ಸಾಗರದ ಬುದ್ಧಿಜೀವಿ ಆಕ್ಟೊಪಸ್ – ಭಾಗ 2

ಸಾಗರದ ಬುದ್ಧಿಜೀವಿ ಆಕ್ಟೊಪಸ್

ಹಿಂದಿನ ಸಂಚಿಕೆಯಿಂದ….

ಕಳೆದ ಸಂಚಿಕೆಯಲ್ಲಿ ಆಕ್ಟೋಪಸ್ ನ ದೇಹ ರಚನೆ, ಅದರ ಬುದ್ಧಿ ಶಕ್ತಿ, ಸ್ವಯಂ ರಕ್ಷಣೆಯ ತಂತ್ರಗಳನ್ನು ಓದಿದ್ದೀರಿ. ಇದರ ಮುಂದಿನ ವಿವರಗಳು ನಿಮಗಾಗಿ.

ಆಕ್ಟೋಪಸ್ ಶಬ್ದದ ನಿರ್ದಿಷ್ಟ ಅರ್ಥ

ಆಕ್ಟೋಪಸ್ ಎಂಬ ಶಬ್ದವು ‘ಒಕ್ಟಾಪಸ್’ ಎಂಬ ಗ್ರೀಕ್ ಶಬ್ದದಿಂದ ಬಂದಿದ್ದು, ಇದರರ್ಥ ‘ಅಷ್ಟಪಾದಿ’ ಆಗಿದ್ದು, ಇದರ ಬಹುವಚನ ರೂಪವೇ ‘ಆಕ್ಟೋಪಸ್’. ಆಕ್ಸ್ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ ಆಕ್ಟೋಪಸ್ ಶಬ್ದವು ‘ಆಕ್ಟೋಪಿ’ ಮತ್ತು ‘ಆಕ್ಟೋಪೊಡ್’ ಪದಗಳಿಂದ ಬಂದಿದ್ದೆಂದು ಹೇಳಲಾಗಿದೆ. ಅದರ ಪ್ರಕಾರ ‘ಆಕ್ಟೋಪೊಡ್’ ಎಂದರೆ ‘ಅಪರೂಪ’ ಎಂದೂ, ‘ಆಕ್ಟೋಪಿ’ ಎಂದರೆ ‘ಗ್ರಹಣ ಶಕ್ತಿಯ ಮೂಲ’ ಎಂಬ ಅರ್ಥವಿದೆ.

ಸಂತಾನೋತ್ಪತ್ತಿ ವಿಧಾನ

ಆಕ್ಟೋಪಸ್‌ಗಳು ಸಂತಾನೋತ್ಪತ್ತಿಯನ್ನು ಮಾಡುವಾಗ ಗಂಡು ಆಕ್ಟೋಪಸ್‌ಗಳು ಹೆಣ್ಣು ಆಕ್ಟೋಪಸ್‌ಗಳ ಜಾಲನಳಿಗೆಯ ಟೊಳ್ಳು ಭಾಗದೊಳಕ್ಕೆ ತಮ್ಮ ಸ್ಪರ್ಮೆಟೊಫೋರ್ಗಳನ್ನು (ವೀರ್ಯಾಣುವಿನ ಪೊಟ್ಟಣಗಳು) ಸೇರಿಸಲು ತಮ್ಮ ‘ಹೆಕ್ಟೊಕೊಟಿಲುಸ್’ ಎನ್ನುವ ವಿಶೇಷವಾದ ತೋಳನ್ನು ಬಳಸುತ್ತವೆ. ಹೆಕ್ಟೊಕೊಟಿಲುಸ್ ಸಾಮಾನ್ಯವಾಗಿ ಬೆಂಥಿಕ್ ಆಕ್ಟೋಪಸ್‌ಗಳಲ್ಲಿ ಮೂರನೆಯ ಬಲಗೈ ಆಗಿರುತ್ತದೆ. ಹೆಣ್ಣು ಆಕ್ಟೋಪಸ್‌ಗಳಿಗೆ ತಮ್ಮ ವೀರ್ಯಾಣುವಿನ ಪೊಟ್ಟಣವನ್ನು ಸೇರಿಸಿದ ಕೆಲವೇ ತಿಂಗಳುಗಳೊಳಗೆ ಗಂಡು ಆಕ್ಟೋಪಸ್ ಸತ್ತು ಹೋಗುತ್ತವೆ. ಕೆಲವು ತಳಿಗಳ ಹೆಣ್ಣು ಆಕ್ಟೋಪಸ್‌ಗಳು ಮೊಟ್ಟೆಗಳು ಬಲಿಯುವವರೆಗೂ ವಾರಗಟ್ಟಲೆ ತನ್ನೊಳಗೆ ವೀರ್ಯಾಣುವನ್ನು ಜೀವಂತವಾಗಿ ಇಟ್ಟುಕೊಳ್ಳಬಲ್ಲವು. ವೀರ್ಯಾಣುಗಳು ಫಲಿತಗೊಂಡ ನಂತರ, ಹೆಣ್ಣು ಸುಮಾರು 2,00,000 ಮೊಟ್ಟೆಗಳನ್ನಿಡುತ್ತದೆ. ಹೆಣ್ಣು ತನ್ನ ವಾಸಸ್ಥಾನದ ಒಳಮೈಯ ಸರಗಳಲ್ಲಿ ಈ ಮೊಟ್ಟೆಗಳನ್ನು ತೂಗುಹಾಕುತ್ತದೆ.

ಹೆಣ್ಣು ಆಕ್ಟೋಪಸ್ ಮೊಟ್ಟೆಗಳನ್ನು ತಿನ್ನಲು ಬರುವ ಧ್ವಂಸಕಗಳ ವಿರುದ್ಧ ಹೋರಾಡುತ್ತಾ ತಮ್ಮ ಮೊಟ್ಟೆಗಳನ್ನು ರಕ್ಷಿಸಿಕೊಳ್ಳುತ್ತವೆ. ಮೊಟ್ಟೆಗಳಿಗೆ ಸಾಕಷ್ಟು ಆಮ್ಲಜನಕ ಪೂರೈಕೆಯಾಗಲು ತಾಯಿಯು ಮೊಟ್ಟೆಗಳ ರಾಶಿಯ ಮೆಲೆ ನೀರಿನ ಪ್ರವಾಹವನ್ನು ನಿಧಾನವಾಗಿ ಊದುತ್ತವೆ. ಹೆಣ್ಣು ಆಕ್ಟೋಪಸ್ ಮರಿಯಾಗದೇ ಉಳಿದಿರುವ ಮೊಟ್ಟೆಗಳ ರಕ್ಷಣೆಯನ್ನು ಮಾಡುವುದರಿಂದ ಇವುಗಳು ಸುಮಾರು ಒಂದು ತಿಂಗಳ ಕಾಲ ಆಹಾರವನ್ನೇ ತಿನ್ನುವುದಿಲ್ಲ. ತಮ್ಮ ಪೋಷಣೆಗಾಗಿ ಇವುಗಳು ತನ್ನ ಸ್ವಂತ ಕೆಲವು ತೋಳುಗಳನ್ನೇ ಆಹಾರವಾಗಿ ಜಠರದೊಳಕ್ಕೆ ಹಾಕಿಕೊಂಡು ತಿನ್ನುತ್ತವೆ. ಮೊಟ್ಟೆಗಳು ಮರಿಯಾಗುತ್ತಿದ್ದಂತೆಯೇ ತಾಯಿ ಆಕ್ಟೋಪಸ್ ವಾಸಸ್ಥಳವನ್ನು ಬಿಟ್ಟು ಹೊರಡುತ್ತದೆ. ಈ ಸಂದರ್ಭದಲ್ಲಿ ಬಲಿಷ್ಟ ಶತ್ರುಗಳಿಂದ ತನ್ನನ್ನು ರಕ್ಷಿಸಿಕೊಳ್ಳಲಾಗದಷ್ಟು ನಿಶ್ಶಕ್ತಗೊಂಡು ಅವುಗಳ ಆಕ್ರಮಣದಿಂದ ಕೆಲವೊಮ್ಮೆ ತಾಯಿಯು ಸಾಯುತ್ತದೆ. ಮೊಟ್ಟೆಯೊಡೆದ ಮರಿಗಳು ‘ಪ್ಲಾಂಕ್ಟನ್’ ಮೋಡಗಳಂತೆ ಸಮುದ್ರದಲ್ಲಿ ತೇಲುತ್ತಾ ಎಳೆಯ ಮರಿ ಹುಳು ಆಕ್ಟೋಪಸ್‌ಗಳು ಸಾಗುತ್ತವೆ. ಸಮುದ್ರದ ತಳಕ್ಕೆ ಇವುಗಳು ಇಳಿಯಲು ಸಿದ್ಧಗೊಳ್ಳುವವರೆಗೂ ಅವು ಸೆಪೆಪೊಡ್ಸ್, ಮರಿ ಏಡಿಗಳು ಮತ್ತು ಮರಿ ನಕ್ಷತ್ರ ಮೀನುಗಳನ್ನು ತಿನ್ನುತ್ತವೆ. ಮರಿ ಆಕ್ಟೋಪಸ್‌ಗಳಿಗೆ ಇದು ಬಹಳ ಅಪಾಯಕಾರಿಯಾದ ಅವಧಿಯಾಗಿದ್ದು, ಪ್ಲಾಂಕ್ಟನ್ ಹಂತದ ಆಕ್ಟೋಪಸ್‌ಗಳನ್ನು ತಿನ್ನುವವರಿಗೆ ಇವುಗಳು ಆಹಾರವಾಗಿಬಿಡುತ್ತದೆ.

ಸಂವೇದನೆ

ಆಕ್ಟೋಪಸ್‌ಗಳು ತೀಕ್ಷ್ಣವಾದ ದೃಷ್ಟಿಶಕ್ತಿಯನ್ನು ಹೊಂದಿದ್ದು, ಇವುಗಳು ಬೆಳಕಿನ ವಿರುದ್ಧವೂ ವಸ್ತುಗಳನ್ನು ಸುಲಭವಾಗಿ ಗುರುತಿಸಬಲ್ಲವು. ಇವುಗಳಿಗೆ ‘ಸ್ಟಾಟೊಸಿಟ್ಸ್’ ಎಂದು ಕರೆಯಲ್ಪಡುವ ಎರಡು ವಿಶೇಷ ಅಂಗಗಳು ಮೆದುಳಿಗೆ ಸೇರಿಕೊಂಡಿದ್ದು, ಇವು ಸಮತಟ್ಟಾದ ಮೇಲ್ಮೈಗೆ ಸಂಬಂಧಿಸಿದಂತೆ ಅದರ ದೇಹದ ವಿಕಾಸನಾಶಕ್ತಿಯನ್ನು ತಿಳಿಯಲು ಆಕ್ಟೋಪಸ್‌ಗೆ ಸಹಾಯ ಮಾಡುತ್ತವೆ. ಇವುಗಳ ಕಣ್ಣಿನ ಅಕ್ಷಿಪಟಲದ ಸೀಳು ಯಾವಾಗಲೂ ಸಮಮಟ್ಟದಲ್ಲಿದ್ದು, ಇವುಗಳಿಗೆ ತಕ್ಷಣದ ಪ್ರತಿಕ್ರಿಯಿಸಲು ಸುಲಭವಾಗುತ್ತದೆ. ಆಕ್ಟೋಪಸ್‌ಗಳು ಅತ್ಯುತ್ತಮ ಸ್ಪರ್ಶಜ್ಞಾನವನ್ನೂ ಹೊಂದಿವೆ. ಆಕ್ಟೋಪಸ್‌ನ ಹೀರುವ ನಳಿಕೆಯಲ್ಲಿರುವ ಸಣ್ಣ ಬಟ್ಟಲುಗಳು ‘ಕೆಮೊರೆಸೆಪ್ಟರ್’ಗಳೆಂಬ ಅಂಗವನ್ನು ಹೊಂದಿದ್ದು, ಇವುಗಳ ಮೂಲಕ ಇವುಗಳು ತಾನು ಸ್ಪರ್ಶಿಸಿದ ವಸ್ತುಗಳ ರುಚಿಯನ್ನು ನೋಡಬಲ್ಲವು. ತನ್ನ ಉದ್ದುದ್ದದ ತೋಳುಗಳು ಚಾಚಲ್ಪಟ್ಟಿವೆಯೇ ಇಲ್ಲವೇ ಎಂದು ಇವುಗಳಿಗೆ ತಿಳಿಯುವ ಸಂವೇದನೆಯ ಶಕ್ತಿಯನ್ನು ಹೊಂದಿವೆ. ಆದರೂ ಆಕ್ಟೋಪಸ್‌ಗಳು ತಮ್ಮ ದೇಹದ ವಿವಿಧ ಭಾಗಗಳು ಎಲ್ಲಿವೆ, ಹೇಗಿವೆ ಎಂದು ಇವುಗಳಿಗೆ ತಿಳಿಯುವ ಶಕ್ತಿಯು ತಕ್ಕಮಟ್ಟಿಗೆ ಕಡಿಮೆಯೆಂದೇ ಹೇಳಬಹುದು. ಇವುಗಳಿಗೆ ತಮ್ಮ ದೇಹ ಅಥವ ಚಾಚಿದ ತೋಳುಗಳ ಸ್ಥಾನವನ್ನು ನಿರ್ಧರಿಸಲು ಇವುಗಳ ಮೆದುಳಿನಲ್ಲಿರುವ ಮಾನಸಿಕ ಉದ್ವೇಗದ ‘ರೆಸೆಪ್ಟರ್’ಗಳು ಸಾಕಾಗುವುದಿಲ್ಲ. (ಇದಕ್ಕೆ ಬೇಕಾದಂತಹ ಹೆಚ್ಚಿನ ಕಾರ್ಯರೂಪಕ್ಕೆ ತರುವ ಸಾಮರ್ಥ್ಯವು ಆಕ್ಟೋಪಸ್‌ಗಳ ಮೆದುಳಿಗೆ ಇದೆಯೇ ಎಂಬುದು ಸ್ಪಷ್ಟವಾಗಿಲ್ಲ). ಇವುಗಳಿಗೆ ಸೀಮಿತ ಮಿತಿಯ ಶ್ರವಣ ಶಕ್ತಿಯಿದೆಯೆಂದು ತಿಳಿದುಬಂದಿದೆ. ಆಕ್ಟೋಪಸ್‌ಗಳು ಈಜುವಾಗ ತಲೆಯನ್ನು ಮೊದಲು ಮುಂದಕ್ಕೆ ತಳ್ಳುತ್ತಾ ತನ್ನ ತೋಳುಗಳನ್ನು ಹಿಂದಿನಿಂದ ಎಳೆಯುತ್ತಾ ಈಜುತ್ತವೆ.

ವಿಶಿಷ್ಟ ಶೈಲಿಯ ಚಲನೆ

ಆಕ್ಟೋಪಸ್‌ಗಳು ಸಾಮಾನ್ಯವಾಗಿ ತೆವಳುತ್ತಾ ಅಥವಾ ಈಜುತ್ತಾ ಚಲಿಸುತ್ತವೆ. ಇವುಗಳು ನೀರನ್ನು ಕಾರಂಜಿಯಂತೆ ಮುಂದೂಡುತ್ತಾ ವೇಗವಾಗಿಯೂ ಚಲಿಸಬಲ್ಲವು. ಇವುಗಳು ನೀರಿನಲ್ಲಿ ತೇಲುವ ಸಂದರ್ಭದಲ್ಲಿ ಗಟ್ಟಿ ಮತ್ತು ಮೃದುವಾದ ಸ್ಥಳಗಳ ಮೇಲೆ ತಮ್ಮ ತೋಳುಗಳನ್ನು ಬಳಸಿಕೊಂಡು ನಡೆಯುತ್ತಾ ತೆವಳುತ್ತವೆ. 2005 ರಲ್ಲಿ ವರದಿಯಾದಂತೆ ಕೆಲವು ಆಕ್ಟೋಪಸ್‌ಗಳು ಗಿಡಗಳ ಒಂದು ಭಾಗದಂತೆ ಗೋಚರಿಸುತ್ತಾ ತಮ್ಮ ತೋಳುಗಳ ಪೈಕಿ ಕೇವಲ ಎರಡೇ ತೋಳುಗಳ ಮೂಲಕ ನಡೆಯಬಲ್ಲವು. ಇವುಗಳ ಈ ವಿಧದ ನಡಿಗೆಯಿಂದಾಗಿ ತಮ್ಮನ್ನು ಆಕ್ರಮಿಸಲು ಕಾಯುತ್ತಿರುವ ಶತ್ರುಗಳು ಇವುಗಳನ್ನು ಗಮನಿಸದಂತೆ ಜಾಗರೂಕವಾಗಿ ದೂರಕ್ಕೆ ರಪ್ಪಿಸಿಕೊಂಡು ಹೋಗಲು ಸಹಾಯಕವಾಗಿದೆ. ಇವುಗಳು ತಮ್ಮ ಒಂದು ಬಲಿಷ್ಠ ಲಾಳಿಕೆಯ ಮೂಲಕ ಗುರಿಯನ್ನಿಡುತ್ತಾ, ತಮ್ಮ ಕುಗ್ಗುವಿಕೆಯ ಜಾಲನಳಿಗೆಯಿಂದ ನೀರಿನ ಕಾರಂಜಿಯನ್ನು ಹೊರದೂಡಿಕೊಂಡು ಆಕ್ಟೋಪಸ್‌ಗಳು ಈಜುತ್ತವೆ.

ಆಕ್ಟೋಪಸ್‌ಗಳ ಗಾತ್ರ

ಉತ್ತರ ಫೆಸಿಫಿಕ್‌ನ ದೈತ್ಯ ಆಕ್ಟೋಪಸ್ ‘ಎಂಟರೊಕ್ಟೋಪಸ್ ಡೊಫ್ಲೆನಿ’ ತಳಿಯು ಜಗತ್ತಿನ ಅತೀ ದೊಡ್ಡ ಆಕ್ಟೋಪಸ್‌ನ ತಳಿಯೆಂದು ಗುರುತಿಸಲಾಗಿದೆ. ವಯಸ್ಕ ಆಕ್ಟೋಪಸ್ ತೋಳಿನಿಂದ ತೋಳಿಗೆ 4.3ಮೀ ಉದ್ದವಿದ್ದು, ಸುಮಾರು 15 ಕೆ.ಜಿ ತೂಗುತ್ತವೆ. ಈ ತಳಿಯ ಆಕ್ಟೋಪಸ್‌ಗಳಲ್ಲಿ ಅತೀ ದೊಡ್ಡ ಗಾತ್ರದ ಆಕ್ಟೋಪಸ್ 21 ಕೆ.ಜಿ ತೂಕವಿರುವುದು ಇದುವರೆಗೆ ದಾಖಲಾಗಿದೆ. ಏಳು ತೋಳಿನ ಆಕ್ಟೋಪಸ್ ‘ಹೆಲಿಫ್ರಾನ್’ ತಳಿಯ ಶವವು 61 ಕೆ.ಜಿ ತೂಕವಿದ್ದು, ಇದು ಜೀವಂತವಾಗಿದ್ದಾಗ ಸುಮಾರು 75 ಕೆ.ಜಿ ತೂಕವಿದ್ದಿರಬಹುದೆಂದು ಅಂದಾಜಿಸಲಾಗಿದೆ. ಆದರೂ ಜಗತ್ತಿನಲ್ಲಿ ಗುರುತಿಸಲಾದ ಎಲ್ಲಾ ಆಕ್ಟೋಪಸ್ ತಳಿಗಳ ಪೈಕಿ ‘ಇಡೊಫ್ಲಿನಿ’ ತಳಿಯು ಅತ್ಯಂತ ದೊಡ್ಡ ಗಾತ್ರದ ಆಕ್ಟೋಪಸ್ ಆಗಿದ್ದು, ಇದು 272 ಕೆ.ಜಿ ತೂಕ ಮತ್ತು 9 ಮೀಟರ್ ಉದ್ದವಿತ್ತೆಂದು ದಾಖಲೆಗಳು ಹೇಳುತ್ತವೆ.

ಮನುಷ್ಯರೊಂದಿಗಿನ ಬಾಂಧವ್ಯ

ಇತಿಹಾಸದ ಮೂಲಕ ಮತ್ತು ಕೆಲವು ಐತಿಹಾಸಿಕ ಕಲಾಕೃತಿಗಳಿಂದ ಪುರಾತನ ಕಾಲದ ಮೆಡಿಟರೇನಿಯನ್ ಜನಗಳು ಆಕ್ಟೋಪಸ್‌ಗಳ ಕುರಿತು ಬಹಳಷ್ಟು ತಿಳಿದುಕೊಂಡಿದ್ದರು ಎಂದು ತಿಳಿದುಬರುತ್ತದೆ. ಅದೇ ರೀತಿ ಕ್ನೊಸಸ್‌ನಲ್ಲಿ, ಮಿನೊಯನ್ ಕ್ರೆಟೆಯ ಕಂಚಿನ ಯುಗದಿಂದ ಪಡೆದ ಪ್ರಾಚೀನ ವಾಸ್ತುಶಾಸ್ತ್ರದಲ್ಲಿ ಸಿಕ್ಕಿದ ಒಂದು ಕಲ್ಲಿನ ಕೆತ್ತನೆಯಲ್ಲಿ ಒಬ್ಬ ಬೆಸ್ತನು ಒಂದು ಆಕ್ಟೋಪಸ್‌ನ್ನು ತೆಗೆದುಕೊಂಡು ಹೋಗುತ್ತಿರುವಂತೆ ಚಿತ್ರಿಸಲಾಗಿದೆ. ಸಮುದ್ರ ಮತ್ತು ಅದರ ಪ್ರಾಣಿಗಳನ್ನು ಪೂಜಿಸುವ ಪುರಾತನ ಪೆರುವಿನ ಮೂಚೆ ಜನಗಳ ಕಲೆಗಳಲ್ಲೂ ಆಕ್ಟೋಪಸ್‌ಗಳನ್ನು ಚಿತ್ರಿಸಲಾಗಿದೆ.

ಆಹಾರವಾಗಿ ಆಕ್ಟೋಪಸ್

ಅನೇಕ ದೇಶಗಳಲ್ಲಿ ಆಕ್ಟೋಪಸ್‌ನ್ನು ಆಹಾರವಾಗಿ ತಿನ್ನುತ್ತಾರೆ. ಇವುಗಳ ತೋಳುಗಳು ಮತ್ತು ಇವುಗಳ ದೇಹದ ಇತರ ಭಾಗಗಳಿಂದ ವೈವಿಧ್ಯಮಯ ಖಾದ್ಯಗಳನ್ನು ತಯಾರಿಸುತ್ತಾರೆ. ಸುಶಿ, ಟಕೊಯಾಕಿ ಮತ್ತು ಅಕಶಿಯಾಕಿಗಳ ಜಪಾನಿ ಅಡುಗೆಯಲ್ಲಿ ಸಾಮಾನ್ಯವಾಗಿ ಆಕ್ಟೋಪಸ್‌ನ್ನು ಬಳಸುತ್ತಾರೆ. ಕೆಲವೊಂದು ದೇಶಗಳಲ್ಲಿ ಇವುಗಳನ್ನು ಜೀವಂತವಾಗಿಯೂ ತಿನ್ನುತ್ತಾರೆ. ಜೀವವಿರುವ ಆಕ್ಟೋಪಸ್‌ನ್ನು ಕತ್ತರಿಸಿದರೆ ಅವು ಕೆಲವು ನಿಮಿಷಗಳ ಕಾಲ ತೆವಳುತ್ತಿರುತ್ತವೆ. ಹವಾಯಿ ದೇಶದ ಜನರು ಆಕ್ಟೋಪಸ್‌ನ್ನು ನಿಯಮಿತವಾಗಿ ತಿನ್ನುತ್ತಾರೆ. ಅನೇಕ ಜನಪ್ರಿಯ ಆಹಾರಗಳು ಏಷ್ಯಾ ಮೂಲವಾದ ಕಾರಣ, ಸ್ಥಳೀಯವಾಗಿ ಅವುಗಳು ಹವಾಯಿ ಅಥವಾ ಜಪಾನೀ ಹೆಸರುಗಳಿಂದ ಜನಪ್ರಿಯವಾಗಿವೆ. ಆಕ್ಟೋಪಸ್ ಒಂದು ಪ್ರಸಿದ್ಧ ಮೀನು ಹಿಡಿಯುವ ಗಾಳದ ಹುಳುವೂ ಆಗಿದ್ದು, ಇದನ್ನು ಮತ್ತು ಪೋರ್ಚುಗೀಸ್ ಆಹಾರದಲ್ಲಿ ರಸಭರಿತ ಭಕ್ಷ್ಯವೆಂದು ಪರಿಗಣಿಸಲಾಗಿದೆ. ಅಕ್ಟೋಪಸ್‌ಗಳಿಂದ ಆಹಾರವನ್ನು ತಯಾರಿಸುವ ಅಥವಾ ಬಡಿಸುವ ಉಪಹಾರ ಮಂದಿರಗಳಿಗೆ ‘ಪುಲ್ಪೆರಿಯಾಸ್’ ಎನ್ನುತ್ತಾರೆ. ರಾತ್ರಿಯ ವೇಳೆ ಸುರಕ್ಷಿತ ತಾಣಗಳಲ್ಲಿ ಅಡಗಿಕೊಳ್ಳುವ ಇವುಗಳನ್ನು ಟ್ಯುನಿಸಿಯಾ ದ್ವೀಪದ ಸ್ಥಳೀಯ ನಿವಾಸಿಗಳು ಇವು ಅಡಗುವ ತಾಣಗಳನ್ನು ತಿಳಿದುಕೊಂಡು ಹಿಡಿಯುತ್ತಾರೆ. ಸಂಜೆಯ ವೇಳೆ ಇಲ್ಲಿನ ಸ್ಥಳಿಯರು ಸಮುದ್ರ ತಳದಲ್ಲಿ ಬೂದು ಬಣ್ಣದ ಸೆರಾಮಿಕ್ ಮಡಕೆಗಳನ್ನು ಇಡುತ್ತಾರೆ. ಮಾರನೆಯ ದಿನ ಬೆಳಿಗ್ಗೆ ಅದರಲ್ಲಿ ಬಂದು ಆಶ್ರಯಿಸಿರುವ ಆಕ್ಟೋಪಸ್‌ಗಳನ್ನು ಹಿಡಿಯುತ್ತಾರೆ.

2002ರ ಯು.ಎಸ್.ಡಿ.ಎ ನ್ಯೂಟ್ರಿಯಂಟ್ ಅಂಕಿ ಅಂಶಗಳ ಪ್ರಕಾರ ಬೇಯಿಸಿದ ಆಕ್ಟೋಪಸ್‌ಗಳ ಪ್ರತಿ ಮೂರು ಔನ್ಸ್ ಪ್ರಮಾಣದಲ್ಲಿ ಸುಮಾರು 139 ಕ್ಯಾಲೋರಿ ಶಕ್ತಿ ಇರುತ್ತದೆ. ಇದರಲ್ಲಿ ವಿಟಮಿನ್ ಃ3, ಃ12, ಪೊಟ್ಯಾಶಿಯಮ್, ಫಾಸ್ಫರಸ್, ಮತ್ತು ಸೆಲೆನಿಯಮ್ ಅಂಶವು ಹೇರಳವಾಗಿದೆ. ಆಕ್ಟೋಪಸ್‌ಗಳ ದೇಹದಲ್ಲಿರುವ ಕೆಸರು, ವಾಸನೆ ಮತ್ತು ಬಣ್ಣವನ್ನು ಉಗುಳುವ ಅಂಗವನ್ನು ಪ್ರತ್ಯೇಕಿಸಲು ಆಕ್ಟೋಪಸ್‌ಗಳಿಂದ ಖಾದ್ಯವನ್ನು ತಯಾರಿಸುವ ಪೂರ್ವದಲ್ಲಿ ಇವುಗಳನ್ನು ಚೆನ್ನಾಗಿ ಕುದಿಸಬೇಕು.

ಸಾಕು ಪ್ರಾಣಿಯಾಗಿ ಆಕ್ಟೋಪಸ್

ಆಕ್ಟೋಪಸ್‌ಗಳನ್ನು ಬಂಧನದಲ್ಲಿಟ್ಟು ಕಾಪಾಡುವುದು ಕಷ್ಟವಾದರೂ ಕೆಲವರು ಅವುಗಳನ್ನು ಸಾಕುಪ್ರಾಣಿಯಾಗಿ ಇಟ್ಟುಕೊಳ್ಳುತ್ತಾರೆ. ಅವುಗಳ ಸಮಸ್ಯೆಗಳನ್ನು ಬಿಡಿಸುವ ಕೌಶಲ, ಚಲನೆ ಮತ್ತು ಗಡಸು ರಚನೆಯ ಕೊರತೆಯ ಕಾರಣ, ಆಕ್ಟೋಪಸ್‌ಗಳು ಆಗಾಗ ಭದ್ರವಾಗಿ ಮುಚ್ಚಿರುವ ನೀರಿನ ತೊಟ್ಟಿಗಳಿಂದಲೂ ತಪ್ಪಿಸಿಕೊಳ್ಳುತ್ತವೆ. ಆಕ್ಟೋಪಸ್ ತಳಿಗಳಲ್ಲಿ ಗಾತ್ರದ ಆಧಾರದಲ್ಲಿ ವಯಸ್ಸನ್ನು ಹೇಳುವುದು ಮತ್ತು ಅದು ಎಷ್ಟು ಕಾಲ ಬದುಕಬಲ್ಲದೆಂದು ಹೇಳುವುದು ಕಷ್ಟ. ಇವುಗಳ ಜಾತಿಗಳ ಆಧಾರದ ಮೇಲೆ ಒಂದು ಚಿಕ್ಕ ಆಕ್ಟೋಪಸ್ ಆಗ ತಾನೆ ಜನಿಸಿದ್ದು ಇಲ್ಲವೇ ಪ್ರಬುದ್ಧವಾಗಿದೆ ಎಂದು ಹೇಳಬಹುದು. ಆಕ್ಟೋಪಸ್‌ಗಳು ತಮ್ಮ ಗಾತ್ರಕ್ಕೆ ತಕ್ಕಂತೆ ಸಾಕಷ್ಟು ಬಲಿಷ್ಠವಾಗಿರುತ್ತವೆ. ಸಾಕು ಪ್ರಾಣಿಯಾಗಿಟ್ಟುಕೊಂಡ ಆಕ್ಟೋಪಸ್‌ಗಳು ತಮ್ಮನ್ನು ಕೂಡಿಟ್ಟಿರುವ ತೊಟ್ಟಿಯ ಮುಚ್ಚಳವನ್ನು ತೆಗೆಯಲೂ ಕಲಿತಿರುತ್ತವೆ. ತಾನಿರುವ ತೊಟ್ಟಿಯಿಂದ ಆಹಾರವನ್ನು ಇಟ್ಟಿರುವ ತೊಟ್ಟಿಗೆ ಹೋಗಲು ಅಗತ್ಯವಿರುವ ಕೆಲವು ಸಮಯಗಳವರೆಗೆ ನೀರಿನಿಂದ ಹೊರಗಿನ ವಾತಾವರಣದಲ್ಲೂ ಇವು ಬದುಕಿರಬಲ್ಲವು ಮತ್ತು ಅಲ್ಲಿರುವ ಮೀನುಗಳನ್ನು ತಾವೇ ಸ್ವತಃ ಹೊಟ್ಟೆ ತುಂಬುವಷ್ಟು ತಿನ್ನುತ್ತವೆ. ಇವುಗಳಿಗೆ ಕೆಲವೊಂದು ವಿಧದ ಶಾರ್ಕ್ಗಳನ್ನು ಕೊಲ್ಲಲೂ ತಿಳಿದಿರುತ್ತವೆ.

ಸಾಗರದ ಬುದ್ಧಿಜೀವಿ ಆಕ್ಟೋಪಸ್

ಸಾಗರದ ಬುದ್ಧಿಜೀವಿಯೆಂಬ ಹೆಸರು ಆಕ್ಟೊಪಸ್‌ಗಳಿಗೆ ಇದ್ದು, ವಿಭಿನ್ನವಾದ ನಡವಳಿಕೆಯಿಂದಲೇ ಗುರುತಿಸಿಕೊಂಡಿವೆ. ಸಾಗರದಲ್ಲಿ ತನ್ನನ್ನು ಯಾರೂ ಪತ್ತೆಹಚ್ಚಬಾರದು ಎನ್ನುವ ಕಾರಣಕ್ಕೆ ಹವಳದ ಬಂಡೆಗಳ ಸಾಲುಗಳ ನಡುವೆ ಅಡಗಿ ಕೂತಿರುತ್ತದೆ. ಇದು ಸೊಫಾಲೋಪೋಡಾ ವರ್ಗಕ್ಕೆ ಸೇರಿದ ಅಷ್ಟಪದಿ. ತನ್ನ ಉದ್ದನೆಯ ಎಂಟು ಬಾಹುಗಳಿಂದಲೇ ಆಕ್ಟೊಪಸ್ ಹೆಸರುವಾಸಿ. ಇದರ ಬಾಯಿ ಬಾಹುಗಳ ಮಧ್ಯದಲ್ಲಿರುತ್ತದೆ. ಮೈಯಲ್ಲಿ ಅಸ್ತಿಪಂಜರವೇ ಇಲ್ಲದ ಇದರ ಮಾಂಸದ ಮುದ್ದೆಯಂತಹ ದೇಹ ಕಿರಿದಾದ ಸಂದಿಯಲ್ಲೂ ನುಸುಳಬಲ್ಲದು. ಆಕ್ಟೊಪಸ್‌ಗಳು ಆಂತರಿಕ ಅಸ್ತಿಪಂಜರವಿಲ್ಲದೇ ಬಹುತೇಕ ಮೃದುವಾದ ದೇಹವನ್ನು ಹೊಂದಿದೆ. ಇವುಗಳ ತಲೆಯೇ ಇವುಗಳ ಸಂಪೂರ್ಣ ದೇಹವಾಗಿರುತ್ತದೆ. ಇವುಗಳಿಗೆ ಜೀವಿಸಲು ಅಗತ್ಯವಿರುವ ಎಲ್ಲಾ ಅಂಗಾಂಗಗಳು ಇವುಗಳ ತಲೆಯ ಭಾಗದಲ್ಲೇ ಇರುತ್ತದೆ. ಇವುಗಳಿಗೆ ಮೂರು ಹೃದಯಗಳಿದ್ದರೂ ಇವುಗಳ ನರಮಂಡಲ ವ್ಯವಸ್ಥೆಯಿರುವುದು ಇವುಗಳ ತೋಳುಗಳಲ್ಲಿ. ಮೂಳೆಯೇ ಇಲ್ಲದ ಇವುಗಳು ತಮ್ಮ ಕೈಗಳನ್ನು ಹೇಗೆ ಬೇಕಾದರೂ ಬಗ್ಗಿಸಬಲ್ಲವು. ಆಕ್ಟೋಪಸ್‌ಗಳು ಹವಳದ ಬಂಡೆಗಳ ನಡುವೆ ತೆವಳುವುದಕ್ಕೂ ಇವುಗಳ ಕೈಗಳು ಸಹಕಾರಿಯಾಗಿವೆ. ಇವುಗಳ ಕೈಗಳು ಬಲಿಷ್ಟವಾಗಿದ್ದು, ಪ್ರತಿ ಕೈಗಳಲ್ಲಿ ಎರಡು ಹೀರು ಕೊಳವೆಗಳಿರುತ್ತವೆ. ಬೇಟೆಯನ್ನು ತಮ್ಮ ತೋಳುಗಳಿಂದ ಸುತ್ತುವರಿದು ಬೇಟೆಯು ತಪ್ಪಿಸಿಕೊಳ್ಳದಂತೆ ಮಾಡುತ್ತದೆ. ಇವು ವಸ್ತುವಿನ ರಚನೆ, ಆಕಾರ, ರುಚಿಯನ್ನು ತಮ್ಮ ತೋಳುಗಳಿಂದ ಸ್ಪರ್ಶಿಸುವ ಮೂಲಕವೇ ಗೃಹಿಸಬಲ್ಲವು. ಆಕ್ಟೊಪಸ್ ಕೆಲವೊಮ್ಮೆ ಆಕಸ್ಮಿಕವಾಗಿ ತಮ್ಮ ತೋಳುಗಳನ್ನು ಕಳೆದುಕೊಂಡರೂ ಮತ್ತೆ ಇವುಗಳ ತೋಳುಗಳು ಅದೇ ಗಾತ್ರಕ್ಕೆ ಬೆಳೆಯುತ್ತವೆ.

ಆಕ್ಟೊಪಸ್ ತನ್ನ ಎದುರಾಳಿಯ ಮೇಲೆ ಹಠಾತ್ತನೆ ದಾಳಿಮಾಡುತ್ತದೆ ಮತ್ತು ತನ್ನ ರಕ್ಷಣೆಗಾಗಿ ಹಲವಾರು ತಂತ್ರಗಳನ್ನು ಬಳಸುತ್ತದೆ. ವೈರಿಗಳಿಂದ ರಕ್ಷಿಸಿಕೊಳ್ಳಲು ಅಡಗಿಕೊಳ್ಳುತ್ತವೆ. ಇವು ಶತ್ರುಗಳ ಮೇಲೆ ಮಬ್ಬು ಕವಿಯುವ ವಿಶಿಷ್ಟವಾದ ಬಣ್ಣವನ್ನು ಉಗುಳಿ ಅಥವಾ ತಮ್ಮ ಮೈ ಬಣ್ಣವನ್ನು ಬದಲಾಯಿಸಿಕೊಂಡು ವೈರಿಗಳಿಂದ ತಪ್ಪಿಸಿಕೊಳ್ಳುತ್ತವೆ. ಆಕ್ರಮಣಕಾರರಿಂದ ತಪ್ಪಿಸಿಕೊಳ್ಳಲು ಇವುಗಳು ಗಾಢವಾದ ಕಪ್ಪು ಬಣ್ಣವನ್ನು ದಟ್ಟವಾದ ಮೋಡದಂತೆ ಹೊರಸೂಸುತ್ತವೆ. ಇದರ ಪ್ರಭಾವಕ್ಕೊಳಗಾದಾಗ ಶತ್ರುಗಳು ಮಂಪರಿಗೊಳಗಾಗುತ್ತವೆ. ಆಕ್ಟೊಪಸ್‌ಗಳು ವೈರಿಗಳೊಂದಿಗೆ ಕಾದಾಡುವ ಬದಲು ಅವುಗಳಿಂದ ಜಾಣತನದಿಂದ ತಪ್ಪಿಸಿಕೊಳ್ಳುವುದೇ ಹೆಚ್ಚು. ಅಪಾಯ ಎದುರಾದ ಸಂದರ್ಭದಲ್ಲಿ ಇವುಗಳು ಗಂಟೆಗೆ 25ಮೈಲಿ ವೇಗದಲ್ಲಿ ಓಡಿ ಪಾರಾಗುತ್ತದೆ.

ಭವಿಷ್ಯಕಾರನ ಬಿರುದು

ಆಕ್ಟೊಪಸ್ ಉತ್ತಮ ಭವಿಷ್ಯಕಾರ ಎಂದು ಹೆಸರುಗಳಿಸಿದ್ದು, ಇವು ತಮ್ಮ ಅದ್ಭುತವಾದ ಬುದ್ಧಿಶಕ್ತಿಯಿಂದಾಗಿ ಭವಿಷ್ಯವನ್ನು ಮೊದಲೇ ಗ್ರಹಿಸುತ್ತವೆ ಎನ್ನುವ ನಂಬಿಕೆಯಿದೆ. ಆದರೆ ಇದು ವೈಜ್ಞಾನಿಕವಾಗಿ ಸಾಬೀತಾಗಿಲ್ಲವಾದರೂ ಆಕ್ಟೊಪಸ್‌ಗಳ ಕಲಿಕಾ ಸಾಮರ್ಥ್ಯವು ವಿಜ್ಞಾನಿಗಳನ್ನೂ ಅಚ್ಚರಿಗೊಳಿಸಿದೆ. ಫುಟ್‌ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲೂ ಅಕ್ಟೋಪಸ್ ಹೇಳಿದ ಭವಿಷ್ಯವು ನಿಜವಾಗಿದ್ದು, ಜಗತ್ತನ್ನೇ ಅಚ್ಚರಿಯಲ್ಲಿ ಕೆಡವಿತ್ತು.

ಜೀವಜಗತ್ತಿನ ಹಲವು ಅದ್ಭುತಗಳ ಪೈಕಿ ಮನುಷ್ಯನಂತೆಯೇ ಚಿಂತನಾ ಶಕ್ತಿಯನ್ನು ಹೊಂದಿರುವ ಆಕ್ಟೋಪಸ್‌ಗಳು ನಿಜಕ್ಕೂ ಸೃಷ್ಟಿಯ ವಿಭಿನ್ನ ಹಾಗೂ ವಿಶಿಷ್ಟ ಕೊಡುಗೆಯೆಂದೇ ಹೇಳಬಹುದು. ಇಂತಹ ಅದ್ಭುತವಾದ ಜೀವಜಗತ್ತಿನಲ್ಲಿ ಮನುಷ್ಯನೆನ್ನುವ ಪ್ರಾಣಿಯು ಜೀವಿಸುತ್ತಿರುವುದು ನಿಜಕ್ಕೂ ಪುಣ್ಯವೆಂದೇ ಹೇಳಬಹುದು. ಆದರೆ ಮನುಷ್ಯನ ಮಹತ್ವಾಕಾಂಕ್ಷಿ ಮನೋಭಾವ ಮತ್ತು ಎಲ್ಲವನ್ನೂ ತನ್ನ ಸ್ವಾರ್ಥಕ್ಕೆ ಆಪೋಶನ ತೆಗೆದುಕೊಳ್ಳುವ ಮನೋಭಾವಕ್ಕೆ ಸಿಲುಕಿ ಇಲ್ಲಿನ ಅಪರೂಪದ ಜೀವಿಗಳು ವಿನಾಶದ ಅಂಚಿಗೆ ಸಾಗುತ್ತಿರುವುದು ದುರಂತವೇ ಸರಿ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ- 574198
ದೂ: 9742884160

Related post

Leave a Reply

Your email address will not be published. Required fields are marked *