನು ಪ್ರಾರಂಭಿಸುತ್ತಾರೆ. ಇದರಿಂದ ಮನಸ್ಸಿಗೆ ನೆಮ್ಮದಿ ದೊರೆತದ್ದರಿಂದ ಗಿಡಗಳ ರಕ್ಷಣೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ಪರಿಸರದ ಬಗ್ಗೆ ಅತೀವ ಕಾಳಜಿ ಹೊಂದಿರುವ ಇವರು ಕಳೆದ ಆರು ದಶಕಗಳಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಗಿಡ ಮರಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.
ಪರಿಸರ ಪ್ರೇಮ
ಪರಿಸರ ಪ್ರೇಮವು ಇವರ ರಕ್ತದಲ್ಲೇ ಇದ್ದು, ಊರಿನವರ ಜೊತೆ ಕಟ್ಟಿಗೆ ತರುವ ಕೆಲಸವನ್ನ ಮಾಡಿ ಪ್ರತಿನಿತ್ಯ 5-6 ರೂಪಾಯಿ ದುಡಿಯುತ್ತಿದ್ದ ತುಳಸಿ, ಅರಣ್ಯ ಇಲಾಖೆಗಾಗಿ ಕಾಡಿನಿಂದ ಬೀಜ ಸಂಗ್ರಹಿಸಿ ಸಸಿ ಮಾಡಿಕೊಡುತಿದ್ದರು. ಕೇವಲ 1.25 ಪೈಸೆ ದಿನದ ಕೂಲಿಗೆ ಈ ಕೆಲಸವನ್ನ ಮಾಡುತ್ತಿದ್ದ ತುಳಸಿ ಗೌಡರಿಗೆ, ಕಡಿಮೆ ಕೂಲಿಗೆ ಸಸಿ ಮಾಡುವ ಕೆಲಸ ಬೇಡ ಎಂದು ಎಲ್ಲರೂ ಹೇಳಿದರೂ ಇವರು ಪರಿಸರ ಕಾಳಜಿಯಿಂದ ಈ ಕೆಲಸವನ್ನು ನಿಲ್ಲಿಸಲಿಲ್ಲ.
ವರ್ಷಕ್ಕೆ 30 ಸಾವಿರ ಗಿಡಗಳ ನಾಟಿ
ತಾನು ಬೀಜ ಹಾಕಿ ಬೆಳೆಸಿದ ಸಸಿಗಳನ್ನು ಹೊನ್ನಳ್ಳಿ ಭಾಗದ ಅರಣ್ಯ ಪ್ರದೇಶದಲ್ಲಿ, ಸರ್ಕಾರಿ ಕಚೇರಿ, ಶಾಲೆ, ಮನೆಗಳ ಆವರಣ, ರಸ್ತೆಗಳ ಪಕ್ಕದಲ್ಲಿ ನೆಡಲಾರಂಭಿಸಿದ್ದರು. ವರ್ಷಕ್ಕೆ ಈಕೆ ಸುಮಾರು 30 ಸಾವಿರ ಸಸಿಗಳನ್ನ ನೆಟ್ಟು ಪೋಷಿಸುವ ಕಾರ್ಯವನ್ನು ನಿರಂತರ ಮಾಡುತ್ತಾ ಬಂದಿದ್ದಾರೆ. ಅಂಕೋಲಾ, ಯಲ್ಲಾಪುರ, ಶಿರಸಿ ತಾಲೂಕುಗಳ ವಿವಿಧ ಕಡೆಗಳಲ್ಲಿ ಈಕೆ ನೆಟ್ಟು ಪೋಷಿಸಿದ್ದ ಸಸಿಗಳು ಇಂದು ಬೆಳೆದು ಹೆಮ್ಮರವಾಗಿ ಸಾವಿರಾರು ಜನರಿಗೆ ಗಾಳಿ ನೆರಳನ್ನು ನೀಡುತ್ತಿವೆ.
ಅಂಕೋಲಾ ತಾಲ್ಲೂಕಿನಾದ್ಯಂತ ಅರಣ್ಯ ಇಲಾಖೆ ಹಮ್ಮಿಕೊಳ್ಳುತ್ತಿದ್ದ ವನಮಹೋತ್ಸವ ಮತ್ತು ಸಸಿ ನೆಡುವ ಕಾರ್ಯಕ್ರಮಗಳಲ್ಲೂ ಆಸಕ್ತಿಯಿಂದ ಇವರು ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಈಕೆಯ ಈ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಅರಣ್ಯ ಇಲಾಖೆಯ ಅಂದಿನ ಅರಣ್ಯಾಧಿಕಾರಿ ಅ.ನಾ ಯಲ್ಲಪ್ಪ ರೆಡ್ಡಿ ಈಕೆಗೆ ಮಾಸ್ತಿಕಟ್ಟೆ ಅರಣ್ಯ ವಲಯದಲ್ಲಿ ಇವರಿಗೆ ಗಿಡ ನೆಡುವ ಉದ್ಯೋಗವನ್ನೇ ಕೊಡಿಸಿದ್ದರು. ತುಳಸಿ ಗೌಡ ಅವರು ಇದೀಗ ಈ ಸೇವೆಯಿಂದ ನಿವೃತ್ತರಾಗಿದ್ದಾರೆ.
ಸಸ್ಯಗಳ ಕುರಿತ ವಿಶೇಷ ಜ್ಞಾನ
ಇವರಿಗೆ 72 ವರ್ಷವಾಗಿದ್ದರೂ ಈಗಲೂ ಪರಿಸರ ಪ್ರೇಮ ತೋರುತ್ತಿರುವ ಇವರು ಯಾವ ಸಸಿಯನ್ನು ಯಾವ ಸಮಯದಲ್ಲಿ ನೆಡಬೇಕು, ಅದು ಯಾವಾಗ ಹೂವು ಹಣ್ಣು ಬಿಡುತ್ತವೆ, ತಾವು ನೆಟ್ಟಿರುವ ಗಿಡ ಯಾವ ಜಾತಿಯದ್ದು, ಆ ಮರದಿಂದ ಪರಿಸರಕ್ಕಾಗುವ ಪ್ರಯೋಜನಗಳು, ಅದಕ್ಕೆ ಬೇಕಾಗುವ ನೀರಿನ ಪ್ರಮಾಣ ಈ ಎಲ್ಲ ಮಾಹಿತಿಗಳು ಇವರ ಜ್ಞಾನ ಭಂಡಾರದಲ್ಲಿದೆ. ತಮ್ಮ ಸುತ್ತಮುತ್ತಲಿನ ಜನರಿಗೂ ಪರಿಸರದ ಸಂರಕ್ಷಣೆ ಹಾಗೂ ಗಿಡ ಮರಗಳ ಅವಶ್ಯಕತೆ ಕುರಿತು ಅರಿವನ್ನು ಮೂಡಿಸುತ್ತಿದ್ದಾರೆ. ಮನೆಯಲ್ಲಿ ಬಡತನ, ಹಾಲಕ್ಕಿ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದರೂ ಕಳೆದ 60 ವರ್ಷಗಳಿಂದ ಪರಿಸರ ಪ್ರೇಮ ತೋರಿಸುತ್ತಿದ್ದಾರೆ. ಕೆಲವೊಮ್ಮೆ ಅರಣ್ಯದಲ್ಲಿ ತಾನು ನೆಟ್ಟ ಮರವನ್ನು ಮರಗಳ್ಳರು ಕಡಿದಾಗ ಕಡಿದ ಮರವನ್ನು ತುಳಸಿ ಅಪ್ಪಿಕೊಂಡು ಮಕ್ಕಳಂತೆ ಅತ್ತಿರುವ ಘಟನೆಗಳೂ ಇವೆ.
ವಿಭಿನ್ನ ಹೆಸರಿನಿಂದ ಪ್ರಸಿದ್ಧಿ
ಸುಮಾರು 300 ಕ್ಕೂ ಹೆಚ್ಚು ಕಾಡು ಮರಗಳ ಬಗ್ಗೆ ಮಾಹಿತಿ ಇರುವ ಇವರು ‘ಸಸ್ಯ ವಿಜ್ಞಾನಿ’ ಮತ್ತು ‘ವೃಕ್ಷ ದೇವತೆ’, ‘ಅರಣ್ಯದ ವಿಶ್ವಕೋಶ’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ಇವರಿಗೆ ‘ಇಂದಿರಾ ಪ್ರಿಯದರ್ಶಿನಿ’, ‘ವೃಕ್ಷ ಮಿತ್ರ’ ಪ್ರಶಸ್ತಿ, 1999 ರಲ್ಲಿ ‘ರಾಜ್ಯೋತ್ಸವ ಪ್ರಶಸ್ತಿ’ ‘ಇಂಡವಾಳು ಎಚ್.ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ’, ‘ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ’ 2020 ನೇ ಸಾಲಿನ ಪ್ರತಿಷ್ಟಿತ ‘ಪದ್ಮಶ್ರೀ ಪ್ರಶಸ್ತಿ’ ಮುಂತಾದ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ. ದೇಶದ ಅಭಿವೃದ್ಧಿಯಲ್ಲಿ ಹಳ್ಳಿಗಳ ಅಭಿವೃದ್ಧಿ ಅನಿವಾರ್ಯ ಹೌದಾದರೂ ಅಭಿವೃದ್ಧಿಯ ಹೆಸರಿನಲ್ಲಿ ಕಾಡಿನ ನಾಶಕ್ಕೆ ತುಳಸಿ ಗೌಡ ಅವರು ತೀವ್ರ ವಿರೋಧ ವ್ಯಕ್ತಪಡಿಸುತ್ತಾರೆ. ದಟ್ಟವಾದ ಮಳೆಕಾಡು ಬೆಳೆಯುವ ಜಾಗದಲ್ಲಿ ಅಕೇಶಿಯಾದಂತಹ ನೆಡುತೋಪು ನಿರ್ಮಾಣ ಮಾಡುವುದು ಸರಿಯಲ್ಲವೆನ್ನುತ್ತಾರೆ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ- 574198
ದೂ: 9742884160
2 Comments
I know Santhosh from my college days. His articles are very interesting and gives complete information of the topic. This article about Tulasi Gowda gives the complete information about her. Also says the importance of our environment and how to take care of it to survive. Many thanks to him.
I like