ಸಾಹಿತ್ಯ ಸಮ್ಮೇಳನದಲ್ಲಿ ದಾಸ ಸಾಹಿತ್ಯ!!

ಸಾಹಿತ್ಯ ಸಮ್ಮೇಳನದಲ್ಲಿ ದಾಸ ಸಾಹಿತ್ಯ!!

ಇನ್ನೇನು 87ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್‌ನಲ್ಲಿ ಮಂಡ್ಯದಲ್ಲಿ ನಡೆಯಲು ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಪ್ರತಿ ಸಾಹಿತ್ಯ ಸಮ್ಮೇಳನದಲ್ಲೂ ಗೋಷ್ಠಿ, ವಿಚಾರ ಸಂಕಿರಣ, ಕವಿಗೋಷ್ಠಿ ಮಾಮೂಲಿನಂತೆ ನಡೆಯುತ್ತಲೇ ಇರುತ್ತದೆ. ಆದರೆ ಕನ್ನಡ ಸಾಹಿತ್ಯಕ್ಕೆ ಮಹತ್ತರ ಕೊಡುಗೆ ನೀಡಿದ ದಾಸ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮನ್ನಣೆ ಕೊಡದೇ ಇರುವುದು ತೀರ ಖೇದಕರ ವಿಷಯ.

ಇಲ್ಲಿಯವರೆಗೆ ಯಾವುದೇ ಸಾಹಿತ್ಯ ಸಮ್ಮೇಳನದಲ್ಲಿ ದಾಸಸಾಹಿತ್ಯದ ಬಗ್ಗೆ ಒಂದೂ ಕಾರ್ಯಕ್ರಮಗಳೂ ನಡೆದಿಲ್ಲ. ಕೇವಲ ಕಥೆ, ಕವನ, ಕಾದಂಬರಿ, ಲೇಖನ ಮುಂತಾದವನ್ನು ಮಾತ್ರ ಸಾಹಿತ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪರಿಗಣಿಸುತ್ತದಯೇ? ದಾಸ ಸಾಹಿತ್ಯವನ್ನು ಸಾಹಿತ್ಯ ಪ್ರಕಾರವೆಂದು ಯಾಕೆ ಪರಿಗಣಿಸುತ್ತಿಲ್ಲ ಎಂಬುದು ಇಲ್ಲಿಯವರೆಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಾಸ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಕಾರ್ಯಕ್ರಮಕ್ಕಾಗಿ ಹಲವಾರು ಬಾರಿ ಮನವಿ ಮಾಡಿದ್ದರೂ ಕಸಪಾದಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಹಿರಿಯ ವಿದ್ವಾಂಸರಾದ ವಿದ್ಯಾವಾಚಸ್ಪತಿ ಡಾ ಅರಳುಮಲ್ಲಿಗೆ ಪಾರ್ಥಸಾರಥಿಯವರು ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ದಾಸಸಾಹಿತ್ಯದ ತವರು. ಶ್ರೀನರಹರಿತೀರ್ಥರಿಂದ ಹಿಡಿದು ಇಂದಿನ ಅಭಿನವ ವಿವೇಕಾನಂದರೆಂದೇ ಪ್ರಖ್ಯಾತರಾದ ವಿದ್ಯಾವಾಚಸ್ಪತಿ ಡಾ ಅರಳುಮಲ್ಲಿಗೆ ಪಾರ್ಥಸಾರಥಿಯವರೆಗೆ ದಾಸವರೇಣ್ಯರು ಕನ್ನಡದ ಹರಿದಾಸ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರಲ್ಲದೇ, ಇವರುಗಳು ರಚಿಸಿರುವ ಸಾಹಿತ್ಯ ಜೀವಮಾನದ ಅಭ್ಯಾಸಕ್ಕೆ ಸಾಕಾಗುವಷ್ಟು ಸಾಹಿತ್ಯ ರಾಶಿ ರಚನೆಯಾಗಿದೆ. ಹರಿದಾಸರು ಕನ್ನಡದ ಭಕ್ತಿ ಸಾಹಿತ್ಯಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ. ದಾಸಸಾಹಿತ್ಯ ಜನಕೋಟಿಯ ಮೇಲೆ ಅಪಾರವಾದ ಪ್ರಭಾವವನ್ನು ಬೀರಿದೆ. ಶತಶತಮಾನಗಳ ಕಾಲ ದಾಸ ಸಾಹಿತ್ಯದ ಸವಿಯನ್ನು ಜನರು ಅನುಭವಿಸಿ ನೆಮ್ಮದಿಯನ್ನು ಪಡೆದಿದ್ದಾರೆ. ಶ್ರೀಪಾದರಾಯರು, ಶ್ರೀವ್ಯಾಸತೀರ್ಥರು, ಶ್ರೀಪುರಂದರದಾಸರು, ಶ್ರೀಕನಕದಾಸರು, ಶೀ ವಾದಿರಾಜ ತೀರ್ಥರು, ಗೋನವಾರದ ಶ್ರೀರಾಮ ಅಂಕಿತ ಬಡೆ ಸಾಹೆಬರು ಮುಂತಾದ ಪ್ರಖ್ಯಾತ ಹಿಂದೂ ತತ್ವಜ್ಞಾನಿಗಳು ತಮ್ಮನ್ನು ಹರಿಯ ಸೇವಕರೆಂದು ಭಾವಿಸಿ, ತಮ್ಮ ಭಕ್ತಿಯನ್ನು ಗೀತೆಗಳ ಮೂಲಕ ಶ್ರೀ ಹರಿಗೆ ಅರ್ಪಿಸುವ ಮೂಲಕ ಕನ್ನಡ ಭಕ್ತಿ ಸಾಹಿತ್ಯ ಲೋಕವನ್ನು ಶೀಮಂತಗೊಳಿಸಿದ್ದಾರೆ. ಭಕ್ತಿಮೂಲವಾದ ಸಾಹಿತ್ಯ ಕರ್ನಾಟಕದಲ್ಲಿ 12ನೇ ಶತಮಾನದಲ್ಲಿಯೇ ಇತ್ತು ಎಂಬುದು ಕನ್ನಡ ಸಾಹಿತ್ಯಕ್ಕೆ ಹೆಮ್ಮೆ ಪಡುವ ವಿಷಯವಲ್ಲವೇ?

ಈ ಭಕ್ತಿ ಸಾಹಿತ್ಯದ ಗೀತೆಗಳ ಹಾಡುಗಳ ಮೂಲಕ ಶತ ಶತಮಾನಗಳಿಂದ ಜನರು ಶಾಂತಿ, ಸಮಾಧಾನ, ಜ್ಞಾನ ಮತ್ತು ನೆಮ್ಮದಿಯನ್ನು ಪಡೆದಿದ್ದಾರೆ ಎಂದರೆ ತಪ್ಪಾಗಲಾರದು. ದಾಸ ಸಾಹಿತ್ಯ ಕನ್ನಡ ನಾಡಿನ ಜನರಿಗೆ ತಮ್ಮ ಸರಳ, ಸುಂದರ ಕೀರ್ತನೆಗಳ ಮೂಲಕ ಸಂಸ್ಕೃತಿ, ಸಂಸ್ಕಾರ ಹಾಗೂ ಉದ್ಭೋದಕ ಸಾಹಿತ್ಯವನ್ನು ಪಸರಿಸುತ್ತಾ ಬಂದಿದೆ. 13-14ನೇಯ ಶತಮಾನ ಹಾಗೂ ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ಹಾಗೂ ಅದಕ್ಕೂ ಮುನ್ನ ಹರಿದಾಸ ಸಾಹಿತ್ಯ ಉತ್ತುಂಗದಲ್ಲಿತ್ತು. ಹರಿದಾಸರು ತಮ್ಮ ಗೀತೆಗಳ ಮೂಲಕ ಕರ್ನಾಟಕ ಸಾಹಿತ್ಯ ಹಾಗೂ ಸಂಗೀತದ ಶ್ರೀಮಂತ ಪರಂಪರೆಗೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ. ತಮ್ಮ ಗೀತೆಗಳ ಮೂಲಕ ಹರಿಯನ್ನು ಕೊಂಡಾಡಿ ಪಾಮರರಿಗೆ ಬೋಧಿಸಿದ್ದಾರೆ. ದಾಸವರೇಣ್ಯರ ರಚನೆಗಳು ದೇವರನಾಮಗಳೆಂದೇ ಪಸಿದ್ಧಿ ಪಡೆದು ಇಗಲೂ ಮನೆ ಮನಗಳಲ್ಲಿ ಮಠ ಮಂದಿರಗಳಲ್ಲಿ ಕಂಪನ್ನು ಬೀರುತ್ತಿದೆ. ದಾಸ ಸಾಹಿತ್ಯ ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಹಾಗೂ ಅಧ್ಯಾತ್ಮಿಕವಾಗಿ ಕನ್ನಡ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಕರ್ನಾಟಕದ ರಾಯಚೂರು ದಾಸಸಾಹಿತ್ಯದ ರಾಜಧಾನಿ ಎಂದರೆ ತಪ್ಪೇನಿಲ್ಲ. ಇಲ್ಲಿ ಈಗಲೂ ದಾಸಸಾಹಿತ್ಯದ ವೀಣೆ ಮಿಡಿಯುತ್ತಿದೆ.

ಹರಿದಾಸರು ತಮ್ಮ ಗೀತೆಗಳ ಮೂಲಕವೇ ಸರಳ ಸುಂದರವಾಗಿ, ತಾವೇ ಜನಸಾಮನ್ಯರ ಬಳಿಗೆ ಹೋಗಿ, ಸಮಾಜದ ಎಲ್ಲಾ ವರ್ಗದ ಜನರನ್ನು ಸ್ಪಂದಿಸುತ್ತಾ ಪಾಮರರಿಗೆ ಧ್ವನಿಯಾಗಿ ಕರುನಾಡಿನ ಅನುಭವ ಪ್ರಪಂಚವನ್ನು ವಿಸ್ತರಿಸಿದರು. ದಾಸವರೇಣ್ಯರಿಂದ ಹೊರಟ ಈ ಭಕ್ತಿ ಸಾಹಿತ್ಯ, ದಾಸವರೇಣ್ಯರ ಅನುಭವ, ಅನುಭಾವದ ಅಲೆಗಳು ಕರುನಾಡಿನ ಜನರನ್ನು ಜ್ಞಾನ ಸಮುದ್ರದಲ್ಲಿ, ನಾದ ಸಮುದ್ರದಲಿ ಮಿಂದೆಳುವಂತೆ ಮಾಡಿತು. ಹರಿದಾಸರು ತಮ್ಮ ಭಕ್ತಿಗೀತೆಗಳ ಮೂಲಕ ಹರಡಿದ ವಿಚಾರ ಸುಸಂಕೃತ ಸಮಾಜದ ನಿರ್ಮಾಣಕ್ಕೆ ನಾಂದಿ ಹಾಡಿತ್ತು ಎಂದರೆ ತಪ್ಪಾಗುವುದಿಲ್ಲ. ಎಲ್ಲಾ ಜಾತಿ ಜನಾಂಗ ಸಮುದಾಯಕ್ಕೆ ಸ್ಪಂದಿಸಿದ ದಾಸ ಸಾಹಿತ್ಯ ಸಂಸ್ಕಾರ, ವಿದ್ಯೆ, ವಿನಯ, ವಿವೇಕ, ಸಂಸ್ಕಾರ, ಸಂಸ್ಕೃತಿ ಹಾಗೂ ಮಾನವೀಯತೆಯ ಸಂದೇಶವನ್ನು ವ್ಯಾಪಕವಾಗಿ ಪಸರಿಸಿತು. ಇಂದಿಗೂ ಅನೇಕ ದಾಸ ಸಾಹಿತ್ಯದ ವಿದ್ವನ್ಮಣಿಗಳು ಕರ್ನಾಟಕದಲ್ಲಿ ಕ್ರಿಯಾಶೀಲರಾಗಿದ್ದಾರೆ. ದಾಸ ಸಾಹಿತ್ಯ ಜನರಿಂದ, ಜನರ ಮಧ್ಯೆ, ಜನರ ಮುಂದೆಯೇ ಹುಟ್ಟಿದ ಸಾಹಿತ್ಯ. ಊರೂರು, ಮನೆ, ಗಲ್ಲಿ, ಓಣಿಗಳಲ್ಲಿ ತಿರುಗಾಡುತ್ತಾ, ಹಾಡುತ್ತಾ ಕುಣಿಯುತ್ತಾ ತಾವು ಕಂಡುಂಡ ಜಗದ ಅನುಭವಗಳನ್ನು ಸಾಹಿತ್ಯದ ಮೂಲಕ ಹೊರಬಂದ ಗೀತೆಗಳು ಸಾಹಿತ್ಯದ ಎಲ್ಲಾ ಅಂಶಗಳನ್ನು ತಮ್ಮಲ್ಲಿ ತುಂಬಿ ನಿಂತವು. ಸಾಹಿತ್ಯ ಜನರ ಮನ್ನಸ್ಸನ್ನು ಮುಟ್ಟಬೇಕು, ಹೀಗೆ ಜನರ ಮನಸ್ಸನ್ನು ಮುಟ್ಟುವಲ್ಲಿ ದಾಸ ಸಾಹಿತ್ಯ ಯಶಸ್ವಿಯಾಗಿದೆ. ಕೆಟ್ಟ ಮಾರ್ಗವನ್ನು ಬಿಟ್ಟು ಒಳ್ಳೆಯ ಮಾರ್ಗದಲ್ಲಿ ಸಾಗುವ ಮೂಲಕ ಬದುಕನ್ನು ಹಸನು ಮಾಡಿಕೊಳ್ಳಬೇಕೆಂದು ತಮ್ಮ ಭಕ್ತಿ ಸಾಹಿತ್ಯದ ಮೂಲಕ ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅವಿಸ್ಮರಣೀಯವಾಗಿದೆ. ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ದಾಸ ಸಾಹಿತ್ಯ ಸಾಮಾನ್ಯ ಜನರ ಸಾಹಿತ್ಯವಾಗಿದೆ.

ಶತಶತಮಾನಗಳ ಕಾಲ ಕರುನಾಡಿನ ಎಲ್ಲಾ ಜನಸಾಮಾನ್ಯರ ಮನವನ್ನು ಗೆದ್ದು ನಾಡಿನ ಸಂಸ್ಕೃತಿಯ ಬಹುಮುಖ್ಯವಾದ ಭಾಗವೆನಿಸಿಕೊಂಡಿರುವ ಇಂಥಹ ದಾಸ ಸಾಹಿತ್ಯಕ್ಕೂ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಾಗವಿರಬೇಕು ಎಂಬುದು ನನ್ನ ಹಾಗೂ ದಾಸಸಾಹಿತ್ಯ ಪ್ರೇಮಿಗಳ ಅಭಿಪ್ರಾಯ. ನನಗೆ ತಿಳಿದ ಮಟ್ಟಿಗೆ ಈವರೆಗಿನ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಾಸ ಸಾಹಿತ್ಯದ ಬಗ್ಗೆ ಗೋಷ್ಠಿಗಳಾಗಲಿ, ವಿಚಾರ ಸಂಕಿರಣಗಳಾಗಲಿ ನಡೆದಿರುವುದು ನಾ ಕಾಣೆ. ಈ ಬಾರಿಯಾದರೂ ಸಾಹಿತ್ಯ ಸಮ್ಮೇಳನದಲ್ಲಿ ದಾಸ ಸಾಹಿತ್ಯಕ್ಕೆ ಮನ್ನಣೆ ನೀಡುವ ಮೂಲಕ, ಕನ್ನಡ ಸಾಹಿತ್ಯಕ್ಕೆ ತಮ್ಮ ದಾಸವಾಣಿಯ ಮೂಲಕ ಅಮೂಲ್ಯ ಕೊಡುಗೆ ನೀಡಿರುವ ಹರಿದಾಸ ಜ್ಞಾನ ಜ್ಯೋತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಸೂಚಿಸುವುದೆಂದು ಆಶಿಸುತ್ತೇನೆ.

ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಮಹೇಶ್ ಜೋಶಿಯವರು ಗಮನ ಹರಿಸಿ ದಾಸಸಾಹಿತ್ಯಕ್ಕೂ ಮನ್ನಣೆ ನೀಡಿ ಈ ಬಾರಿಯ ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ದಾಸಸಾಹಿತ್ಯಕ್ಕೂ ಸಮಯ ನೀಡಬೇಕಾಗಿ ಕಳ ಕಳಿಯ ಮನವಿ.

ಡಾ. ಪ್ರಕಾಶ್.ಕೆ.ನಾಡಿಗ್
ತುಮಕೂರು

Related post