ಸಾಗರದ ಬುದ್ಧಿಜೀವಿ ಆಕ್ಟೊಪಸ್
ಸಮುದ್ರದಾಳವೇ ಒಂದು ವಿಭಿನ್ನ ಪ್ರಪಂಚವಾಗಿದ್ದು ಇಲ್ಲಿ ಅಸಂಖ್ಯ ವೈವಿಧ್ಯಮಯ ಜೀವಿಗಳಿವೆ. ಅವುಗಳ ಪೈಕಿ ಬಹುತೇಕ ಜೀವಿಗಳ ಕುರಿತು ಮನುಷ್ಯನಿಗೆ ಕಿಂಚಿತ್ತೂ ತಿಳಿದಿಲ್ಲವೆನ್ನಬಹುದು. ಸಮುದ್ರದಾಳದಲ್ಲಿ ವಿವಿಧ ರೀತಿಯ ಮೀನುಗಳು, ಕಪ್ಪೆಚಿಪ್ಪು, ಹವಳಗಳು, ಏಡಿ, ತಿಮಿಂಗಿಲಗಳು, ನಕ್ಷತ್ರ ಮೀನುಗಳು ಸಾಮಾನ್ಯವಾಗಿ ಇರುತ್ತವೆ. ಇವುಗಳ ಜೊತೆಗೆ ಸಮುದ್ರದಲ್ಲಿ ಆಕ್ಟೋಪಸ್ ಎಂಬ ವಿಚಿತ್ರವಾದ ಜೀವಿಯು ವಾಸಿಸುತ್ತದೆ.
ಆಕ್ಟೊಪಸ್ ಇದರ ವೈಜ್ಞಾನಿಕ ಹೆಸರು ‘ಆಕ್ಟೊಪಸ್ ಆಕ್ಟೋಪೋಡಾ’ ಆಗಿದ್ದು, ಇದು ಎಂಟು ಕಾಲುಗಳುಳ್ಳ ‘ಸೆಫಾಲೋಪೋಡಾ’ ವರ್ಗಕ್ಕೆ ಸೇರಿದ ಜಲಚರವಾಗಿದೆ. ಆಕ್ಟೊಪಸ್‌ಗಳಿಗೆ ಎರಡು ಕಣ್ಣುಗಳು ಮತ್ತು ನಾಲ್ಕು ಜೊತೆ ಬಾಹುಗಳಿದ್ದು, ಇತರ ಸೆಫಾಲೋಪೋಡ್‌ಗಳಂತೆಯೇ ದ್ವಿಪಾರ್ಶ್ವ ಸಮಾನತೆ ಕಂಡುಬರುತ್ತದೆ. ಆಕ್ಟೊಪಸ್‌ಗೆ ಗಟ್ಟಿಯಾದ ಕೊಕ್ಕು ಇದ್ದು, ಅದರ ಬಾಯಿಯು ಅವುಗಳ ಬಾಹುಗಳ ಕೇಂದ್ರ ಭಾಗದಲ್ಲಿರುತ್ತದೆ. ಸಾಮಾನ್ಯವಾಗಿ ಎಲ್ಲಾ ಆಕ್ಟೊಪಸ್‌ಗಳಿಗೂ ದೇಹದ ಒಳಗಡೆ ಅಥವಾ ಹೊರಗಡೆ ಅಸ್ಥಿಪಂಜರವಿಲ್ಲದ ಕಾರಣ ಬಹಳ ಕಿರಿದಾದ ಜಾಗಗಳಲ್ಲೂ ಅವು ಸುಲಭವಾಗಿ ನುಸುಳಿಕೊಂಡು ಹೋಗಬಲ್ಲವು. ಆಕ್ಟೊಪಸ್‌ಗಳು ಹೆಚ್ಚು ಬುದ್ಧಿವಂತ ಜಲಚರಗಳಾಗಿದ್ದು, ಬಹುಶಃ ಅಕಶೇರುಕಗಳಲ್ಲಿಯೇ (ಅಸ್ಥಿಪಂಜರವಿಲ್ಲದ) ಅತ್ಯಂತ ಬುದ್ಧಿಯುಳ್ಳವುಗಳು. ಆಕ್ಟೋಪಸ್‌ಗಳು ಸಮುದ್ರದ ವಿವಿಧ ಪ್ರದೇಶಗಳಲ್ಲಿ, ಅದರಲ್ಲೂ ಮುಖ್ಯವಾಗಿ ಹವಳದ ಬಂಡೆಗಳ ಸಾಲುಗಳಲ್ಲಿ ವಾಸಿಸುತ್ತವೆ. ಆಕ್ಟೋಪಸ್‌ಗಳು ಮುಂದಕ್ಕೆ ಈಜುತ್ತಾ ಹೋದಂತೆ ತನ್ನ ಎಂಟು ತೋಳುಗಳನ್ನು ತನ್ನ ಹಿಂದೆ ಎಳೆದುಕೊಂಡು ಹೋಗುತ್ತದೆ. ಎಲ್ಲಾ ಆಕ್ಟೋಪಸ್‌ಗಳು ವಿಷಯುಕ್ತವಾದವುಗಳಲ್ಲ. ಆದರೆ ಕೇವಲ ನೀಲಿ ಉಂಗುರದ ಆಕ್ಟೋಪಸ್‌ಗಳು ಮಾನುಷ್ಯನ ಪ್ರಾಣಕ್ಕೆ ಘಾತುಕವಾದುವುಗಳು. ವಿಶಾಲಾರ್ಥದಲ್ಲಿ, ಸಮುದ್ರದಾಳದಲ್ಲಿ ಸುಮಾರು 200 ಮಾನ್ಯವಾದ ಆಕ್ಟೋಪಸ್ ತಳಿಗಳಿದ್ದು, ಇದು ಹೊರ ಜಗತ್ತಿಗೆ ತಿಳಿದಿರುವ ‘ಸಫೆಲೋಪಾಡ್’ ತಳಿಗಳ ಒಟ್ಟು ಸಂಖ್ಯೆಯ ಮೂರನೆಯ ಒಂದು ಭಾಗಕ್ಕಿಂತಲೂ ಹೆಚ್ಚು.
ಆಕ್ಟೋಪಸ್ ದೇಹರಚನೆ
ಆಹಾರವನ್ನು ಹೀರಿಕೊಳ್ಳಲು ಮತ್ತು ಬೇಟೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಲೆಂದು ವಿಶಿಷ್ಟವಾದ ಮತ್ತು ಅಗಲವಾದ ಬಟ್ಟಲುಗಳುಳ್ಳ ಮತ್ತು ಒಟ್ಟು ಎಂಟು ಉದ್ದನೆಯ ತೋಳುಗಳನ್ನು ಹೊಂದಿರುವುದು ಆಕ್ಟೋಪಸ್‌ಗಳ ವಿಶೇಷತೆಯಾಗಿದೆ. ಸ್ಕಿಡ್ ಮತ್ತು ಕಟಲ್ ಜಾತಿಯ ಮೀನುಗಳಲ್ಲಿ ಕಂಡುಬರುವಂತೆ ಒಂದು ಜೊತೆ ಆಹಾರವನ್ನು ತಿನ್ನಿಸುವ ಸ್ಪರ್ಶಾಂಗಗಳು (ತೋಳುಗಳು) ಇವುಗಳಿಗೂ ಇದ್ದು, ಆಕ್ಟೋಪಸ್‌ಗಳ ತೋಳುಗಳ ಗಾತ್ರದಲ್ಲಿ ವ್ಯತ್ಯಾಸಗಳಿವೆ. ಆಕ್ಟೋಪಸ್‌ಗಳು ಆಂತರಿಕವಾಗಿ ಅಸ್ಥಿಪಂಜರವಿಲ್ಲದ ಮತ್ತು ಬಹುತೇಕ ಮೃದುವಾದ ದೇಹಗಳನ್ನು ಹೊಂದಿದ್ದು, ಇವುಗಳಿಗೆ ದೇಹದ ಹೊರಮೈಯಲ್ಲಿ ಅಥವಾ ದೇಹದ ಒಳಮೈಯಲ್ಲಿ ರಕ್ಷಣಾ ಚಿಪ್ಪುಗಳು ಅಥವಾ ಎಲುಬುಗಳ ಲಕ್ಷಣವಿಲ್ಲ. ಗಿಳಿಗೆ ಇರುವಂತಹ ಕೊಕ್ಕನ್ನೇ ಹೋಲುವ ಒಂದು ಕೊಕ್ಕನ್ನು ಹೊಂದಿರುವ ಇವುಗಳಲ್ಲಿ ಈ ಕೊಕ್ಕೇ ದೇಹದಲ್ಲಿರುವ ಗಟ್ಟಿಯಾದ ಭಾಗವಾಗಿದೆ. ಈ ಕೊಕ್ಕು ನೀರೊಳಗಿರುವ ಬಂಡೆಗಳ ಮಧ್ಯೆ ಬಹಳ ಇಕ್ಕಟ್ಟಾದ ಸೀಳುಗಳ ಮೂಲಕ ತೂರಿಸಿಕೊಂಡು ಹೋಗಲೂ ಅವುಗಳಿಗೆ ಸಹಾಯಕವಾಗಿದೆ. ಈ ಕೊಕ್ಕು ಆಕ್ಟೋಪಸ್‌ಗಳಿಗೆ ‘ಮೊರೆಸ್’ ಅಥವಾ ಇನ್ನಿತರ ಶತ್ರು ಜಲಚರಗಳಿಂದ ರಕ್ಷಿಸಿಕೊಳ್ಳಲೂ ಸಹಾಯಕವಾಗಿದೆ.
ಆಕ್ಟೋಪಸ್‌ಗಳು ಅತ್ಯಂತ ಕಡಿಮೆ ಆಯಸ್ಸನ್ನು ಹೊಂದಿದ್ದು, ಕೆಲವು ತಳಿಗಳು ಕೇವಲ ಆರು ತಿಂಗಳಷ್ಟು ಕಡಿಮೆ ಆಯಸ್ಸನ್ನು ಹೊಂದಿರುತ್ತವೆ. ಉತ್ತರ ಫೆಸಿಫಿಕ್ ಸಾಗರದಲ್ಲಿ ಕಂಡುಬರುವ ದೈತ್ಯ ಗಾತ್ರದ ಆಕ್ಟೋಪಸ್‌ಗಳು ಸೂಕ್ತ ಪರಿಸರದಲ್ಲಿ ಐದು ವರ್ಷಗಳ ಕಾಲವೂ ಬದುಕಿರುತ್ತವೆ. ಆದರೂ ಇವುಗಳಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆಯೇ ಇವುಗಳ ಸಾವಿಗೆ ಕಾರಣವಾಗಿದೆ. ಗಂಡು ಮತ್ತು ಹೆಣ್ಣು ಆಕ್ಟೋಪಸ್‌ಗಳ ಮಿಲನದ ನಂತರ ಕೆಲವು ತಿಂಗಳಷ್ಟೇ ಗಂಡು ಆಕ್ಟೋಪಸ್ ಬದುಕಿರುತ್ತದೆ. ಹೆಣ್ಣು ಅಕ್ಟೋಪಸ್ ಮೊಟ್ಟೆಯಿಟ್ಟು, ಅವುಗಳು ಮರಿಗಳಾದ ಕೆಲವೇ ಸಮಯದಲ್ಲಿ ಸಾಯುತ್ತದೆ. ಮರಿಯಾಗದೇ ಉಳಿದಿರುವ ಮೊಟ್ಟೆಗಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಒಂದು ತಿಂಗಳ ಅವಧಿಯಲ್ಲಿ ಇವುಗಳು ಆಹಾರ ಸೇವಿಸುವುದಿಲ್ಲವಾದರೂ ಇವುಗಳು ಹಸಿವಿನಿಂದ ಸಾಯುವುದಿಲ್ಲ. ಬದಲಿಗೆ ಈ ಅವಧಿಯಲ್ಲಿ ಇವುಗಳ ಕಣ್ಣಿನ ಆಂತರಿಕ ಗ್ರಂಥಿಗಳ ರಸಸ್ರವಿಕೆಯಂತಹ ಅನುವಂಶೀಯ ಪ್ರಕ್ರಿಯೆಯಿಂದ ಇವು ಸಾಯುತ್ತವೆ. ಒಂದು ವೇಳೆ ಈ ಕಣ್ಣಿನ ಗ್ರಂಥಿಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕಿದರೆ ಆ ಹೆಣ್ಣು ಆಕ್ಟೋಪಸ್ ವಂಶಾಭಿವೃದ್ಧಿ ಆದನಂತರವೂ ಒಂದಷ್ಟು ತಿಂಗಳುಗಳ ಕಾಲ ಬದುಕಿರುತ್ತವೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.
ಆಕ್ಟೋಪಸ್‌ಗಳು ಒಟ್ಟು ಮೂರು ಹೃದಯಗಳನ್ನು ಹೊಂದಿದ್ದು, ಇವುಗಳ ಎರಡು ಹೃದಯಗಳು ಕಿವಿರುಗಳ ಮೂಲಕ ರಕ್ತವನ್ನು ಪಂಪ್ ಮಾಡಿದರೆ, ಮೂರನೆಯದು ದೇಹದ ಮುಖಾಂತರ ರಕ್ತವನ್ನು ಪಂಪ್ ಮಾಡುತ್ತದೆ. ಆಕ್ಟೋಪಸ್‌ನ ರಕ್ತವು ತಾಮ್ರದ ಅಂಶಗಳಿಂದ ಸಮೃದ್ಧವಾದ ಪ್ರೋಟಿನ್ ಹೊಮೊಸೈನಿನ್ ಕೂಡಿದೆ. ಇವುಗಳು ಹೀಮೋಗ್ಲೋಬಿನ್‌ನ್ನು ಕೆಂಪು ರಕ್ತ ಕಣದೊಳಗೆ ತೆಗೆದುಕೊಂಡು ಹೋಗದೇ ಇವುಗಳಲ್ಲಿ ಹೀಮೋಗ್ಲೋಬಿನ್ ಹೆಮೊಸೈನಿನ್ ಪ್ಲಾಸ್ಮಾದಲ್ಲಿಯೇ ಕರಗಿರುವುದರಿಂದ ಇವುಗಳ ರಕ್ತವು ನೀಲಿ ಬಣ್ಣವನ್ನು ಹೊಂದಿರುತ್ತದೆ. ಆಕ್ಟೋಪಸ್‌ಗಳು ಅವುಗಳ ಜಾಲನಳಿಗೆಗಳ ಟೊಳ್ಳಾದ ಮಾರ್ಗದೊಳಗೆ ನೀರನ್ನು ಎಳೆದುಕೊಂಡು ಅದು ಕಿವಿರುಗಳ ಮುಖಾಂತರ ಹಾದು ಹೋಗುತ್ತದೆ. ಚಿಪ್ಪುಳ್ಳ ಪ್ರಾಣಿಗಳಂತೆ, ಆಕ್ಟೋಪಸ್‌ಗಳ ಕಿವಿರುಗಳು ಮತ್ತು ನಾಳಗಳ ಶಾಖೆಗಳನ್ನು ಹೊರ ಅಥವಾ ಒಳ ದೇಹದ ಮೇಲ್ಮೈಯಲ್ಲಿ ಹೊಂದಿವೆ.
ಅದ್ಭುತ ಬುದ್ಧಿ ಶಕ್ತಿ
ಆಕ್ಟೋಪಸ್‌ಗಳು ಅಕಶೇರುಕಗಳ (ಅಸ್ಥಿಪಂಜರವಿಲ್ಲದ) ಯಾವುದೇ ಇತರ ವರ್ಗಗಳಿಗೆ ಹೋಲಿಸಿದಾಗ ಹೆಚ್ಚು ಚುರುಕು ಬುದ್ಧಿಯನ್ನು ಹೊಂದಿವೆ. ಆಕ್ಟೋಪಸ್‌ಗಳ ಬುದ್ಧಿವಂತಿಗೆ ಮತ್ತು ಕಲಿಯುವ ಸಾಮರ್ಥ್ಯವು ಜೀವಶಾಸ್ತ್ರಜ್ಞ ರನ್ನು ಚಕಿತಗೊಳಿಸಿದ್ದು, ಇವುಗಳು ದೀರ್ಘಕಾಲಿಕ ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ ಎಂದು ಚಕ್ರವ್ಯೂಹ ಮತ್ತು ಸಮಸ್ಯೆ ಬಿಡಿಸುವ ಪ್ರಯೋಗಗಳು ಸಾಬೀತುಪಡಿಸಿವೆ. ಇವುಗಳ ಆಯಸ್ಸು ಅವುಗಳು ಕಲಿಯುವ ಪ್ರಮಾಣದ ಮೇಲೆ ಮಿತಿಯನ್ನು ಹೇರುತ್ತದೆ. ಇವುಗಳ ಹುಟ್ಟುಗುಣಗಳು ಮತ್ತು ವರ್ತನೆಗಳು ಸ್ವತಂತ್ರವಾಗಿಯೇ ಇವುಗಳಿಗೆ ಬರುತ್ತವೆ ಎಂಬುದು ಅಧ್ಯಯನಗಳು ಖಚಿತಪಡಿಸಿವೆ. ಮರಿ ಆಕ್ಟೋಪಸ್‌ಗಳು ತಮ್ಮ ತಂದೆತಾಯಿಗಳ ಜೊತೆ ಹೆಚ್ಚು ಸಂಪರ್ಕವನ್ನು ಹೊಂದಿರದ ಕಾರಣದಿಂದ ಇವುಗಳು ತಮ್ಮ ತಂದೆ ತಾಯಿಯಿಂದ ಯಾವುದೇ ನಡವಳಿಕೆಗಳನ್ನು ಕಲಿಯುವುದಿಲ್ಲ.
ಆಕ್ಟೋಪಸ್‌ಗಳು ತೊಡಕಾದ ನರಮಂಡಲ ವ್ಯವಸ್ಥೆಯನ್ನು ಹೊಂದಿದ್ದು, ಅದರ ಸ್ವಲ್ಪ ಭಾಗವಷ್ಟೇ ಮೆದುಳಿನಲ್ಲಿ ಕೇಂದ್ರೀಕರಿಸಲ್ಪಟ್ಟಿದೆ. ಹೆಚ್ಚು ಸ್ವಾಯತ್ತತ್ತೆಯನ್ನು ಹೊಂದಿರುವ ಇವುಗಳ ತೋಳುಗಳ ನರತಂತುಗಳಲ್ಲಿ ಆಕ್ಟೋಪಸ್‌ನ ಮೂರನೆ ಎರಡು ಭಾಗದಷ್ಟು ನರಕೋಶಗಳು ಕಂಡುಬರುತ್ತವೆ. ನರಮಂಡಲದ ಕನಿಷ್ಟ ಮೂರು ವಿವಿಧ ಹಂತಗಳ ಮೇಲೆ ಕಾಣಿಸುವ ವಿಶಾಲ ಬಗೆಯ ಸಂಕೀರ್ಣ ಪ್ರತಿಕ್ರಿಯಾತ್ಮಕ ಕ್ರಿಯೆಗಳನ್ನು ಆಕ್ಟೋಪಸ್‌ನ ತೋಳುಗಳು ತೋರಿಸುತ್ತವೆ.
ವಿವಿಧ ಆಕಾರಗಳು ಮತ್ತು ಮಾದರಿಗಳ ನಡುವಿನ ವ್ಯತ್ಯಾಸಗಳನ್ನು ಗುರುತಿಸಲು ಆಕ್ಟೋಪಸ್‌ಗಳನ್ನು ಸುಲಭವಾಗಿ ತರಬೇತುಗೊಳಿಸಬಹುದು. ಆಕ್ಟೋಪಸ್‌ಗಳು ಜಲಚರ ಸಂಗ್ರಹಾಲಯದಲ್ಲಿ ಬಾಟಲಿಗಳು ಅಥವಾ ಆಟದ ಸಾಮಾನುಗಳನ್ನು ದುಂಡಗಿನ ನೀರಿನ ಪ್ರವಾಹದಲ್ಲಿ ಬಿಡುಗೊಡೆಳಿಸಿ, ನಂತರ ಅವುಗಳನ್ನು ಹಿಡಿಯುವುದನ್ನು ಮಾಡುತ್ತವೆ. ಇವುಗಳು ತಾವಿರುವ ಆಕ್ವೇರಿಯಂಗಳಿಂದ ಹೊರಗೆ ಬಂದು ಆಹಾರ ಹುಡುಕಲು ಬೇರೆ ಅಕ್ವೇರಿಯಂಗಳಿಗೂ ಹೋಗುತ್ತವೆ. ಅವುಗಳು ಮೀನುಗಳನ್ನು ಹಿಡಿಯುವ ದೋಣಿಗಳನ್ನೂ ಏರಿ ಹೋಗಿ ಅಲ್ಲಿಟ್ಟಿರುವ ಡಬ್ಬಗಳನ್ನು ತೆರೆದು ಏಡಿಗಳನ್ನು ತಿನ್ನಬಲ್ಲವು. ಅರಿವಳಿಕೆ ನೀಡದೇ ಕೆಲವೊಂದು ಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆಯಾದರೂ ಆಕ್ಟೋಪಸ್‌ಗಳಿಗೆ (ಬೆನ್ನುಮೂಳೆ ಇಲ್ಲದಿದ್ದರೂ) ಅರಿವಳಿಕೆ ನೀಡಿಯೇ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಇವುಗಳು ಮನುಷ್ಯ ಎಸೆದಿರುವ ತೆಂಗಿನ ಚಿಪ್ಪುಗಳನ್ನು ತೆಗೆದುಕೊಂಡು ಬಂದು ಅವುಗಳ ನಾರುಗಳನ್ನು ಬಿಡಿಸಿ ನಂತರ ಅವುಗಳನ್ನು ತಮ್ಮ ಗೂಡು ಕಟ್ಟಲು ಮತ್ತೆ ಜೋಡಿಸುತ್ತವೆ ಎನ್ನುವುದು ಸಂಶೋಧನೆಗಳಲ್ಲಿ ದಾಖಲಾಗಿದೆ. ಈ ಶೋಧನೆಯನ್ನು ‘ಕರೆಂಟ್ ಬಯಾಲಜಿ’ ಎನ್ನುವ ಸಂಚಿಕೆಯಲ್ಲಿ ದಾಖಲಿಸಲಾಗಿದೆ.
ಸ್ವಯಂ ರಕ್ಷಣೆಯ ತಂತ್ರಗಳು
ಆಕ್ಟೋಪಸ್‌ಗಳು ತನ್ನನ್ನು ತಾನು ವೈರಿಗಳಿಂದ ರಕ್ಷಿಸಿಕೊಳ್ಳಲು ಹಲವಾರು ಸ್ವಯಂ ರಕ್ಷಣೆಯ ತಂತ್ರಗಳನ್ನು ಬಳಸುತ್ತವೆ. ತಾನು ಪೂರ್ತಿಯಾಗಿ ಯಾರಿಗೂ ಕಾಣಿಸಿಕೊಳ್ಳಬಾರದು, ಇಲ್ಲವೇ ತನ್ನನ್ನು ಆಕ್ಟೋಪಸ್ ಎಂದು ಗುರುತಿಸಬಾರದು ಎನ್ನುವ ಕಾರಣಕ್ಕಾಗಿ ಇವುಗಳು ಅಡಗಿಕೊಳ್ಳುತ್ತವೆ. ಆಕ್ಟೋಪಸ್‌ಗಳನ್ನು ಅದರ ಶತ್ರುಗಳು ನೋಡಿದರೆ ತಕ್ಷಣ ಅವುಗಳು ವೇಗವಾಗಿ ಓಡಿ ಪಾರಾಗುತ್ತವೆ. ಶತ್ರುಗಳಿಂದ ಇವುಗಳು ಪಾರಾಗಲು ತಮ್ಮ ಮಸಿಕೋಶಗಳನ್ನು ಬಳಸಿಕೊಂಡು ತಮ್ಮ ಬಣ್ಣವನ್ನು ತಕ್ಷಣ ಬದಲಾಯಿಸಿಕೊಂಡು ತಪ್ಪಿಸಿಕೊಳ್ಳುತ್ತವೆ. ಇನ್ನು ಕೆಲವೊಮ್ಮೆ ಶತ್ರುಗಳಿಂದ ತಪ್ಪಿಸಿಕೊಳ್ಳಲು ಇವುಗಳು ವೇಗವಾಗಿ ತನ್ನ ಅವಯವಗಳನ್ನು ತಿರುಗಿಸುತ್ತವೆ. ಕೆಲವು ಆಕ್ಟೋಪಸ್‌ಗಳು ವೈರಿಗಳಿಂದ ಮರೆಮಾಚಿಕೊಳ್ಳಲು ಗಾಢವಾದ ಕಪ್ಪು ಬಣ್ಣವನ್ನು ದಟ್ಟವಾದ ಮೋಡದಂತೆ ಹೊರಕ್ಕೆ ಸೂಸುತ್ತದೆ. ಈ ಬಣ್ಣದಲ್ಲಿ ಮೆಲನಿನ್ ಎಂಬ ರಾಸಾಯನಿಕದ ಅಂಶವಿದ್ದು, ಇದು ಮನುಷ್ಯನ ಕೂದಲಿಗೆ ಮತ್ತು ಚರ್ಮಕ್ಕೆ ಬಣ್ಣವನ್ನು ನೀಡುವ ಅಂಶವೇ ಆಗಿದೆ. ಈ ಬಣ್ಣದ ವಾಸನೆಯು ಶತ್ರುಗಳ ಕಣ್ಣಿನ ಮೇಲೆ ದುಷ್ಪರಿಣಾಮವನ್ನು ಬೀರುವುದರಿಂದ ಶತ್ರುಗಳು ಇವುಗಳ ಸಮೀಪವೂ ಸುಳಿಯುವುದಿಲ್ಲ. ಈ ಬಣ್ಣವನ್ನು ಹೊರಸೂಸಿ ಆಕ್ಟೋಪಸ್‌ಗಳು ತಮ್ಮನ್ನು ಬೇಟೆಯಾಡಲು ಬರುವ ಶಾರ್ಕ್ಗಳಿಂದಲೂ ತಪ್ಪಿಸಿಕೊಳ್ಳುತ್ತವೆ. ಇವುಗಳು ಹೊರಸೂಸುವ ಬಣ್ಣದ ಮೋಡಗಳು ತಮ್ಮ ದೇಹದ ಬಣ್ಣವನ್ನು ಬದಲಾಯಿಸಿಕೊಳ್ಳಲು ಸಹಾಯಕವಾಗಿದ್ದು, ಇದರಿಂದ ವೈರಿಗಳು ಮೋಸ ಹೋಗಿ ಶತ್ರುಗಳು ಇವುಗಳನ್ನು ಆಕ್ರಮಿಸುವುದಿಲ್ಲ.
ಇವುಗಳ ಹೊರಚರ್ಮದ ಪಾರದರ್ಶಕಗುಣ ಮತ್ತು ಇವುಗಳ ವಿಶೇಷ ಚರ್ಮ ಕೋಶಗಳ ಕಾರಣದಿಂದ ಆಕ್ಟೋಪಸ್ ತನ್ನ ಬಣ್ಣವನ್ನು ಬದಲಾಯಿಸಲು ಸಹಾಯಕವಾಗಿದೆ. ಇವುಗಳು ಹಳದಿ, ಕೇಸರಿ, ಕೆಂಪು, ಕಂದು, ಅಥವಾ ಕಪ್ಪು ಬಣ್ಣಗಳನ್ನು ಹೊರಸೂಸುತ್ತವೆ. ಹೆಚ್ಚಿನ ತಳಿಗಳು ಇವುಗಳಲ್ಲಿ ಮೂರು ಬಣ್ಣಗಳನ್ನು ಹೊಂದಿದ್ದರೆ, ಕೆಲವು ಎರಡು ಅಥವಾ ನಾಲ್ಕು ಬಣ್ಣಗಳನ್ನು ಹೊರಸೂಸುತ್ತವೆ. ಇವುಗಳ ಬಣ್ಣ ಬದಲಾಯಿಸುವ ಸಾಮರ್ಥ್ಯವು ಇತರೆ ಆಕ್ಟೋಪಸ್‌ಗಳನ್ನು ಎಚ್ಚರಿಸಲು ಮತ್ತು ಸಂಪರ್ಕಿಸಲೂ ಉಪಯೋಗಿಸುತ್ತವೆ. ಆಕ್ಟೋಪಸ್‌ಗಳನ್ನು ಕೆರಳಿಸಿದಾಗ, ಬಹುವಾಗಿ ವಿಷಪೂರಿತವಾದ ನೀಲಿ ಉಂಗುರಗಳ ಸಹಿತ ಕಡುಹಳದಿ ಬಣ್ಣಕ್ಕೆ ತಿರುಗುತ್ತದೆ. ತಮ್ಮ ಬಣ್ಣ ಬದಲಾಯಿಸಲು ಮತ್ತು ತಮ್ಮ ಜಾಲನಳಿಗೆಯ ರಚನೆಯನ್ನು ಬದಲಾಯಿಸಲು ಚರ್ಮದಲ್ಲಿನ ಮಾಂಸ ಖಂಡಗಳನ್ನು ಆಕ್ಟೋಪಸ್‌ಗಳು ಉಪಯೋಗಿಸುತ್ತವೆ. ಆಕ್ಟೋಪಸ್‌ಗಳ ಜಾಲನಳಿಗೆಯು ಸಮುದ್ರ ಪಾಚಿಯ ಚೂಪಾದ ಮೊಳೆಯ ಬಾಹ್ಯ ರಚನೆಯಂತೆ ಮತ್ತು ದೊಡ್ಡ ಬಂಡೆಯ ಒರಟಾದ ಉಬ್ಬು ತಗ್ಗಿನ ರಚನೆಯಂತೆ ಕಾಣಿಸುವುದರಿಂದ ಶತ್ರುಗಳು ಇವುಗಳನ್ನು ಗುರುತಿಸಲು ವಿಫಲವಾಗುತ್ತವೆ. ಇವುಗಳು ಶತ್ರುಗಳಿಂದ ಆಕ್ರಮಣಕ್ಕೆ ಒಳಗಾದಾಗ ಸ್ಕಿಂಕ್ಸ್ ಮತ್ತು ಹಲ್ಲಿಗಳು ತಮ್ಮ ಬಾಲಗಳನ್ನು ಕಳಚುವಂತೆಯೇ ತಮ್ಮ ತೋಳಿನ ದೇಹರಚನೆಯನ್ನು ಕಳಚುವ ವಿಭಿನ್ನ ಗುಣವನ್ನು ಹೊಂದಿವೆ.
ಸಂತಾನೋತ್ಪತ್ತಿ, ಸಂವೇದನೆ, ಮನುಷ್ಯರೊಂದಿಗಿನ ಬಾಂಧವ್ಯ, ಇತರೆ ಸಂಗತಿಗಳು ಮುಂದಿನ ಸಂಚಿಕೆಯಲ್ಲಿ….
ಮುಂದುವರೆಯುವುದು….
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160