ಸುರಕ್ಷಾ ಜಾಗೃತಿ – 2
(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು)
ಕಳೆದ ಸಂಚಿಕೆಯಿಂದ….ಮುಂದೆ ಮನುಷ್ಯನ ವಿಕಾಸ ಕಾಲಕ್ರಮೇಣ ಬದಲಾವಣೆ ಆಗುತ್ತಿದ್ದಂತೆಯೇ ಹಲವಾರು ಮಾರ್ಪಾಡುಗಳಾದವು, ಆ ಎಲ್ಲಾ ಬದಲಾವಣೆಗಳಿಗೆ ಮೈಯೊಡ್ಡಿ ಮನುಜ ವಿಕಾಸಗೊಳ್ಳುತ್ತ ಈ ಹಂತವನ್ನು ತಲುಪಿದ. ಈ ಹಂತದಲ್ಲಿ ಚಾರ್ಲ್ಸ್ ಡಾರ್ವಿನ್ ರವರ ವಿಕಾಸ ವಾದದ ಮೇಲೆ ಕೊಂಚ ಬೆಳಕನ್ನು ಹಾಯಿಸೋಣ.
ಈತ ತನ್ನ ವಿಕಾಸವಾದದ ಸಿದ್ಧಾಂತದಲ್ಲಿ “Survival for Existence” ಅಂತ ಪ್ರತಿಪಾದಿಸಿದ್ದಾನೆ ಮತ್ತು “Stronger will live and weaker will die” ಅಂತ ನಮೂದಿಸಿದ್ದಾನೆ. ಅಂದರೆ “ಉಳಿವಿಗಾಗಿ ಹೋರಾಟ” ಮತ್ತು “ಬಲಶಾಲಿಗಳು ಬದುಕುತ್ತಾರೆ, ದುರ್ಬಲರು ಸಾಯುತ್ತಾರೆ” ಎಂದು ಅರ್ಥೈಸಿಕೊಳ್ಳಬಹುದು.
ರಕ್ಷಣೆಯ ವಿಚಾರದಲ್ಲಿ ಈ ಮೇಲಿನ ಸಿದ್ದಾಂತ ತುಂಬಾ ಸೂಕ್ತವಾಗಿದೆ ಮತ್ತು ಬಹಳ ಉಪಯುಕ್ತವಾದ ಸಲಹೆಯೂ ಆಗಿದೆ. ಇದನ್ನು ಮುತ್ತಿನಂತ ಮಾತು ಅಂತಲೂ ಕರೆಯಬಹುದು ಮತ್ತು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಲೇ ಬೇಕಾದಂತಹ ಉಕ್ತಿಯಾಗಿದೆ. ಇಲ್ಲಿ ನಾವೆಲ್ಲ ಒಂದಲ್ಲ ಒಂದು ರೀತಿಯಲ್ಲಿ ನಮ್ಮತನಕ್ಕಾಗಿ, ನಮ್ಮವರಿಗಾಗಿ, ನಮ್ಮವರ ಉಳಿವಿಗಾಗಿ ಒಂದಲ್ಲ ಒಂದು ಹೋರಾಟವನ್ನು ಪ್ರತಿದಿನ ಮಾಡುತ್ತ ಬಂದಿದ್ದೇವೆ. ಈ ಹೋರಾಟದಲ್ಲಿ ನಾವೆಲ್ಲರೂ ನಮ್ಮನ್ನು ನಾವು ಬಲಶಾಲಿಗಳನ್ನಾಗಿ ಮಾಡಿಕೊಳ್ಳಬೇಕಾದದ್ದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗಾದರೆ ನಮ್ಮನ್ನು ನಾವು ಬಲಶಾಲಿಗಳನ್ನಾಗಿ ಪರಿವರ್ತಿಸುವುದು ಹೇಗೆ?
ಮೊದಲಿಗೆ ನಾವು ನಮ್ಮ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಅದು ನಮ್ಮ ಬಗ್ಗೆಯೂ ಆಗಿರಬಹುದು, ನಮ್ಮವರ ಬಗ್ಗೆಯೂ ಆಗಿರಬಹುದು. ಒಮ್ಮೆ ನಾವು ಈ ವಿಚಾರದ ಬಗ್ಗೆ ಬಹಳ ಸೂಕ್ಷ್ಮ ವಾಗಿ ಗಮನಹರಿಸಿದಾಗ ನಮಗೆ ನಮ್ಮಲ್ಲಿರುವಂತಹ ನ್ಯೂನತೆಗಳು ಗೋಚರಿಸುತ್ತವೆ. ಒಮ್ಮೆ ನಮಗೆ ನಮ್ಮ ನ್ಯೂನತೆಗಳ ತಿಳುವಳಿಕೆ ಸಿಕ್ಕ ಕೂಡಲೇ ನಾವು ಅದರ ಬಗ್ಗೆ ಯೋಚಿಸಿ ಒಂದೊಂದಾಗಿ ಈ ನ್ಯೂನತೆಗಳನ್ನು ಸರಿಪಡಿಸಲು ಆರಂಭಿಸಿ ಅವುಗಳಿಂದ ಮುಕ್ತರಾಗಿ ನಮ್ಮನ್ನು ನಾವು ಬಲಶಾಲಿಗಳನ್ನಾಗಿ ಪರಿವರ್ತಿಸಿಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ಕೂಡ ನಮ್ಮಲ್ಲಿರುವ ನ್ಯೂನತೆಗಳ ಬಗ್ಗೆ ನಮ್ಮ ಎದುರಾಳಿಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಡಬಾರದು.
ಹೀಗೆ ಈ ಜೀವನದ ಹೋರಾಟದಲ್ಲಿ ಉಳಿವಿಗಾಗಿ ನಮ್ಮನ್ನು ನಾವು ಪ್ರತಿಯೊಂದು ಹೆಜ್ಜೆಯಲ್ಲಿಯೂ ಬಲಶಾಲಿಗಳನ್ನಾಗಿ ಮಾಡುತ್ತ ನಮ್ಮನ್ನು ನಾವು ರಕ್ಷಣೆಯ ಪಥದಲ್ಲಿ ಕೊಂಡೊಯ್ಯಬೇಕು, ನಮ್ಮನ್ನು ನಾವು ಬಲಶಾಲಿಗಳನ್ನಾಗಿ ಮಾಡಿಕೊಳ್ಳಬೇಕು. ಹಾಗಾದರೆ ಇದನ್ನು ಸಾಧಿಸುವುದು ಹೇಗೆ? ಮೊದಲಿಗೆ ನಾವು ನಮ್ಮನ್ನು ಸರಿಯಾಗಿ ಅರಿತುಕೊಳ್ಳಬೇಕು. ನಮ್ಮ ದೇಹರಚನೆ, ನಾವು ಬದುಕುತ್ತಿರುವ ಪ್ರಕೃತಿ, ಪ್ರದೇಶ, ನಮ್ಮ ಸುತ್ತಮುತ್ತಲು ಸಂಚರಿಸುವ ಜನರು..ಇತ್ಯಾದಿ.ನಮ್ಮ ದೇಹರಚನೆಯನ್ನು ನಾವೆಲ್ಲರೂ ಸರಿಯಾಗಿ ಗಮನಿಸಿದ್ದೇವೆಯೇ? ಗಮನಿಸಿದ್ದರೂ ನಾವು ಎಷ್ಟರ ಮಟ್ಟಿಗೆ ತಿಳಿದುಕೊಂಡಿದ್ದೇವೆ? ಭಗವಂತ ನಮ್ಮ ದೇಹವನ್ನು ರಚನೆ ಮಾಡುವಾಗ ನಮ್ಮ ದೇಹದ ರಕ್ಷಣೆಗಾಗಿ ಕೆಲವೊಂದು ಅಂಗಗಳನ್ನು ನಮಗೆ ವರದಾನವಾಗಿ ನೀಡಿದ್ದಾನೆ. ಈ ಅಂಗಗಳನ್ನು ಪಂಚಜ್ಞಾನೇಂದ್ರಿಯಗಳು ಅಂತ ಕರೆಯುತ್ತೇವೆ.
ಇವುಗಳು electronic sensors ರೀತಿಯಲ್ಲಿ ತಮ್ಮ ಕಾರ್ಯವನ್ನು ಪ್ರತಿದಿನ ಅನುಕ್ಷಣ ನಿರ್ವಹಿಸುತ್ತವೆ. ಈ ಪಂಚಜ್ಞಾನೇಂದ್ರಿಯಗಳು ಮತ್ತು ಅವುಗಳ ವಿಶೇಷತೆ – ಕಣ್ಣು – ದೃಷ್ಟಿ, ಕಿವಿ – ಶಬ್ದ,ಮೂಗು – ಪರಿಮಳ/ವಾಸನೆಗಳ ಗ್ರಹಿಸುವುದು, ನಾಲಗೆ- ರುಚಿ ಮತ್ತು ಚರ್ಮ- ಸ್ಪರ್ಶದ ಜೊತೆಗೆ ಹೊರಗಿನ ತಾಪಮಾನವನ್ನು ತಿಳಿಸಿಕೊಡುತ್ತವೆ. ನಾವು ಯಾವುದೇ ಸಂದರ್ಭದಲ್ಲಿಯೂ ಈ ಜ್ಞಾನೇಂದ್ರಿಯಗಳ ಸಂದೇಶಗಳನ್ನು ನಿರ್ಲಕ್ಷ್ಯಿಸಬಾರದು.ಈ ಜ್ಞಾನೇಂದ್ರಿಯಗಳು ಸಂದೇಶವನ್ನು ಮೆದುಳಿಗೆ ಕ್ಷಿಪ್ರವಾಗಿ ಕಳುಹಿಸಿ ಅದಕ್ಕೆ ತಕ್ಕನಾಗಿ ಪ್ರತಿಕ್ರಿಯೆಯನ್ನು ನಮಗೆ ದಯಪಾಲಿಸುತ್ತದೆ. ಉದಾ: ದೂಳು ಹಾರಿ ಬರುವಾಗ ಕಣ್ಣಿನ ರೆಪ್ಪೆ ಮುಚ್ಚಿಕೊಳ್ಳುತ್ತದೆ. ಅಷ್ಟೊಂದು ವೇಗದಿಂದ ಸಂದೇಶ ಕಣ್ಣಿನ ರೆಪ್ಪೆಗೆ ತಿಳಿದು ಅದು ಕಣ್ಣನ್ನು ಮುಚ್ಚಿಬಿಡುತ್ತದೆ.ಇನ್ನು ಪ್ರತಿದಿನ ನಾವು ಮಾಡುವ ಕೆಲಸಕಾರ್ಯದಲ್ಲಿ ಈ ಜ್ಞಾನೇಂದ್ರಿಯಗಳ ಸಂದೇಶಗಳನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳುತ್ತ ನಮ್ಮ ಕಾರ್ಯವನ್ನು ನಿರ್ವಹಿಸಬೇಕು. ನಮ್ಮ ಸುತ್ತಮುತ್ತಲಿನ ಜನರ ಹಾವಭಾವ, ಅವರ ಚಲನವಲನವನ್ನು “ಕಣ್ಣು” ಗಮನಿಸಿ ಏನೋ ಒಂದು ಸಂದೇಶವನ್ನು ಮೆದುಳಿಗೆ ಕಳುಹಿಸಿ ಅಲ್ಲಿಂದ ನಮ್ಮ ಒಳಮನಸ್ಸಿಗೆ ಏನೋ ಎಲ್ಲವೂ ಸರಿ ಇಲ್ಲ ಅಂತ ಒಂದು ಸಂಜ್ಞೆಯನ್ನು ಕಳುಹಿಸಿಕೊಟ್ಟಿರುತ್ತದೆ. ದುರಾದೃಷ್ಟವಶಾತ್ ನಾವೆಲ್ಲರೂ ಇಂತಹ ಸಂದರ್ಭಗಳಲ್ಲಿ ಇದನ್ನು ನಿರ್ಲಕ್ಷಿಸಿ ಏನಾದರೂ ಒಂದು ಅವಾಂತರಕ್ಕೆ ನಮ್ಮನ್ನು ನಾವು ಸಿಲುಕಿಸಿಕೊಳ್ಳುತ್ತೇವೆ. “ಕಿವಿ” ನಮ್ಮಸುತ್ತಮುತ್ತಲಿನ ಸೂಕ್ಷ್ಮ ಸಂವೇದನೆಯನ್ನು ನಮ್ಮ ಮೆದುಳಿನ ನರಮಂಡಲಕ್ಕೆ ಅಗಾಗ ಕಳುಹಿಸಿಕೊಡುತ್ತದೆ. ಕೆಲವೊಮ್ಮೆ ದಿನನಿತ್ಯದ ಈ ಸಂವೇದನೆಯ ಹೊರತಾಗಿ ಏನಾದರೂ ಬೇರೆ ರೀತಿಯ ಶಬ್ದದ ಸಂವೇದನೆ ಗ್ರಹಿಸಿದಾಗ ಅದು ಕೂಡಲೇ ಸಂದೇಶ ಮೆದುಳಿಗೆ ಕಳುಹಿಸಿ ತಕ್ಷಣ ಅಲ್ಲಿಂದ ಮರುಸಂದೇಶ ನಮ್ಮ ಮನಸ್ಸಿಗೆ ರವಾನಿಸಿರುತ್ತದೆ. ಆಗಲೂ ಕೂಡ ನಾವೆಲ್ಲರೂ ಅಸಡ್ಡೆ ತೋರಿಸಿ ಅವಘಡಗಳಿಗೆ ದಾರಿ ಮಾಡಿಕೊಡುತ್ತೇವೆ. (Don’t use ear phones -Please)
ಕೆಲವೊಮ್ಮೆ ಕೆಲವೊಬ್ಬರ “ಮೂಗಿ” ಗೆ ನಾವು ಏನೋ ಇವನದ್ದು ಒಳ್ಳೆಯ ನಾಯಿ ಮೂಗು ಅಂತ ಹೇಳುವುದುಂಟು. ಅಂದರೆ ಸೂಕ್ಷ್ಮಾತಿಸೂಕ್ಷ್ಮ ಪರಿಮಳ/ವಾಸನೆಯನ್ನು ಇವುಗಳು ಕ್ಷಣಮಾತ್ರದಲ್ಲಿ ಗ್ರಹಿಸುತ್ತವೆ. ನಮ್ಮ ಎದುರಲ್ಲಿ ಸುಳಿದ ವ್ಯಕ್ತಿ ಸುಗಂಧದ್ರವ್ಯವನ್ನು ಬಳಸಿದ್ದಾನೆಯೇ? ಧೂಮಪಾನ ಕೈಗೊಂಡಿರುವನೇ? ಮದ್ಯಪಾನ ಮಾಡಿರುವನೇ? ಅಂತ ನಮಗೆ ತಿಳಿಸಿ ಕೊಡುತ್ತದೆ. ಜೊತೆಗೆ ವಾತಾವರಣದಲ್ಲಿ ಉಂಟಾಗುವ ಬದಲಾವಣೆಯ ಬಗ್ಗೆಯೂ ಇದು ನಮ್ಮನ್ನು ಎಚ್ಚರಿಸುತ್ತದೆ…ಎಲ್ಲೋ ದೂರದಲ್ಲಿ ಮಳೆ ಆಗಿದ್ದರೆ ಆ ಮಳೆಯ ಮಣ್ಣಿನ ಪರಿಮಳ ನಮ್ಮ ಮೂಗಿಗೆ ಬಡಿಯುತ್ತದೆ ಅಲ್ಲವೇ?..ಎಲ್ಲೋ ಚಕ್ರಕ್ಕೆ ಬೆಂಕಿಹಾಕಿದ್ದರೆ ಆ ಹೊಗೆಯ ನಾತ ಮೂಗಿನ ಮೂಲಕ ನಮ್ಮನ್ನು ತಲುಪುವುದಿಲ್ಲವೇ? ಅದೇ ರೀತಿ ರೂಮನ್ನು ಸ್ವಚ್ಚಗೊಳಿಸಲು ಬಳಸುವ ಹಲವಾರು ಸಾಧನಗಳ ಪರಿಮಳ/ವಾಸನೆ ನಮಗೆ ಇದರ ಮೂಲಕ ತಿಳಿಯುತ್ತದೆ. ಇದೆಲ್ಲಕ್ಕಿಂತಲೂ LPG ಲೀಕ್ ಆದಾಗ ಮೂಗಿನ ಬಳಕೆ ಮತ್ತು ಅದರಿಂದ ಆಗುವಂತಹ ಪ್ರಯೋಜನವನ್ನು ಯಾರು ಮರೆಯುವುದಕ್ಕುಂಟು?”ನಾಲಗೆ” ಯ ಬಗ್ಗೆ ಏನು ಹೇಳುವುದು. ರುಚಿ ರುಚಿಯಾದ ತಿಂಡಿ ತೀರ್ಥದ ಸ್ವಾದವನ್ನು ಆನಂದಿಸುವುದು ಬಿಟ್ರೆ ಬೇರಿನ್ನೇನು ಕೆಲಸ ಈ ನಾಲಗೆಗೆ ಅಲ್ವೇ…? ಗಮನಿಸಬೇಕಾದಂತಹ ಅಂಶವೆಂದರೆ ನಾವು ಪ್ರತಿದಿನ ಬಳಸುವ ಆಹಾರ ಪದಾರ್ಥಗಳು, ಅವುಗಳ ರುಚಿ ಎಲ್ಲವನ್ನೂ ಈ ನಾಲಗೆ ಗ್ರಹಿಸಿ ಸಂದೇಶವನ್ನು ಮೆದುಳಿನ ನರಮಂಡಲಕ್ಕೆ ಕಳುಹಿಸಿಕೊಡುತ್ತದೆ. ಕೆಲವೊಮ್ಮೆ ಕೆಲವು ಸಂದರ್ಭಗಳಲ್ಲಿ ಸಾಮಾನ್ಯ ರುಚಿಗಿಂತ ಭಿನ್ನವಾದ ರುಚಿಯನ್ನು ಈ ನಾಲಗೆ ಗ್ರಹಿಸಿದಾಗ ಹಿಂದೂ ಮುಂದೂ ನೋಡದೇ ಆ ಪದಾರ್ಥ ಸರಿ ಇಲ್ಲ ಇದು ಬೇಡ ಅಂತ ತೀರ್ಮಾನಿಸಿಬಿಡುತ್ತದೆ. ಇದೆಲ್ಲವೂ ಬಹಳ ಸೂಕ್ಷ್ಮವಾಗಿ ಮತ್ತು ಅಷ್ಟೇ ಕ್ಷಿಪ್ರ ವಾಗಿ ಉಂಟಾಗುವ ಸಂವಹನೆಗಳು ಮತ್ತು ಈ ಸಂವಹನೆಗಳನ್ನು ನಾವು ಗೌರವಿಸಬೇಕು. ಆದರೆ ಹಲವಾರುಬಾರಿ ನಾವು ಎಡವುತ್ತೇವೆ ಮತ್ತು ಮೈಮೇಲೆ ತೊಂದರೆಗಳನ್ನು ಎಳೆದುಕೊಳ್ಳುತ್ತೇವೆ.
ಇನ್ನೊಂದು ವಿಚಾರ “ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ” ಎಂಬ ಗಾದೆಯನ್ನು ನಾವು ಇಲ್ಲಿ ಗಮನಿಸಬೇಕು. ಈ ಎರಡರಲ್ಲೂ ನಾಲಗೆಯ ಮಹತ್ವ ಬಹಳಷ್ಟಿದೆ ಅರ್ಥೈಸಿಕೊಳ್ಳಬೇಕಷ್ಟೇ..”ಚರ್ಮ” ಸ್ಪರ್ಶಜ್ಞಾನವನ್ನು ಮತ್ತು ಸುತ್ತಮುತ್ತಲಿನ ಪರಿಸರದ/ವಾತಾವರಣದ ಬದಲಾವಣೆ, ತೇವಾಂಶ, ಉಷ್ಣಾಂಶ, ಚಳಿ, ಬಿಸಿ, ಗಾಳಿ ಇತ್ಯಾದಿಯನ್ನು ಸರಿಯಾದ ಸಮಯದಲ್ಲಿ ನಮ್ಮ ಗಮನಕ್ಕೆ ತಂದುಕೊಡುತ್ತದೆ. ಒಬ್ಬ ವ್ಯಕ್ತಿ ನಮ್ಮನ್ನು ಯಾವ ರೀತಿಯಲ್ಲಿ ಸ್ಪರ್ಶಿಸುತ್ತಿದ್ದಾನೆ ಎಂಬುವುದನ್ನು ಕ್ಷಣಮಾತ್ರದಲ್ಲಿ ಗುರುತಿಸಿ ಅದಕ್ಕೆ ತಕ್ಕನಾಗಿ ಸಂದೇಶವನ್ನು ನಮ್ಮ ಮನಸ್ಸಿಗೆ ಕಳುಹಿಸುತ್ತದೆ. ಅನುದಿನದ ನಡುವಳಿಕೆಗೆ ಭಿನ್ನವಾಗಿ ಯಾವುದೇ ವ್ಯಕ್ತಿ ನಮ್ಮನ್ನು ಮುಟ್ಟಿದಾಗ ಒಮ್ಮೆಲೇ ನಾವು ಗಾಭರಿಗೊಳ್ಳುತ್ತೇವೆ…ಆಗ ನಾವು ನಮ್ಮನ್ನು ಆ ಸಂದರ್ಭದಿಂದ ಬಹಳ ಎಚ್ಚರಿಕೆಯಿಂದ ಪಾರುಮಾಡಬೇಕು. ಆದರೆ ಇಲ್ಲೂ ಕೂಡ ನಾವೆಲ್ಲ ಉದಾಸೀನ ಮನೋಭಾವವನ್ನು ಹೊಂದುತ್ತೇವೆ ಮತ್ತು ಮುಂದೆ ಉಂಟಾಗಲಿರುವ ಅವಘಡಗಳಿಗೆ ನಮ್ಮನ್ನು ನಾವು ಸಾಕ್ಷಿ ಮಾಡಿಕೊಳ್ಳುತ್ತೇವೆ ಹಾಗಾಗಿ ಈ ದೈವದತ್ತವಾದ ಪಂಚಜ್ಞಾನೇಂದ್ರಿಯಗಳನ್ನು ಸದಾ ಸಜ್ಜಾಗಿಟ್ಟುಕೊಂಡು ಅವುಗಳು ನೀಡುವಂತಹ ಅತಿ ಸೂಕ್ಷ್ಮ ಸಂಜ್ಞೆಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಿಕೊಂಡರೆ ನಮ್ಮನ್ನು ನಾವು ಬಲಶಾಲಿಗಳನ್ನಾಗಿ ಮಾಡಿಕೊಳ್ಳುವಲ್ಲಿ ಮೊದಲಹೆಜ್ಜೆಯನ್ನು ನೂರು ಪ್ರತಿಶತ ಫಲಿಸಿಕೊಂಡಿದ್ದೇವೆ ಎಂದು….
ಮುಂದುವರೆಯುವುದು….
ಶ್ರೀನಿಧಿ ಹೊಸಬೆಟ್ಟು