ಸಮಯದ ಮಹತ್ವ

ಕ್ರಾಂತಿಕಾರಿಗಳ ಸಾಲಿನಲ್ಲಿ ಚಾಪೆಕರ್ ಸಹೋದರರ ಹೆಸರು ಅಜರಾಮರವಾಗಿದೆ. ಈ ಮೂರು ಮಂದಿ ಚಾಪೆಕರ್ ಸಹೋದರರು ದೇಶಕ್ಕಾಗಿ ನಗುನಗುತ್ತಲೇ ನೇಣುಗಂಬಕ್ಕೆ ಏರಿದ್ದರು. ಇದೇ ರೀತಿ ಅದೊಂದು ದಿನ ದಾಮೋದರ ಚಾಪೆಕರ್ ಅವರನ್ನು ಸರವರಾ ಜೈಲಿನಲ್ಲಿ ನೇಣಿಗೇರಿಸಲು ಬ್ರಿಟೀಷರು ಕರೆದುಕೊಂಡು ಬಂದಿದ್ದರು. ದಾಮೋದರ ಚಾಪೆಕರರು ಮಾತ್ರ ಆ ದಿನ ನಗು ಮುಖದಿಂದ ಮತ್ತು ಆನಂದದಿಂದಿದ್ದರು. ಅವರ ಕೈಯಲ್ಲಿ ಭಗವದ್ಗೀತೆಯ ಪುಸ್ತಕವಿದ್ದು, ಅವರು ಭಗವದ್ಗೀತೆಯನ್ನು ಓದುತ್ತಲೇ ನೇಣಿನ ಶಿಕ್ಷೆಗಾಗಿ ಸಿದ್ಧರಾಗಿದ್ದರು.

ನೇಣುಗಂಬಕ್ಕೆ ಏರುವ ಸಮಯವಾದರೂ ಬ್ರಿಟೀಷ್ ಅಧಿಕಾರಿಗಳು ಅವರನ್ನು ನೇಣು ಕಂಬಕ್ಕೆ ಕರೆದೊಯ್ಯಲು ಬರಲೇ ಇಲ್ಲ. ಚಾಪೇಕರರು ಜೈಲಿನ ಕೋಣೆಯಲ್ಲಿ ಬ್ರಿಟೀಷ್ ಜೈಲು ಅಧಿಕಾರಿಗಳ ಆಗಮನಕ್ಕಾಗಿ ಕಾಯುತ್ತಾ ಇದ್ದರು.

ಕೊನೆಗೂ ಐದು ನಿಮಿಷ ತಡವಾಗಿ ಜೈಲಧಿಕಾರಿಗಳು ದಾಮೋದರ ಬಳಿಗೆ ಬಂದರು. ಬ್ರಿಟೀಷ್ ಜೈಲು ಅಧಿಕಾರಿಗಳ ಈ ಬೇಜವಾಬ್ದಾರಿಯನ್ನು ನೋಡಿದಂತಹ ದಾಮೋದರ ಚಾಪೇಕರ್ ಕೋಪಗೊಂಡರು. ಅವರು ಅತ್ಯಂತ ಚಾಣಾಕ್ಷತನದಿಂದ ಬ್ರಿಟೀಷ್ ಜೈಲು ಅಧಿಕಾರಿಗಳಿಗೆ ಅವರ ತಪ್ಪನ್ನು ತೋರಿಸಿಕೊಟ್ಟರು. ‘ನಾನು ಯಾವ ಸಮಾಜದಿಂದ ಬಂದಿದ್ದೇನೆಯೋ ಅಲ್ಲಿನ ಜನರೆಲ್ಲರೂ ಬ್ರಿಟೀಷರೆಂದರೆ ತುಂಬಾ ಕಟ್ಟುನಿಟ್ಟಾಗಿ ಸಮಯ ಪಾಲನೆಯನ್ನು ಮಾಡುತ್ತಾರೆ ಎಂದು ತಿಳಿದಿದ್ದಾರೆ. ಆದರೆ ಇಂದು ಆ ಮಾತು ಸುಳ್ಳು ಎಂದು ತಿಳಿಯಿತು’ ಎಂದು ಬ್ರಿಟೀಷ್ ಜೈಲು ಅಧಿಕಾರಿಗಳಿಗೆ ಹೇಳಿದರು.

ನೇಣಿನ ಕಂಬಕ್ಕೆ ಏರಲು ಸಿದ್ಧನಾಗಿ ನಿಂತಿದ್ದ ವ್ಯಕ್ತಿಯನ್ನೂ ಕಾಯುವಂತೆ ಮಾಡಿದ ಬ್ರಿಟೀಷ್ ಜೈಲಧಿಕಾರಿಗಳು ದಾಮೋದರ ಚಾಪೇಕರರ ಮುಂದೆ ನಾಚಿಕೆಯಿಂದ ತಲೆತಗ್ಗಿಸಿದರು.

ಸಮಯದ ಮಹತ್ವದ ಕುರಿತು ತಜ್ಞರು ಈ ರೀತಿಯಾಗಿ ಹೇಳುತ್ತಾರೆ, ಒಂದು ವರ್ಷದ ಮಹತ್ವವನ್ನು ತಿಳಿಯಲು ಪರೀಕ್ಷೆಯಲ್ಲಿ ಅನುತ್ತೀರ್ಣನಾದ ವಿದ್ಯಾರ್ಥಿಯನ್ನು ಕೇಳಬೇಕು. ಒಂದು ತಿಂಗಳ ಮಹತ್ವವನ್ನು ತಿಳಿಯಲು ಅವಧಿ ಪೂರ್ವದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿಯಲ್ಲಿ ಕೇಳಬೇಕು. ಒಂದು ವಾರದ ಮಹತ್ವವನ್ನು ತಿಳಿಯಲು ವಾರಪತ್ರಿಕೆಯ ಸಂಪಾದಕನನ್ನು ಕೇಳಬೇಕು. ಒಂದು ದಿನದ ಮಹತ್ವವನ್ನು ತಿಳಿಯಲು ದಿನಗೂಲಿಯನ್ನೇ ನಂಬಿರುವ ಕೂಲಿ ಕಾರ್ಮಿಕನನ್ನು ಕೇಳಬೇಕು. ಒಂದು ಗಂಟೆಯ ಮಹತ್ವ ತಿಳಿಯಲು ಆಪ್ತರಿಗಾಗಿ ಕಾಯುತ್ತಾ ಕುಳಿತಿರುವವರನ್ನು ಕೇಳಬೇಕು. ಒಂದು ನಿಮಿಷದ ಮಹತ್ವವನ್ನು ತಿಳಿಯಲು ರೈಲಿಗೆ ಟಿಕೆಟ್ ತೆಗೆದುಕೊಂಡು ರೈಲು ತಪ್ಪಿಸಿಕೊಂಡ ಪ್ರಯಾಣಿಕನನ್ನು ಕೇಳಬೇಕು. ಒಂದು ಸೆಕೆಂಡಿನ ಮಹತ್ವವನ್ನು ತಿಳಿಯಲು ಅಪಘಾತದಲ್ಲಿ ಕೂದಲೆಳೆಯಲ್ಲಿ ತಪ್ಪಿಸಿಕೊಂಡು ಬದುಕಿದವನನ್ನು ಕೇಳಬೇಕು, ಒಂದು ಮಿಲಿ ಸೆಕೆಂಡಿನ ಮಹತ್ವವನ್ನು ತಿಳಿಯಲು ಒಲಿಂಪಿಕ್ಸ್ ಕ್ರೀಡೆಯಲ್ಲಿ ಚಿನ್ನದ ಪದಕವನ್ನು ಕಳೆದುಕೊಂಡು ಬೆಳ್ಳಿ ಪದಕವನ್ನು ಪಡೆದ ಕ್ರೀಡಾಪಟುವನ್ನು ಕೇಳಬೇಕು ಎಂದಿದ್ದಾರೆ.

ಸಮಯದ ಮಹತ್ವವನ್ನು ಅರಿಯಲು ಈ ಇಷ್ಟು ಉದಾಹರಣೆಗಳು ಸಾಕು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post