ಶತ್ರುವಾದ ಸೌಂದರ್ಯ
ಸುಂದರವಾದ ಮನೆ ಕಟ್ಟಿದರೆ ಸಾಲದು; ಆ ಸುಂದರವಾದ ಮನೆಯಲ್ಲಿ ಸುಖವಾಗಿ ಬದುಕುವುದನ್ನು ಕಲಿಯಬೇಕು
ಎಲ್ಲರಿಗೂ ತಮ್ಮ ಮದುವೆಯೆಂದರೆ ಒಂದೊಂದು ರೀತಿಯ ಕನಸುಗಳಿರುವುದು ಸಹಜ. ಅದೇ ರೀತಿ ಜಾಗೂರು ಎಂಬ ಊರಿನಲ್ಲಿ ತೇಜಸ್ ಎಂಬ ಯುವಕನು ತನ್ನ ಮದುವೆಯ ಬಗ್ಗೆ ಬಣ್ಣ ಬಣ್ಣದ ಕನಸುಗಳನ್ನು ಕಟ್ಟಿಕೊಂಡಿದ್ದು, ಪಕ್ಕದ ಹಳ್ಳಿಯ ಸೌಂದರ್ಯವತಿಯಾದ ರೀತಾ ಎಂಬ ಯುವತಿಯನ್ನು ಮನಮೆಚ್ಚಿ ಮದುವೆಯಾದ.
ಸೌಂದರ್ಯದ ಆರಾಧಕನಾದ ತೇಜಸ್ ರೀತಾಳನ್ನು ಬಹಳ ಇಷ್ಟಪಡುತ್ತಿದ್ದ. ಆಕೆಗೆ ಯಾವುದರಲ್ಲೂ ಕೊರತೆಯಾಗದಂತೆ ಹೂವಿನಂತೆ ಜತನದಿಂದ ನೋಡಿಕೊಳ್ಳುತಿದ್ದ. ವರ್ಷಗಳು ಉರುಳುತ್ತಿದ್ದಂತೆ ಆಕೆಯ ಸೌಂದರ್ಯವು ನಿಧಾನವಾಗಿ ಕಡಿಮೆಯಾಗಲಾರಂಭಿಸಿತು. ತನ್ನ ಸೌಂದರ್ಯದ ಆರಾಧಕನಾಗಿದ್ದ ತೇಜಸ್ ತನ್ನ ಕಳೆಗುಂದಿದ ಸೌಂದರ್ಯದಿಂದ ಎಲ್ಲಿ ತನ್ನನ್ನು ಬಿಟ್ಟು ಹೋಗುತ್ತಾನೋ ಎನ್ನುವ ಭಯದಿಂದ ರೀತಾ ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಅತಿಯಾಗಿ ಸೌಂದರ್ಯವರ್ಧಕಗಳನ್ನು ಬಳಸಲಾರಂಭಿಸಿದಳು. ಸೌಂದರ್ಯವರ್ಧಕದ ಅತೀ ಬಳಕೆಯಿಂದ ಆಕೆಯು ಚರ್ಮರೋಗಕ್ಕೆ ತುತ್ತಾಗಿ ಮಾನಸಿಕ ಖಿನ್ನತೆಗೆ ಒಳಗಾದಳು.
ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದ ತೇಜಸ್ ಅಪಘಾತವೊಂದರಲ್ಲಿ ತನ್ನೆರಡೂ ಕಣ್ಣುಗಳನ್ನು ಕಳೆದುಕೊಂಡ. ಹೀಗಾದರೂ ರೀತಾ ಮತ್ತು ತೇಜಸ್‌ರ ದಾಂಪತ್ಯ ಅತ್ಯಂತ ಸಂತೃಪ್ತಿಯಿಂದಲೇ ಇತ್ತು. ಕಣ್ಣಿಲ್ಲದ ತನ್ನ ಗಂಡ ತೇಜಸ್‌ನನ್ನು ರೀತಾ ಸಣ್ಣ ಮಗುವಿನಂತೆ ನೋಡಿಕೊಳ್ಳುತಿದ್ದಳು. ಚರ್ಮ ರೋಗಕ್ಕೆ ತುತ್ತಾಗಿದ್ದ ರೀತಾ ದಿನದಿಂದ ದಿನಕ್ಕೆ ಕುರೂಪಳಾಗುತ್ತಿದ್ದಳು. ಇದ್ಯಾವುದೂ ತೇಜಸ್‌ಗೆ ಕಾಣುತ್ತಿರಲಿಲ್ಲವಾದ್ದರಿಂದ ಇಬ್ಬರ ನಡುವೆ ಸ್ವಲ್ಪವೂ ಪ್ರೀತಿ ಕಡಿಮೆಯಾಗಲಿಲ್ಲ. ಅಚಾನಕ್ಕಾಗಿ ರೀತಾ ಚರ್ಮರೋಗದಿಂದ ತೀರಿಕೊಂಡಾಗ ತೀರಾ ದುಖಿಃತನಾದ ತೇಜಸ್ ಆಕೆಯ ಕಾರ್ಯಗಳನ್ನೆಲ್ಲ ಅಚ್ಚುಕಟ್ಟಾಗಿ ಮಾಡಿ ಆ ಊರನ್ನೇ ಬಿಟ್ಟು ಹೊರಟು ನಿಂತ.
ಆಗ ತೇಜಸ್‌ನ ಗೆಳೆಯನಾದ ಸಂಜಯನು ಇಷ್ಟು ದಿನ ಕಣ್ಣಿಲ್ಲದ ನಿನ್ನನ್ನು ನಿನ್ನ ಪತ್ನಿಯು ಮಗುವಿನಂತೆ ಆರೈಕೆ ಮಾಡಿದಳು. ಇನ್ನು ಮುಂದೆ ಒಂಟಿಯಾಗಿರುವ ನೀನು ಹೇಗೆ ಜೀವನ ನಡೆಸುತ್ತೀಯಾ ಎಂದು ಕೇಳಿದ. ಆಗ ಗದ್ಗದಿತನಾದ ತೇಜಸ್ ಗೆಳೆಯಾ ನಾನು ಕುರುಡನಲ್ಲ, ಆದರೆ ಕುರುಡನಂತೆ ನಾನು ನಟಿಸುತ್ತಿದ್ದೆ. ರೀತಾ ಚರ್ಮ ರೋಗದಿಂದ ಕುರೂಪಿಯಾಗಿದ್ದಳು. ಆಕೆಯ ಕುರೂಪತೆಯಿಂದ ನಾನು ಆಕೆಯನ್ನು ಮೊದಲಿನಷ್ಟು ಪ್ರೀತಿಸಲಾರೆನೆಂಬ ನೋವು ಆಕೆಯ ಖಾಯಿಲೆಯ ನೋವಿಗಿಂತಲೂ ಹೆಚ್ಚಾಗಿತ್ತು. ಆಕೆಯ ಆ ನೋವನ್ನು ನನ್ನಿಂದ ನೋಡಲಾಗುತ್ತಿರಲಿಲ್ಲ. ಆಕೆ ಸದಾ ನಗುತ್ತಿರಬೇಕೆಂಬುದೇ ನನ್ನಾಸೆಯಾಗಿತ್ತು. ರೀತಾಳು ನನ್ನ ಪ್ರೀತಿಯ ತೋಳುಗಳಲ್ಲೇ ಕೊನೆಯ ಕ್ಷಣಗಳನ್ನು ಕಳೆಯಬೇಕೆಂದು ಬಯಸಿ ಅವಳನ್ನು ಇನ್ನಷ್ಟು ಪ್ರೀತಿಸಿದೆ. ನನ್ನ ಪ್ರೀತಿಯ ತೆಕ್ಕೆಯಲ್ಲೇ ಆಕೆ ಕೊನೆಯುಸಿರೆಳೆದಳು ಎಂದು ಹೇಳಿ ತೇಜಸ್ ಗಳಗಳನೇ ಅತ್ತುಬಿಟ್ಟ.
ಸೌಂದರ್ಯ ಪ್ರಜ್ಞೆಯಿರಬೇಕು ನಿಜ, ಆದರೆ ಸೌಂದರ್ಯವೇ ಸರ್ವಸ್ವವಲ್ಲ.ಅಚಾನಕ್ಕಾಗಿ ಯಾವುದೇ ಸನ್ನಿವೇಶಗಳು ಬಂದರೂ ಅವುಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಪರಸ್ಪರರ ಕುಂದು ಕೊರತೆ, ದೌರ್ಬಲ್ಯಗಳನ್ನು ಬದಿಗೊತ್ತಿ ಹೊಂದಾಣಿಕೆಯಿಂದ ಸುಂದರ ಬದುಕನ್ನು ಕಟ್ಟಿಕೊಳ್ಳಬೇಕು. ಮನುಷ್ಯ ಕೇವಲ ಐಶ್ವರ್ಯವನ್ನು ಗಳಿಸಿ, ಸುಂದರವಾದ ಮನೆಯನ್ನು ಕಟ್ಟಿದರಷ್ಟೆ ಸಾಲದು, ಆ ಐಶ್ವರ್ಯದೊಂದಿಗೆ ಮತ್ತು ಕಟ್ಟಿದ ಸುಂದರ ಮನೆಯಲ್ಲಿ ಸುಖವಾಗಿ ಬಾಳಿ ಬದುಕುವುದನ್ನು ಕಲಿಯದಿದ್ದರೆ, ಐಶ್ವರ್ಯ ಯಾ ಮನೆಗೆ ಯಾವ ಮೌಲ್ಯವೂ ಬರುವುದಿಲ್ಲ. ನಾವು ಗಳಿಸುವ ಆಸ್ತಿ, ಅಂತಸ್ತು, ಸೌಂದರ್ಯ, ಗೆಳೆಯರು ಮತ್ತು ಐಶ್ವರ್ಯವನ್ನು ಸರಿಯಾಗಿ ಬಳಸಿಕೊಂಡು ಪರಸ್ಪರ ಸಂತೃಪ್ತಿಯಿಂದ ಬದುಕುವ ಕಲೆಯನ್ನು ಗಳಿಸಿದಾಗ ಮಾತ್ರ ನಾವು ಗಳಿಸಿದ ಎಲ್ಲಕ್ಕೂ ಮೌಲ್ಯ ಬರುತ್ತದೆ. ನಾವು ಆಸ್ತಿ, ಅಂತಸ್ತು ಮತ್ತು ಐಶ್ವರ್ಯವನ್ನು ನಿಯಂತ್ರಿಸಬೇಕೇ ವಿನಃ ಅವ್ಯಾವುದೂ ನಮ್ಮನನ್ನು ನಿಯಂತ್ರಿಸಬಾರದು.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ – 574198
ದೂ: 9742884160