ಸರದಿ ಮುರಿದ ಅಪ್ಪು

ಅಪ್ಪು ಇನ್ನಿಲ್ಲ…

ಬೆಳಿಗ್ಗೆ ಎಂದಿನಂತೆ ಜಿಮ್ಮಿನಲ್ಲಿ ಕಸರತ್ತು ಮಾಡುತಿದ್ದಾಗ ಮೊದಲನೇ ಲಘು ಹೃದಯಾಘಾತವಾಗಿದೆ ನಂತರ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಎರಡನೆಯ ಆಘಾತವಾಗಿದೆ. ಸುಮಾರು 11 30 ರ ವೇಳೆಗೆ ವಿಕ್ರಂ ಆಸ್ಪತ್ರೆಗೆ ದಾಖಲಾದ ಅಪ್ಪು ಮದ್ಯಾಹ್ನವಾಗುವಷ್ಟರಲ್ಲಿ ಹಿಂತಿರುಗಿ ಬಾರದ ಲೋಕಕ್ಕೆ ಹೋಗಿಬಿಟ್ಟ. ಅಭಿಮಾನಿಗಳ, ಹಿತೈಷಿಗಳ, ಪ್ರೀತಿಪಾತ್ರ ಮನೆಯವರು ಬೆಳಿಗ್ಗೆಯಿಂದ ಮಾಡಿದ ದೇವರಲ್ಲಿನ ಪ್ರಾರ್ಥನೆಗೆ ದೇವರು ಕಿವಿ ಕೊಡಲಿಲ್ಲ. ಕೊನೆಗೂ ಅಪ್ಪ ಅಮ್ಮನ ಬಳಿ ತನ್ನ ಸರದಿಯನ್ನು ಮುರಿದ ಅಪ್ಪು ಹೋಗೇಬಿಟ್ಟ.

1975 ಮಾರ್ಚ್ 17 ರಂದು ರಾಜಕುಮಾರ್ ದಂಪತಿಗಳಿಗೆ 5 ನೇ ಹಾಗು ಕಿರಿಯ ಮಗುವಾಗಿ ಜನಿಸಿದ “ಪುನೀತ್” ತನ್ನ ಒಂದನೇ ವಯಸ್ಸಿನಲ್ಲೇ ಅಪ್ಪನ ಜೊತೆ ‘ಪ್ರೇಮದ ಕಾಣಿಕೆ’ ಚಿತ್ರದಲ್ಲಿ’ ಕ್ಯಾಮೆರಾ ಎದುರಿಸಿದ್ದ. ಮುಂದೆ ಭಾಗ್ಯವಂತ ಚಿತ್ರದಲ್ಲಿ ಪ್ರಮುಖ ಬಾಲನಟನ ಪಾತ್ರ, ಎರಡು ನಕ್ಷತ್ರ ಚಿತ್ರದಲ್ಲಿ ದ್ವಿಪಾತ್ರ, ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಟನೆಯ ಜೊತೆಗೆ ಹಾಡನ್ನು ಸಹ ಹಾಡಿದ್ದ. ಬೆಟ್ಟದ ಹೂವು ಚಿತ್ರಕ್ಕೆ ಅತ್ಯುತ್ತಮ ಬಾಲ ನಟ ನ್ಯಾಷನಲ್ ಫಿಲಂ ಫೇರ್ ಪ್ರಶಸ್ತಿ ಹಾಗು ಇನ್ನಿತರ ಚಿತ್ರಗಳ ಅಭಿನಯಕ್ಕೆ ಚಿಕ್ಕ ವಯಸ್ಸಿನಲ್ಲೇ ಪ್ರಶಸ್ತಿಗಳನ್ನು ಬಾಚಿಕೊಂಡು ಬಿಟ್ಟಿದ್ದ. ಚಿಕ್ಕ ವಯಸ್ಸಿನಲ್ಲೇ ಅಪ್ಪು ಹೈಪರ್ ಆಕ್ಟಿವ್, ಅಪ್ಪನ ಜೊತೆ ಚುರುಕಿನ ಅಭಿನಯದ ಜೊತೆಗೆ ಸಾಹಸ ದೃಶ್ಯಗಳಲ್ಲೂ ಸಹ ಮಿಂಚ್ಚಿದ್ದ. ಚಲಿಸುವ ಮೋಡಗಳು, ಶಿವಮೆಚ್ಚಿದ ಕಣ್ಣಪ್ಪ, ಭೂಮಿಗೆ ಬಂದ ಭಗವಂತ, ಯಾರಿವನು, ವಸಂತ ಗೀತಾ, ಇನ್ನು ಮುಂತಾದ ಚಲನಚಿತ್ರಗಳಲ್ಲಿ ಬಾಲನಟನಾಗಿ ತನ್ನ ಸಿನಿಮಾ ಪ್ರಯಾಣವನ್ನು ಆರಂಭಿಸಿದ ಅಪ್ಪು ತನ್ನ ತಂದೆಯ ಜೊತೆ ‘ಪರುಶುರಾಮ್’ ಚಲನಚಿತ್ರದಲ್ಲಿ ಹುಡುಗನಾಗಿ ಕಾಣಿಸಿದ್ದೆ ಕೊನೆ ಅನಂತರ ಮತ್ತೆ ಚಿತ್ರರಂಗಕ್ಕೆ ಬಂದಿದ್ದು ನಾಯಕ ನಟನಾಗಿ “ಅಪ್ಪು’ ಚಿತ್ರದಲ್ಲಿ.

ಅಪ್ಪು ಚಲನಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ರನ್ನೇ ಡಾ. ರಾಜಕುಮಾರ್ ಕುಟುಂಬ ಚಿತ್ರ ನಿರ್ದೇಶಿಸಲು ಕೋರಿತ್ತು. ವಿಭಿನ್ನ ಪಾತ್ರವನ್ನೇ ರಚಿಸಿ ಪುನೀತ್ ರನ್ನು ಚಿತ್ರರಂಗಕ್ಕೆ ನಾಯಕನಟನಾಗಿ ಪರಿಚಿಸಿದ್ದಾಯಿತು. ‘ಅಪ್ಪು’ ಚಿತ್ರದಲ್ಲಿ ಪುನೀತ್ ತನ್ನ ಚುರುಕಾದ ನಟನೆ ಜೊತೆಗೆ ರಾಮಶೆಟ್ಟಿ ಯವರ ಸಾಹಸ ನಿರ್ದೇಶನದಲ್ಲಿ ಡ್ಯೂಪ್ ಇಲ್ಲದೆ ನೈಜ್ಯವಾಗಿ ಫೈಟ್ ದೃಶ್ಯಗಳಲ್ಲಿ ಭಾಗವಹಿಸಿ ಕನ್ನಡ ಚಿತ್ರರಸಿಕರ ಮನಸೆಳೆದ. ಮುಂದೆ ಅಭಿ, ವೀರಕನ್ನಡಿಗ, ಮೌರ್ಯ, ಆಕಾಶ್, ಅರಸು, ನಮ್ಮ ಬಸವ, ಅಜಯ್, ಇತ್ತೀಚಿನ ಯುವರತ್ನ ಹಾಗು ತೆರೆಗೆ ಸಿದ್ದವಾಗಿರುವ ಜೇಮ್ಸ್ ಚಿತ್ರಗಳು ಸೇರಿದಂತೆ ಒಟ್ಟು ಅಪ್ಪು ಅಭಿನಯಿಸಿದ ಚಿತ್ರಗಳು 49.

ಅಪ್ಪು ನಟನೆಯಷ್ಟೇ ಅಲ್ಲದೆ ಅದ್ಬುತ ಗಾಯಕ ಕೂಡ. ಗಾಯನದ ಬಗ್ಗೆ ಕೇಳಿದರೆ “ಅಯ್ಯೋ ಏನೋ ಹಾಡಕ್ ಬರುತ್ತೆ ಅಂತ ಕೇಳ್ತಾರೆ ನಾನ್ ಹಾಡ್ತೇನೆ ಅಷ್ಟೇ” ಎಂದು ಹೇಳಿ ಕೇಳಿದವರನ್ನು ಸುಮ್ಮನಾಗಿಸುತ್ತಿದ. ಆದರೆ ಎಷ್ಟೋ ಸಹನಟರ ಚಿತ್ರಗಳ ಹಾಡಿಗೆ ಅದ್ಭುತವಾಗಿ ದನಿಯಾಗಿದ್ದ. ಅಧ್ಯಕ್ಷ ಚಿತ್ರದಲ್ಲಿನ ಟೈಟಲ್ ಹಾಡಿನ ಕೊನೆಯಲ್ಲಿ ಉಸಿರಿಡಿದು ಧೀರ್ಘವಾಗಿ ಉಚ್ಚರಿಸುವ ಅಂತಿಮ ಸಾಲನ್ನು ಕೇಳಿದವರಿಗೆ ಪುನೀತ್ ಗಾಯನದ  ಪ್ರತಿಭೆ ಅರ್ಥವಾಗುತ್ತದೆ.

ಅಪ್ಪು PRK  ಎಂಬ ಹೆಸರಿನಲ್ಲಿ ಸ್ವಂತ ಬ್ಯಾನರ್ ತೆರೆದು ಯುವ ಪ್ರತಿಭೆಗಳಿಗೆ ಅವಕಾಶವನ್ನು ಸಹ ಕೊಟ್ಟಿದ್ದರು. 2017 ರಲ್ಲಿ ಶುರುವಾದ PRK ಸಂಸ್ಥೆ “ಕವಲುದಾರಿ, ಮಾಯಾಬಜಾರ್, ಲಾ, ಫ್ರೆಂಚ್ ಬಿರಿಯಾನಿ, ಚಿತ್ರಗಳನ್ನು ತೆರೆಗೆ ತಂದಿತು. PRK ಎಂದರೆ ಪುನೀತ್ ರಾಜ್ಕುಮಾರ್ ಅಥವಾ ಪಾರ್ವತಮ್ಮ ರಾಜಕುಮಾರ್ ಎರಡು ಹೆಸರಲ್ಲಿಯೂ ಸಹ ಕರೆಯಬಹು ದು. PRK ಬ್ಯಾನರ್ ನಲ್ಲಿ ಫ್ಯಾಮಿಲಿ ಪ್ಯಾಕ್, ಮ್ಯಾನ್ ಆ ದಿ ಮ್ಯಾಚ್, ಎಂಬ ಚಿತ್ರಗಳು ತೆರೆಗೆ ಸಿದ್ಧವಾಗಿದ್ದರೆ ಓ2, ಎಂಬ ಚಿತ್ರವು ಚಿತ್ರೀಕರಣದ ಹಂತದಲ್ಲಿದೆ.

ಏಷ್ಯಾ ನೆಟ್ ಸುವರ್ಣ ಸಹಯೋಗದಲ್ಲಿ ಬಿಗ್ ಸಿನರ್ಜಿ ನಿರ್ಮಿಸಲು ಯೋಜಿಸಿದ ‘ಕನ್ನಡದ ಕೋಟ್ಯಾಧಿಪತಿ’ ಸರಣಿಗೆ ಪುನೀತ್ ಒಪ್ಪಿ ಎರಡು ಸೀಸನ್ ಗಳನ್ನೂ ಯಶಸ್ವಿಯಾಗಿ ನೆಡೆಸಿಕೊಟ್ಟರು. ಹಿಂದಿಯಲ್ಲಿ ಅಮಿತಾಭ್ ಸ್ಪರ್ದಿಗಳನ್ನು ಕೂರಿಸಿ ಅವರ ಜೊತೆ ಆತ್ಮೀಯವಾಗಿ ಮಾತನಾಡಿ ಅವರನ್ನು ಕೊತೂಹಲಕ್ಕೆ, ರೋಚಕದ ಕ್ಷಣಗಳಿಗೆ ಸಾಕ್ಷಿಯಾಗಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರೆ ಇಲ್ಲಿ ಪುನೀತ್ ಸ್ಪರ್ದಿಗಳ ಜೊತೆ ತಮ್ಮ ಮನೆ ಮಗನ, ಗೆಳೆಯನ, ಸಹೋದರನ ಹಾಗೆ ಮಾತನಾಡುತ್ತ ಸ್ಪರ್ದಿಗಳಿಗೂ ವೀಕ್ಷಕರಿಗೂ ಆತ್ಮೀಯವಾಗಿ ವಾರದ ಸಂಪೂರ್ಣ ಒಂದು ಗಂಟೆ ಕಾರ್ಯಕ್ರಮವನ್ನು ಇನ್ನಿಲ್ಲದಂತೆ ಯಶಸ್ವಿಗೊಳಿಸಿದ್ದರು. ಸ್ಥಳೀಯ ಉತ್ಪನ್ನವಾದ KMF ನಂದಿನಿ ಗೆ ರಾಯಭಾರಿಯಾಗಿದ್ದರು.

ಅಪ್ಪು ಅಭಿನಯಿಸಿದ ಅಸ್ಟೂ ಚಿತ್ರಗಳು ಕುಟುಂಬ ಸಮೇತ ನೋಡುವಂತದ್ದು. ಹಿರಿಯರಿಗೆ ಪ್ರೀತಿಯ ಅಪ್ಪು ವಾದರೆ ಕಿರಿಯರಿಗೆ ಯುವಚೇತನ ಈ ಅಪ್ಪು. ಅವನ ಚಿತ್ರಗಳಲ್ಲಿ ಸಾಹಸ, ಹಾಸ್ಯ, ಸಂಗೀತ, ನೃತ್ಯ, ನಟನೆ ಎಲ್ಲವು ಇತ್ತು. ಅಪ್ಪುವಿನ ಚುರುಕಾದ ನಟನೆ ಡ್ಯೂಪ್ ಇಲ್ಲದೆ ನಟಿಸುತ್ತಿದ್ದ ಸಾಹಸ ದೃಶ್ಯಗಳನ್ನು ನೋಡಿದ ಎಂತಾ ಜಡ ಪ್ರೇಕ್ಷಕರಿಗೂ ಒಮ್ಮೆಲೇ ನವ ಚೇತನ ಬಂದಂತಾಗುತಿದದ್ದು ಅತಿಶಯವೇನಲ್ಲ. ಅಪ್ಪುವಿನ ಸ್ಪ್ರಿಂಗಿನಂತ ದೇಹ ನೃತ್ಯಕ್ಕೆ ಹೇಳಿಮಾಡಿಸಿದಂತಿತ್ತು. ಚಿತ್ರದಿಂದ ಚಿತ್ರಕ್ಕೆ ಹೊಸ ಹೊಸ ಹೆಜ್ಜೆಗಳನ್ನು ಹಾಕುತಿದ್ದ ಅಪ್ಪು ನೃತ್ಯದಲ್ಲಿ ಥೇಟ್ ತನ್ನ ಅಣ್ಣ ಶಿವಣ್ಣನಂತೆ. ಇನ್ನು ಜನರ ಜೊತೆ ಅವನು ನೆಡೆದುಕೊಳ್ಳುತಿದ್ದ ರೀತಿ ತನ್ನ ತಂದೆಯಂತೆಯೇ , ಸದಾ ಹಸನ್ಮುಖನಾಗಿ ಪ್ರೀತಿಯಿಂದ ಅಭಿಮಾನಿಗಳನ್ನು ಮಾತನಾಡಿಸುತ್ತಾ ಜನರನ್ನು ತನ್ನತ್ತ ಸೆಳೆದುಕೊಳ್ಳುವ ಮಾಂತ್ರಿಕ ಶಕ್ತಿ ಆ ಕಣ್ಣುಗಳಿಗಿತ್ತು. ಈಗ ತಂದೆಯಂತೆ ಮಗನ ಕಣ್ಣುಗಳು ಸಹ ಸಾವಿನ ಬಳಿಕ ಬೇರೊಬ್ಬ ಅಂಧರಿಗೆ ದಾನವಾಗಿದೆ.

ಶಿವಣ್ಣನ ಹೊಸ ಸಿನಿಮಾ ‘ಭಜರಂಗಿ-2’ ಪ್ರಿ-ರಿಲೀಸ್ ನಲ್ಲೂ ಭಾಗವಿಸಿದ್ದ ಅಪ್ಪು ಸಾವಿನ ಹಿಂದಿನ ರಾತ್ರಿಯೂ ಸಹ ಸಂಗೀತ ನಿರ್ದೇಶಕ ಗುರುಕಿರಣ್ ರವರ ಹುಟ್ಟುಹಬ್ಬದ ಸಮಾರಂಭದಲ್ಲಿ ಎಂದಿನ ಹಾಗೆ ಲವಲವಿಕೆಯಿಂದ ಭಾಗವಹಿಸಿದ್ದ. ಜಿಮ್ಮಿನಲ್ಲಿ ಅಭ್ಯಾಸ ಮಾಡುತಿದ್ದಾಗ ಸಾವಿನ ಮೊದಲ ನೆರಳು ಕಾಣಿಸಿಕೊಂಡು ಮೊದಲ ಹೃದಯಾಘಾತವಾಗಿದೆ, ಆ ದೇವರು ಹೃದಯಾಘಾತರಾದವರಿಗೆಂದು ಇಟ್ಟ ಆ ಗೋಲ್ಡನ್ ಟೈಮ್ ಕೂಡ ಅಪ್ಪುವಿಗೆ ಎರಡನೇ ಅವಕಾಶ ಕೊಡದಿರುವುದು ನಿಜಕ್ಕೂ ದುರದೃಷ್ಟಕರ. ಅಪ್ಪುವಿನ ಸಾವು ನಿಜಕ್ಕೂ ಅರಗಿಸಿಕೊಳ್ಳದಿರುವಂತದ್ದು ಸಾಯುವ ವಯಸ್ಸೇ ಅಲ್ಲ. ಸದಾ ಚಟುವಟಿಕೆಯಿಂದಿರುತ್ತಿದ್ದ ತಾನು ದೈಹಿಕವಾಗಿ ವ್ಯಾಯಾಮ ಮಾಡಿ ಆರೋಗ್ಯದಿಂದ ಇದ್ದು ಎಲ್ಲರಿಗೂ ಆರೋಗ್ಯದ ಬಗ್ಗೆ ಸಲಹೆಗಳನ್ನು ಕೊಡುತಿದ್ದ ಅಪ್ಪುವಿನ ಅಕಾಲ ಮರಣ ಅರಗಿಸಿಕೊಳ್ಳುವುದಾದರೂ ಹೇಗೆ?

ಮುಂದಿನ ಚಿತ್ರ ‘ಜೇಮ್ಸ್’ ತೆರೆಗೆ ಬರಲು ಸಿದ್ದವಾಗಿತ್ತು. ದ್ವಿತ್ವ ಚಿತ್ರೀಕರಣಕ್ಕೆ ಸಜ್ಜಾಗಿತ್ತು ಮತ್ತು ಇನ್ನು ಅನೇಕ ಸಿನಿಮಾಗಳಿಗೆ ಅಪ್ಪು ಸಹಿ ಹಾಕಿದ್ದರು. ಇನ್ನು ಅಪ್ಪು ತೆರೆ ಮೇಲೆ ಬರುವುದಿಲ್ಲ, ಅವನ ನಗು, ಅವನ ಸಾಹಸ, ಅವನ ಧ್ವನಿ ನಾವಿನ್ನು ಅವನ ಹಳೆಯ ಚಿತ್ರಗಳಲ್ಲಿ ನೋಡಬೇಕಷ್ಟೆ. ತನ್ನ ಒಂದನೇ ವಯಸ್ಸಿನಿಂದಲೂ ತೆರೆಯ ಮೇಲೆ ಬಂದು ಎಲ್ಲರೂ ನೋಡುವಂತ ಚಿತ್ರಗಳನ್ನೇ ಅಪ್ಪು ಕೊಟ್ಟಿದ್ದಾನೆ.      

ಶಂಕರ್ ನಾಗ್, ಸುನಿಲ್, ಚಿರಂಜೀವಿ ಸರ್ಜಾ, ದ್ರುವ, ಸಂಚಾರಿ ವಿಜಯ್, ಹೀಗೆ ಎಲ್ಲಾ ಪ್ರತಿಭೆಗಳನ್ನು ಬಾರದ ಲೋಕಕ್ಕೆ ಸೆಳೆಯುತ್ತಿರುವ ಆ ಕ್ರೂರ ವಿಧಿ ಇನ್ನಾದರೂ ತನ್ನ ಬಲಿಗಳನ್ನು ನಿಲ್ಲಿಸಲಿ. ಸಮಸ್ತ ಕನ್ನಡದ ಜನತೆಗೆ, ಅಪ್ಪುವಿನ ಅಭಿಮಾನಿಗಳಿಗೆ, ಅವನ ಮನೆಯವರಿಗೆ ‘ಅಪ್ಪು ಇನ್ನಿಲ್ಲಾ’ ಎಂಬ ವಾಸ್ತವದ ದುಃಖವನ್ನು ತಡೆದುಕೊಳ್ಳಲು ತಾಯಿ ಭುವನೇಶ್ವರಿ ಶಕ್ತಿ ಕೊಡಲಿ ಎಂದು ಸಾಹಿತ್ಯಮೈತ್ರಿ ತಂಡ ಬೇಡಿಕೊಳ್ಳುತ್ತದೆ.

ಕು ಶಿ ಚಂದ್ರಶೇಖರ್

Related post

2 Comments

  • 🙏👍 ತುಂಬಾ ಚೆನ್ನಾಗಿ ಬರೆದಿದ್ದೀರಿ

  • ತುಂಬಾ ವಿವರವಾಗಿ, ಅರ್ಥಪೂರ್ಣವಾಗಿ ಬರೆದಿದ್ದೀರಿ ಸರ್, ಧನ್ಯವಾದಗಳು

Leave a Reply

Your email address will not be published. Required fields are marked *