ತೆರೆಯ ಮೇಲಿನ ಇಬ್ಬರು ಹರಿಶ್ಚಂದ್ರರ ವಿವರ ಪ್ರವರದ ಅವಲೋಕನ ಮಾಡಿದ ನನಗೆ ಇಬ್ಬರು ಪುರಂದರದಾಸರು ಕಳೆದ ವಾರ ದರ್ಶನ ನೀಡಿದರಷ್ಟೆ. ಈ ವಾರ ಇಬ್ಬರು ಕಾಳಿದಾಸರು ಅಚ್ಚರಿಗೊಳಿಸಿದ್ದಾರೆ. 1983 ರಲ್ಲಿ ತೆರೆಕಂಡ ಕವಿರತ್ನ ಕಾಳಿದಾಸ ಚಿತ್ರದಲ್ಲಿ ಕಾಳಿದಾಸನಾಗಿ ನಮ್ಮ ಮೈ ಮರೆಯುವಂತೆ ತನ್ಮಯಗೊಳಿಸಿದರೆ, ಭೋಜರಾಜನಾಗಿ ಅಚ್ಚರಿಗೊಳಿಸಿದ್ದರು. ವಿದ್ಯಾಧರೆಯಾಗಿ ಜಯಪ್ರದ ಸಮ್ಮೋಹನ ಗೊಳಿಸಿದ್ದರು. ಕಾಳಿಕಾದೇವಿಯಾಗಿ ಸಾಕ್ಷಾತ್ ಜಗನ್ಮಾತೆಯೇ ಆಗಿ ಕಂಡಿದ್ದರು. ರೇಣುಕಾಶರ್ಮರ ಚಿತ್ರಕಥೆ ಮತ್ತು ಸಮರ್ಥ ನಿರ್ದೇಶನದಲ್ಲಿ ಈ ಚಿತ್ರ ನಿಸ್ಸಂದೇಹವಾಗಿ ಪುಷ್ಕಳ ಭಾರಿ ಭೂರಿ ಭೋಜನವೇ ಆಗಿತ್ತು. ಚಿ. ಉದಯಶಂಕರ್ ರವರ ಸಂಭಾಷಣೆ ಮತ್ತು ಗೀತೆಗಳು ಅವರ ಸರ್ವಕಾಲೀನ ಶ್ರೇಷ್ಠವೆನಿಸುವ ರಚನೆಗಳಲ್ಲೊಂದು ಎಂದರೆ ಅತಿಶಯವಲ್ಲ. ಇಲ್ಲೊಂದು ಹಾಡಿನ ಬಗ್ಗೆ ಹೇಳಲೇಬೇಕು. ವಿ. ಶಾಂತಾರಾಮ್ ಕಾಳಿದಾಸನ ‘ಅಭಿಜ್ಞಾನ ಶಾಕುಂತಲ’ ಆಧರಿಸಿ “ಸ್ತ್ರೀ” ಎಂಬ ಚಿತ್ರ ನಿರ್ಮಿಸಿ ತಾವೇ ದುಷ್ಯಂತನಾಗಿ ತಮ್ಮ ಪತ್ನಿ ಸಂಧ್ಯಾಳನ್ನು ಶಕುಂತಲೆಯನ್ನಾಗಿಸಿದ್ದರು. ಅದರಲ್ಲಿ ಶಕುಂತಲೆ ತನ್ನ ಪ್ರಿಯನ ನೆನಪಿನಲ್ಲಿ “ಓ ಓ ನಿರ್ದಯೀ ಪ್ರೀತಮ್ ಎಂದು ಹಾಡುತ್ತಾಳೆ. ಆ ಹಾಡಿನ ರಾಗದ ಜಾಡಿನಲ್ಲೇ “ಓ ಓ ಓ ಪ್ರಿಯತಮ ಕರುಣೆಯ ತೋರೆಯ” ಎಂಬ ಹಾಡನ್ನು ವರನಟ ಡಾ. ರಾಜಕುಮಾರ್ ಮತ್ತು ಜಯಪ್ರದ ರವರ ಅಭಿನಯದಲ್ಲಿ ಯುಗಳ ಗೀತೆಯಾಗಿ ಚಿತ್ರಿಸಲಾಗಿದ್ದು ಅದು ಭಾರಿ ಜನಪ್ರಿಯವಾಯಿತು.
ನೀವು ಕನ್ನಡ ಮತ್ತು ಹಿಂದಿಯ ಹಾಡುಗಳನ್ನು ಗಮನಿಸಿದರೆ ಎರಡು ಹಾಡುಗಳ ಸ್ವರ ಸಂಯೋಜನೆ, ಗೀತೆ ರಚನೆಗಳಲ್ಲಿನ ಸಾಮ್ಯ ಕಂಡು ಅಚ್ಚರಿಗೊಳ್ಳುವಿರಿ. ಡಾ. ರಾಜಕುಮಾರ್ ಅಭಿನಯಿಸಿದ 200 ಚಿತ್ರಗಳಿಂದ 10 ಸರ್ವಶ್ರೇಷ್ಠ ಚಿತ್ರಗಳನ್ನು ಆಯ್ದು ಒಂದು ಪಟ್ಟಿ ಮಾಡಿದರೆ. ಅದರಲ್ಲಿ ಕವಿರತ್ನ ಕಾಳಿದಾಸ ಚಿತ್ರದ ಹೆಸರು ಇದ್ದೆ ಇರುತ್ತದೆ.
ರಾಜಕುಮಾರ್ ಅಭಿನಯದ ಕಾಳಿದಾಸ ತೆರೆಗೆ ಬರುವುದಕ್ಕೂ 28 ವರ್ಷಗಳ ಮೊದಲೇ ಲಲಿತಕಲಾ ಫಿಲಂಸ್ ಲಾಂಛನದಲ್ಲಿ ಹೊನ್ನಪ್ಪ ಭಾಗವತರು ಕಾಳಿದಾಸನಾಗಿ ನಟಿಸಿ ನಿರ್ಮಿಸಿದ “ಮಹಾ ಕವಿ ಕಾಳಿದಾಸ” (1955) ದಲ್ಲಿ ಬಿ. ಸರೋಜಾದೇವಿ, ನರಸಿಂಹರಾಜು, ರಾಘವೇಂದ್ರರಾವ್ ಮುಂತಾದವರು ನಟಿಸಿದ್ದು ಕು.ರಾ. ಸೀತಾರಾಮಶಾಸ್ತ್ರಿಗಳು ಚಿತ್ರಕಥೆ ಹಾಡುಗಳು ರಚನೆ ಮಾಡಿ ನಿರ್ದೇಶಿಸಿದರು. “ಕೋಲಣ್ಣ ಕೋಲೆ ತಾನಿ ತಂದನ್ನ…” ಎಂಬ ಜಾನಪದ ಧಾಟಿಯ ಹಾಡು ಹಾಗು ಹೊನ್ನಪ್ಪ ಭಾಗವತರೇ ಹಾಡಿದ “ಶೃಂಗಾರವಾಹಿನಿ ಮನಮೋಹಿನಿ ಚಿರಕಾಂತಮಣಿ ಕಾಮಿನಿ…” ಎಂಬ ಹಾಡುಗಳು ಆ ದಿನಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದವು. ಆ ವರ್ಷದಲ್ಲಿ ಈ ಚಿತ್ರಕ್ಕೆ ರಾಷ್ಟ್ರಮಟ್ಟದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿತ್ತು. ತೆರೆಯ ಮೇಲೆ ಮೆರೆದ ಇನ್ನು ಹಲವು ಕಾಳಿದಾಸರನ್ನು ಮುಂದಿನವಾರ ಸಂದರ್ಶಿಸೋಣವೇ?!
ಡಿ ಎನ್ ಸುರೇಶ್
ಹವ್ಯಾಸಿ ಪತ್ರಕರ್ತರು