ಶಂಖ ಪುಷ್ಪ – Asian pigeonwings

ನನ್ನ ಮನೆಯಂಗಳದ ತಾರಸಿ ತೋಟದ ಹಸಿರು ಸುಂದರಿಯರು ಮುಂಗಾರು ಮಳೆಯಲ್ಲಿ ಮಿಂದು ಮುಂಜಾವಿನ ಎಳೆ ಬಿಸಿಲಿಗೆ ನಾಚಿದಂತೆ ಕಂಗೊಳಿಸುವಾಗ ಒಮ್ಮೆ ಆ ಇಬ್ಬನಿಯನ್ನು ಕೆನ್ನೆಗೆ ಸಿಡಿಸಿಕೊಳ್ಳಲ್ಲು ಸೊಗಸಾಗಿರುತ್ತದೆ. ಹೀಗೆ ತಾರಸಿ ತೋಟದಲ್ಲಿ ಅರಳಿದ ಬಣ್ಣ ಬಣ್ಣದ ಹೂಗಳನ್ನು ನೋಡುತ್ತಿರುವಾಗ ಒಂದು ಹೂಕುಂಡದಲ್ಲಿ ಗಿಡಕ್ಕೆ ಹಬ್ಬಿದ ಬಳ್ಳಿಯಲ್ಲಿ ಸ್ವಚ್ಛಂದ ಬಿಳಿಯ ಪುಷ್ಪವು ಕಣ್ಮನ ಸೆಳೆಯುತ್ತದೆ.

ನಮ್ಮ ಮನೆಯ ಶಂಖಪುಷ್ಪ

ಎಲೆಗಳಲ್ಲಿ ನಾಚಿ ನಿಂತ ಹೆಣ್ಣಿನಂತೆ ಬಿಳಿಯ ಶಂಖ ಪುಷ್ಪವು ಕಂಡು ಬಂತು. ಅಲಂಕರಿಸಿದ ಹೆಣ್ಣಿಗೆ ದೃಷ್ಟಿ ಬೊಟ್ಟು ಇಟ್ಟಂತೆ ಹೂವಿನ ಎಡಬದಿಯಲ್ಲಿ ನೀಲಿಯ ಚುಕ್ಕಿ ಹೂವಿನ ಅಂದವನ್ನು ದುಪ್ಪಟ್ಟುಗೊಳಿಸಿತ್ತು. ನನ್ನ ಜಂಗಮವಾಣಿಯಲ್ಲಿ ತೆಗೆದ ಆ ಚಿತ್ರವೂ ಈಗಲೂ ಸೆಳೆಯುತ್ತದೆ.

ಶಂಖ ಪುಷ್ಪವು ತನ್ನ ಶಂಖದ ಆಕಾರದಿಂದಲೇ ಹೆಸರನ್ನು ಪಡೆದುಕೊಂಡಿದ್ದು ಇವನ್ನು ಗೌರಿ ಹೂ ಎಂದು ಸಹ ಕರೆಯಲ್ಲಾಗುತ್ತದೆ. ಸಿಡಿದ ಬೀಜಗಳು ಬಹಳ ನಿದಾನವಾಗಿ ಚಿಗುರಿ, ಬಳ್ಳಿಯಂತೆ ಹಬ್ಬಿಕೊಳ್ಳುವುದು ಈ ಸಸಿ. ಸಸಿಯ ತುಂಬಾ ಹೂಗಳು ಕಂಗೊಳಿಸುತ್ತವೆ. ನೀಲಿ, ಬಿಳಿ, ತಿಳಿ ಗುಲಾಬಿ, ಬಣ್ಣಗಳಲ್ಲಿ ಹೆಚ್ಚು ಕಂಡು ಬರುವದಲ್ಲದೆ ಅಪರೂಪವಾಗಿ ಕೆಂಪು ಹಾಗು ಹಳದಿ ಬಣ್ಣಗಳಲ್ಲಿಯೂ ಅರಳುತ್ತವೆ.

ದಕ್ಷಿಣ ಭಾರತಕ್ಕೆ ಸೀಮಿತವಾದ ಈ ಸಸ್ಯವು ಸರಿಸುಮಾರು 9 ಅಡಿಯಷ್ಟು ಎತ್ತರಕ್ಕೆ ಹಬ್ಬುತ್ತದೆ. “ಕ್ಲಿಟೋರಿಯಾ ತೆರ್ನಟೀ” ಅಥವಾ “ಏಶಿಯನ್ ಪಿಜನ್ ವಿಂಗ್ಸ್” ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಈ ಪುಷ್ಪವನ್ನು ಮನೆಯಂಗಳದಲ್ಲಿ ಸಸಿಯನ್ನಾಗಿ ಬೆಳೆಸಬಹುದಾಗಿದೆ. ಈ ಹೂ ಅಪರಾಜಿತಾ, ಕರ್ನಿಕಾ , ಬಟರ್ ಫ್ಲೈ ಪೀ, ಬ್ಲೂ ಪೀ ಎಂಬ ವಿವಿಧ ಹೆಸರಿನಿಂದಲೂ ಗುರುತಿಸಲ್ಪಟ್ಟಿದೆ.

ಈ ಹೂವಿನ ಅಂದಚಂದದಷ್ಟೇ ಸದ್ಗುಣಗಳನ್ನು ಈ ಸಸ್ಯ ಹೊಂದಿದೆ. ವಿನಾಯಕನಿಗೆ 21 ಪುಷ್ಪಗಳನ್ನು ಅರ್ಪಿಸಿ ಪೂಜೆ ಸಲ್ಲಿಸಿದರೆ ಸ್ರೇಷ್ಟವಂತೆ. ಶಂಖ ಪುಷ್ಪವು ಜ್ಞಾಪಕ ಶಕ್ತಿಯನ್ನು ವೃದ್ಧಿಸಲು ಉಪಯೋಗಿಸಲಾಗಿದ್ದು, ಆಯುರ್ವೇದದಲ್ಲಿ ಒತ್ತಡ, ಮಾನಸಿಕ ಖಿನ್ನತೆಯಂತಹ ಖಾಯಿಲೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ. ನಿದ್ರಾಹೀನತೆ ಸಮಸ್ಯೆಗಳನ್ನು ದೂರ ಮಾಡಲು ಈ ಹೂವಿನಿಂದ ಚಹಾ ಮಾಡಿ ಸೇವಿಸುವುದುಂಟು. ಅಜೀರ್ಣ, ಮಲಬದ್ಧತೆ, ಮೂಲವ್ಯಾಧಿ, ಕಾಮಾಲೆ ಯಂತಹ ಖಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯವಿದೆ.

ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು, ಮೊಡವೆಗಳನ್ನು ಕಡಿಮೆ ಮಾಡಿ ಸುಕ್ಕನ್ನು ದೂರವಿಡಲು ಶಂಖ ಪುಷ್ಪ ಹೂವಿನ ಕಣಕವನ್ನು ಮುಖಕ್ಕೆ 30 ನಿಮಿಷ ಲೇಪಿಸಲಾಗುತ್ತದೆ. ದಟ್ಟವಾಗಿ ಕೂದಲು ಬೆಳೆಯಲು ಸಹ ಉಪಯೋಗಿಕಾರಿ ಇರುವುದರಿಂದ ಈ ಪುಷ್ಪದ ಪುಡಿಯನ್ನು ಸೇವಿಸುವುದು ಉಂಟು.

ಹೀಗೆ ಶಂಖ ಪುಷ್ಪವು ತನ್ನ ಸೌಂದರ್ಯದ ಜೊತೆ ಹಲವಾರು ಔಷಧೀಯ ಗುಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ.

ಶಿಲ್ಪ

Related post

Leave a Reply

Your email address will not be published. Required fields are marked *