ಪುಸ್ತಕ : ವೈಜಯಂತಿಪುರ
ಲೇಖಕರು: ಸಂತೋಷಕುಮಾರ ಮೆಹೆಂದಳೆ
ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್
ಸಂತೋಷ್ ಕುಮಾರ ಮೆಹೆಂದಳೆ ಕನ್ನಡದ ಕಾದಂಬರಿಕಾರ, ಅಂಕಣಗಾರ, ಕಥೆಗಾರ ನಮ್ಮ ಹೆಮ್ಮೆಯ ಕದಂಬ ರಾಜ ಮಯೂರವರ್ಮನ ಕುರಿತು ರಚಿಸಿರುವ ವೈಜಯಂತಿಪುರ ಕಾದಂಬರಿ ಇದೀಗ ನಾಲ್ಕನೇ ಮುದ್ರಣ ಕಾಣುತ್ತಿದೆ. ಆ ನೆನಪಿಗೋಸ್ಕರ ಪ್ರಗತಿಪರ ಲೇಖಕರಾದ ಸಿಹಿಜೀವಿ ಸಿ ಜಿ ವೆಂಕಟೇಶ್ವರ್ ಕಾದಂಬರಿಯ ಕುರಿತು ಬರೆದ ವಿಮರ್ಶೆ ನಿಮಗಾಗಿ.
ವೈಜಯಂತಿಪುರದ ಜಯ…
ಇಪ್ಪತ್ಮೂರು ವರ್ಷಗಳಿಂದ ಕದಂಬರ ಬಗ್ಗೆ ಮಕ್ಕಳಿಗೆ ಪಾಠ ಮಾಡುವಾಗ ಮಯೂರ ಶರ್ಮ ಮಯೂರವರ್ಮನಾದ ಕಥೆಯನ್ನು ಹೇಳಿರುವೆ. ಮಕ್ಕಳು ಅದನ್ನು ಬಹಳ ಆಸಕ್ತಿಯಿಂದ ಕೇಳಿದ್ದಾರೆ. ಮಯೂರನ ಸಾಹಿತ್ಯ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಅವನ ಕೊಡುಗೆ ಬಗ್ಗೆಯೂ ಮಕ್ಕಳಿಗೆ ಬೋಧಿಸಿರುವೆ.
ಮಯೂರನ ಕುರಿತಾದ ಸಂತೋಷಕುಮಾರ ಮೆಹಂದಳೆ ರವರು ಬರೆದ 327 ಪುಟಗಳ ಬೃಹತ್ ಕಾದಂಬರಿ ವೈಜಯಂತಿಪುರ ಓದಿದಾಗ ಮಯೂರನ ಬಗ್ಗೆ ಕದಂಬರ ಬಗ್ಗೆ ನಮ್ಮ ನಾಡಿನ ಬಗ್ಗೆ ಹೆಮ್ಮೆ ಎನಿಸಿತು.ಈ ಭಾವನೆ ಮೂಡಲು ಕಾರಣರಾದ ಮೆಹೆಂದಳೆ ರವರಿಗೆ ನಮನಗಳು. ತಿಂಗಳ ಅಂತರದಲ್ಲಿ ನಾಲ್ಕನೆಯ ಮುದ್ರಣ ಕಂಡ ಕೃತಿಯು ಇನ್ನೂ ಹಲವು ಮುದ್ರಣ ಕಾಣುವಲ್ಲಿ ಸಂಶಯವಿಲ್ಲ. ಕನ್ನಡ ಪುಸ್ತಕ ಓದುವವರು ಇಲ್ಲ ಎನ್ನುವವರಿಗೆ ಇದು ಸ್ಪಷ್ಟ ಉತ್ತರ .
ಕ್ರಿ ಶ 316 ರಿಂದ 355 ರವರೆಗೆ ನಮ್ಮ ನಾಡನ್ನು ಆಳಿದ ಪ್ರಥಮ ಸಾಮ್ರಾಜ್ಯದ ಸ್ಥಾಪಕ ಮತ್ತು ಮಹಾನ್ ರಾಜ ಕದಂಬ ಸಾಮ್ರಾಟ್ ಮಯೂರಶರ್ಮ ನ ಮಹಾಚರಿತೆ ಓದದೇ ಇದ್ದರೆ ನಮ್ಮ ನಾಡಿನ ಮಹಾನ್ ಐತಿಹಾಸಿಕ ಮಾನವೀಯ ಗುಣಗಳ, ಜನಾನುರಾಗಿ , ಮತ್ಸದ್ದಿಯ ಬಗ್ಗೆ ನೀವು ತಿಳಿಯುವುದೇ ಇಲ್ಲ.
ತಾತ ವೀರಶರ್ಮರೊಂದಿಗೆ ಪಲ್ಲವರ ನಾಡಿನ ಕಂಚಿಗೆ ವಿದ್ಯಾಭ್ಯಾಸಕ್ಕೆ ತೆರಳಿದಾಗ ಅನುಭವಿಸಿದ ಅವಮಾನ ಮುಂದೊಂದು ದಿನ ಪಲ್ಲವರ ಸಾಮ್ರಾಜ್ಯದ ಪತನವಾಗಿ ಹೆಮ್ಮೆಯ ಕರ್ನಾಟ ಸಾಮ್ರಾಜ್ಯದ ಉದಯವಾಗುವುದೆಂದು ಮಯೂರನ ಬಿಟ್ಟು ಬೇರಾರಿಗೂ ತಿಳಿದಿರಲಿಕ್ಕಿಲ್ಲ. ಶಾಸ್ತ್ರ ಹೇಳುವವನು ಶಸ್ತ್ರ ಹಿಡಿದು ಸಾಮ್ರಾಜ್ಯ ಕಟ್ಟಬಲ್ಲ ಎಂಬುದನ್ನು ನಿರೂಪಿಸದವ ಮಯೂರ. ಕಾದಂಬರಿಯ ಮೊದಲ ಅದ್ಯಾಯದಿಂದ ಕಡೆಯವರೆಗೆ ಓದುತ್ತಾ ಹೋದಂತೆ ಇನ್ನೂ ಓದಬೇಕು. ಎಂಬ.ವೇಗ..ವೇಗ.. ಒಂದೊಳ್ಳೆಯ ಸಿನಿಮಾದ ಸ್ಕ್ರೀನ್ ಪ್ಲೇ ಮತ್ತು ಎಡಿಟಿಂಗ್ ಚೆನ್ನಾಗಿದ್ದರೆ ಆ ಸಿನಿಮಾ ಸೋಲುವುದೆಲ್ಲಿ ಬಂತು .ವೈಜಯಂತಿಪುರ ಆ ಮಟ್ಟದ ಅನುಭವವನ್ನು ಓದುಗರಿಗೆ ನೀಡುತ್ತದೆ. ನಾಲ್ಕನೇ ಶತಮಾನದ ಚಿತ್ರಣವನ್ನು ಕಟ್ಟಿ ಕೊಡುವಲ್ಲಿ ಕಾದಂಬರಿಕಾರರು ಗೆದ್ದಿದ್ದಾರೆ. ಅದರಲ್ಲೂ ಯುದ್ಧದ ಸನ್ನಿವೇಶಗಳ ವರ್ಣನೆ ಓದುವಾಗ ಗ್ರಾಫಿಕ್ಸ್ ಇಲ್ಲದೇ ನಮ್ಮ ಕಣ್ಮುಂದೆ ಯುದ್ಧದ ಸನ್ನಿವೇಶಗಳು ಬಂದು ನಿಲ್ಲುತ್ತವೆ.
ಗೆರಿಲ್ಲಾ ಮಾದರಿ ಯುದ್ಧದ ತಂತ್ರಗಳು ಸಾಮಂತರು ಮತ್ತು ಬಲಿಷ್ಠ ಸೈನ್ಯ ಎದುರಿಸುವಾಗ ತೋರುವ ವ್ಯೂಹಗಳು ನಿರ್ಧಯವಾಗಿ ಎದುರಾಳಿಗಳ ಶಿರಗಳನ್ನು ಭೀಕರವಾಗಿ ಚೆಂಡಾಡಿ ತನ್ನ ವಿರುದ್ಧವಾಗಿ ಅನಗತ್ಯವಾಗಿ ಬಂಡೆದ್ದರೆ ಇದೇ ಪಾಡು ಎಂದು ಸಂದೇಶ ಸಾರುವ ಮಯೂರ ಪ್ರಜೆಗಳ ಒಳಿತಿಗೆ ಮಿಡಿಯುವ ಜನಾನುರಾಗಿಯಾಗಿಯೂ ಗಮನಸೆಳೆಯುತ್ತಾನೆ. ಚಂದ್ರವಳ್ಳಿ ಅವನು ಕಟ್ಟಿಸಿದ ಕೆರೆ ಇಂದಿಗೂ ಜೀವಂತ. ಬಂಗಾರದ ನಾಣ್ಯ ಟಂಕಿಸಿ ತಾನೊಬ್ಬ ಉತ್ತಮ ಅರ್ಥಶಾಸ್ತ್ರಜ್ಞ ಎಂದು ನಿರೂಪಿಸಿದ.ವಿದ್ಯಾಭ್ಯಾಸಕ್ಕಾಗಿ ದೂರದೂರಿಗೆ ಪಯಣ ಮಾಡುವುದನ್ನು ತಪ್ಪಿಸಿ ತನ್ನ ನಾಡಿನಾದ್ಯಂತ ಹಲವಾರು ಅಗ್ರಹಾರ ಸ್ಥಾಪಿಸಿ ತಾನೂ ಕಲಿಯುತ್ತಾ ಕಲಿಸಿದ ಶಿಕ್ಷಣಪ್ರೇಮಿಯಾಗಿ ಮಯೂರ ಗಮನಸೆಳೆಯುತ್ತಾನೆ. ಕಲೆ ವಾಸ್ತುಶಿಲ್ಪಕ್ಕೆ ಅವನು ನೀಡಿದ ಕೊಡುಗೆ ತಿಳಿಯಲು ಮಧುಕೇಶ್ವರ ದೇವಾಲಯ ನೋಡಿದರೆ ಸಾಕು .ಹೀಗೆ ಕಾದಂಬರಿಯಲ್ಲಿ ಮಯುರನ ವ್ಯಕ್ತಿತ್ವವು ಬಹಳ ಸುಂದರವಾಗಿ ಮೂಡಿಬಂದಿದೆ. ಇವನು ನಮ್ಮ ನಾಡಿನ ಹೆಮ್ಮೆ. ನಮ್ಮ ಅಸ್ಮಿತೆ ಎಂದು ಹೆಮ್ಮೆ ಪಡಲು ಇನ್ನೇನು ಬೇಕು.
ಕಾದಂಬರಿಯಲ್ಲಿ ನನಗೆ ಇಷ್ಷವಾದ ಮತ್ತೊಂದು ಅಂಶವೆಂದರೆ ಪಾತ್ರಪೋಷಣೆ. ಪ್ರಧಾನ ಅಮಾತ್ಯರಾಗಿ ವೀರಶರ್ಮರ ಸಲಹೆ, ತಂದೆಯಾದ ಬಂಧುಸೇನರ ಸಕಾಲಿಕ ತಂತ್ರಗಳು ,ಗೆಳೆಯ ಚಂಡಸೇನನ ಸಕಾಲಿಕ ಬೆಂಬಲ ಮತ್ತು ಯುದ್ಧ ನೀತಿಗಳು ಬೃಹತ್ ಬಾಣನ ಶೌರ್ಯ, ಚಕ್ರಭಾನು ಮತ್ತು ಶಿವಸ್ಕಂದವರ್ಮ ರು ರಣರಂಗದಲ್ಲಿ ಬಿದ್ದು ಒದ್ದಾಡುವ ಚಿತ್ರಣಗಳು ಗಮನಸೆಳೆಯುತ್ತವೆ.
ಮೆಹಂದಳೆಯವರು ಈ ಕಾದಂಬರಿ ಬರೆಯಲು ಮಾಡಿದ ಗ್ರೌಂಡ್ ವರ್ಕ್ ಕಾದಂಬರಿಯ ಪುಟಗಳ ಅಡಿಟಿಪ್ಪಣಿಗಳಲ್ಲಿ ಎದ್ದು ಕಾಣುತ್ತದೆ. ಮೆಹಂದಳೆಯವರ ಬಗ್ಗೆ ನನ್ನ ಮತ್ತೊಂದು ಮೆಚ್ಚುಗೆಯೆಂದರೆ ಸ್ವತಃ ಅವರೇ ಪುಸ್ತಕದ ಒಳಪುಟ ವಿನ್ಯಾಸ ಮತ್ತು ಮುಖಪುಟ ವಿನ್ಯಾಸ ಮಾಡಿರುವುದು . ಎರಡೂ ಸೂಪರ್.
ಒಟ್ಟಾರೆ ಬಹಳ ದಿನಗಳ ನಂತರ ಒಂದು ಉತ್ಕೃಷ್ಟ ಐತಿಹಾಸಿಕ ಕಾದಂಬರಿ ಓದಿದ ಸಂತಸವಾಯಿತು .
ನೀವು ಇನ್ನೂ ಈ ಕಾದಂಬರಿ ಓದಿಲ್ಲವೆಂದರೆ ಇಂದೇ ಖರೀದಿಸಿ ಓದಿ…
ಸಾಹಿತ್ಯಮೈತ್ರಿ ತಂಡ