ಶೃತಿ-ಸ್ವರದ “ಬೇಸೂರ್”

ಶೃತಿ-ಸ್ವರದ “ಬೇಸೂರ್”

ಕೆಲವು ಕೃತಿಗಳು ಮತ್ತೆ ಮತ್ತೆ ಓದಿಸಿಕೊಳ್ಳುವ ನಮ್ಮ ಬುದ್ಧಿ ವಿವೇಚನೆಯನ್ನು ಸಾಣೆ ಹಿಡಿಯುವ ಚಿಂತನೆಗೆ ಹಚ್ಚುವ ಗುಣವನ್ನು ಹೊಂದಿರುತ್ತವೆ. ಇತ್ತೀಚೆಗೆ ನಾನು ಓದಿದ ಅಂತಹ ಒಂದು ಕೃತಿ, ‘ವೀರಲೋಕ ಪುಸ್ತಕ’ ಪ್ರಕಾಶನದಿಂದ ಪ್ರಕಟವಾಗಿರುವ ‘ಬೇಸೂರ್’ ಎಂಬ ಕಥಾಸಂಕಲನ. ‘ಬೇಸೂರ್’ ವಿದ್ಯಾ ಭರತನಹಳ್ಳಿ ಅವರ ಪ್ರಥಮ ಕಥಾಸಂಕಲನವಾಗಿದೆ.

‘ಬೇಸೂರ್’ 13 ಕಥೆಗಳ ಗುಚ್ಚ. ಎಲ್ಲಾ ಕಥೆಗಳು ಸ್ತ್ರೀ ದನಿಯನ್ನು ಪ್ರತಿನಿಧಿಸುತ್ತವೆ, ಪ್ರತಿಧ್ವನಿಸುತ್ತವೆ.. ಪ್ರತಿಯೊಂದು ಕತೆಯಲ್ಲೂ ಹೆಣ್ಣಿನ ತುಮುಲಗಳು, ಹೋರಾಟಗಳನ್ನು ಕಾಣುತ್ತೇವೆ. ಸ್ತ್ರೀಯು ತನ್ನ ಸ್ವಾತಂತ್ರ್ಯ, ಅಸೀಮತೆಯನ್ನು ಅನುಭವಿಸಿ ವಾಪಸ್ಸು ತನ್ನ ಚೌಕಟ್ಟನ್ನು ಸೇರುವ ಪರಿಯನ್ನು ಈ ಕೃತಿಯಲ್ಲಿ ನೋಡುತ್ತೇವೆ. ಈ ಕತೆಗಳಲ್ಲೆಲ್ಲ ನಮ್ಮ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಪಾತ್ರಗಳಾಗಿ ಗೋಚರಿಸುತ್ತಾ ಹೋಗುತ್ತವೆ. ಸಂಗೀತವು ಸಂಕಲನದುದ್ದಕ್ಕೂ ಕಂಪು ಸೂಸುತ್ತಾ ಮುದಗೊಳಿಸುತ್ತವೆ. ಈ ಕೃತಿಯಲ್ಲಿ ಮಲೆನಾಡಿನ ಆಡು ಮಾತುಗಳು ಸಾಕಷ್ಟಿದ್ದು ಭಾಷೆಗೆ ಮೆರುಗು ತಂದಿವೆ. ‘ಸೊರ್ಲೆ ಕುಡಿ ಕಟ್ನೆ ಸಾರು….’, ‘ಮಾಡ್ಗುಳಿಯಲ್ಲಿದ್ದ ಬೆಣ್ಣೆ’ ಅಂದರೆ ಮಾಡಿನಲ್ಲಿ ನೇತು ಹಾಕಿರುವ ಮಡಕೆಯಲ್ಲಿರುವ ಬೆಣ್ಣೆ ಎಂದರ್ಥ. ಇಂತಹ ಭಾಷಾ ಬಳಕೆ ಪರ್ಯಾಯ ಪದಗಳ ಬಳಕೆಗೆ ದಾರಿ ಎನಿಸಿವೆ. ಓದುಗರಿಗೆ ತಮ್ಮ ಮೂಲ ನೆಲೆಯ ಆಪ್ತತೆ ದೊರೆಯುವುದರಲ್ಲಿ ಸಂದೇಹವಿಲ್ಲ.

ಹಠಮಾರಿತನ ಮನುಷ್ಯನ ಅಹಂಕಾರಕ್ಕೆ ಉರುವಲು. ಅಹಂನ ಇತರ ಮುಖಗಳಾದ ಈರ್ಷೆ, ಅಸೂಯೆ, ರೋಷ – ಇವುಗಳು ತಮ್ಮನ್ನು ಮಾತ್ರವಲ್ಲದೆ ಇತರರ ಬದುಕಿಗೂ ಬೆಂಕಿ ಹಚ್ಚುವುವು. ಅವುಗಳ ಜ್ವಾಲೆ ಸಂಬಂಧಗಳ ಎಳೆಗಳನ್ನೆಲ್ಲ ಕರಕಲಾಗಿಸುವುವು. ರೋಷಾಗ್ನಿಯನ್ನು ಹೋಲಿಸುವಾಗ ‘ಜಮದಗ್ನಿಯ ಸಿಟ್ಟಿನ ಅಪ್ಪ’ ಎಂಬ ಸುಂದರ ಹೋಲಿಕೆಯುಳ್ಳ ಸಾಲನ್ನು ‘ಆಯಿ’ ಕತೆಯಲ್ಲಿ ಕಾಣಬಹುದು. ಅಂತಹ ಸಿಟ್ಟಿಗೆ ಹವಿಸ್ಸು, ಗಜಾನನನ ಆಯಿ ಕಮಲಾಕ್ಷಿ ಬಾವಿಯ ಪಾಲು. ಗುರುಗಳ ಕೀರ್ತಿಗಿಂತ ಅಪ್ಪನ ಸಿಟ್ಟೇ ಮೇಲುಗೈಯಾಗುವ ಪರಿ ಮಾನವನ ತಮೋಗುಣದ ಪರಾಕಾಷ್ಟೆಯೇ ಸರಿ.

ಅಂತೆಯೇ ಇನ್ನೊಂದು ಕಥೆ ‘ಮರದೊಳಗಣ ಬೆಂಕಿ’ ಕಥೆಯ ಶೀರ್ಷಿಕೆಯಲ್ಲಿಯೇ ತನ್ನ ಪೂರ್ಣಾರ್ಥವನ್ನು ಬಿಚ್ಚಿಡುತ್ತದೆ. ಕಾಂಚನಾಳ ಅಸೂಯೆಯ ಸುಡು ಜ್ವಾಲೆ ಕಲಾಶ್ರೀ ಬದುಕಿಗೆ, ನಡತೆಗೆ ಕಿಚ್ಚು ಹಚ್ಚಿದ್ದು, ತನ್ನ ಜೀವನದುದ್ದಕ್ಕೂ ಆ ಗಾಯ ಹಸಿಯಾಗಿಯೇ ಉಳಿಯುವ ಪರಿ ವಿಷಾದವೆನಿಸುತ್ತದೆ. ಕಾಂಚನಾಳಂತಹ ಹೀನ ಸುಳಿಗಳು ಎಲ್ಲೆಲ್ಲಿಯೂ ಇದ್ದೆ ಇರುತ್ತವೆ. ಸುಧಾ ಮೂರ್ತಿಯವರ ಜೀವನಾನುಭವಗಳನ್ನು ಆಧರಿಸಿ ಬರೆದ ಲೇಖನ ಒಂದರಲ್ಲಿ ಈ ರೀತಿಯ ವ್ಯಕ್ತಿತ್ವವನ್ನು ಕಾಣಬಹುದು.

‘ವಿಭಕ್ತ’ ಕತೆಯು ಸಿಟಿ ಜನರು ಹೇಗೆ ಪರಿಪಾಟಲಿನಿಂದ ಜೀವಿಸುತ್ತಾರೆ, ಹಳ್ಳಿಗರು ಹೇಗೆ ಸಿಟಿ ಜನರನ್ನು ತಪ್ಪಾಗಿ ಅರ್ಥೈಸುತ್ತಾರೆ ಎಂಬುದನ್ನು ಎಳೆಎಳೆಯಾಗಿ ತಿಳಿಸುತ್ತದೆ. ಇಂದಿಗೂ ಸಿಟಿ-ಹಳ್ಳಿ ಜನರ ಮಧ್ಯೆ ಇಂತಹ ಅಂತರ ಇರುವಂಥದ್ದೆ. ಸರ್ವಜ್ಞನ ವಚನ ಸಾಲುಗಳು

‘ಸಾಲವನು ಕೊಂಬಾಗ ಹಾಲೋಗರುಂಡಂತೆ|
ಸಾಲಿಗರು ಬಂದು ಎಳೆವಾಗ
ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ || –

ಸಾಲುಗಳು ಸಾಲದ ಅಡ್ಡಪರಿಣಾಮ, ಸತ್ತವರ ಮನೆಯ ಜನಗಳ ದಾರುಣ ಪಾಡನ್ನು ಹಾಗೂ ಸಾಲಕ್ಕೆ ಸಹಾಯ ಮಾಡಿದ್ದರೆ ಜೀವ ಉಳಿಯುತ್ತಿತ್ತೇನೋ ಎಂಬ ಅಪರಾಧೀ ಮನೋಭಾವ ಓದುಗರಿಗೆ ಕಾಡಬಹುದು. ಅಂತೆಯೇ ಪ್ಯಾರಾಸೋಮ್ನಿಯಾ ಕಾಯಿಲೆಯ ಬಗೆಗೂ ಕತೆಗಾರ್ತಿ ಬೆಳಕು ಚೆಲ್ಲಿದ್ದಾರೆ. ಆದರೆ ಎರಡೂ ವಿಷಯಗಳು ಮಿಳಿತಗೊಳ್ಳುವ ಅಂಶವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಸಬಹುದಿತ್ತು. ಪ್ಯಾರಾಸೋಮ್ನೀಯಾ ಬಗ್ಗೆ ತಿಳುವಳಿಕೆ ಮೂಡಿಸುವ ಈ ಕಥೆಯು ಈ ಕಾಯಿಲೆಯು ಮದುವೆಗೆ ಅಡ್ಡಿ ಎನಿಸುವುದು ಅವಾಸ್ತವ ಎನಿಸುತ್ತದೆ.

ಇಂತಹದ್ದೇ ಇನ್ನೊಂದು ಕತೆ ‘ಹೇಳೇ ಮೇದಿನಿ’. ಇಂಪೋಟೆಂಟ್ ಎಂದು ಗೊತ್ತಿದ್ದರೂ ಸಹ ಸಮಾಜದ ಕಣ್ಣಲ್ಲಿ ದಂಪತಿಗಳಂತೆ ಕಾಣಲು ಮದುವೆಯಾಗುವುದು ಸಾಧುವೇ? ಅಂತಹ ಮದುವೆಗಳು ಎಂದಿಗೂ ಉಳಿಯಲಾಗದು. ಈಗಿನ ಕಾಲಮಾನದಲ್ಲಿ ನೋಡಿದಲ್ಲಿ ‘ಇಂಪೋಟೆಂಟ್’ನೊಂದಿಗಿನ‌ ಮದುವೆ ಕಾನೂನು ಸಮ್ಮತವಲ್ಲ. ಕಾನೂನಿನ ಚೌಕಟ್ಟಿನಲ್ಲಿ ಅಂತಹ ಮದುವೆ ಕ್ರೌರ್ಯವೆನಿಸುತ್ತವೆ. ಇವೆರಡೂ ಕತೆಗಳು ವಾಸ್ತವಾಂಶದಿಂದ ದೂರ ಎನಿಸುವುವು. ಕತೆಯ ಎಳೆಯನ್ನು ಇನ್ನಷ್ಟು ಆಳವಾಗಿಸಬಹುದಿತ್ತು.

ಮೈಸರಿದ ಬಣ್ಣ
ಮಾಸಲುಬೇಕು
ಮನಕಂಟಿದ ಬಣ್ಣ
ಸ್ಥಾಯಿಯಾಗಲೇಬೇಕು
ಹೆಣ್ಣಿಗೆ ಪ್ರೀತಿಯು ಬೇಕು
ಮೈ ಸವರುವ ಪ್ರೀತಿಯು
ಮನ ಸವರಿದಾಗಲೆ
ಜೀವ ತಂಪಾಗುವುದು
ಮನಕಂಟಿದ ಪ್ರೀತಿಯು
ಜೀವವಾಗುವುದು.

ಮೈಸವರಿದ ಬಣ್ಣ, ನೀನಿಲ್ಲದೆ ಕತೆಗಳು – ಹೆಣ್ಣು ಗಂಡಿನ ವಾಂಛೆ, ಪ್ರೇಮದ ತೊಯ್ದಾಟವನ್ನು ತೆರೆದಿಡುತ್ತದೆ. ಕಡೆಯಲ್ಲಿ ಪ್ರೇಮವನ್ನೇ ಗೆಲ್ಲಿಸುತ್ತಾರೆ, ಕತೆಗಾರ್ತಿ. ‘ಮೈಸವರಿದ ಬಣ್ಣ’ ಕತೆಯ ನಾಯಕಿ ಮುಕ್ತಾಳ ಮುಕ್ತತೆ ಇಂದಿನ ಕಾಲಮಾನಕ್ಕೆ ಒಗ್ಗುವಂಥದ್ದು. ಆದರೆ ಕತೆಯ ಅಂತ್ಯದಲ್ಲಿ ಅನಾವರಣವಾಗುವ ಅವಳ ಮನಸ್ಥಿತಿ ಸರ್ವಕಾಲಕ್ಕೂ ಅನ್ವಯವೇ.

ಮೊದಲ ಪ್ರೇಮ ಮರೆಯುವುದೆಂತು?
ಸಾವ ಕಡೆಯ ಘಳಿಗೆಯಲೊಮ್ಮೆ
ಇಣುಕಿ ಹೋಗಲುಬಹುದು
ಆ ರೋಮಾಂಚನ
ಚೆಲ್ಲುತ ಭಾವಸಿಂಚನ

-ಎಂಬ ಕವಿ ಸಾಲಿನಂತೆ ‘ನೀನಿಲ್ಲದೆ…’ ಕತೆಯ ಕೊನೆಯ ಸಾಲುಗಳೂ ಸಹ ಓದುಗರ ಮನೋನಗರಿಯ ಹಳೆಯ ನಿಲ್ದಾಣದೆಡೆಗೊಮ್ಮೆ ಇಣುಕುವಂತೆ ಮಾಡುತ್ತದೆ. ಸ್ವರಗಳು ಅಂತರ್ಗತವಾಗಿರಬೇಕು. ಸರಿಯಾಗಿ ಸೂರ್ ಹಚ್ಚುವವರನ್ನೆ ಮದುವೆಯಾಗಬೇಕು. ಗಂಡಸಿನ ಅಹಂ ಕರಗಿದರೆ ಮಾತ್ರವೇ ಹೆಣ್ಣಿನ ಸ್ವರಕ್ಕೆ ಮೇಳವಾಗುವುದೆಂಬುದನ್ನು ‘ಬೇಸೂರ್’ ಕತೆಯು ಸ್ಪಷ್ಟಪಡಿಸುತ್ತಾ ಹೋಗುತ್ತದೆ. ಬೇರು ಹುಡುಕಿ ಹೊರಟ ವಿಷ್ಣುವಿನ ಬಗೆಗೆ ಅಂತಃಕರಣದ ಯಶೋದೆ ನಿರಾಕರಣ ಭಾವ ತಾಳುವ ರೀತಿಯು ಬಳ್ಳಿಯು ತಾನು ಹಬ್ಬಿದ ಮರವನ್ನು ಮರೆಯಭಾರದಿತ್ತು ಎಂಬ ವಿಷಣ್ಣಭಾವವನ್ನು ‘ನಿರ್ಗಮನ’ ಕತೆಯು ಪರಿಣಾಮಕಾರಿಯಾಗಿ ಮೂಡಿಸಿದೆ.

ಭಾಷಾ ಬಳಕೆಯ ದೃಷ್ಟಿಯಿಂದ ಮಲೆನಾಡಿನ ಸೊಗಡಿನ ಪದಗಳು ಅಪ್ಯಾಯಮಾನವೆನಿಸುತ್ತವೆ. ಅನ್ಯದೇಶಿಯ ಪದಗಳು ಭಾಷೆಯ ವ್ಯಾಪ್ತಿಯನ್ನು ಹಾಗೂ ಸೊಗಸನ್ನು ಹಿರಿದುಗೊಳಿಸುವುವು. ಆದರೆ ಸೊಗಡಿನ‌ ನಡುವೆ ಸಿಗುವ ಜಿಗುಟಿನಂತಹ ಇಂಗ್ಲಿಷ್ ಪದಗಳ ಬಳಕೆಯನ್ನು ಕಡಿಮೆಗೊಳಿಸಬಹುದಿತ್ತು.

ಸಂಕಲನದ ಕಥಾವಿಷಯಗಳ ಆಯ್ಕೆಯು ಸೂಕ್ತವಾಗಿದ್ದು, ವಿದ್ಯಾರವರು ಮತ್ತಷ್ಟು ಮಾಗುವ ಗುಣವನ್ನು ಹೊರ ಚೆಲ್ಲುತ್ತದೆ. ವಿಷಯವೇ ನಾಯಕನೆನಿಸುವ ಕತೆಗಳನ್ನು ಅವರ ಮುಂದಿನ ಸಂಕಲನಗಳಲ್ಲಿ ನಿರೀಕ್ಷಿಸಬಹುದು. ಒಟ್ಟಾರೆಯಾಗಿ ‘ಬೇಸೂರ್’ ಸಂಕಲನದ ಕತೆಗಳ ಅಂತ್ಯವು ಮನಸೆಳೆಯುತ್ತವೆ. ಎಲ್ಲಾ ಕತೆಗಳು ತಾರ್ಕಿಕ ಅಂತ್ಯ ಕಾಣುತ್ತವೆ. ಕೆಲವು ಕಡೆ ಊಹೆಗೂ ನಿಲುಕದಂತೆ ಕತೆಗಳ ಅಂತ್ಯವು ಓದುವಿಕೆಯ ರುಚಿಯನ್ನು ಹೆಚ್ಚಿಸುತ್ತವೆ. ಸಂಗೀತವು ತಂಪಿನ ಅನುಭೂತಿ ನೀಡುತ್ತವೆ.

ಕವಯತ್ರಿ, ಕತೆಗಾರ್ತಿ ವಿದ್ಯಾ ಭರತನಹಳ್ಳಿಯವರ ಇನ್ನಷ್ಟು ಕೃತಿಗಳು ಓದುಗರಿಗೆ ದಕ್ಕಲಿ. ಶುಭಹಾರೈಕೆಗಳು.

ನಿಖಿತ ಅಡವೀಶಯ್ಯ

Related post