ಸತ್ಯ ಹರಿಶ್ಚಂದ್ರ
ಸತ್ಯ ಹರಿಶ್ಚಂದ್ರ ಡಾ. ರಾಜಕುಮಾರ್ ಅಭಿನಯದ ಶ್ರೇಷ್ಠ ಹಾಗು ಯಶಸ್ವೀ ಚಿತ್ರಗಳಲೊಂದು. ಈ ಚಿತ್ರದಲ್ಲಿ ಪಂಡರೀಭಾಯಿ (ಚಂದ್ರಮತಿ) ಉದಯಕುಮಾರ್ (ವಿಶ್ವಾಮಿತ್ರ) ನರಸಿಂಹರಾಜು (ನಕ್ಷತ್ರಿಕ), ಎಂಪಿ ಶಂಕರ್ (ವೀರಭಾವು), ಕೆ ಎಸ್ ಅಶ್ವಥ್, ದ್ವಾರಕೀಶ್, ಮೇಕ್ಅಪ್ ಸುಬ್ಬಣ್ಣ,ಮತ್ತಿತರ ಕಲಾವಿದರಿಂದ ಕೂಡಿದ್ದು.
ವಿಜಯ ಪ್ರೊಡಕ್ಷನ್ ನ, ಕೆ ವಿ ರೆಡ್ಡಿ ನಿರ್ಮಿಸಿ ಕನ್ನಡದ ಮೇರು ಚಿತ್ರಸಾಹಿತಿಯಾದ ಹುಣಸೂರು ಕೃಷ್ಣಮೂರ್ತಿ, ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯವನ್ನಾಧರಿಸಿ ನಿರ್ದೇಶಿಸಿದ್ದಾರೆ. ಹುಣಸೂರರು ಬರೆದ ‘ನಮೋ ಭೂತನಾಥ’, ಕುಲದಲ್ಲಿ ಕೀಳ್ಯಾವುದೋ, ಮುಂತಾದ ಹಾಡುಗಳು ಪೆಂಡ್ಯಾಲ ನಾಗೇಶ್ವರ್ ರಾವ್ ರ ರಾಗಸಂಯೋಜನೆಯಲ್ಲಿ ಬಹು ಜನಪ್ರಿಯವಾಗಿದ್ದವು. ಆ ಕಾಲದಲ್ಲೇ ಎಂಟು ಲಕ್ಷ ರೂಪಾಯಿಗೂ ಮೀರಿದ ಅಪಾರವೆಚ್ಚದಲ್ಲಿ ಅಧೂರಿಯಾಗಿ ತಯಾರಾಗಿತ್ತು.
ತಲೆಮಾರುಗಳು ಕಳೆದರು ಈಗಲೂ ರಾಜಕುಮಾರ್ ಅಭಿನಯದ ಈ ಚಿತ್ರ ಇಂದಿನ ಪೀಳಿಗೆಯ ಪ್ರೇಕ್ಷಕರಿಗೂ ಹರಿಶ್ಚಂದ್ರ ಚಿರಪರಿಚಿತ. ಆದರೆ ಈ ಚಿತ್ರಕ್ಕೂ ಮೊದಲು ಎರಡು ದಶಕಗಳ ಹಿಂದೆ ಇದೆ ಹರಿಶ್ಚಂದ್ರನ ಕಥೆ ಕನ್ನಡದಲ್ಲೇ 1943 ರಲ್ಲಿ ತಯಾರಾಗಿ ಅಂದಿನ ಕಾಲದ ಪ್ರೇಕ್ಷಕರಿಗೆ ರಂಜಿಸಿತ್ತು ಎಂಬುದು ಗೊತ್ತೇ?
ಆ ದಿನಗಳಲ್ಲಿ ಕನ್ನಡದ ರಂಗಭೂಮಿಯಲ್ಲಿ ಅದ್ಬುತ ನಟರಾಗಿದ್ದ ಎಂ ವಿ ಸುಬ್ಬಯ್ಯ ನಾಯ್ಡು (ಚಿತ್ರನಟ ಲೋಕೇಶ್ ರವರ ತಂದೆ) ರವರು ಸಂಗೀತ ಸಾಮ್ರಾಜ್ಯ ನಾಟಕ ಮಂಡಳಿ ನಾಟಕ ಕಂಪನಿಯ ಮಾಲೀಕರಾಗಿದ್ದು, ಭಕ್ತ ಅಂಬರೀಶ, ಶ್ರೀ ರಾಮಜನನ ಮುಂತಾದ ನಾಟಕಗಳನ್ನು ನೋಡಿ ಜನ ಮೈ ಮರೆಯುತ್ತಿದ್ದರು. ಸುಬ್ಬಯ್ಯ ನಾಯ್ಡು (ಹರಿಶ್ಚಂದ್ರ), ಲಕ್ಷ್ಮಿಭಾಯಿ (ಚಂದ್ರಮತಿ), ಬಿ ಎಸ್ ರಾಜೈಆಂಗಾರ್(ನಾರದ) ಮುಂತಾದವರು ನಟಿಸಿದ್ದ ಈ ಚಿತ್ರ ಮದ್ರಾಸಿನ ಚಿತ್ರೋದ್ಯಮಿ ಎ ವಿ ಮೇಯಪ್ಪನ್ ರೊಂದಿಗೆ ಪಾಲುದಾರಿಕೆಯಲ್ಲಿ ಆರ್ ನಾಗೇಂದ್ರರಾಯರು ನಿರ್ಮಿಸಿ ಅವರೇ ನಿರ್ದೇಶಿಸಿದ್ದರು. ಮದ್ರಾಸ್ ಪ್ರಗತಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ಈ ಚಿತ್ರ ಪಿ ವಿ ಕೃಷ್ಣ ಅಯ್ಯರ್ ರವರ ಛಾಯಾಗ್ರಹಣ ಮತ್ತು ಆರ್ ಸುದರ್ಶನ್ ರವರ ಸಂಗೀತ ಹೊಂದಿದ್ದು ಅತ್ಯಂತ ಯಶಸ್ವಿಯಾಗಿ ಧಾರವಾಡದಲ್ಲಿ 100 ದಿನ ಪ್ರದರ್ಶನ ಕಂಡಿತ್ತು. ತಮಿಳು ಭಾಷೆಗೆ ಡಬ್ ಆಗಿ ಭಾರತದಲ್ಲಿ ಬೇರೊಂದು ಭಾಷೆಗೆ ಡಬ್ ಆದ ಮೊದಲ ಚಿತ್ರವೆನಿಸಿತು.
ಡಿ ಎನ್ ಸುರೇಶ್
(ಹವ್ಯಾಸಿ ಪತ್ರಕರ್ತರು)