ಶಪಥಗೈದಳು ಕನ್ನಡತಿ

ಶಪಥಗೈದಳು ಕನ್ನಡತಿ

ಒಂದಿಷ್ಟು ಗಮನವಿಟ್ಟು
ಕಲಿಯಬೇಕಿತ್ತು ಮಾತೃಭಾಷೆಯನು
ಒಂದಿಷ್ಟು ಅರಿಯಬೇಕಿತ್ತು
ಅದರ ಲಾಲಿತ್ಯವನು

ಹ್ರಸ್ವ ದೀರ್ಘಗಳ
ನಡುವಿನ ವ್ಯತ್ಯಾಸ
ಸ್ವರ ವ್ಯಂಜನಗಳ ವಿನ್ಯಾಸ
ಸ್ವಲ್ಪ ಸಂಧಿ ಸಮಾಸ
ಕಲಿತಿದ್ದರೆ ಸಾಕಿತ್ತು
ಭಾಷೆಯ ಬಂಧ ಬಲಗೊಳ್ಳುತ್ತಿತ್ತು

ಕುಮಾರವ್ಯಾಸನಲ್ಲದಿದ್ದರೂ
ಕುವೆಂಪು ವನ್ನಾದರೂ
ಅರ್ಥೈಸಿಕೊಳ್ಳಬಹುದಿತ್ತು
ಪೂಚಂತೆಯನ್ನಾದರೂ ಓದಬಹುದಿತ್ತು
ಭೈರಪ್ಪನನ್ನಾದರೂ ತಿಳಿಯಬಹುದಿತ್ತು
ಸಾಹಿತ್ಯದ ಸಾರವನ್ನು ಸವಿಯಬಹುದಿತ್ತು

ಭಾಷೆಯ ಭರವಸೆಯೊಂದಿಗೆ
ಸ್ನೇಹ ಸಂಬಂಧಗಳ
ಸಿಹಿಯನ್ನಾದರೂ ಉಣ್ಣಬಹುದಿತ್ತು
ಎಲ್ಲರೊಡನೆ ಸೇರಿ ಬೆಳದಿಂಗಳ ರಾತ್ರಿಯಲಿ
ಹೊಲದಲ್ಲಿ ಒಂದಷ್ಟು ಹರಟಬಹುದಿತ್ತು
ಜಾತ್ರೆ ಜಾಗರಗಳಲ್ಲಿ ಜೊತೆಯಾಗಬಹುದಿತ್ತು

ಮನೆ ಮಂದಿಯಿಂದ ಹಿಡಿದು
ಅಕ್ಕಪಕ್ಕದ ಮನೆಯವರವರೆಗೂ
ಎಲ್ಲರನೂ ‘ಆಂಟಿ – ಅಂಕಲ್ ಎಂದೇ ಕರೆಯದೆ
ನಿಜ ಸಂಬಂಧಗಳ
ಸರಿಯಾದ ಹೆಸರನ್ನಾದರೂ ಕಲಿಯಬಹುದಿತ್ತು
ಭಾವಗಳೊಡನೆ ಬಂಧಗಳ ಬೆಸೆಯಬಹುದಿತ್ತು

ಒಂದಿಷ್ಟು ಗಮನವಿಟ್ಟು
ಕಲಿಯಬೇಕಿತ್ತು ಮಾತೃಭಾಷೆಯನು
ಕಿಂಚಿತ್ತಾದರೂ ಅರಿಯಬೇಕಿತ್ತು
ಅದರ ಲಾಲಿತ್ಯವನು

ಕ್ಷಮಿಸು ಭುವನೇಶ್ವರಿಯೇ
ತಾಯಿ ಕರುನಾಡ ಅಧೀಶ್ವರಿಯೇ
ನಿನ್ನ ಈ ಮಕ್ಕಳನು
ಕೆಲ ಕಿಡಿಗೇಡಿಗಳ ದೌರ್ಜನ್ಯಗಳನು
ಅಹಂಕಾರದಮಲಿನ ಅವಜ್ಞೆಗಳನು
ಕನ್ನಡದ ಮೇಲಿನ ಅನ್ಯಾಯಗಳನು

ಶಪಥಗೈಯುತ್ತೇವೆ ನಾವೆಲ್ಲರೂ
ಕಂಕಣಬದ್ಧರಾಗುತ್ತೇವೆ ಕನ್ನಡಿಗರೆಲ್ಲರೂ
ಕಲಿಯುತ್ತೇವೆ ಮತ್ತು ಕಲಿಸುತ್ತೇವೆ
ಒಳ್ಳೆಯ ಚಂದದ ಕನ್ನಡವನು
ನಿಜ ಅರ್ಥದಲಿ ಆಚರಿಸುವೆವು
ಪ್ರತಿದಿನವೂ ಕನ್ನಡ ಹಬ್ಬವನು

ಸೌಜನ್ಯ ದತ್ತರಾಜ

ಕನ್ನಡದಲ್ಲಿ ಸರಿಯಾಗಿ ಮಾತನಾಡೋಣ. ಬಳಸಿದರಷ್ಟೇ ಉಳಿಯುವುದು ಭಾಷೆ. ಜೈ ಕನ್ನಡಾಂಬೆ…

Related post