ಸರಿಗನ್ನಡ-ಸರಿಕನ್ನಡ

ಸರಿಗನ್ನಡ-ಸರಿಕನ್ನಡ

ಪುಸ್ತಕ : ಸರಿಗನ್ನಡ-ಸರಿಕನ್ನಡ
ಲೇಖಕರು: ಕೊಕ್ಕಡ ವೆಂಕಟ್ರಮಣ ಭಟ್,ಮಂಡ್ಯ
ಪ್ರಕಟಣೆ:ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನ (ರಿ),ಕಾಸರಗೋಡು
ಸಂಪರ್ಕ ಸಂಖ್ಯೆ: 9448344380,8073740237

ಭಾಷೆ ಎಂದರೆ ಅದು ಕೇವಲ ಸಂವಹನ ಮಾಧ್ಯಮವಷ್ಟೆ ಅಲ್ಲ,ಅದು ಕಲೆ,ಸಾಹಿತ್ಯ,ಶಿಕ್ಷಣ ಸಂಸ್ಕೃತಿಗಳ ಅಭಿವ್ಯಕ್ತಿ ಮಾಧ್ಯಮವೂ ಹೌದು. ಆಡುವ ಮಾತಿನಲ್ಲಿಯೂ ಬರಹ ರೂಪದ ಭಾಷೆಯಲ್ಲಿಯೂ ಭಿನ್ನತೆ ಇರುವುದು ಸಹಜವೇ!!!.

ಹಿರಿಯ ಲೇಖಕರು ,ಸಂಸ್ಕೃತ ವಿದ್ವಾಂಸರೂ ಆದ ಶ್ರೀಯುತ ಕೊಕ್ಕಡ ವೆಂಕಟ್ರಮಣ ಭಟ್ಟರ ಕೃತಿ ಸರಿಗನ್ನಡ-ಸರಿಕನ್ನಡ ನಮ್ಮ ಬಳಕೆಯಲ್ಲಿ ಇರುವ ಪದಗಳ ಕುರಿತಾಗಿ ಉಪಯುಕ್ತ ಮಾಹಿತಿಯನ್ನು ನೀಡುತ್ತದೆ.

ತಮ್ಮ ಸಂಪರ್ಕದಲ್ಲಿ ಇರುವವರೊಂದಿಗೆ ಪದಗಳ ಬಳಕೆ ಮತ್ತು ಪ್ರಯೋಗದ ರೀತಿಯನ್ನು ಚರ್ಚಿಸುತ್ತಾ ಮಾರ್ಗದರ್ಶನ ನೀಡುವ ಅಪರೂಪದ ವ್ಯಕ್ತಿ ಶ್ರೀಯುತ ಕೊಕ್ಕಡ ವೆಂಕಟ್ರಮಣ ಭಟ್ಟರು.

ನಾವು ಬಳಸುವ ಭಾಷೆಯ ಪದ ಪ್ರಯೋಗಗಳು ಸರಿಯಾಗಿವೇ!?
ಇಲ್ಲದಿದ್ದರೆ ಅದರ ಸರಿಯಾದ ಬಳಕೆ ಹೇಗೆ!?
ಭಾಷೆಯಲ್ಲಿನ ಪದಗಳ ಬಳಕೆಯ ಸ್ವರೂಪವು ಸರಿಯಾಗಿ ತಿಳಿಯದೆ ,ಕೇಳ್ಮೆಯಿಂದಲೇ ಆಗಬಹುದಾದ ಹಲವಾರು ಅಪಪ್ರಯೋಗಗಳನ್ನು ಲೇಖಕರಾದ ಶ್ರೀಯುತ ಕೊಕ್ಕಡ ವೆಂಕಟರಮಣ ಭಟ್ಟರು ಈ ಪುಸ್ತಕದಲ್ಲಿ ತೋರಿಸಿಕೊಟ್ಟಿದ್ದಾರೆ.ನಮ್ಮ ನಮ್ಮ ದೈನಂದಿನ ವ್ಯವಹಾರದಲ್ಲಿ ನಾವು ಬಳಸುವ ಪದಗಳಲ್ಲಿ ಹೇಗೆ ಅದರ ಬಳಕೆ ತಪ್ಪಾಗುತ್ತಿದೆ ಎಂಬುದನ್ನು ಇಲ್ಲಿ ತೋರಿಸಿದ್ದಾರೆ.

ಈ ಪುಸ್ತಕದಲ್ಲಿ ಒಟ್ಟಾರೆಯಾಗಿ 10 ಭಾಗಗಳಿದ್ದು ಮೊದಲ ಲೇಖನ ಸರಿ ತಪ್ಪು ಇದರಲ್ಲಿ ನಮ್ಮ ದೈನಂದಿನ ವ್ಯವಹಾರಗಳಲ್ಲಿ ನಾವು ಬಳಸುವ ಮುನ್ನೂರಕ್ಕೂ ಹೆಚ್ಚು ಪದಗಳನ್ನು ಪಟ್ಟಿ ಮಾಡಿ ಅವುಗಳ ಮೂಲ ಸ್ವರೂಪ ಉಚ್ಚಾರಣೆಯ ಸರಿಯಾದ ಕ್ರಮ ಇವುಗಳನ್ನು ಬಹಳ ವಿಸ್ತಾರವಾಗಿ ತಿಳಿಸಿಕೊಟ್ಟಿದ್ದಾರೆ.
ಪದವಿಶೇಷ ಎಂಬ ಭಾಗದಲ್ಲಿ ಕೆಲವು ವಿಶೇಷ ಪದಗಳನ್ನು ಪಟ್ಟಿ ಮಾಡಿ ಆ ಪದಗಳನ್ನು ಯಾವ ಯಾವ ಸಂದರ್ಭದಲ್ಲಿ ಹೇಗೆ ಬಳಸಬೇಕು ಎಂಬುದನ್ನು ವಿವರಿಸಿದ್ದಾರೆ.

ಅನುಸ್ವಾರ ಮತ್ತು ವಿಸರ್ಗದ ಕುರಿತು ಬೆಳಕು ಚೆಲ್ಲುವ ಲೇಖಕರು ಅವುಗಳ ಉಚ್ಚಾರಣೆ ಮತ್ತು ಬರೆವಣಿಗೆಯ ಸ್ವರೂಪವನ್ನು ತಿಳಿಸಿಕೊಡುತ್ತಾರೆ.
ಸಮಾಸ ಪದಗಳನ್ನು ಬಿಡಿಸಿ ಬರೆಯುವಾಗ ಆಗುವ ಲೋಪಗಳನ್ನು ನಮ್ಮ ಗಮನಕ್ಕೆ ತಂದಿದ್ದಾರೆ.
ದ್ವಿರುಕ್ತಿಯನ್ನು ವಿಭಜಿಸಬಾರದು ಮತ್ತು ಏಕೆ ಎಂಬ ಕಾರಣ ನೀಡುವ ಲೇಖಕರು ನುಡಿಗಟ್ಟುಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ.
ಭಾಷಾ ಬೆಳವಣಿಗೆಯ ಹಾದಿಯಲ್ಲಿ ಕಾಲೋಚಿತವಾಗಿ ಸೇರಿಕೊಳ್ಳುವ ಅನ್ಯದೇಶ್ಯ ಪದಗಳು ಭಾಷೆಯನ್ನು ಶ್ರೀಮಂತವನ್ನಾಗಿಸುತ್ತವೆ ಹಾಗೂ ಅಂತಹ ಎರವಲು ಪದಗಳನ್ನು ಉಪಯೋಗಿಸುವಲ್ಲಿ ಯಾವುದೇ ತೊಂದರೆ ಇರದು ಎಂಬ ಲೇಖಕರು ಅಭಿಪ್ರಾಯ ಪಡುತ್ತಾರೆ.

ಭಾಷೆಯನ್ನು ಸರಿಯಾಗಿ ಬಳಸಬೇಕೆಂಬ ಆಸಕ್ತಿ ಇರುವವರಿಗೆ ,ಭಾಷಾಭ್ಯಾಸಿಗಳಿಗೆ,ಬೋಧಕರಿಗೆ ಅತ್ಯಂತ ಉಪಯುಕ್ತವಾದ ಮಾಹಿತಿಪೂರ್ಣ ಕೈಪಿಡಿ ಇದಾಗಿದೆ.
ಪ್ರತಿಯೊಬ್ಬ ಕನ್ನಡಗಿನ ಮನೆಯಲ್ಲಿ ಇರಲೇಬೇಕಾದ ಪುಸ್ತಕ ಇದು.

ಇಂತಹ ಮತ್ತಷ್ಟು ವಿಚಾರಗಳನ್ನು ಒಳಗೊಂಡ ಪುಸ್ತಕಗಳು ಲೇಖಕರಿಂದ ಹೆಚ್ಚಾಗಿ ಬರಲಿ ಎಂಬ ಆಶಯದೊಂದಿಗೆ ಲೇಖಕರಿಗೆ ಶುಭ ಕೋರೋಣ.

ಸುನೀಲ್ ಹಳೆಯೂರು

Related post

Leave a Reply

Your email address will not be published. Required fields are marked *