ಸತ್ಯ ಹರಿಶ್ಚಂದ್ರ – ಮುಂದುವರೆದ ಭಾಗ
ಕಳೆದ ವಾರ ಹರಿಶ್ಚಂದ್ರ ಕಥೆಯಾಧರಿಸಿ ಕನ್ನಡದಲ್ಲಿ ತೆರೆಕಂಡ ಎರಡು ಚಿತ್ರಗಳನ್ನು ನೆನಪು ಮಾಡಿಕೊಂಡೆವಷ್ಟೇ. ಅದರಲ್ಲಿ ಒಂದು ಮಾಹಿತಿ ಜಾರಿಹೋಗಿದೆ. ವಿಜಯ ಪ್ರೊಡಕ್ಷನ್ ರವರು ಅದನ್ನು ಏಕ ಕಾಲದಲ್ಲಿ ಕನ್ನಡ ಮತ್ತು ತೆಲಗು ಎರಡೂ ಭಾಷೆಯಲ್ಲಿ ನಿರ್ಮಿಸಿದ್ದು ತೆಲುಗಿನಲ್ಲಿ ಎನ್. ಟಿ. ರಾಮರಾವ್ ಹರಿಶ್ಚಂದ್ರ ನಾಗಿ ನಟಿಸಿದ್ದರು. ಇದು ಮಾತ್ರವಲ್ಲದೆ 1963 ರಲ್ಲಿ ಹರಿಶ್ಚಂದ್ರ ಕಥೆ ಹಿಂದಿಯಲ್ಲಿ ತೆರೆ ಕಂಡಿತ್ತು. ಆ ಚಿತ್ರದ ಹೆಸರು “ಹರಿಶ್ಚಂದ್ರ ತಾರಾಮತಿ” ಎಂದು.
ಬಿ. ಕೆ. ಆದರ್ಶ್ ನಿರ್ದೇಶಿಸಿದ ಈ ಚಿತ್ರದಲ್ಲಿ ಹಿರಿಯ ಮೇರು ನಟ ರಾಜ್ ಕಪೂರ್ ನ ತಂದೆ ಪೃತ್ವಿರಾಜ್ ಕಪೂರ್ (ಹರಿಶ್ಚಂದ್ರ), ಜಯಮಾಲಾ ಆದರ್ಶ್ (ತಾರಾಮತಿ), ಬಿ ಎಂ ವ್ಯಾಸ್ ತಿವಾರಿ, ಜೀವನ್ ಮುಂತಾದವರು ನಟಿಸಿದ್ದು. ಕವಿ ಪ್ರದೀಪರ ಗೀತೆಗಳಿಗೆ ಲಕ್ಷ್ಮಿಕಾಂತ್ ಪ್ಯಾರೇಲಾಲ್ ರಾಗ ಸಂಯೋಜನೆ ಮಾಡಿದ್ದಾರೆ. “ಸೂರಜ್ ರೇ ಜಲ್ತೇ ರಹನ… ಜಗತ್ ಕಿ ರೋಷನಿ ಕೇಲಿಯೇ… ಕರೊಡೊಂಕೆ ಲಿಯೇ… ಎಂಬ ಅರ್ಥಗರ್ಭಿತ ಗೀತೆ ಹೇಮಂತ್ ಕುಮಾರ್ ರವರ ಕಂಠದಲ್ಲಿ ಇಂದಿಗೂ ಶ್ರೇಷ್ಠ ಗೀತೆಗಳಲ್ಲಿ ಒಂದೆನಿಸಿದೆ.
ನವಕೋಟಿ ನಾರಾಯಣ – ಪುರಂದರದಾಸರು
ದಾಸವರೇಣ್ಯ ಪುರಂದರದಾಸರ ಬದುಕಿನ ಕಥೆಯನ್ನು ಶ್ಯಾಮಪ್ರಸಾದ್ ಮೂವೀಸ್ ನ ಡಿ. ಆರ್ ನಾಯ್ಡು ನಿರ್ಮಿಸಿ ಎಸ್.ಕೆ. ಎ ಚಾರಿ ನಿರ್ದೇಶಿಸಿದ ಚಿತ್ರವೇ “ನವಕೋಟಿ ನಾರಾಯಣ” 1964 . ವರನಟ ರಾಜ್ (ಪುರಂದರದಾಸ), ಸಾಹುಕಾರ್ ಜಾನಕಿ (ದಸರಾ ಪತ್ನಿ ಸರಸ್ವತಿ) ಹಾಗು ಡಿಕ್ಕಿ ಮಾಧವರಾವ್, ಕೆಂಪರಾಜ್ (ಕರ್ನಾಟಕದ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ರವರ ಸಹೋದರ), ಎಚ್ ಆರ್ ಶಾಸ್ತ್ರೀ, ಬಿ ವಿ ರಾಧಾ, ವಾಸುದೇವ ಗಿರಿ ಭೂಜಿ ಮುಂತಾದವರು ನಟಿಸಿದ್ದರು.
ಇದೇ ಪುರಂದರ ದಾಸರ ಕಥೆಯನ್ನು ಪಂಡರೀಭಾಯಿ ಯವರೊಂದಿಗೆ ಜಯಲಕ್ಷ್ಮಿ ಎಂಬುವವರು “ಶ್ರೀ ಪುರಂದರದಾಸರು” ಎಂಬ ಹೆಸರಿನಲ್ಲಿ 1967 ರಲ್ಲಿ ನಿರ್ಮಿಸಿದ್ದರು. ಶ್ರೇಷ್ಠ ನಟ ಕೆ. ಎಸ್. ಅಶ್ವಥ್, ಪುರಂದರದಾಸರಾಗಿ ಅಮೋಘವಾಗಿ ನಟಿಸಿದ್ದರು ಸಹ ಕಲಾವಿದರಾಗಿ ಉದಯಕುಮಾರ್, ಆರ್ ನಾಗೇಂದ್ರರಾಯರು, ದ್ವಾರಕೀಶ್, ನರಸಿಂಹರಾಜು, ಬಾಲಕೃಷ್ಣ, ರಾಘವೇಂದ್ರರಾವ್, ಗಣಪತಿ ಭಟ್, ಶಿವರಾಂ, ಮುಂತಾದ ಜನಪ್ರಿಯ ನಟನಟಿಯರಿದ್ದರು. ಈ ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನದ ರೂವಾರಿಗಳಾಗಿ ರಾಮಮೂರ್ತಿ ಮತ್ತು ಸಿ. ವಿ. ರಾಜು ಅದ್ಬುತ ಕೆಲಸ ಮಾಡಿದ್ದಾರೆ.
ಈ ಚಿತ್ರದಲ್ಲಿ ಪುರಂದರದಾಸರ ಕೃತಿಗಳನ್ನು ಸಂಗೀತ ವಿದ್ವಾಂಸರಾದ ಬಾಲಮುರಳಿ ಕೃಷ್ಣ ರವರು ಸೊಗಸಾಗಿ ಹಾಡಿದ್ದಾರೆ. ಪಿ. ಎನ್. ಪಾಂಡುರಂಗ ಈ ಚಿತ್ರದ ಸಂಗೀತ ನಿರ್ದೇಶಕರು.
ಮುಂದಿನ ವಾರ ಮತ್ತಷ್ಟು ಮಾಹಿತಿಯೊಂದಿಗೆ…
ಡಿ. ಎನ್. ಸುರೇಶ್
ಹವ್ಯಾಸಿ ಪತ್ರಕರ್ತರು