ವಸಂತಸೇನೆ
ವಸಂತಸೇನೆಯ ತೆರೆಯ ಮೇಲಿನ ದಂಡಯಾತ್ರೆಗಳು
ವಸಂತಸೇನೆಯ ಕಥೆಯತ್ತ ಸಿನೆಮಾ ಮಂದಿಯ ಆಸಕ್ತಿ ಉಂಟಾಗಲು ಕಾರಣ 5ನೇ ಶತಮಾನದ ಮಹಾನ್ ಸಂಸ್ಕೃತ ಭಾಷಾ ಕವಿ, ನಾಟಕಕಾರ ಶೂದ್ರಕ ನೆಂಬ ಮಹಾ ಪಂಡಿತ ರಚಿಸಿದ “ಮೃಚ್ಛಕಟಿಕ’ ಎಂಬ ನಾಟಕ. ವಸಂತಸೇನೆ ಎಂಬ ಅಪ್ರತಿಮ ಸುಂದರಿ ಗಣಿಕೆಯ ಬದುಕಿನ ಕಥಾನಕ, ಚಾರುದತ್ತನೆಂಬ ಬ್ರಾಹ್ಮಣ ಗಣಿಕ ವಸಂತಸೇನೆಯ ಮೋಹದಲ್ಲಿ ಬಿದ್ದು ಅನುಭವಿಸುವ ಕಷ್ಟ ಕೋಟಲೆಗಳ ರಂಜನೀಯ ಪ್ರಸ್ತುತಿ.
ಮೊದಲಬಾರಿಗೆ ಮೃಚ್ಛಕಟಿಕ ನಾಟಕ ಕನ್ನಡ ಚಲನಚಿತ್ರವಾಗಿದ್ದು 1941 ರಲ್ಲಿ. ಕನ್ನಡ ಚಿತ್ರರಂಗದ ಭೀಷ್ಮರೆಂದೇ ಕರೆಯಲಾಗುವ ಆರ್. ನಾಗೇಂದ್ರರಾಯರು ಹಾಗು ನಾಟಕ ಕ್ಷೇತ್ರದ ಮೇರು ವ್ಯಕ್ತಿ ಸುಬ್ಬಯ್ಯನಾಯ್ಡು (ಅಪ್ರತಿಮ ನಟ ಲೋಕೇಶ್ ಅವರ ತಂದೆ) ಇಬ್ಬರು ಒಂದಾಗಿ ಮದ್ರಾಸಿನ ಎ ವಿ ಎಂ ಸ್ಟುಡಿಯೋ ಮಾಲೀಕರು, ದಕ್ಷಿಣ ಭಾರತದ ಚಿತ್ರರಂಗದ ಹಿರಿಯ ಉದ್ಯಮಿ ಮೇಯಪ್ಪ ಚೆಟ್ಟಿಯಾರ್ ರೊಂದಿಗೆ ಪಾಲುದಾರಿಕೆಯಲ್ಲಿ “ವಸಂತಸೇನ” ಎಂಬ ಶೀರ್ಷಿಕೆಯಲ್ಲಿ ಶೂದ್ರಕನ ನಾಟಕವನ್ನು ತೆರೆಗೆ ತಂದರು. ರಾಮಯ್ಯಾರ್ ಸಿರೂರ್ ನಿರ್ದೇಶನದಲ್ಲಿ ಸುಬ್ಬಯ್ಯನಾಯ್ಡು ಚಾರುದತ್ತನಾಗಿ ನಾಗೇಂದ್ರರಾಯರು ಶಕಾರನೆಂಬ ವಿಲಕ್ಷಣ ಪಾತ್ರದಲ್ಲಿ ಹಾಗು ವಸಂತಸೇನೆಯಾಗಿ ಲಕ್ಷ್ಮಿಭಾಯಿ, ಚಾರುದತ್ತನ ಪುತ್ರನಾಗಿ ಬೇಬಿ ವಿನೋದ ಎಂಬ ಬಾಲನಟಿ, ಎಸ್ ಕೆ ಪದ್ಮಾದೇವಿ, ಮದನಿಕೆಯಾಗಿ ಹಾಗು ಆ ಕಾಲದ ಖ್ಯಾತ ನಟಿ ಏಣಾಕ್ಷಿ ರಾಮರಾವ್ ನಟಿಸಿದ ಈ ಚಿತ್ರ ಪ್ರೇಕ್ಷಕರಿಗೆ ಅಚ್ಚುಮೆಚ್ಚಾಗಿ ಯಶಸ್ವಿಯಾಯಿತು. ಬೆಳ್ಳಾವೆ ನರಹರಿ ಶಾಸ್ತ್ರಿಗಳು, ಬಿ. ಪುಟ್ಟಸ್ವಾಮಯ್ಯ, ಸಂಭಾಷಣೆ ಹಾಡುಗಳನ್ನು ಒದಗಿಸಿದರೆ, ಪದ್ಮನಾಭಶಾಸ್ತ್ರಿಗಳು ಸಂಗೀತ ನೀಡಿದರು.
1942 ರಲ್ಲಿ ವಸಂತಸೇನೆ ಹಿಂದಿಯಲ್ಲಿ ತಯಾರಾದಾಗ ಗಜಾನನ ಜಾಗೀರ್ದಾರ್, ಚಾರುದತ್ತನಾಗಿ ಹಾಗೂ ವನಮಾಲಾ ವಸಂತಸೇನೆಯಾಗಿ ಅಭಿನಯಿಸಿದ್ದರು.
ಮತ್ತೊಂದು ಬಾರಿ ವಸಂತಸೇನೆ 1984 ರಲ್ಲಿ ಹಿಂದಿಯಲ್ಲಿ ತಯಾರಾದಾಗ ಅದರ ಹೆಸರು “ಉತ್ಸವ್’ ಎಂದಿತ್ತು. ಇದರ ನಿರ್ಮಾಪಕ ಮತ್ಯಾರು ಅಲ್ಲ ಹಿಂದಿ ಸಿನೆಮಾದ ಖ್ಯಾತ ನಟ ಶಶಿ ಕಪೂರ್. ನಿರ್ದೇಶಕರು ಸಾಹಿತ್ಯ, ನಾಟಕ, ಚಲನಚಿತ್ರರಂಗದಲ್ಲಿ ರಾಷ್ಟ್ರವ್ಯಾಪಿ ಹೆಸರಾಗಿದ್ದ ಗಿರೀಶ್ ಕಾರ್ನಾಡ್. ಎಲ್ಲಕ್ಕೂ ಮೀರಿದ ಅಂಶವೆಂದರೆ ವಸಂತಸೇನೆಯಾಗಿ ಪ್ರೇಕ್ಷಕರ ಎದೆಬಡಿತ ತೀವ್ರವಾಗಿಸಿದ್ದು ಒನ್ ಅಂಡ್ ಓನ್ಲಿ ರೇಖಾ.ಈ ಚಿತ್ರದ ಮೂಲಕ ಶೇಖರ್ ಸುಮನ್ ತೆರೆಗೆ ಕಾಲಿಟ್ಟು ಚಾರುದತ್ತನಾಗಿ ನಟಿಸಿದರು.
ನಮ್ಮ ಅಚ್ಚುಮೆಚ್ಚಿನ ಶಂಕರ್ ನಾಗ್ ಸಜ್ಜಾಲನೆಂಬ ಕಳ್ಳನ ಪಾತ್ರದಲ್ಲಿ ರಂಜಿಸಿದರೆ, ಗಬ್ಬರ್ ಸಿಂಗ್ ಅಮ್ಜದ್ ಖಾನ್ ಕಾಮಸೂತ್ರ ರಚಿಸಿದ ವಾತ್ಸಾಯನ ಋಷಿಯಾಗಿ ಅಚ್ಚರಿಗೊಳಿಸಿದರು. ಸ್ವಯಂ ನಿರ್ಮಾಪಕನಾದ ಶಶಿಕಪೂರ್ ಶಕಾರನ ಪಾತ್ರವಹಿಸಿದ್ದರು.
ಲಕ್ಷ್ಮೀಕಾಂತ ಪ್ಯಾರೇಲಾಲ್ ರ ಸಂಗೀತ ಹಾಗೂ ಅಶೋಕ್ ಮೆಹ್ತಾರ ಅದ್ಬುತ ಛಾಯಾಗ್ರಹಣವಿದ್ದ ಈ ಚಿತ್ರವನ್ನು ಶಿವಮೊಗ್ಗ ಜಿಲ್ಲೆಯ ಪ್ರಾಚೀನ ಪರಿಸರದಲ್ಲಿ ಚಿತ್ರೀಕರಿಸಲಾಗಿತ್ತು. ರೇಖಾ ಈ ಚಿತ್ರಕ್ಕಾಗಿ ಬಹುಪಾಲು ನಗ್ನವಾಗಿ ಬಂದು ದೃಶ್ಯದಲ್ಲಿ ಕಾಣಿಸಿಕೊಂಡರು. ಅಲ್ಲಿ ಅಶ್ಲೀಲತೆ ಎಂಬುದಿರಲಿಲ್ಲ.
ಒಮ್ಮೆ ನೋಡಲೇಬೇಕಾದ ಚಿತ್ರ “ಉತ್ಸವ್”
ಡಿ ಎನ್ ಸುರೇಶ್
ಹವ್ಯಾಸಿ ಪತ್ರಕರ್ತರು
1 Comment
Interesting article. Good job.