ವ್ಯರ್ಥ
ತಂದಿಟ್ಟ ಓಲೆಯಲಿ
ನಿನ್ನಿಷ್ಟದ ಅಕ್ಷರಗಳನು
ನನ್ನಿಷ್ಟದ ಹಾಗೆ ಬರೆಯಬೇಕೆಂದು
ಇರುಳೆಲ್ಲ ಚಿಂತಿಸಿದರು
ಒಂದಿಷ್ಟು ಜೋಡಿಸಿ ಬರೆಯಲು
ಸಾಧ್ಯವಾಗುತ್ತಿಲ್ಲ ಕಾರಣವೇನೆಂದು ಕೇಳಬೇಡ?
ಬರಹಕ್ಕಾಗಿ ಆಯ್ದ ವಿಷಯವನ್ನು
ಗಂಭೀರವಾಗಿ ಶೋಧಿಸಿ ಪರಿಶೀಲಿಸಿ
ಹುಡುಕಿಟ್ಟು ಇದ್ದಂತೆ ಬರೆಯಲು
ನೆರವು ಕೇಳಲು ಕೊಳಲು ಕೃಷ್ಣಗೆ
ಕೈಮಾಡಿ ಕರೆದು ಹಣೆಯ ಮೇಲಿನ
ನವಿಲು ಗರಿ ಕೇಳಿ
ಬರೆಯಲು ಕುಳಿತುಕೊಂಡರು
ಅದೇನೋ ವಿಘ್ನ
ಮೊದಲಕ್ಷರವು ಮೂಡಿ ಮುಂದೆ ಹೋಗುತ್ತಿಲ್ಲ
ಕಾರಣವೇನೆಂದು ಕೇಳಬೇಡ?
ಅಮವಾಸ್ಯೆಯ ರಾತ್ರಿ ಕುಳಿತು
ಸಮಸ್ಯೆಯೆಲ್ಲವ ಪರಿಹರಿಸಿ
ಪ್ರಥಮ ರಾತ್ರಿಯ ಕತ್ತಲು ನೆನೆದು
ಕುಳಿತಲ್ಲಿಯೇ ಬೆವೆತು
ನೀನಿರುವ ಸಿಂಗಾರ ಚಾವಣಿಯ ಕಲ್ಪಿಸಿ
ಸ್ಪರ್ಶಾಕ್ಷರ ಬರೆಯುವುದು ಸಾಧ್ಯವಾಗಲ್ಲಿ
ಅಡ್ಡಗಟ್ಟಿದ್ದು ಯಾರೆಂದು ಕೇಳಬೇಡ?
ಹಸಿಮನೆಯಿಂದ ಕೆಳಗಿಳಿದು
ನಾವಿಬ್ಬರೂ ಚದುರಂಗದಾಟಕ್ಕೆ ಕಾಯುತ್ತಿರುವಾಗ
ಇರುಳ ಲೋಕವೆಲ್ಲ ಮಧ್ಯಪಾನ ಮಾಡಿ
ಮಧ್ಯ ರಾತ್ರಿಯೇ ಎದ್ದು
ಕದ್ದು ಕದ್ದು ನೋಡಿದರೂ ಬಾಡಿದ ಮುಖಕ್ಕೆ
ಪ್ರೇಮ ಜಲವನ್ನು ಸಿಂಪಡಿಸಿ
ಸಂಪತ್ಭರಿತ ಪದಗಳ ಗಣಿ ಬಗೆದು
ಅಕ್ಷರಗಳ ಬಿತ್ತಿ ಕೊಡಬೇಕೆಂದರು
ಭೂಮಿಯಂತೆ ಬರವಣಿಗೆ ಮೊಳಕೆಯಾಗಲಿಲ್ಲ
ಏಕೆಂದು ಕೇಳಬೇಡ?
ಹನಮಂತ ಸೋಮನಕಟ್ಟಿ