ಶಮೀ ಶಮಯತೆ ಪಾಪಂ…
ಬ್ರಹ್ಮಾಂಡದ ಪ್ರತೀ ಅಣುವಿನಲ್ಲೂ ದೈವತ್ವ ಕಾಣುವ, ಬ್ರಹ್ಮಾಂಡದಲ್ಲಿರುವ ಪ್ರತೀ ಪದಾರ್ಥದಲ್ಲೂ ಇರುವುದು ಒಂದೇ ಶಕ್ತಿ ಎಂದು ನಂಬುವ ಧರ್ಮ ಹಿಂದೂ ಧರ್ಮ. ಆ ಶಕ್ತಿಯನ್ನು ಕಂಡುಕೊಳ್ಳಲು ಮತ್ತು ಆರಾಧಿಸಲು ವಿವಿಧ ಮಾರ್ಗಗಳು ಇಲ್ಲಿವೆ. ಅವುಗಳಲ್ಲಿ ಅನೇಕ ರೀತಿಯ ಹಬ್ಬಗಳ ಮೂಲಕ ದೈವಾಚರಣೆ ಮತ್ತು ಆರಾಧನೆ ಪ್ರಮುಖ. ಧಾರ್ಮಿಕ ಆಚರಣೆ ಮತ್ತು ಶ್ರೇಷ್ಠ ಸುಂದರ ಹಬ್ಬಗಳಲ್ಲಿ ಒಂದಾದ ದಸರಾ ಹಬ್ಬವು ವಿಶಿಷ್ಟ. ಇದು ಕರ್ನಾಟಕದ ನಾಡ ಹಬ್ಬ. ಭಾರತ ದೇಶದ ವಿವಿಧೆಡೆ ಈ ಹಬ್ಬವನ್ನು ಆಚರಿಸಿದರು, ಕರ್ನಾಟಕದಲ್ಲಿ ಶರನ್ನವರಾತ್ರಿಯಾಗಿ ಅಥವಾ ದಸರಾ ಹಬ್ಬವೆಂದು ವಿಶೇಷವಾಗಿ ಆಚರಿಸುತ್ತಾರೆ. ಈ ಒಂಬತ್ತು ದಿನಗಳು ಶಕ್ತಿಯನ್ನು / ದೇವಿಯನ್ನು ಒಂಬತ್ತು ರೂಪದಲ್ಲಿ ಆರಾಧಿಸುತ್ತಾರೆ. ಹಬ್ಬದ ನಂತರದ ಹತ್ತನೇದಿನ ವಿಜಯದಶಮಿ ದಿನವೆಂದು ಆಚರಿಸಲಾಗುತ್ತದೆ. ಹಿಂದೂ ಸಂಪ್ರದಾಯದಲ್ಲಿ ಕೆಲವು ವೃಕ್ಷಗಳಿಗೆ ಪೂಜನೀಯ ಸ್ಥಾನವನ್ನು ನೀಡಲಾಗಿದೆ. ಅದರಲ್ಲಿ ಒಂದು ಶಮೀ (ಬನ್ನಿ) ಮರ.

ಈ ಶಮೀ ವೃಕ್ಷದ ಬಗ್ಗೆ ಪುರಾಣಗಳಲ್ಲೂ ಉಲ್ಲೇಖವಿದೆ. ಪಾಂಡವರು ಒಂದು ವರ್ಷದ ಅಜ್ಞಾತ ವಾಸಕ್ಕೆಂದು ಹೊರಡುವಾಗ ತಮ್ಮ ಆಯುಧಗಳನ್ನು ಬನ್ನಿ ವೃಕ್ಷದ ಕೊಂಬೆಗಳ ಮರೆಯಲ್ಲಿ ಅಡಗಿಸಿಟ್ಟು ಪ್ರಾರ್ಥಿಸಿ ಹೋಗಿದ್ದರು ಮತ್ತು ಮರಳಿ ಬಂದು, ಮಹಾಭಾರತ ಯುದ್ಧಕ್ಕೆಂದು ಹೊರಡುವಾಗ ತಮ್ಮ ಆಯುಧಗಳನ್ನು ತೆಗೆದುಕೊಂಡು ಅವುಗಳನ್ನು ರಕ್ಷಿಸಿದ ಶಮೀ ವೃಕ್ಷಕ್ಕೆ ಪೂಜಿಸಿ ಹೋದ ನಂತರ ಕುರುಕ್ಷೇತ್ರ ಯುದ್ಧದಲ್ಲಿ ವಿಜಯ ಸಾಧಿಸಿದರೆಂಬ ಪ್ರತೀತಿ ಇದೆ.
ಇನ್ನು ಧಾರ್ಮಿಕ ಆಚರಣೆಗಳಾದ ಹೋಮ ಯಜ್ಞ ವಿಧಿಗಳಲ್ಲಿ ಅರಣಿ ಮಥನ (ಅಂದರೆ, ಬೆಂಕಿಯ ಕಿಡಿಯನ್ನು ಹೊರಗಿನ ಇಂಧನ ಶಕ್ತಿಯ ಸಹಾಯವಿಲ್ಲದೆ, ಮರದ ತುಂಡುಗಳ ಮಥನ / ಘರ್ಷಣೆಯ ಸಹಾಯದಿಂದಲೇ ತಯಾರಿಸುವ ಒಂದು ಪ್ರಾಚೀನ ಪದ್ಧತಿ)ಗೂ ಈ ಶಮೀ ವೃಕ್ಷದ ತುಂಡುಗಳನ್ನು ಬಳಸುತ್ತಾರಂತೆ. ಧನ್ವಂತರಿ ನಿಘಂಟಿನ ಪ್ರಕಾರ, `ಪಂಚಭೃಂಗ’ ಎಂಬ 5 ಮರಗಳಲ್ಲಿ ಶಮೀ ವೃಕ್ಷವೂ ಒಂದು. ಈ ಮರದ ತೊಗಟೆಗಳನ್ನ ಆಯುರ್ವೇದದಲ್ಲಿ ಹಲವಾರು ಚಿಕಿತ್ಸೆಗಳಿಗಾಗಿ ಔಷಧೀಯ ಸಸ್ಯವಾಗಿ ಬಳಕೆ ಮಾಡುತ್ತಾರೆ.
ಶಮೀ ಶಮಯತೇ ಪಾಪಂ ಶಮೀ ಲೋಹಿತಕಂಟಕಾ| ಧಾರಿಣ್ಯರ್ಜುನ ಬಾಣಾನಾಂ ರಾಮಸ್ಯ ಪ್ರಿಯವಾದಿನೀ || ಕರಿಷ್ಯಮಾಣ ಯಾತ್ರಾಯಾಂ ಯಥಾಕಾಲ ಸುಖಂ ಮಯಾ|
ತತ್ರ ನಿರ್ವಿಘ್ನಕರ್ತ್ರೇ ತ್ವಂ ಭವ ಶ್ರೀರಾಮ ಪೂಜಿತೇ ||

ಈ ಶ್ಲೋಕವೇ ಹೇಳುವಂತೆ ಬನ್ನಿ ಮರ ಪೂಜಿಸಿ ಆರಾಧಿಸುವವರ ಪಾಪಗಳನ್ನು ನಾಶ ಮಾಡುತ್ತದೆ ಎಂಬ ನಂಬಿಕೆ ಇದೆ. ಮೈಸೂರು ದಸರಾದ ಕೊನೆಯ ಘಟ್ಟ ವಿಜಯ ದಶಮಿಯಂದು ಅರಸರು ಶಮೀ ವೃಕ್ಷವನ್ನು ಪೂಜಿಸುತ್ತಾರೆ. ವಿಜಯನಗರ ಸಾಮ್ರಾಜ್ಯ ಮತ್ತು ಮೈಸೂರು ಒಡೆಯರ ಕಾಲದಿಂದಲೂ ವಿಜಯದಶಮಿಯನ್ನು ವಿಜಯೋತ್ಸವವಾಗಿ ಆಚರಿಸುವ ಪದ್ಧತಿ ಬಂದಿದೆ. ಇಷ್ಟೆಲ್ಲಾ ಮಹತ್ವವಿರುವ ಈ ಶಮೀ (ಬನ್ನೀ) ವೃಕ್ಷವನ್ನು ಪೂಜಿಸಿ ಆಶೀರ್ವಾದ ಪಡೆದು ನಾವೆಲ್ಲ ಸಂಭ್ರಮಿಸೋಣ…

ಪಲ್ಲವಿ ಚೆನ್ನಬಸಪ್ಪ