ಸಂಪ್ರದಾಯ ಆಚರಣೆ ಮತ್ತು ಮಹತ್ವ
ಭಾರತವು ವಿವಿಧ ರಾಜ್ಯಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಹೊಂದಿದೆ. ಭಾರತೀಯ ಮೂಲದ ಧರ್ಮಗಳಾದ ಹಿಂದೂ ಧರ್ಮ, ಜೈನ ಮತ್ತು ಬೌದ್ಧ ಧರ್ಮಗಳೆಲ್ಲವೂ ಧರ್ಮ ಮತ್ತು ಕರ್ಮವನ್ನು ಆಧರಿಸಿವೆ.

ಸಂಪ್ರದಾಯ ಎಂದರೆ ಆಚರಣೆ, ದೃಷ್ಟಿಕೋನಗಳು ಮತ್ತು ಧೋರಣೆಗಳ ಒಂದು ವ್ಯಾಪ್ತಿ. ಇಲ್ಲಿನ ಧರ್ಮ ಮತ್ತು ಸಂಪುದಾಯಗಳು ಬಹಳ ಆಳವಾದ ಬೇರುಗಳನ್ನು ಹೊಂದಿರುವ ನೆಲವಾಗಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಈ ಸಂಪ್ರದಾಯಗಳು ಮತ್ತು ಆಚರಣೆಗಳು ಪ್ರಾಚೀನ ಕಾಲದಿಂದ ಬಂದು ಆಧುನಿಕ ಯುಗದಲ್ಲೂ ಆಚರಣೆಯಲ್ಲಿವೆ, ಅವುಗಳನ್ನು ತಿರಸ್ಕರಿಸುವ ಅಥವಾ ದುರ್ಬಲಗೊಳಿಸುವ ಅವಕಾಶಗಳು ಬಹಳ ಕಡಿಮೆ. ಅದರಲ್ಲೂ ಮುಖ್ಯವಾಗಿ ಹಿಂದೂ ಧರ್ಮದಲ್ಲಿ ಆಚರಿಸಲಾಗುವ ಸಂಪ್ರದಾಯ ಮತ್ತು ಅವುಗಳ ಉದ್ದೇಶ ಮತ್ತು ಅರ್ಥಗಳನ್ನು ವಿವರಿಸಲಾಗಿದೆ.
ಕುಂಕುಮ ಅಥವಾ ತಿಲಕ ಧಾರಣೆ

‘ನಮ್ಮ ಪೂರ್ವಜರು ದೇಹದ ಮುಖ್ಯ ನರಮಂಡಲದ ನೆತ್ತಿಯ ಎರಡು ಹುಬ್ಬುಗಳ ನಡುವೆ ಕುಂಕುಮದ ತಿಲಕವನ್ನು ಧರಿಸುತ್ತಿದ್ದರು. ತಿಲಕ ಧಾರಣೆಯು ದೇಹದ ಶಕ್ತಿಯು ವಿನಾಕಾರಣ ಅಪವ್ಯಯ ಆಗದಂತೆ ತಡೆಯುತ್ತದೆ ಎಂಬ ನಂಬಿ ಇದೆ. ಅಷ್ಟೇ ಅಲ್ಲದೆ ತಿಲಕವು ಏಕಾಗ್ರತೆಯ ಸಂಕೇತ ಎಂದೂ ನಂಬಿದ್ದರು. ಕುಂಕುಮ ಧಾರಣೆಯು ಹಣೆಯಲ್ಲಿ ಇರುವ ಚಕ್ರದ ಮೇಲೆ ಒತ್ತಡ ಬೀರಿ ಮುಖದಲ್ಲಿನ ನರಮಂಡಲಕ್ಕೆ ಉತ್ತಮ ರೀತಿಯಲ್ಲಿ ರಕ್ತ ಸಂಚಾರ ಆಗುವಂತೆ ಮಾಡುತ್ತದೆ’.
ನಮಸ್ಕಾರದ ಮಹತ್ವ

ಅತಿಥಿಗಳನ್ನು ಸ್ವಾಗತಿಸಲು ನಮ್ಮ ಎರಡೂ ಕೈಗಳನ್ನು ಎದೆಯ ಭಾಗದಲ್ಲಿ ಜೋಡಿಸುವುದನ್ನು ನಮಸ್ಕಾರ ಎನ್ನುತ್ತೇವೆ. ಈ ರೀತಿ ನಮಸ್ಕಾರಿಸುವುದು ಗೌರವ ಸೂಚಕವೂ ಹೌದು. ವೈಜ್ಞಾನಿಕವಾಗಿ ಈ ರೀತಿ ಮಾಡುವುದರಿಂದ ಬೆರಳಿನ ಕೊನೆ, ಕಿವಿಯ, ಕಣ್ಣಿನ ಮತ್ತು ಮನಸ್ಸಿನ ಮೇಲೆ ಒತ್ತಡ ಬೀರಿ ನಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ. ಗ್ರಹಗಳು ಅಂಗೈಯಲ್ಲಿ ವಾಸಿಸುವುದರಿಂದ ಎರಡೂ ಅಂಗೈಯನ್ನು ಪರಸ್ಪರ ಒತ್ತುವುದ್ರಿಂದ ಒತ್ತಡ ಉಂಟಾಗಿ ಗ್ರಹ ದೋಷವನ್ನು ಕಡಿಮೆ ಮಾಡುತ್ತದೆ. ನಮಸ್ಕಾರ ಭಂಗಿ, ಹೃದಯ ಚಕ್ರವನ್ನು ಜಾಗೃತ ಮಾಡಯತ್ತದೆ. ಮೆದುಳಿನ ನರಗಳು ಕೈಗಳ ನರಗಳಿಗೆ ಸಂಪರ್ಕ ಹೊಂದಿದ್ದು, ನಮಸ್ಕಾರ ಮಾಡುವಾಗ ಕೈಗಳ ನರಗಳಿಗೆ ಒತ್ತಡ ಬಿದ್ದು, ಅವು ಜಾಗೃತ ಸ್ಥಿತಿಗೆ ಹೋಗಿ ವ್ಯಕ್ತಿಯ ಬುದ್ಧಿಮತ್ತೆಯು ಚುರುಕಾಗುತ್ತದೆ. ನಮಸ್ಕಾರ ಮಾಡುವುದ್ರಿಂದ ಮನಸ್ಸು ಶಾಂತವಾಗುತ್ತದೆ. ವಿಜ್ಞಾನದ ಪ್ರಕಾರ, ನಮಸ್ಕಾರ ಮಾಡುವಾಗ ಬೆರಳಿನ ರೇಖೆಗಳು ಒಂದಕ್ಕೊಂದು ಘರ್ಷಣೆಗೊಳಗಾಗಿ ಧನಾತ್ಮಕ ಶಕ್ತಿ ಸಂಚಯವಾಗುತ್ತದೆ.
ಜನಿವಾರ ಧಾರಣೆಯ ಮಹತ್ವ

ನಾವು ಜನಿವಾರ (ಪವಿತ್ರ ದಾರ) ಕಟ್ಟಿದರೆ ಅದು ನಮ್ಮ ಸ್ಮರಣ ಶಕ್ತಿಯನ್ನು ತೀಕ್ಷ್ಣ ಗೊಳಿಸುತ್ತದೆ ಮತ್ತು ಮಲಬದ್ಧತೆ ಇತ್ಯಾದಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿ ನಮ್ಮ ಹೊಟ್ಟೆಯನ್ನು ಆರೋಗ್ಯವಾಗಿ ಇರಿಸುತ್ತದೆ. ಪವಿತ್ರ ಜನಿವಾರ ಧಾರಣೆ ಸಮಾರಂಭವನ್ನು ನೆಲದ ಮೇಲೆ ಪದ್ಮಾಸನ ಹಾಕಿ ಕುಳಿತು ನಡೆಸಲಾಗುತ್ತದೆ. ಈ ನಿರ್ದಿಷ್ಟ ಭಂಗಿಯಿಂದ ನಮಗೆ ವಿವಿಧ ಆರೋಗ್ಯ ಪ್ರಯೋಜನ ಉಂಟಾಗುವುದಲ್ಲದೇ ನಮ್ಮ ದೇಹದ ಭಂಗಿಯನ್ನು ನೇರವಾಗಿ ಇಡುತ್ತದೆ.
ಜನಿವಾರದ 3 ಪವಿತ್ರ ಎಳೆಗಳು ಲಕ್ಷ್ಮಿ (ಸಂಪತ್ತು), ಪಾರ್ವತಿ (ಶಕ್ತಿ) ಮತ್ತು ಸರಸ್ವತಿ (ಜ್ಞಾನ) ಎಂಬ ಮೂರು ದೇವತೆಗಳನ್ನು ಪ್ರತಿನಿಧಿಸುತ್ತವೆ. ಒಮ್ಮೆ ಈ ಪವಿತ್ರ ಎಳೆಯನ್ನು ಬಳಸಿದರೆ, ಅದು ಜೀವನದ ಉದ್ದಕ್ಕೂ ನಮ್ಮನ್ನು ನಕಾರಾತ್ಮಕ ಆಲೋಚನೆಗಳು ಮತ್ತು ನಕಾರಾತ್ಮಕ ಶಕ್ತಿಯಿಂದ ನಮ್ಮನ್ನು ಕಾಪಾಡುತ್ತದೆ ಎಂಬ ನಂಬಿಕೆಯಿದೆ. ವೈಜ್ಞಾನಿಕ ಅಧ್ಯಯನದ ಪ್ರಕಾರ ಜನಿವಾರವನ್ನು ಬಳಸುವವರು ಹೆಚ್ಚಿನ ರಕ್ತದೊತ್ತಡದ ಸಮಸ್ಯೆಯಿಂದ ಬಳಲುವುದಿಲ್ಲ ಎಂದು ಸಾಬೀತಾಗಿದೆ.
ವಿವಾಹದಲ್ಲಿ ಸಪ್ತಪದಿಯ ಮಹತ್ವ

‘ಪ್ರತಿಯೊಂದು ವೃತ್ತವೂ 360 ಡಿಗ್ರಿ ಕೋನವನ್ನು ಹೊಂದಿದ್ದು, 360 ರಿಂದ ಭಾಗಿಸಲಾಗದ 1 ರಿಂದ 9 ರವರೆಗಿನ ಏಕೈಕ ಸಂಖ್ಯೆ ಎಂದರೆ 7 ಆಗಿದೆ. ಆದ್ದರಿಂದ ವಧು ಮತ್ತು ವರರು ಮದುವೆಯ ಸಂದರ್ಭದಲ್ಲಿ ಏಳು ಬಾರಿ ಹೋಮ ಕುಂಡದ ಅಗ್ನಿಯನ್ನು ಸುತ್ತುತ್ತಾರೆ, ಏಳೇಳು ಜನ್ಮಕ್ಕೂ ತಮ್ಮ ಸಂಬಂಧವನ್ನು ಕಳೆದುಕೊಳ್ಳುವುದಿಲ್ಲ ಎನ್ನುವ ಬಂಧನವನ್ನು ಇದು ಖಚಿತಪಡಿಸುತ್ತದೆ’.
ತುಳಸಿಯನ್ನು ಪೂಜಿಸುವುದು

ಹಿಂದೂಗಳು ತುಳಸಿಯನ್ನು ‘ತಾಯಿ’ ಎನ್ನುವ ಭಾವನೆಯಿಂದ ಪೂಜಿಸುತ್ತಾರೆ. ಇದನ್ನು ಪುಣ್ಯದ ಕಾರ್ಯವೆಂದೂ ನಂಬುತ್ತಾರೆ. ತುಳಸಿ ಗಿಡದ ಪ್ರತಿಯೊಂದು ಭಾಗಗಳೂ ಪವಿತ್ರವೆಂದು ತಿಳಿದವರು ಹೇಳಿದ್ದಾರೆ. ವೇದ ಕಾಲದ ಋಷಿ ಮುನಿಗಳು ಅಕ್ಷರಸ್ಥ ಮತ್ತು ಅನಕ್ಷರಸ್ಥ ಎಂಬ ಭೇದವಿಲ್ಲದೆ ಎಲ್ಲರಿಗೂ ಇದರ ಪ್ರಯೋಜನ ದೊರೆಯಲಿ ಎನ್ನುವ ಉದ್ದೇಶದಿಂದ ತುಳಸಿಯ ಕುರಿತ ಅನೇಕ ಪ್ರಯೋಜನವನ್ನು ತಿಳಿಸಿದ್ದಾರೆ. ತುಳಸಿಯ ದಳವನ್ನು ಬೆಳಗ್ಗಿನ ಪೇಯದೊಡನೆ ಸೇವಿಸಿದರೆ ದೇಹಕ್ಕೆ ಶಕ್ತಿ ದೊರೆಯುತ್ತದೆ. ಇದನ್ನು ಮನೆಯ ಮುಂದೆ ನೆಟ್ಟು ಪೂಜಿಸುವುದರಿಂದ ಯಾವುದೇ ರೀತಿಯ ವಿಷಯುಕ್ತ ಕ್ರಿಮಿಕೀಟಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ ಎನ್ನುವ ಉದ್ದೇಶದಿಂದ ನಮ್ಮ ಪೂರ್ವಜರು ಮನೆಯ ಅಂಗಳದಲ್ಲಿ ತುಳಸಿಯನ್ನು ನೆಟ್ಟು ಅದನ್ನು ಪೂಜಿಸುವ ಸಂಪ್ರದಾಯವನ್ನು ಬೆಳೆಸಿದ್ದಾರೆ.
ದೇವಾಲಯದಲ್ಲಿ ಘಂಟಾನಾದದ ಮಹತ್ವ

ಜನರು ದೇವಾಲಯದ ಮೂಲ ದೇವರ ದರ್ಶನಕ್ಕೆ ಹೋಗಿ ದೇವಾಲಯವನ್ನು ಪ್ರವೇಶಿಸಿದಾಗ ಘಂಟಾನಾದ ಮಾಡುವ ಪದ್ಧತಿ ಇದೆ. ಈ ಘಂಟಾನಾದದ ಶಬ್ದದಿಂದ ದುಷ್ಟ ಶಕ್ತಿಗಳು ದೂರವಾಗುವುದೆಂದು ಮತ್ತು ಘಂಟೆಯ ಸದ್ದಿನಿಂದ ದೇವರಿಗೆ ಆನಂದವಾಗುವುದು ಎಂದು ಆಗಮ ಶಾಸ್ತ್ರ ತಿಳಿಸುತ್ತದೆ. ವೈಜ್ಞಾನಿಕವಾಗಿ ಘಂಟೆಯ ಸದ್ದನ್ನು ಕೇಳಿದಾಗ ನಮ್ಮ ಮನಸ್ಸಿನಲ್ಲಿ ಇರುವ ಕೆಟ್ಟ ಭಾವನೆಗಳು ದೂರವಾಗಿ ಏಕಾಗ್ರಚಿತ್ತದಿಂದ ದೈನಂದಿನ ಕಾರ್ಯಗಳು ಸುಸೂತ್ರವಾಗಿ ನಡೆಸಲು ಸಹಾಯವಾಗುತ್ತದೆ.
ಕಿವಿಗಳನ್ನು ಚುಚ್ಚುವುದರ ಮಹತ್ವ

ಭಾರತೀಯ ಪದ್ಧತಿಯಲ್ಲಿ ಕಿವಿ ಚುಚ್ಚುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಭಾರತೀಯ ವೈದ್ಯರು ಮತ್ತು ಜ್ಞಾನಿಗಳು ಮನುಷ್ಯನ ಬುದ್ಧಿಯ ಹೆಚ್ಚಳಕ್ಕೆ ಕಿವಿ ಚುಚ್ಚುವುದು ಅಗತ್ಯವೆಂದು ಹೇಳಿದ್ದಾರೆ. ಕಿವಿ ಚುಚ್ಚುವುದರಿಂದ ಮನುಷ್ಯನ ಯೋಚನೆ ಮತ್ತು ವಿಮರ್ಶಣ ಶಕ್ತಿ ಹೆಚ್ಚುತ್ತದೆ ಎಂದು ತಿಳಿದು ಬಂದಿದೆ. ಅತಿ ಮಾತು ದೇಹದ ಶಕ್ತಿಯನ್ನು ಕುಂಠಿತ ಮಾಡುತ್ತದೆ. ಅಲ್ಲದೇ ಮಾತನಾಡುವಾಗ ಆಗುವ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಕಿವಿ ಚುಚ್ಚಿದ್ದಾಗ ಕಿವಿಯ ಧ್ವನಿ ತರಂಗಗಳನ್ನು, ಉತ್ತಮಪಡಿಸುತ್ತದೆ. ಪಾಶ್ಚಾತ್ಯರಲ್ಲೂ ಈ ಪದ್ಧತಿಗಳು ಇದ್ದರೂ ಅವರು ಅಂದಕ್ಕಾಗಿ ಕಿವಿ ಚುಚ್ಚಿಸಿಕೊಂಡು ಉಂಗುರ ಮತ್ತು ಬಳೆಗಳನ್ನು ಹಾಕಿಕೊಳ್ಳುತ್ತಾರೆ.
ಹೋಮ, ಹವನದ ಮಹತ್ವ

ಹೋಮ, ಹವನ, ಯಜ್ಞ, ಯಾಗ ಇವೆಲ್ಲವೂ ಅಗ್ನಿಯ ಆರಾಧನೆಯ ವಿವಿಧ ಹೆಸರುಗಳೇ ಆಗಿವೆ. ಅಗ್ನಿಯ ಆರಾಧನೆ ಅನೇಕ ಫಲಗಳನ್ನು ಕೊಡುವ ದೇವತೆಗಳ ಸಂಪ್ರೀತಿಯೇ ಇದರ ಮುಖ್ಯ ಉದ್ದೇಶ. ಯಜ್ಞದಲ್ಲಿ ಉಪಯೋಗಿಸುವ ತುಪ್ಪ ಹಾಲು ಮತ್ತು ವೃಕ್ಷಗಳಾದ ಅಶ್ವತ್ಥ, ಮುತ್ತುಗ, ಅತ್ತಿ ಮೊದಲಾದವುಗಳ ಸಮಿಧೆಗಳು (ಕಡ್ಡಿಗಳು) ಔಷಧೀಯ ಗುಣಗಳನ್ನು ಹೊಂದಿದ್ದು, ಶರೀರ ಮತ್ತು ವಾತಾವರಣದ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಯಜ್ಞವು ಪ್ರಾಕೃತಿಕ ವಸ್ತುಗಳ ಜೊತೆಗೆ ನಡೆಯುವುದರಿಂದ ಇದನ್ನು ಪ್ರಕೃತಿಯ ಆರಾಧನೆ ಎಂದೂ ಕರೆಯಲ್ಪಡುತ್ತದೆ.
ಕಾಲುಂಗುರ ಧರಿಸುವದು

ಸಾಮಾನ್ಯವಾಗಿ ಹೆಬ್ಬೆರಳಿನ ಪಕ್ಕದ ಕಿರುಬೆರಳಿಗೆ ಕಾಲಿನ ಉಂಗುವನ್ನು ಧರಿಸುತ್ತಾರೆ. ಈ ಬೆರಳಿನ ನರಗಳು ಶರೀರದ ಮೂತ್ರನಾಳಕ್ಕೆ ಮತ್ತು ಹೃದಯಕ್ಕೆ ಸಂಬಂಧ ಹೊಂದಿವೆ. ಇದರಿಂದ ಮೂತ್ರನಾಳದ ತೊಂದರೆ ನಿವಾರಣೆ ಆಗುವುದು, ಇದು ಮೂತ್ರನಾಳದ ರಕ್ತದ ಆರೋಗ್ಯದ ಜೊತೆಗೆ ರಕ್ತನಾಳದಿಂದ ಮೂತ್ರವನ್ನು ಕ್ರಮಬದ್ಧವಾಗಿ ಪ್ರತ್ಯೇಕಿಸುವ ಕೆಲಸ ಮಾಡುತ್ತದೆ.
ಊಟದ ಬಾಳೆಲೆಯ ಸುತ್ತ ನೀರನ್ನು ಚಿಮುಕಿಸುವುದು

ತಿನ್ನುವ ಮೊದಲು ತಮ್ಮ ತಟ್ಟೆಯ ಅಥವಾ ಬಾಳೆ ಎಲೆಯ ಸುತ್ತಲೂ ಮೂರು ಬಾರಿ ಪ್ರದಕ್ಷಿಣಾಕಾರದಲ್ಲಿ ನೀರನ್ನು ಚಿಮುಕಿಸುವ ಸಂಪ್ರದಾಯ ಜಾರಿಯಲ್ಲಿದೆ. ಈ ಅಭ್ಯಾಸಕ್ಕೆ ಸುದೀರ್ಘ ಇತಿಹಾಸ, ಆರೋಗ್ಯಕರ ಮತ್ತು ಪುಯೋಜನಕಾರಿ ಅರ್ಥವಿದ್ದು, ಈ ಪದ್ಧತಿಯನ್ನು ಚಿತ್ರಾಹುತಿ ಎನ್ನುತ್ತಾರೆ. ಈ ಕ್ರಮವನ್ನು ಬ್ರಾಹ್ಮಣರು ಪಾಲಿಸುತ್ತಾರೆ. ಆಹಾರದ ಸುತ್ತಲೂ ನೀರನ್ನು ಚಿಮುಕಿಸಿದಾಗ ಅದು ‘ದೇವರಿಗೆ ಅರ್ಪಿಸುವ ನೈವೇದ್ಯ ಎನ್ನುವ ಮತ್ತು ನಮಗೆ ತಿನ್ನಲು ಆಹಾರವನ್ನು ಒದಗಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುವುದು’ ಎಂಬ ಅರ್ಥವಿದೆ. ಈ ಪುರಾತನ ಆಚರಣೆಗೆ ತಾರ್ಕಿಕ ಕಾರಣವಿದ್ದು, ಇದನ್ನು ಪ್ರಾಚೀನ ಕಾಲದಲ್ಲಿ ಋಷಿಗಳು ಪ್ರಾರಂಭಿಸಿದರು. ಆಗ ಋಷಿಗಳು ತಮ್ಮ ಜೀವನದ ಬಹುಪಾಲು ಅರಣ್ಯ ಪ್ರದೇಶಗಳಲ್ಲಿ ಅಥವಾ ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿದ್ದು, ಅವರು ಕುಳಿತು ಬಾಳೆ ಎಲೆಗಳಲ್ಲಿ ಆಹಾರವನ್ನು ತಿನ್ನುತ್ತಿದ್ದರು. ಹೀಗೆ ಊಟ ಮಾಡುವಾಗ ಆಹಾರವು ನೆಲಕ್ಕೆ ತಾಗುವ ಸಾಧ್ಯತೆಯಿದ್ದು, ಅದು ಉತ್ತಮವಲ್ಲ. ಮಣ್ಣು ಅಥವಾ ಧೂಳಿನ ಕಣಗಳು ಊಟಕ್ಕೆ ತಾಗದಂತೆ ಎಲೆಯ ಸುತ್ತಲೂ ನೀರನ್ನು ಚಿಮುಕಿಸುತ್ತಿದ್ದರು. ಇದರಿಂದ ಧೂಳು ಬಾಳೆಲೆಗೆ ಹಾರುವುದಿಲ್ಲ. ರಾತ್ರಿಯ ವೇಳೆ ಊಟ ಮಾಡುವಾಗ ಬೆಳಕು ಕಡಿಮೆ ಇರುವುದರಿಂದ ಇರುವೆಗಳು ಅಥವಾ ಕೀಟಗಳು ಎಲೆಯ ಸುತ್ತ ಹಾಕಿರುವ ನೀರನ್ನು ದಾಟಲು ಅಥವಾ ನೀರಿನ ಮೇಲೆ ನಡೆಯಲು ಧೈರ್ಯ ಮಾಡುವುದಿಲ್ಲ ಎಂಬ ಕಾರಣಕ್ಕೂ ಈ ರೀತಿ ಮಾಡುತ್ತಿದ್ದರು. ಅದೇ ರೀತಿ ಭೋಜನವನ್ನು ಪ್ರಾರಂಭಿಸುವ ಮೊದಲು ದೇವರುಗಳಿಗೆ ಅರ್ಪಣೆಯಾಗಿ ಆಹಾರದ ಒಂದು ಭಾಗವನ್ನು ಪಕ್ಕಕ್ಕಿಡುತ್ತಾರೆ. ಇದರಿಂದ ಕೀಟಗಳು ತಿನ್ನುವ ಊಟಕ್ಕೆ ಬರುವ ಸಾಧ್ಯತೆ ಇರುವುದರಿಂದ ಒಂದು ತುತ್ತು ಅನ್ನವನ್ನು ಎಲೆಯ ಬದಿಯಲ್ಲಿ ಅವುಗಳಿಗಾಗಿ ಇಡಲಾಗುತ್ತದೆ.
ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಸಂಪ್ರದಾಯ ಮತ್ತು ಆಚರಣೆಗಳು ಏನೇ ಇದ್ದರೂ ಅವುಗಳ ಹಿಂದೆ ಒಂದು ಸ್ಪಷ್ಟವಾದ ಉದ್ದೇಶಗಳು ಇದ್ದದ್ದಂತೂ ಸ್ಪಷ್ಟ. ಈ ಉದ್ದೇಶಗಳ ಹಿಂದೆ ಒಂದು ನಿಖರವಾದ ವೈಜ್ಞಾನಿಕ ಕಾರಣಗಳು ಇದ್ದು, ಇದು ಆಧುನಿಕ ಜನರ ಜೀವನಕ್ಕೆ ಉತ್ತಮ ಅಡಿಪಾಯವಾಗಿದೆ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ – 574198
ದೂ: 9742884160