ಶತಾವರಿಯೆಂಬ ವಿಶಿಷ್ಟ ಸಸ್ಯ – ಸಂತೋಷ್ ರಾವ್ ಪೆರ್ಮುಡ

ಶತಾವರಿಯೆಂಬ ವಿಶಿಷ್ಟ ಸಸ್ಯ

ಶತಾವರಿಯು ‘ಆಸ್ಪ್ಯಾರಗಸ್‌ ಅಫಿಷಿನಾಲಿಸ್‌’ ಎಂಬ ‘ಆಸ್ಪ್ಯಾರಗಸ್‌’ ಕುಲದ ಒಂದು ಹೂ ಬಿಡುವ ಸಸ್ಯದ ಜಾತಿಯಾಗಿದೆ. ಶತಾವರಿ ಎಂದು ಹೆಸರಾಗಿರುವ ತರಕಾರಿಯನ್ನು ಅದರಿಂದ ಪಡೆಯಲಾಗುತ್ತದೆ. ಶತಾವರಿಯನ್ನು 100 ಮಕ್ಕಳ ತಾಯಿ ಎಂದು ಕರೆಯುತ್ತಾರೆ. ಇದಕ್ಕೆ ಆಯುರ್ವೇದದಲ್ಲಿ ಮಹತ್ವದ ಸ್ಥಾನವಿದೆ. ಇದು ಯುರೋಪ್, ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಷ್ಯಾ ದ ಬಹುತೇಕ ಭಾಗಗಳಲ್ಲಿ ಸ್ಥಳೀಯವಾಗಿ ಬೆಳೆಯುತ್ತದೆ. ಇದನ್ನು ತರಕಾರಿ ಬೆಳೆಯಾಗಿಯೂ ವ್ಯಾಪಕವಾಗಿ ಬೆಳೆಯುತ್ತಾರೆ. ಶತಾವರಿ ಸಸ್ಯಕ್ಕೆ ಸಂಸ್ಕೃತದಲ್ಲಿ ‘ಶತಮೂಲಿ’ ಎಂಬ ಹೆಸರಿದೆ. ಇಂಗ್ಲೀಷಿನಲ್ಲಿ ‘ಆಸ್ಪರಾಗಸ್’ ಎನ್ನುತ್ತಾರೆ. ‘ಆಸ್ಪರಾಗಸ್’ ಇದು ಗ್ರೀಕ್ ಪದವಾಗಿದ್ದು ಇದರರ್ಥ ‘ಕಾಂಡ ಚಿಗುರು’ ಎಂದು, ಹಾಗೆಯೇ ಇದೊಂದು ‘ಕವಲು ಬೇರುಳ್ಳ ಸಸ್ಯ’.

ಜೀವವಿಜ್ಞಾನ

ಶತಾವರಿಯು ಮೂಲಿಕೆಯಂತಹ ಬಹುವಾರ್ಷಿಕ ಸಸ್ಯವಾಗಿದ್ದು ಸುಮಾರು 100 ರಿಂದ 150 ಸೆ.ಮೀ ಎತ್ತರಕ್ಕೆ ಬೆಳೆಯುತ್ತದೆ. ಇದರ ಲ್ಯಾರಿಸ್ಸಾ ಕಾಂಡವು ನುಣುಪಾಗಿದ್ದು, ಹಲವು ಶಾಖೆಗಳಂತೆ ಹಬ್ಬಿರುವ ಗರಿಯಂತಹ ಎಲೆಗಳ ಗೊಂಚಲನ್ನು ಹೊಂದಿರುತ್ತದೆ. ಇದರ ಎಲೆಗಳು ಚಿಪ್ಪಿನಂಥ ಎಲೆಗಳ ಬುಡದಲ್ಲಿ ಸೂಜಿಯಂಥ ಚಪ್ಪಟೆಯಾದ ಕಾಂಡಗಳಾಗಿದ್ದು (ರೂಪಾಂತರಿತ ಕಾಂಡಗಳು), ಅವು 6 ರಿಂದ 32 ಮಿ.ಮೀ. ಉದ್ದವಾಗಿ ಮತ್ತು 1 ಮಿಮೀ. ಅಗಲವಿರುತ್ತವೆ, ಇದರ ಸರಿಸುಮಾರು 4 ರಿಂದ 15 ಎಲೆಗಳು ಒಟ್ಟಾಗಿ ಗುಚ್ಛದಂತೆ ಇರುತ್ತವೆ. ಇದರ ಬೇರುಗಳು ಗೆಡ್ಡೆಯ ಹಾಗಿದ್ದು, ಹೂವುಗಳು ಘಂಟೆಯ ಆಕಾರದಲ್ಲಿ ಇರುತ್ತದೆ. ತಿಳಿಹಸಿರು ಮತ್ತು ಬಿಳಿಯಿಂದ ಪ್ರಾರಂಭಿಸಿ ಬಹುತೇಕ ಹಳದಿ ಬಣ್ಣದ ಛಾಯೆಗಳಂತೆ ಅವುಗಳ ಬಣ್ಣವಿರುತ್ತದೆ. ತಳದಲ್ಲಿ ಆಂಶಿಕವಾಗಿ ಬೆಸೆದುಕೊಂಡಿರುವ ಆರು ಪರಿಪುಷ್ಪ ಭಾಗಗಳೊಂದಿಗೆ (ಟೆಪಲ್ಸ್) ಹೂವಿನ ಗಾತ್ರವು 4.5 ರಿಂದ 6.5 ಮಿ.ಮೀ ಉದ್ದವಾಗಿದ್ದು, ಕಿರುಕೊಂಬೆಗಳ ಸಂಧಿಸ್ಥಾನಗಳಲ್ಲಿ ಏಕಸ್ವರೂಪದಲ್ಲಿ ಅಥವಾ 2-3 ಗೊಂಚಲುಗಳಲ್ಲಿ ಅವು ಕಾಣಿಸಿಕೊಳ್ಳುತ್ತವೆ. ಶತಾವರಿ ಗಿಡದಲ್ಲಿ ಗಂಡು ಮತ್ತು ಹೆಣ್ಣು ಎನ್ನುವ ಎರಡು ವಿಧದ ಹೂವುಗಳಿದ್ದು, ಗಂಡು ಮತ್ತು ಹೆಣ್ಣು ಹೂವುಗಳು ಪ್ರತ್ಯೇಕ ಸಸ್ಯಗಳಲ್ಲಿ ಬೆಳೆಯುವುದರಿಂದ ಇವು ಬಿನ್ನಲಿಂಗಿ ಸಸ್ಯಗಳಾಗಿವೆ. ಆದರೂ, ಕೆಲವೊಮ್ಮೆ ಎರಡೂ ಲಿಂಗದ ಹೂವುಗಳು ಒಂದೇ ಸಸ್ಯದಲ್ಲಿ ಕಾಣಿಸಿಕೊಳ್ಳುವುದೂ ಇದೆ. ಇದರಲ್ಲಿ ಕೆಂಪಾದ ತಿರುಳಲ್ಲಿ ಬೀಜವನ್ನು ಹೊಂದಿರುವ ಚಿಕ್ಕ ಹಣ್ಣುಗಳಿದ್ದು, 6 ರಿಂದ 10 ಮಿ.ಮೀ. ನಷ್ಟು ವ್ಯಾಸವಿರುತ್ತದೆ.

ಶತಾವರಿಯಲ್ಲಿ ಹಿತವಾದ ಪರಿಮಳ ಹಾಗೂ ಮೂತ್ರವರ್ಧಕ ಗುಣವಿರುವ ಕಾರಣದಿಂದ ಇದನ್ನು ಪ್ರಾಚೀನ ಕಾಲದಿಂದಲೂ ತರಕಾರಿ ಮತ್ತು ಔಷಧಿಯಂತೆ ಬಳಸಲಾಗುತ್ತಿದೆ. 3ನೇ ಶತಮಾನದಲ್ಲಿ ಬಂದ ‘ಅಪಿಷಿಯಸ್ನ ಡಿ ರೆ ಕಾಕ್ವಿನೇರಿಯಾ’ ಎಂಬ ಪುಸ್ತಕದ IIIನೇ ಭಾಗವು ಪಾಕಶಾಸ್ತ್ರಕ್ಕೆ ಸಂಭಂದಿಸಿದ ಅತ್ಯಂತ ಹಳೆಯ ಪುಸ್ತಕವಾಗಿದ್ದು, ಇದರಲ್ಲಿ ಶತಾವರಿಯನ್ನು ಅಡುಗೆಯಲ್ಲಿ ಬಳಸುವ ಒಂದು ಪಾಕ ವಿಧಾನವನ್ನು ವಿವರಿಸಲಾಗಿದೆ. ಶತಾವರಿಯು ಹೇರಳವಾಗಿ ಲಭ್ಯವಿರುವ ಋತುವಿನಲ್ಲಿ ಅದನ್ನು ತಾಜಾವಾಗಿ ತಿನ್ನುತ್ತಿದ್ದ ಮತ್ತು ಚಳಿಗಾಲದಲ್ಲಿ ಬಳಸಲು ಒಣಗಿಸಿ ಇಟ್ಟುಕೊಳ್ಳುತ್ತಿದ್ದ ಈಜಿಪ್ಟಿಯನ್ನರು, ಗ್ರೀಕರು ಮತ್ತು ರೋಮನ್ನರು ಇದನ್ನು ಬೆಳೆಯುತ್ತಿದ್ದರು. ಮಧ್ಯಯುಗದಲ್ಲಿ ಇದು ತನ್ನ ಪ್ರಾಮುಖ್ಯತೆ ಕಳೆದುಕೊಂಡರೂ, 17ನೇ ಶತಮಾನದಲ್ಲಿ ಮತ್ತೆ ಜನಪ್ರಿಯವಾಯಿತು.

ದೇಶೀಯ ಹೆಸರುಗಳು

‘ಆಸ್ಪ್ಯಾರಗಸ್‌ ಅಫಿಷಿನಾಲಿಸ್‌’ ಎಂಬುದು ಸರಳವಾಗಿ ‘ಆಸ್ಪ್ಯಾರಗಸ್‌’ (ಶತಾವರಿ) ಎಂಬ ಹೆಸರಿನಿಂದಲೇ ಹೆಚ್ಚಾಗಿ ಗುರುತಿಸಲ್ಪಟ್ಟಿದೆ. ಆದರೆ ‘ಆಸ್ಪ್ಯಾರಗಸ್‌’ ಎಂಬ ಹೆಸರನ್ನು ತಳುಕು ಹಾಕಿಕೊಂಡಿರುವ ಒಂದಷ್ಟು ಇತರ ಸಸ್ಯಜಾತಿಯ ಜೊತೆಗೆ ಇದನ್ನು ಗುರುತಿಸಿ ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಉದಾಹರಣೆಗೆ, ‘ಆರ್ನಿಥೋಗ್ಯಾಲಂ ಪೈರೆನೈಕಮ್’ ಎಂಬ ಪ್ರಭೇದವನ್ನು ಅದರ ಚಿಗುರುಗಳಿಂದಾಗಿ ‘ಪ್ರಷ್ಯನ್ ಆಸ್ಪ್ಯಾರಗಸ್‌’ (ಪ್ರಷ್ಯನ್ ಶತಾವರಿ) ಎಂದು ಕರೆಯಲಾಗುತ್ತದೆ. ‘ಆಸ್ಪ್ಯಾರಗಸ್‌’ ಎಂಬ ಆಂಗ್ಲಪದವು ಮಧ್ಯಯುಗದ ಲ್ಯಾಟಿನ್ ಪದವಾದ ಸ್ಪ್ಯಾರಗಸ್‌ ನಿಂದ ಬಂದಿತ್ತು. ಸ್ವತಃ ಈ ಪದವು ಗ್ರೀಕ್ ಭಾಷೆಯ ಆಸ್ಪ್ಯಾರಗೊಸ್‌ನಿಂದ ಹುಟ್ಟಿದೆ. ಪರ್ಷಿಯನ್ ಭಾಷೆಯಲ್ಲಿ ಆಸ್ಪ್ಯಾರಾಗ್ ಎಂದರೆ ‘ಮೊಳಕೆ’ ಅಥವಾ ‘ಚಿಗುರು’ ಎಂದರ್ಥ.

ಆಹಾರದಲ್ಲಿ ಉಪಯೋಗಗಳು

ಹಸಿರು ಶತಾವರಿಯನ್ನು ಥಾಯ್ಲ್ಯಾಂಡ್ ಪಾಕಪದ್ಧತಿಯಲ್ಲಿ ಹೇರಳವಾಗಿ ಬಳಸಲಾಗುತ್ತದೆ. ಇದರ ಎಳೆಯ ಚಿಗುರನ್ನಷ್ಟೇ ತಿನ್ನಲು ಬಳಸುತ್ತಾರೆ. ಇದರಲ್ಲಿ ಕಡಿಮೆ ಕ್ಯಾಲೊರಿ ಇದ್ದು, ಇದರಲ್ಲಿ ಕೊಲೆಸ್ಟ್ರಾಲ್ ಇಲ್ಲ. ಸೋಡಿಯಂ ಅಂಶವು ಇದರಲ್ಲಿ ತೀರ ಕಡಿಮೆ ಇರುವುದರಿಂದ ಶತಾವರಿ ತುಂಬಾ ಆರೋಗ್ಯಕರ. ಇದರಲ್ಲಿ ಫೋಲಿಕ್ ಆಮ್ಲ, ಪೊಟಾಷಿಯಂ, ನಾರಿನ ಅಂಶ ಮತ್ತು ರೂಟಿನ್ ಹೇರಳವಾಗಿವೆ. ಶತಾವರಿಯಲ್ಲಿ ‘ಆಸ್ಪರಾಜಿನ್’ ಎಂಬ ಅಮೈನೋ ಆಮ್ಲವು ಹೇರಳವಾಗಿದ್ದು, ಇದರಿಂದಾಗಿಯೇ ಆಸ್ಪ್ಯಾರಗಸ್‌ (ಶತಾವರಿ) ಸಸ್ಯಕ್ಕೆ ‘ಆಸ್ಪರಾಜಿನ್’ ಎಂಬ ಹೆಸರುಬಂದಿದೆ. ಏಷ್ಯಾ ಶೈಲಿಯ ಆಹಾರ ತಯಾರಿಕೆಯಲ್ಲಿ ಶತಾವರಿಯನ್ನು ಹುರಿದು ಬಳಸುತ್ತಾರೆ. ಅಮೆರಿಕಾದಲ್ಲಿ ಸೀಗಡಿ, ಕೋಳಿ, ಹಂದಿ ಅಥವಾ ಕುರಿ ಮಾಂಸದ ಜೊತೆಗೆ ಇದನ್ನು ಹುರಿದು ಬಡಿಸಲಾಗುತ್ತದೆ. ಶತಾವರಿಯನ್ನು ಇದ್ದಿಲು ಅಥವಾ ಕಬ್ಬಿಣದ ಸರಳುಗಳ ಮೇಲೆ ಹರಡಿ ಕೆಳಗೆ ಬೆಂಕಿ ಹಾಕಿಯೂ ಶೀಘ್ರವಾಗಿ ಬೇಯಿಸಬಹುದು. ಬಿಸಿನೀರಿನಲ್ಲಿ ಬೇಯಿಸಿ ತಯಾರಿಸಿದ ಕೆಲವು ಮಾಂಸಭಕ್ಷ್ಯಗಳು ಹಾಗೂ ಸೂಪ್‌ಗಳ ತಯಾರಿಯಲ್ಲಿ ಇದನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಫ್ರೆಂಚ್ ಶೈಲಿಯ ಆಹಾರ ತಯಾರಿಕೆಯಲ್ಲಿ, ಶತಾವರಿಯನ್ನು ಕುದಿಸಿ ಅಥವಾ ಆವಿಯಲ್ಲಿ ಬೇಯಿಸಿ ಹಾಲೆಂಡ್ ಪಚ್ಚಡಿ ಅಥವಾ ಗೊಜ್ಜು, ಕರಗಿಸಿದ ಬೆಣ್ಣೆ ಅಥವಾ ಆಲೀವ್ ಎಣ್ಣೆ, ಪಾರ್ಮ ಗಿಣ್ಣು ಅಥವಾ ಮೇಯನೇಸ್ ಮಸಾಲೆ ಭಕ್ಷ್ಯದ ಜೊತೆಗೆ ಬಡಿಸಲಾಗುತ್ತದೆ. ಇದನ್ನು ಸಿಹಿಭಕ್ಷ್ಯ, ಐಸ್‌ಕ್ರೀಂ ತಯಾರಿಯಲ್ಲಿಯೂ ಬಳಸಬಹುದು. ಋತುವಿನ ಆರಂಭದಲ್ಲಿ ಬೆಳೆಯಲಾಗುವ ಶತಾವರಿಯು ಅತ್ಯುತ್ತಮ ಗುಣಮಟ್ಟದ್ದೆಂದು ಪರಿಗಣಿಸಲ್ಪಟ್ಟಿದೆ. ಇದರಿಂದ ಉಪ್ಪಿನಕಾಯಿ ತಯಾರಿಸಿ ಹಲವು ವರ್ಷ ಶೇಖರಿಸಿಡಬಹುದು. ಶತಾವರಿ ಸಸ್ಯದ ತಳಭಾಗಕ್ಕೆ ಮರಳು ಮತ್ತು ಕೊಳೆಯು ಅಂಟಿಕೊಂಡಿರುವ ಸಾಧ್ಯತೆ ಇರುವುದರಿಂದ ಇದನ್ನು ಅಡುಗೆ ಮಾಡುವ ಪೂರ್ವದಲ್ಲಿ ಪೂರ್ತಿ ಸ್ವಚ್ಛಗೊಳಿಸಬೇಕು. ಹಸಿರು ಶತಾವರಿಯನ್ನು ವಿಶ್ವಾದ್ಯಂತ ಆಹಾರವಾಗಿಯೂ ಬಳಸುವುದರಿಂದ ಶತಾವರಿಗೆ ಅತ್ಯಧಿಕ ಮೌಲ್ಯವಿದೆ.

ವಾಣಿಜ್ಯಿಕ ಉತ್ಪಾದನೆ

ಪೆರು ದೇಶವು ಶತಾವರಿಯನ್ನು ರಫ್ತು ಮಾಡುವಲ್ಲಿ ವಿಶ್ವದಲ್ಲೇ ಪ್ರಥಮ ಸ್ಥಾನವನ್ನು ಪಡೆದಿದ್ದರೆ ನಂತರದ ಸ್ಥಾನಗಳನ್ನು ಕ್ರಮವಾಗಿ ಚೀನಾ ಮತ್ತು ಮೆಕ್ಸಿಕೊಗಳು ಪಡೆದುಕೊಂಡಿವೆ. 2004ರ ಅಂಕಿ ಅಂಶದ ಪ್ರಕಾರ ಅಮೆರಿಕ ಸಂಯುಕ್ತ ಸಂಸ್ಥಾನ (92,405 ಟನ್), ಐರೋಪ್ಯ ಒಕ್ಕೂಟ (18,565 ಟನ್), ಮತ್ತು ಜಪಾನ್ (17,148 ಟನ್) ಶತಾವರಿಯನ್ನು ಆಮದು ಮಾಡಿಕೊಳ್ಳುವಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನಗಳನ್ನು ಕ್ರಮವಾಗಿ ಪಡೆದುಕೊಂಡಿದ್ದವು.

ರಸಾಯನಶಾಸ್ತ್ರದ ವಿಶ್ಲೇಷಣೆ

ಶತಾವರಿಯಲ್ಲಿನ ನಿಗದಿತ ಸಂಯುಕ್ತಗಳು ಚಯಾಪಚಯ ಕ್ರಿಯೆಗೊಳಗಾಗಿ ಮೂತ್ರಕ್ಕೆ ಒಂದು ಪ್ರತ್ಯೇಕವಾದ ವಾಸನೆಯನ್ನು ನೀಡುತ್ತವೆ. ಥಯಾಲ್‌ಗಳು, ಥಯೋ ಎಸ್ಟರುಗಳು, ಮತ್ತು ಅಮೋನಿಯಾವನ್ನು ಒಳಗೊಂಡಂತೆ, ಗಂಧಕವನ್ನು ಒಳಗೊಂಡಿರುವ, ಸರಳ ಸಂಯುಕ್ತಗಳನ್ನಾಗಿ ಒಡೆಯುವ ಅನೇಕ ಉತ್ಪನ್ನಗಳಿಂದಾಗಿ ಈ ರೀತಿ ಮೂತ್ರ ವಿಭಿನ್ನವಾದ ವಾಸನೆಯನ್ನು ಪಡೆಯುತ್ತದೆ. ಈ ವಾಸನೆಗೆ ಮೀಥೇನೆಥಿಯಾಲ್, ಡೈಮೀಥೈಲ್ ಸಲ್ಪೇನ್ಡ್, ಡೈಮೀಥೈಲ್ ಡೈಸಲ್ಪೇನ್ಡ್, ಬಿಸ್(ಮೀಥೈಲ್ಥಯೋ) ಮೀಥೇನ್, ಡೈಮೀಥೈಲ್ ಸಲ್ಫಾಕ್ಸೆನ್ಡ್, ಮತ್ತು ಡೈಮೀಥೈಲ್ ಸಲ್ಫೋನ್ ಎಂಬ ಬಾಷ್ಪಶೀಲ ಸಾವಯವ ಸಂಯುಕ್ತಗಳು ಕಾರಣ ಎಂದು ಗುರುತಿಸಲಾಗಿದೆ. ಮೊದಲ ಎರಡು ಸಂಯುಕ್ತಗಳು ಅತ್ಯಂತ ಘಾಟುವಾಸನೆಯನ್ನು ಹೊಂದಿದ್ದು, ಕೊನೆಯ ಎರಡು ಸಂಯುಕ್ತಗಳು ಒಂದು ಸುವಾಸನೆಯ ಪರಿಮಳವನ್ನು ನೀಡುತ್ತವೆ.

ಪೋಷಕಾಂಶಗಳ ಪ್ರಮಾಣ

ನೂರು ಗ್ರಾಂ ಶತಾವರಿಯಲ್ಲಿ ಈ ಕೆಳಕಂಡಷ್ಟು ಪ್ರಮಣದ ವೈವಿಧ್ಯಮಯ ಪೋಷಕಾಂಶಗಳು ಇವೆ. ಅವುಗಳೆಂದರೆ,
೧. ತೇವಾಂಶ : 93.0 ಗ್ರಾಂ
೨. ಸಸಾರಜನಕ : 2.2 ಗ್ರಾಂ
೩. ಕೊಬ್ಬು : 0.2 ಗ್ರಾಂ
೪. ಶರ್ಕರಪಿಷ್ಟ : 3.2 ಗ್ರಾಂ
೫. ನಾರಿನಂಶ : 0.7 ಗ್ರಾಂ
೬. ಕಬ್ಬಿಣ : 0.960 ಗ್ರಾಂ
೭. ರಂಜಕ : 0.039 ಗ್ರಾಂ
೮. ಸುಣ್ಣ : 0.025 ಗ್ರಾಂ
೯. ಎ ಜೀವಸತ್ವ : 1400 ಇಂ.ಯೂ
೧೦. b1 ಜೀವಸತ್ವ : 0.180 ಗ್ರಾಂ
೧೧. ಬಿ2 ಜೀವಸತ್ವ : 0.130 ಗ್ರಾಂ
೧೨. C ಜೀವಸತ್ವ : 0.040 ಗ್ರಾಂ

ತಯಾರಿಸಬಹುದಾದ ಖಾದ್ಯಗಳು

೧. ಶತಾವರಿ ಸೂಪ್
೨. ಶತಾವರಿ ಪಲ್ಯ
೩. ಶತಾವರಿ ಉಪ್ಪಿನಕಾಯಿ
೪. ಶತಾವರಿ ಸಾಂಬಾರು
೫. ಶತಾವರಿ ಚಟ್ನಿ
೬. ಶತಾವರಿ ಮಸ್ಸೋ

ಔಷಧೀಯ ಉಪಯೋಗಗಳು

ಗೇಲನ್ ಎಂಬ 2ನೇ ಶತಮಾನದ ಒಬ್ಬ ವೈದ್ಯ ಶತಾವರಿಯನ್ನು ‘ಸರಿಪಡಿಸುವ ಮತ್ತು ಮತ್ತು ವಾಸಿಮಾಡುವ’ ಗುಣವನ್ನು ಹೊಂದಿರುವ ಸಸ್ಯವೆಂದು ಬಣ್ಣಿಸಿದ್ದಾನೆ. ಶತಾವರಿಯು ಫೋಲೇಟ್ ಮತ್ತು ಪೊಟಾಷಿಯಂನ ಕಡಿಮೆ ಕ್ಯಾಲೊರಿಯ ಮೂಲವಾಗಿದೆ ಎಂದು ಪೋಷಣಶಾಸ್ತ್ರದ ಅಧ್ಯಯನಗಳು ನಿರೂಪಿಸಿವೆ. ಇದರ ತೊಟ್ಟುಗಳಲ್ಲಿ ಆಕ್ಸಿಡೀಕಾರಕ ನಿರೋಧಕಗಳ (ಅಂದರೆ, ಆಂಟಿ ಆಕ್ಸಿಡೆಂಟುಗಳ) ಪ್ರಮಾಣ ಹೆಚ್ಚಿದೆ. ‘ಶತಾವರಿಯು ಮನುಷ್ಯನ ದೇಹಕ್ಕೆ ಅತ್ಯಾವಶ್ಯಕ ಪೋಷಕಾಂಶಗಳನ್ನು ಒದಗಿಸುವುದಲ್ಲದೇ, ಶತಾವರಿಯ ಆರು ಚೂಪುಕಾಂಡಗಳು ಸುಮಾರು 135 ಮೈಕ್ರೋಗ್ರಾಂಗಳಷ್ಟು (ಒg) ಫೋಲೇಟನ್ನು ಹೊಂದಿರುತ್ತವೆ. ಅಂದರೆ ವಯಸ್ಕರು ಸೇವಿಸಬೇಕಾದ ಶಿಫಾರಿತ ದಿನವಹಿ ಸೇವನಾ (ಖಆI ರೆಕಮಂಡೆಡ್ ಡೇಲಿ ಇನ್ಟೇಕ್) ಪ್ರಮಾಣದ ಸರಿಸುಮಾರು ಅರ್ಧದಷ್ಟು ಭಾಗವನ್ನು ಇವು ಹೊಂದಿವೆ. ಜೊತೆಗೆ, 545 ಒgನಷ್ಟು ಬೀಟಾ ಕ್ಯಾರೋಟಿನ್, ಮತ್ತು 20 ಮಿ.ಗ್ರಾಂಗಳಷ್ಟು ಪೊಟಾಷಿಯಂನ್ನು ಶತಾವರಿಯ ಈ ಆರು ಚೂಪುಕಾಂಡಗಳು ಹೊಂದಿವೆ.

ಹೃದ್ರೋಗಕ್ಕೆ ಕಾರಣವಾಗು ಹೋಮೋಸಿಸ್ಟೀನ್ ಅಂಶವನ್ನು ದಮನಿಸುವಲ್ಲಿ ಫೋಲೇಟ್ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಗರ್ಭಿಣಿ ತಾಯಂದಿರಿಗೂ ಸಹ ಫೋಲೇಟ್ ಅತ್ಯಾವಶ್ಯಕವಾಗಿದ್ದು, ಶಿಶುಗಳಲ್ಲಿನ ನರವ್ಯೂಹದ ನಳಿಕೆಗಳ ನ್ಯೂನತೆಗಳಿಂದ ಇದು ರಕ್ಷಿಸುತ್ತದೆ. ಇದು ಹೇರಳವಾಗಿ ಪೊಟಾಷಿಯಂ ಅಂಶವನ್ನು ದೇಹಕ್ಕೆ ಒದಗಿಸುವ ಕಾರಣ ದೇಹದಿಂದ ಕ್ಯಾಲ್ಸಿಯಂ ಅಂಶ ನಷ್ಟವಾಗುವುದನ್ನು ತಪ್ಪಿಸಬಹುದು. ಹಸಿರು ಶತಾವರಿಯಲ್ಲಿ ‘ಸಿ’ ಜೀವಸತ್ವವು ಹೇರಳವಾಗಿದ್ದು, ದೇಹವು ಕೊಲಾಜೆನ್‌ನ್ನು ಉತ್ಪಾದಿಸಲು ಹಾಗೂ ಅದರ ಮಟ್ಟವನ್ನು ನಿರ್ವಹಿಸುವಲ್ಲಿ ‘ಸಿ’ ಜೀವಸತ್ವವು ನೆರವಾಗುತ್ತದೆ. ಅಚ್ಚರಿಯ ಪ್ರೊಟೀನ್ ಎಂದು ಪರಿಗಣಿಸಲ್ಪಟ್ಟಿರುವ ಕೊಲಾಜೆನ್, ದೇಹದ ಎಲ್ಲಾ ಜೀವಕೋಶಗಳು ಹಾಗೂ ಅಂಗಾಂಶಗಳನ್ನೂ ಒಟ್ಟಾಗಿ ಹಿಡಿದಿಡುವಲ್ಲಿ ನೆರವಾಗುತ್ತದೆ. ಡಿ.ಆನ್ಸ್ಟ್ಯಾಂಡ್ ಎಂಬ ಬರಹಗಾರ ‘ಶತಾವರಿಯು ತನ್ನ ಔಷಧೀಯ ಗುಣಗಳ ಕಾರಣದಿಂದ ಹಳೆಯ ಕಾಲದಿಂದಲೂ ಗುರುತಿಸಲ್ಪಟ್ಟಿದೆ’ ಎಂದು ಬರೆದಿದ್ದಾನೆ. ಮೂತ್ರವರ್ಧಕ ಅಂಶದ ಪಾತ್ರವನ್ನು ವಹಿಸುವ ಅಂಶವನ್ನು ಶತಾವರಿಯು ಒಳಗೊಂಡಿದ್ದು, ನಮ್ಮನ್ನು ಆಯಾಸಗೊಳ್ಳುವಂತೆ ಮಾಡುವ ಅಮೋನಿಯಾವನ್ನು ಇದು ತಟಸ್ಥಗೊಳಿಸಿ ಸಣ್ಣ ರಕ್ತನಾಳಗಳು ಛಿದ್ರವಾಗದಂತೆ ಅವುಗಳನ್ನು ರಕ್ಷಿಸುತ್ತದೆ.

ಶತಾವರಿಯು ತಾಯಂದಿರ ಎದೆಹಾಲು ಉತ್ಪತ್ತಿ, ಚರ್ಮ ರೋಗ, ಮಧುಮೇಹ ಮೊದಲಾದ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಶತಾವರಿ ಬೇರನ್ನು ಎಣ್ಣೆಯಲ್ಲಿ ಕುದಿಸಿ, ಆ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿದರೆ ಚರ್ಮ ರೋಗ ನಿವಾರಣೆಯಾಗುತ್ತದೆ. ಇದರ ಬೇರನ್ನು ಅರೆದು ರಸ ತೆಗೆದು, ಹಾಲಿಗೆ ಬೆರೆಸಿ 45 ದಿನಗಳ ಕಾಲ ದಿನವೂ ಒಂದೊಂದು ಲೋಟ ಕುಡಿದರೆ ಮಧುಮೇಹಕ್ಕೆ ನಿಯಂತ್ರಣಕ್ಕೆ ಬರುತ್ತದೆ. ಶತಾವರಿ ಬೇರಿನ ರಸವನ್ನು ಹಾಲು ಸಕ್ಕರೆಯೊಂದಿಗೆ ಪಾನೀಯ ಮಾಡಿ ಸೇವಿಸಿದರೆ, ಆರೋಗ್ಯ ವರ್ಧನೆಯಾಗುತ್ತದೆ. ಶತಾವರಿ ಬೇರನ್ನು ಅಥವಾ ಗಡ್ಡೆಯನ್ನು ಅರೆದು ಜೇನುತುಪ್ಪ ಬೆರೆಸಿ ಸೇವಿಸಿದರೆ, ವಸಡಿನಲ್ಲಿ ರಕ್ತಸ್ರಾವವಾಗುವ ಸಮಸ್ಯೆಗೆ ದಿವ್ಯ ಔಷಧ. ಅಡುಗೆಯಲ್ಲಿ ಶತಾವರಿಯನ್ನು ಬಳಸುವುದರಿಂದ ಹೃದಯ ಸಮಸ್ಯೆ ಪರಿಹಾರ ದೊರೆಯುತ್ತದೆ. ಶತಾವರಿ ಬೇರನ್ನು ಅರೆದು ಅಷ್ಟೇ ಪ್ರಮಾಣದ ಹಾಲನ್ನು ಬೆರೆಸಿ ಕುಡಿದರೆ, ಮೂತ್ರಕೋಶದ ಕಲ್ಲು ಕರಗುತ್ತದೆ. ಮಹಿಳೆಯರಿಗೆ ಪ್ರಸವಾನಂತರ ಎದೆಹಾಲು ಉತ್ಪತ್ತಿಯಾಗದಿದ್ದರೆ, ಶತಾವರಿ ಬೇರಿನ ಕಷಾಯ ಮಾಡಿ ಕುಡಿದರೆ ಎದೆಹಾಲು ಉತ್ಪತ್ತಿ ಆಗುತ್ತದೆ.

ಶತಾವರಿ ಎಲೆಯನ್ನು ಬೇಯಿಸಿ ಎಲೆಗಳ ಮೇಲೆ ತುಪ್ಪವನ್ನು ಸವರಿ ಸುಟ್ಟಗಾಯಗಳಿಗೆ, ‘ಅಮ್ಮ’ (ಸಿಡುಬು) ಬಂದಾಗ ಲೇಪಿಸಿದರೆ ಉತ್ತಮ ವಾಸಿಯಾಗುತ್ತದೆ. ಶತಾವರಿಯ ತಾಜಾ ಬೇರಿನ ರಸವನ್ನು 25 ಮಿಲಿ ಲೋಟ ಅರ್ಧ ಚಮಚ ಜೇನಿನೊಂದಿಗೆ ಸೇವಿಸಿದರೆ ಊತ ನಿವಾರಣೆಯಾಗುವುದು. ಶತಾವರಿ ಬೇರಿನ ರಸ, ಎಳ್ಳೆಣ್ಣೆ, ಅರಶಿನದ ಕಷಾಯ, ಒಡೆದ ಹಾಲಿನ ತಿಳಿಭಾಗ ಮತ್ತು ಹಾಲನ್ನು ಸೇರಿಸಿ ಎಣ್ಣೆ ಮಾತ್ರ ಉಳಿಯುವಂತೆ ಕುದಿಸಬೇಕು. ಕುದಿದು ಉಳಿದ ಭಾಗವನ್ನು ಜೀರ್ಣ ಸಂಭಂದ ಸಮಸ್ಯೆಗಳಲ್ಲಿ ಮತ್ತು ಮೂತ್ರ ರೋಗಗಳಿಗೆ ಉಪಯೋಗಿಸುತ್ತಾರೆ. ಶತಾವರಿ ಬೇರಿನ ರಸಕ್ಕೆ ಸಮಪ್ರಮಾಣದಲ್ಲಿ ಎಣ್ಣೆ ಬೆರೆಸಿ ಹಸುವಿನ ಅಥವಾ ಮೇಕೆ ಹಾಲನ್ನು ಸೇರಿಸಿ ಎಣ್ಣೆ ಉಳಿಯುವವರೆಗೆ ಕಾಯಿಸಬೇಕು. ನಂತರ ಅದನ್ನು ನರಗಳ ಮೇಲೆ ಲೇಪಿಸಿದರೆ ನರಗಳಿಗೆ ಸಂಬAಧಿಸಿದ ವ್ಯಾಧಿ ದೂರವಾಗುತ್ತದೆ. ಎರಡು ಚಮಚ ಶತಾವರಿ ಚೂರ್ಣವನ್ನು ಒಂದು ಲೋಟ ನೀರು ಮತ್ತು ಒಂದು ಲೋಟ ಹಾಲಿಗೆ ಸೇರಿಸಿ ಹಾಲು ಮಾತ್ರ ಉಳಿಯುವಂತೆ ಕುದಿಸಬೇಕು. ಅದಕ್ಕೆ ಕಲ್ಲುಸಕ್ಕರೆಪುಡಿ ಬೆರೆಸಿ ಸೇವಿಸಿದರೆ ಬಲ, ಕಾಂತಿ ವೃದ್ಧಿಸುತ್ತದೆ. ಶತಾವರಿ ಚೂರ್ಣ, ಚೇಷ್ಠಮಧು ಚೂರ್ಣ ಅಶ್ವಗಂಧ ಚೂರ್ಣಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿಟ್ಟು ಇದನ್ನು ಪ್ರತಿದಿನ ಒಂದು ಚಮಚ ಜೇನಿನಲ್ಲಿ ಕಲಸಿ ತಿಂದು ನಂತರ ಹಾಲನ್ನು ಕುಡಿಯುತ್ತಾ ಬಂದರೆ ವೀರ್ಯ ವೃದ್ಧಿಯಾಗುತ್ತದೆ. ಶತಾವರಿ ಬೇರಿನಿಂದ ತಯಾರಿಸಿದ ಲೇಹ ಸ್ತ್ರೀಯರಿಗೆ ಎಲ್ಲಾ ವಿಧವಾದ ತೊಂದರೆಗೆ ಒಂದು ಶ್ರೇಷ್ಠ ಔಷಧಿ. ಶತಾವರಿ ಗಡ್ಡೆ ಪುಡಿ ಅತಿಸಾರ ಬೇಧಿ ನರಳುತ್ತಿರುವವರಿಗೆ ಫಲಕಾರಿ. ಎಳ್ಳೆಣ್ಣೆಯಲ್ಲಿ ಶತಾವರಿ ಗಡ್ಡೆ ಹಾಕಿ ಕುದಿಸಿ ನೋವಿರುವ ಸ್ಥಳಕ್ಕೆ ಹಚ್ಚಿಕೊಂಡರೆ ನೋವು ಕಡಿಮೆಯಾಗುತ್ತದೆ.

ಬೆಳೆಯುವ ವಿಧಾನ

ಶತಾವರಿಯು ಸಮುದ್ರತೀರದ ಸ್ವಾಭಾವಿಕ ವಾತಾವರಣದಲ್ಲಿ ಬೆಳೆಯುತ್ತದೆಯಾದರೂ ಲವಣಯುಕ್ತವಾದ ಮಣ್ಣುಗಳಲ್ಲಿ ಇದು ಹುಲುಸಾಗಿ ಬೆಳೆಯುತ್ತದೆ. ಶತಾವರಿಯನ್ನು ಬೆಳೆಯಲೆಂದು ಉದ್ದೇಶಿಸಲಾದ ಜಮೀನುಗಳಲ್ಲಿ ಕಳೆಗಳನ್ನು ನಾಶಪಡಿಸಲು ಉಪ್ಪನ್ನು ಸಾಂಪ್ರದಾಯಿಕವಾಗಿ ಬಳಸಲಾಗುತ್ತಿದ್ದು, ಹೀಗೆ ಮಾಡುವುದರಿಂದ ಜಮೀನಿನ ಮಣ್ಣು ಇತರ ಯಾವುದೇ ಬೆಳೆಗಳನ್ನು ಬೆಳೆಯಲು ಯೋಗ್ಯವಾಗಿರುವುದಿಲ್ಲ ಆದದರಿಂದ ಈ ವಿಧಾನವು ಅನನುಕೂಲತೆಯನ್ನು ಉಂಟುಮಾಡುತ್ತದೆ. ಭೂಮಿಯ ಕೆಲವೊಂದು ಮಣ್ಣು ಇತರ ಬೆಳೆಗಳನ್ನು ಬೆಳೆಯಲು ಯೋಗ್ಯವಾಗಿರುವುದಕ್ಕಿಂದ ಹೆಚ್ಚು ಶತಾವರಿಯನ್ನು ಬೆಳೆಯಲು ಯೋಗ್ಯವಾಗಿರುತ್ತದೆ. ಶತಾವರಿ ಸಸ್ಯದ ಬೆಳೆದ ಕಾಂಡವನ್ನು ಚಳಿಗಾಲದ ಅವಧಿಯಲ್ಲಿ ನಾಟಿ ಮಾಡಿದೆ, ವಸಂತ ಋತುವಿನಲ್ಲಿ ಇದರಲ್ಲಿ ಮೊದಲ ಚಿಗುರುಗಳು ಕಾಣಿಸಿಕೊಳ್ಳುತ್ತವೆ. ಮೊದಲ ಸಣ್ಣಕಾಯಿಗಳು ತೆಳುವಾದ ಕಾಂಡಗಳನ್ನು ಹೊಂದಿರುತ್ತವೆ.
ಸ್ಪಾರ್ಗೆಲ್ ಎಂದು ಕರೆಯಲಾಗುವ ಬಿಳಿ ಶತಾವರಿಯನ್ನು ಬೆಳೆಯುವಾಗ ಸಸ್ಯಗಳಿಗೆ ಬೇಕಾದ ಬೆಳಕನ್ನು ಕೊಡದೆ, ಅವು ಒಡ್ಡಿಕೊಳ್ಳುವ ನೇರಳಾತೀತ ಕಿರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಲಾಗುತ್ತದೆ. ಈ ಪ್ರಭೇದವು ಹಸಿರು ಶತಾವರಿ ಪ್ರಭೇದಕ್ಕಿಂತ ಕಡಿಮೆ ಕಹಿಯನ್ನು ಹೊಂದಿದ್ದು, ನೆದರ್ಲೆಂಡ್, ಫ್ರಾನ್ಸ್, ಬೆಲ್ಜಿಯಂ ಮತ್ತು ಜರ್ಮನಿಯಲ್ಲಿ ಹೆಚ್ಚು ಜನಪ್ರಿಯವಾಗಿದೆ. ಈ ದೇಶಗಳಲ್ಲಿ ವಾರ್ಷಿಕವಾಗಿ 57,000 ಟನ್ನುಗಳಷ್ಟು (ಗ್ರಾಹಕರ ಬೇಡಿಕೆಗಳ 61% ಭಾಗ) ಬಿಳಿ ಶತಾವರಿಯನ್ನು ಬೆಳೆಯುತ್ತಾರೆ. ಉನ್ನತ ಮಟ್ಟದ ಸಕ್ಕರೆಅಂಶ ಮತ್ತು ಕಡಿಮೆ ಪ್ರಮಾಣದ ನಾರುಪದಾರ್ಥದ ಅಂಶಗಳನ್ನು ಹೊಂದುವ ಮೂಲಕ ನೇರಳೆ ಶತಾವರಿಯು ಹಸಿರು ಶತಾವರಿ ಹಾಗೂ ಬಿಳಿ ಶತಾವರಿಗಳಿಗಿಂತ ಭಿನ್ನವಾಗಿದೆ. ನೇರಳೆ ಶತಾವರಿಯನ್ನು ಮೊಟ್ಟಮೊದಲ ಬಾರಿಗೆ ಇಟಲಿಯಲ್ಲಿ ಅಭಿವೃದ್ಧಿಪಡಿಸಿ ವಯೊಲೆಟೊ ಡಿ’ಆಲ್ಬೆಂಗಾ ಎಂಬ ಪ್ರಭೇದದ ಹೆಸರಿನಲ್ಲಿ ಅದಕ್ಕೆ ವಾಣಿಜ್ಯ ಸ್ವರೂಪವನ್ನು ನೀಡಲಾಯಿತು. ಅಲ್ಲಿಂದೀಚೆಗೆ, ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ನ್ಯೂಜಿಲೆಂಡ್ ದೇಶಗಳು ತಳಿ-ಬೆಳೆಸುವಿಕೆಯ ಕಾರ್ಯವನ್ನು ಮುಂದುವರಿಸಿವೆ. ವಾಯವ್ಯ ಯುರೋಪ್ನಲ್ಲಿ, ಶತಾವರಿ ಉತ್ಪಾದನೆಯ ಋತುವು ಚಿಕ್ಕದಾಗಿದ್ದು, ಏಪ್ರಿಲ್ 23 ರಂದು ಸಾಂಪ್ರದಾಯಿಕವಾಗಿ ಆರಂಭವಾಗುವ ಈ ಸೀಸನ್ ನಡುಬೇಸಿಗೆಯಲ್ಲಿ ಅಂತ್ಯಗೊಳ್ಳುತ್ತದೆ. ಟೊಮ್ಯಾಟೊ ಬೆಳೆಯ ನಡುವಿನಲ್ಲಿ ಶತಾವರಿಯನ್ನು ಉಪಬೆಳೆಯಾಗಿ ಬೆಳೆಯುವುದರಿಂದ ಟೊಮ್ಯಾಟೊ ಸಸ್ಯವು ಶತಾವರಿಯ ಜೀರುಂಡೆ ಕೀಟವನ್ನು ಹಿಮ್ಮೆಟ್ಟಿಸುತ್ತದೆ. ಅದೇ ರೀತಿ ಟೊಮ್ಯಾಟೊ ಸಸ್ಯಗಳಿಗೆ ಹಾನಿಯನ್ನು ಮಾಡುವ ನೆಮಟೋಡ್ ವರ್ಗಕ್ಕೆ ಸೇರಿದ ಒಂದಷ್ಟು ಬೇರಿನ ಹಾನಿಕಾರಕ ಹುಳುಗಳನ್ನು ಶತಾವರಿಯು ಹಿಮ್ಮೆಟ್ಟಿಸುತ್ತದೆ.

ನಾಟಿ ಮತ್ತು ನಿರ್ವಹಣೆ

ಈ ಗಿಡವು ನೋಡಲು ಸಬ್ಬಸಿಗೆ ಸೊಪ್ಪಿನ ಅಂತಿದ್ದು ಗೆಣಸಿನ ರೀತಿಯಲ್ಲಿ ಭೂಮಿಯೊಳಗೆ ಬೇರು ಬಿಡುತ್ತದೆ. ಇದರ ಬೇರನ್ನು ಒಣಗಿಸಿ ಸಂಸ್ಕರಿಸಿ ನೂರಾರು ರೋಗಗಳಿಗೆ ಔಷಧವನ್ನು ತಯಾರಿಸಲಾಗುತ್ತದೆ ಮತ್ತು ಇದಕ್ಕೆ ಬಹಳ ಬೇಡಿಕೆಯೂ ಇದೆ. ಇದು ನಾಟಿ ಮಾಡಿದ 18 ತಿಂಗಳಿಗೆ ಬೆಳೆ ಕಟಾವಿಗೆ ಬರುತ್ತದೆ. ನಂತರ ಜೆಸಿಬಿ ಯಂತ್ರದ ಸಹಾಯದಿಂದ ಕಿತ್ತು ಒಣಗಿಸಿ ಮಾರುಕಟ್ಟೆಗೆ ನೀಡಬಹುದು. ಶತಾವರಿಯ ಪ್ರತಿ ಸಸಿಗೆ ರೂ.20/- ದರವಿದ್ದು, 5000 ಸಸಿಗೆ ರೂ.1ಲಕ್ಷ ಬೇಕಾಗುತ್ತದೆ. ಇದಕ್ಕೆ ತುಂತುರು ನೀರಾವರಿಯ ಅಳವಡಿಕೆಗೆ ರೂ.50,000/- ಖರ್ಚಾಗುತ್ತದೆ. ಇದರ ನಿರ್ವಹಣೆಗೆಂದು ಸುಮಾರು ಐವತ್ತು ಸಾವಿರ ಅಗತ್ಯವಿದ್ದು ಒಟ್ಟಾರೆಯಾಗಿ ಒಂದು ಬೆಳೆಯನ್ನು ತೆಗೆಯಲು ಬರೋಬ್ಬರಿ ರೂ. 2ಲಕ್ಷ ಖರ್ಚು ಬರುತ್ತದೆ. ಇದರ ನಿರ್ವಹಣೆಗಾಗಿ ಒಬ್ಬ ಕೆಲಸಗಾರ ಇದ್ದರೆ ಸಾಕಾಗುತ್ತದೆ. ಇಳುವರಿ ಹೆಚ್ಚು ಬರಲು ತಿಪ್ಪೆಗೊಬ್ಬರವನ್ನು ಹಾಕಬಹುದು. ಶತಾವರಿಗೆ ಯಾವುದೇ ರೋಗಬಾಧೆ ಇರುವುದಿಲ್ಲ.
ನಾಟಿ ಮಾಡಿದ ಶತಾವರಿಗೆ ವಾರಕ್ಕೆ ಕನಿಷ್ಠ ಎರಡು ಬಾರಿ ಡ್ರಿಪ್ ಮೂಲಕ ನೀರುಣಿಸಬೇಕು. ಒಟ್ಟು 50,000 ಸಸಿಗಳ ನಿರ್ವಹಣೆಗೆ ಒಂದು ಬೋರ್ವೆಲ್ ಹೊಲದಲ್ಲಿ ಇದ್ದರೆ ನೀರಿನ ಕೊರತೆ ಆಗಲಾರದು. ಇದರ ಮಧ್ಯದಲ್ಲಿ ಇತರ ಉಪ ಬೆಳೆಗಳನ್ನೂ ಬೆಳೆಯಬಹುದು. ಪ್ರತಿಯೊಂದು ಗಿಡವೂ ಕನಿಷ್ಠ 2 ರಿಂದ 3 ಕಿಲೋ ಒಣಗಿಸಿದ ಶತಾವರಿ ಬೇರನ್ನು ಕೊಡುತ್ತದೆ. ಒಂದು ಎಕರೆಗೆ ಕನಿಷ್ಠ ಏನಿಲ್ಲವೆಂದರೂ ಎಲ್ಲಾ ಖರ್ಚು ಕಳೆದು ಒಂದೂವರೆ ವರ್ಷಕ್ಕೆ 5 ಲಕ್ಷ ರೂಪಾಯಿ ಕೈಗೆ ಸಿಗಲಿದೆ ಎಂಬ ಲೆಕ್ಕಾಚಾರವನ್ನು ಕಂಪನಿಯೊಂದು ನೀಡಿದೆ. ಗಿಡಗಳ ನಾಟಿಯ ಸಂದರ್ಭದಲ್ಲೇ ಕೆಲವು ಕಂಪನಿಗಳು ಒಪ್ಪಂದ ಮಾಡಿಕೊಂಡು ಬೆಳೆ ಬಂದ ನಂತರ ಖರೀದಿಸಿಕೊಂಡು ಹೋಗುವ ಪ್ರಕ್ರಿಯೆಯೂ ಇಂದು ಚಾಲ್ತಿಯಲ್ಲಿದೆ. ಈ ಬೆಳೆಗೆ ಯಾವುದೇ ಕೀಟನಾಶಕ ಸಿಂಪಡಿಸುವ ಖರ್ಚು ಬರುವುದಿಲ್ಲ. ಈ ಔಷಧೀಯ ಸಸ್ಯವನ್ನು ಮಹಾರಾಷ್ಟ್ರದಲ್ಲಿ ರೈತರು ಹೆಚ್ಚು ಬೆಳೆಯುತ್ತಾರೆ. ನಮ್ಮ ರಾಜ್ಯದಲ್ಲಿ ಇದನ್ನು ಬೆಳೆಯುತ್ತಿರುವುದು ಬಹಳ ವಿರಳ. ಇದರ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಇದೆ. ಇದರಿಂದ ಕಡಿಮೆ ಭೂಮಿ ಇದ್ದಾಗಲೂ ರೈತ ಹೆಚ್ಚು ಸಂಪಾದನೆ ಮಾಡಬಹುದು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post

2 Comments

  • Nice

  • ನಾಟಿ ನಿರ್ವಹಣೆ ಮತ್ತು ಎಲ್ಲ ವಿಚಾರಗಳು (ಲೇಖನ) ತುಂಬ ಸೊಗಸಗಿತ್ತು ಸರ್ 💙

Leave a Reply

Your email address will not be published. Required fields are marked *