ಶಾಖಾಹಾರಿ ಕನ್ನಡ ಚಿತ್ರ
ಚಿತ್ರದ ಬಗ್ಗೆ ಹೀಗೊಂದು ನೋಟ…
ಮಲೆನಾಡಿನ ಪುಟ್ಟ ಹಳ್ಳಿಯಲ್ಲಿನ ಪುಟ್ಟ ಶಾಖಾಹಾರಿ ಹೊಟೇಲ್. ಅದರ ಮಾಲೀಕ ಕಮ್ ಭಟ್ಟ ಕಮ್ ಸಪ್ಲೈರ್ ಎಲ್ಲವೂ ಆದ ಸುಬ್ಬಣ್ಣನ ಸುತ್ತ ನಡೆವ ರಾತ್ರಿ-ಬೆಳಗು, ಕತ್ತಲೆ-ಬೆಳಕುಗಳ ಸರಣೀ ಚಿತ್ರಗುಚ್ಚ ಈ ಚಿತ್ರ.
ತನ್ನ ಪಾಡಿಗೆ ತಾನಿದ್ದರೂ ಆಕಸ್ಮಿಕಗಳು ಒಂದರ ಮೇಲೊಂದು ಬಂದೆರಗಿ ಮೃದು ಸ್ವಭಾವದವನಿಂದಲೂ ಕಠೋರ ಕಾರ್ಯ ಮಾಡುವಂತೆ ಪ್ರೇರೇಪಿಸುವ ಕತೆ ಇಲ್ಲಿದೆ. ಹಲವಾರು ವಿಷಯಗಳನ್ನು ತಮ್ಮ ಮೊದಲ ಚಿತ್ರದಲ್ಲೇ ನಿರ್ದೇಶಕ ಹೇಳಿದ್ದಾರೆ.
ರಂಗಾಯಣ ರಘು ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಅವರು ಮುಖ್ಯ ಭೂಮಿಕೆಯಲ್ಲಿದ್ದು ಇಡೀ ಚಿತ್ರವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಅವರಿಬ್ಬರೂ ಪೈಪೋಟಿಗೆ ಬಿದ್ದವರಂತೆ ಅದ್ಬುತವಾಗಿ ನಟಿಸಿದ್ದಾರೆ. ಲಾಯರ್ ಪಾತ್ರ ಹಾಗೂ ಪಾತ್ರದ ಆಯ್ಕೆ, ಈ ಲಾಯರ್ ಜೊತೆ ಕೈ ಜೋಡಿಸುವ ಲೇಡಿ ಫೋಲಿಸ್ ಆಫೀಸರ್ ಪಾತ್ರ ಹಾಗೂ ಪಾತ್ರಕ್ಕೆ ಆಯ್ಕೆ ಮಾಡಿದ ನಟಿ ಹೀಗೆ ಎರಡರಲ್ಲೂ ಹೊಸ ಪ್ರಯತ್ನವಿದೆ. ಇಂತಹ ಪ್ರಯೋಗಳು ಅಗಬೇಕಿದೆ.
ಮಧ್ಯೆ ಮಧ್ಯೆ ಬರುವ ‘ಅವಳು ಎಲ್ಲಿ?” ಎಂದು ಕೈ ಮುಂದೆ ಮಾಡಿ ಓಡಾಡುವ ಪಾತ್ರದ ಹರಿವು ಪ್ರಯೋಗಾತ್ಮಕವಾಗಿದೆ. ಪಾಪ, ಕೊನೆಗೂ ಅವನಿಗೆ ‘ಅವಳನ್ನು’ ತೋರಿಸಲೇ ಇಲ್ಲ. ಹೀಗೆ ಕಳೆದುಕೊಂಡ ಹುಡುಗಿಯರನ್ನು ಹುಡುಕುವ ಎಲ್ಲ ಭಗ್ನ ಪ್ರೇಮಿಗಳ ಪ್ರತಿಮೆಯಂತಿದೆ ಈ ಪಾತ್ರ…!
ರಘು ಅವರ ಚಿತ್ರದ ಕೊನೆಯ ದೃಶ್ಯದ ಅಭಿನಯಕ್ಕೆ ಅವರೇ ಸಾಟಿ….. ಕೌಂಟರ್ ಪಾತ್ರಧಾರಿ ಗೋಪಾಲಕೃಷ್ಣ ಕೂಡ ಅಷ್ಟೇ ಸಮಂಜಸವಾಗಿ ನಟಿಸಿದ್ದಾರೆ. ಹೀರೋಯಿನ್ ಪಾತ್ರವು ಕತೆಗೆ ತಕ್ಕಂತೆ ಚಿತ್ರಿಸಿದ್ದಾರೆ, ಎಷ್ಟು ಬೇಕೋ ಅಷ್ಟೇ. ನಮ್ಮ ಪರಿಸರದಲ್ಲೇ ಕಾಣ ಸಿಗುವಂತಹ ಶಾಸ್ರಿಯ ಪಾತ್ರ, ವಾಸನಾಗ್ರಾಹಿಯ ಪಾತ್ರ, ತರಕಾರಿ ಮಾರುವ ಹೆಂಗಸು, ಕಾಮವಾಸನೆಯ ರಘು ತಮ್ಮನ ಪಾತ್ರ, ಕಂಜರ ಹಿಡಿದು ತಿರುಗುವ ಮುದುಕನ ಪಾತ್ರಗಳಲ್ಲದೇ ಇಡೀ ಚಿತ್ರದಲ್ಲಿ ಮುಖ್ಯ ಪಾತ್ರಗಳೇ ಆಗಿರುವ ಸೌದೆಯ ಒಲೆ, ದೋಸೆಯ ತವ, ಕನ್ನಡಿ, ಬಾಗಿಲ ಪರದೆಗಳು, ರೇಡಿಯೋ, ಹಿತ್ತಿಲ ತಡುಕು, ಸಮಯಕ್ಕೆ ಸರಿಯಾಗಿ ಬರುವ ಬಸ್ ಹೀಗೆ ಎಲ್ಲಕ್ಕೂ ಹೆಚ್ಚಿನ ಮಾರ್ಕುಗಳಿವೆ.
ಶುದ್ಧ ಕುಚುಕು ಗೆಳೆತನವನ್ನು ಕೊನೆಯವರೆಗೂ ಅಷ್ಟೇ ಶುದ್ಧವಾಗಿ ಕಾಪಾಡಿದ್ದಲ್ಲದೇ ಎಲ್ಲೂ ಮಿತ್ರ ದ್ರೋಹಕ್ಕೆ ಅವಕಾಶ ಮಾಡದೇ ನಿರೂಪಿಸಿದ್ದಾರೆ. ದೊಡ್ಡ ಆಫೀಸರೇ ಆಗಲಿ ಸಣ್ಣ ಕೆಲಸದವರೇ ಆಗಲಿ ಸಂಸಾರ ತಾಪತ್ರಯ, ಹೆಂಡತಿಗೆ ಗಂಡನ ಮೇಲಿನ ಅತೀವ ಪ್ರೀತಿ, ಸದಾ ತನ್ನ ಸಾಮಿಪ್ಯದಲ್ಲೇ ಇರಬೇಕೆಂಬ ಆಶಯದ ಸೂಕ್ಷ ವಿಷಯಗಳನ್ನು ಸಂದರ್ಭಕ್ಕೆ ತಕ್ಕಂತೆ ತರಲಾಗಿದೆ. ಇದು ಮೆಚ್ಚಲರ್ಹ ಅಂಶ. ಕ್ಯಾಮರಾ ಹಾಗೂ ಸಂಗೀತದ ಕೆಲಸಗಳೆರಡೂ ಪ್ಲಸ್ಗಳೇ…
ಸರಣಿ ಸಾವು, ಕಟಾವು, ರಕ್ತ, ಹತಾಶೆ, ನೋವುಗಳ ನಡುವೆಯೂ ಒಂದು ಸಣ್ಣ ಪ್ರೇಮ, ಪ್ರೇಮ ಪತ್ರಗಳ ವಿನಿಮಯ ಹಾಗೂ ಕಟ್ಟುಕಟ್ಟಳೆಯ ದಾಟಿ ಬರುವ ಪ್ರೇಮಿಗೆ ಪ್ರೇಮ ಪತ್ರದ ಒಕ್ಕಣೆ ತಲುಪಿಸಿದ ಪರಿ ಹೊಸದಾಗಿದೆ. ಮೈನಸ್ಗಳಿದ್ದರೂ ಅವು ಗೌಣ, ಕಾರಣ ಇದು ನಿರ್ದೇಶಕರ ಮೊದಲ ಚಿತ್ರ ಅವರಿಗೇ ಗೊತ್ತಾಗಿರುತ್ತೆ ಅದನ್ನು ಹೇಳುವ ಅಗತ್ಯ ಇಲ್ಲಿಲ್ಲ!
ಇಂತಹ ವಿನೂತನ ಪ್ರಯೋಗ ಮಾಡಿದ ನಿರ್ದೇಶಕರನ್ನೂ ಹಾಗೂ ನಿರ್ಮಾಪಕರನ್ನೂ ಮೆಚ್ಚಲೇಬೇಕು. ನಿರ್ದೇಶಕ ಸಂದೀಪ್ ಸುಂಕದ್ ಮೊದಲ ಚಿತ್ರದಲ್ಲೇ ವಿಭಿನ್ನವಾಗಿ ಕತೆಯನ್ನು ಹೇಳಿದ್ದಾರೆ. ನವಿರು ಪ್ರೇಮವನ್ನು ನಿರೂಪಿಸುವ ಶಕ್ತಿ ಸಂದೀಪ್ ಅವರಿಗಿದೆ ಅದರ ಸ್ಯಾಂಪಲ್ಗಳೂ ಈ ಚಿತ್ರದಲ್ಲಿ ಬಂದಿವೆ. ಹಾಗಾಗಿ ಮುಂದೆ ರಕ್ತದ ನಂಟಿಲ್ಲದೆಯೂ ಚಿತ್ರ ಮಾಡಲೆಂಬ ಆಶಯ.
ತುಂಕೂರ್ ಸಂಕೇತ್