ಸುರಕ್ಷಾ ಜಾಗೃತಿ – 3

ಸುರಕ್ಷಾ ಜಾಗೃತಿ – 3
(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು)

ಪಂಚಜ್ಞಾನೇಂದ್ರಿಯಗಳು ಎಷ್ಟು ಪರಿಣಾಮಕಾರಿಗಳಾಗಿ ಜಾಗೃತಿಯನ್ನು ಮೂಡಿಸುತ್ತವೆಯೋ ಅಷ್ಟೇ ನಿಖರವಾಗಿ ನಮ್ಮ Sixth Sense / ಆರನೆಯ ಇಂದ್ರಿಯ ನಮ್ಮನ್ನು ಜಾಗೃತಿಯ ವಿಷಯದಲ್ಲಿ ಸದಾ ಎಚ್ಚರಿಸುತ್ತಲೇ ಇರುತ್ತದೆ.

ಈ ಆರನೆಯ ಇಂದ್ರಿಯ ಹೇಗೆ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ ಮತ್ತು ಅದು ಹೇಗೆ ಮುಂಚಿತವಾಗಿ ಮುಂದೆ ನಡೆಯಬಹುದಾಗ ಘಟನೆಗಳನ್ನು ಆಲೋಚಿಸುತ್ತದೆ ಎನ್ನುವುದು ಇನ್ನೂ ನಿಗೂಢವಾಗಿಯೇ ಇದೆ. ಆದರೆ ಸರಿ ಸುಮಾರು 98 ರಿಂದ 99% ಈ ಆರನೆಯ ಇಂದ್ರಿಯದ ಅನುಮಾನವು ಸರಿಯಾಗಿಯೇ ಇರುತ್ತದೆ. ಇಂತಹ ಈ ಇಂದ್ರಿಯದ ಕಾರ್ಯವೈಖರಿ ನಿಮ್ಮೆಲ್ಲರ ಜೀವಮಾನದಲ್ಲಿ ಒಮ್ಮೆಯಲ್ಲ ಒಮ್ಮೆ ನೀವೂ ಕೂಡ ಅನುಭವಿಸಿದ್ದೀರ… ಅಲ್ವೇ? ಎಂತಹ ಅದ್ಬುತವಾದ ದೈವದತ್ತವಾದ ಶಕ್ತಿ…

ಎಲ್ಲೇ ಆದರೂ ಪ್ರಕೃತಿಯಲ್ಲುಂಟಾಗುವ ವಿಕೋಪಗಳ ಮುನ್ಸೂಚನೆ ಮೊದಲಿಗೆ ಪ್ರಾಣಿಪಕ್ಷಿಗಳಿಗೆ ತಿಳಿಯುತ್ತದೆ. ಜೋರಾಗಿ ಮಳೆ ಬರುವ ಮುಂಚೆಯೇ ಈ ಪ್ರಾಣಿಪಕ್ಷಿಗಳು ತಮ್ಮ ಗೂಡನ್ನು ಸೇರಿಕೊಳ್ಳುತ್ತವೆ. ಎಲ್ಲೋ ಭೂಕಂಪ,ಭೂಕುಸಿತಗಳು ಸಂಭವಿಸುವ ಲಕ್ಷಣಗಳು ಗೋಚರಿಸುವ ಕೆಲವು ಸಮಯದ ಮುಂಚೆಯೇ ದನಕರುಗಳು ಜೋರಾಗಿ ಬೊಬ್ಬಿಡುತ್ತವೆ, ನಾಯಿಗಳು ಬೊಗಳಲು ಆರಂಭಿಸುವುದು ಅವುಗಳಲ್ಲಿನ ಆರನೆಯ ಇಂದ್ರಿಯದ ಕಾರ್ಯಕ್ಷಮತೆಯನ್ನು ಎತ್ತಿತೋರಿಸುತ್ತದೆ.

ಕೆಲವೊಮ್ಮೆ ನಮಗೂ ಇಂತಹ ಅನುಭವ ಆಗಿದೆಯಲ್ಲವೇ? ನಾವು ಎಲ್ಲಿಗಾದರೂ ಹೊರಡುವ ಸಮಯದಲ್ಲಿ ಆ ಜಾಗಕ್ಕೆ ಹೋದರೆ ಅಲ್ಲಿ ನಾವು ಕಾಣಬೇಕಾಗಿರುವ ವ್ಯಕ್ತಿಯು ನಮಗೆ ಸಿಗುವುದಿಲ್ಲ ಅಂತ ಮುಂಚಿತವಾಗಿಯೇ ಅನುಮಾನ ನಮ್ಮೊಳಗೇ ವ್ಯಕ್ತವಾಗಿರುತ್ತದೆ. ಕೆಲವೊಮ್ಮೆ ಇಂದು ನಾನು ಹೊರಗೆ ಹೋದರೆ ಏನಾದರೂ ಆಪತ್ತು ಸಂಭವಿಸುತ್ತದೆ ಅಂತ ಮೊದಲೇ ಸೂಕ್ಷ್ಮವಾಗಿ ಮನಸ್ಸು ಹೇಳುತ್ತಿರುತ್ತದೆ ಮತ್ತು ಅದರಂತೆ ನಾವು ಸಣ್ಣ ಮಟ್ಟಿಗೆ ಎಡವಿ ಬಿದ್ದಿರುವುದೂ ಉಂಟಲ್ಲವೇ?

ಹಾಗಾದರೆ ಇಂತಹ ಅದ್ಬುತವಾದ ಆರನೆಯ ಇಂದ್ರಿಯದ ಶಕ್ತಿಯನ್ನು ನಾವು ಹೇಗೆ ಉತ್ತಮ ಪಡಿಸಿಕೊಳ್ಳುವುದು? ಈ ಕೆಳಗಿನ ಕೆಲವೊಂದು ವಿಧಾನಗಳನ್ನು ನಾವು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳುವುದರಿಂದ ಈ ಶಕ್ತಿಯನ್ನು ನಿಧಾನವಾಗಿ ನಾವು ಉತ್ತೇಜಿಸಿಕೊಳ್ಳಬಹುದಾಗಿದೆ.

೧) ಧ್ಯಾನ – ಬ್ರಾಹ್ಮೀ ಮುಹೂರ್ತದಲ್ಲಿ ಅಥವ ನಿಶ್ಯಬ್ದವಾದ ವಾತಾವರಣದಲ್ಲಿ ನಾವು ಧ್ಯಾನದಲ್ಲಿ ಮಗ್ನರಾಗಿ ನಮ್ಮನ್ನು ನಾವು ಈ ಧ್ಯಾನದಲ್ಲಿ ಏಕೀಕರಣಗೊಳಿಸಿಕೊಳ್ಳಬೇಕು.

೨) ಗಮನದ ಕೇಂದ್ರೀಕರಣ – ಯಾವುದೇ ವಿಷಯವಿರಲಿ, ಯಾವುದೇ ಜಾಗವಿರಲಿ, ಯಾವ ವ್ಯಕ್ತಿಯೇ ನಮ್ಮ ಸುತ್ತ ಮುತ್ತಲು ಸುಳಿದಾಡುತ್ತಲಿರಲಿ ಅಂತಹ ಸಂದರ್ಭದಲ್ಲಿ ನಮ್ಮ ಗಮನವನ್ನು ಕೇಂದ್ರೀಕರಣಗೊಳಿಸುವುದನ್ನು ನಾವು ಪ್ರಯತ್ನಿಸಿ ಯಶಸ್ಸನ್ನು ಗಳಿಸಬೇಕು.

೩) ಆತ್ಮವಿಶ್ವಾಸ – ನಮ್ಮೊಳಗಿರುವ ಆತ್ಮವಿಶ್ವಾಸವನ್ನು ಯಾವಾಗಲೂ ಚಾಲ್ತಿಯಲ್ಲಿಡುವುದು ಮತ್ತು ಯಾವಾಗಲೂ ಜಾಗೃತಿಯಲ್ಲಿಡುವುದು.

೪) ತಾಳ್ಮೆ- ಯಾವಾಗಲೂ ಯಾವುದೇ ವಿಷಯವಾಗಲಿ ಅಥವಾ ಇನ್ನಾವುದೇ ಸಂದರ್ಭಗಳು ಎದುರಾಗಲಿ ಅಲ್ಲಿ ತಾಳ್ಮೆಯಿಂದ ನಡೆದುಕೊಳ್ಳುವುದು.

ಇವುಗಳನ್ನೆಲ್ಲಾ ನಾವು ಕಾಲಕ್ರಮೇಣ ಅಭಿವೃದ್ಧಿ ಪಡಿಸಿಕೊಳ್ಳುತ್ತಾ ನಮ್ಮ Sixth Sense / ಆರನೆಯ ಇಂದ್ರಿಯದ ಶಕ್ತಿಯನ್ನು ಜಾಗೃತಗೊಳಿಸಿ ನಮ್ಮನ್ನು ನಾವು ಶಕ್ತಿಶಾಲಿಗಳನ್ನಾಗಿ ಮಾಡಿಕೊಳ್ಳಬೇಕು. ಆದರೆ ಹಲವಾರು ಸಂದರ್ಭದಲ್ಲಿ ನಾವೆಲ್ಲರೂ ನಮ್ಮ ಪಂಚಜ್ಞಾನೇಂದ್ರಿಯಗಳ ಸಂದೇಶ ಮತ್ತು ಆರನೆಯ ಇಂದ್ರಿಯದ ಸೂಕ್ಷ್ಮ ಸಂವೇದನೆಗಳನ್ನು ತಿಳಿದುಕೊಳ್ಳಲು ಎಡವಿ ಅನಾವಶ್ಯಕವಾಗಿ ಅಪಘಾತಗಳನ್ನು / ಅವಘಡಗಳನ್ನು ನಮ್ಮ ಮೈಮೇಲೆ ನಾವೇ ಎಳೆದುಕೊಳ್ಳುತ್ತೇವೆ.

ನಮ್ಮ ಪಂಚಜ್ಞಾನೇಂದ್ರಿಯಗಳು ಮತ್ತು ನಮ್ಮ ಆರನೆಯ ಇಂದ್ರಿಯದ ಕಾರ್ಯವೈಖರಿಯನ್ನು ತಿಳಿದುಕೊಂಡನಂತರ ನಾವು ಜಾಗೃತಿಯ ವಿಷಯದ ಅಡಿಪಾಯವನ್ನು ಎಲ್ಲಿಂದ ಹಾಕಬೇಕು? ಹೇಗೆ ಆರಂಭಿಸಬೇಕು? ಯಾರು ಈ ಅಡಿಪಾಯದ ಬುನಾದಿಯನ್ನು ಹಾಕಬೇಕು? ಯಾವ ವಯಸ್ಸಿನಲ್ಲಿ ಇವೆಲ್ಲವನ್ನೂ ಹೇಳಿಕೊಡಬೇಕು? ಎಂಬ ಹಲವಾರು ಪ್ರಶ್ನೆಗಳು ಕಾಡುತ್ತವೆ ಅಲ್ಲವೇ? ಸಹಜ..

ನಾವೆಲ್ಲರೂ ತಿಳಿದಿರುವಂತೆ ಮನೆಯೆ ಮೊದಲ ಪಾಠ ಶಾಲೆ, ಜನನಿ ತಾನೆ ಮೊದಲ ಗುರು ಎಂಬ ನುಡಿಮುತ್ತಿನಂತೆ ಈ ಜಾಗೃತಿಗೆ ಬುನಾದಿಯನ್ನು ಪ್ರತಿಯೊಬ್ಬರಿಗೂ ಹಾಕಿಕೊಡಬೇಕಾದಂತಹ ಸ್ಥಳವೆಂದರೆ ಅದು ಮನೆ. ಮನೆಯಲ್ಲಿಯೇ ನಾವು ನಮ್ಮ ಮನೆಯಲ್ಲಿರುವವರಿಗೆ, ಮಕ್ಕಳಿಗೆ, ಕಿರಿಯರಿಗೆ ಬುದ್ದಿ ಮಾತುಗಳನ್ನು ಹೇಳುತ್ತ ಪ್ರತಿನಿತ್ಯ ಜಾಗೃತಿಯ ಸಂದೇಶಗಳನ್ನು ತಲೆಯಲ್ಲಿ ತುಂಬುತ್ತಾ ಹೋಗಬೇಕು. ಒಂದು ದೇಶದ ಸತ್ ಪ್ರಜೆಯ ನಿರ್ಮಾಣ ಕಾರ್ಯ ಪ್ರತಿಯೊಂದು ಮನೆಯಲ್ಲೂ ಕಾರ್ಯರೂಪಗೊಳ್ಳಬೇಕು.ಆಗಲೇ ಈ ಸಮಾಜ ಬದಲಾಗುವುದು.ಒಂದು ಶ್ರೇಷ್ಠ ವಾದ ದೇಶದ ನಿರ್ಮಾಣದ ಬುನದಿಗೆ ಬಳಸುವ ಇಟ್ಟಿಗೆಗಳು ರೂಪುಗೊಳ್ಳುವುದು ಪ್ರತಿಯೊಬ್ಬರ ಮನೆಯಿಂದಲೇ ಅಂತ ನಾವೆಲ್ಲರೂ ಮೊದಲಿಗೆ ತಿಳಿದುಕೊಳ್ಳಬೇಕು.

ಮನೆಯ ಪರಿಸರ, ತಂದೆ ತಾಯಿಗಳು, ಹಿರಿಯರು ಹೇಳಿಕೊಟ್ಟ ನೀತಿ ಮಾತು, ಅಲ್ಲಿ ಕಲಿತ ಸಂಸ್ಕಾರ ಮತ್ತು ಸಂಸ್ಕೃತಿ, ಸುತ್ತಮುತ್ತಲಿನ ವಠಾರ, ಅಲ್ಲಿನ ನಮ್ಮ ಬಂದುಮಿತ್ರರ ವ್ಯವಹಾರಗಳು, ನಂತರ ಶಾಲೆ, ಶಾಲೆಯ ವಾತಾವರಣ, ಗುರುಗಳ ಹಿತವಚನಗಳು, ಅವರುಗಳು ಕಲಿಸಿಕೊಟ್ಟಂತಹ ವಿದ್ಯೆ ಇವೆಲ್ಲವೂ ಒಬ್ಬ ಮನುಷ್ಯ ಯಾವ ದಿಕ್ಕಿನಲ್ಲಿ ಸಾಗಬೇಕು ಅಥವಾ ಸಾಗುತ್ತಾನೆ ಇದನ್ನು ನಿರ್ಧರಿಸುತ್ತದೆ. ಸಣ್ಣ ವಯಸ್ಸಿನಲ್ಲಿಯೇ ನಾವು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಸರಿಯಾಗಿ ಹೇಳಿಕೊಟ್ಟರೆ ಸಮಾಜ ಸರಿದಾರಿಯಲ್ಲಿ ಸಾಗುವಂತಾಗುತ್ತದೆ. ಇಂತಹ ಕಾಯಕ ಪ್ರತಿಯೊಂದು ಮನೆಯಲ್ಲೂ,ಮನದಲ್ಲೂ ಜಾಗೃತಗೊಂಡು ಉತ್ತಮ ದೇಶದ ನಿರ್ಮಾಣ ಕಾರ್ಯದಲ್ಲಿ ಎಲ್ಲರೂ ತಮ್ಮ ಅಳಿಲು ಸೇವೆಯನ್ನು ಸಮರ್ಪಿಸಬೇಕು ಮತ್ತು ಅಂತಹ ಸಂಕಲ್ಪವನ್ನು ಪ್ರತಿಯೊಬ್ಬರೂ ತಪ್ಪದೇ ಮಾಡಿ ಆಚರಿಸುವಂತಾಗಬೇಕು.

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ? ಎಂಬ ಗಾದೆಯ ಮಾತು ಈ ಮೇಲೆ ತಿಳಿಸಿದ ಎಲ್ಲಾ ವಿಷಯಕ್ಕೂ ಎಷ್ಟೊಂದು ಪೂರಕವಾಗಿದೆ ಅಲ್ಲವೇ? ಹೌದು ಹೇಗೆ ಒಂದು ಮೊಳಕೆಯೊಡೆದ ಬೀಜವನ್ನು ಮಣ್ಣಿನಲ್ಲಿ ಹೂತು,ಅದಕ್ಕೆ ಸರಿಯಾದ ಪ್ರಮಾಣದಲ್ಲಿ ನೀರನ್ನು ಸುರಿಸಿ, ರಸಗೊಬ್ಬರಗಳನ್ನು ಪೂರೈಕೆ ಮಾಡಿ,ನಿರಂತರವಾಗಿ ಆರೈಕೆ ಮಾಡಿ,ಬಾಗದಂತೆ ಸರಿಯಾದ ಸಮಯದಲ್ಲಿ ಆಧಾರವನ್ನು ನೀಡಿ ಬೆಳೆಸುತ್ತೇವೆಯೋ ಹಾಗೆಯೇ ನಮ್ಮ ಮಕ್ಕಳನ್ನು ಅವರ ಬಾಲ್ಯದಿಂದಲೇ ಒಬ್ಬ ಉತ್ತಮ ಪ್ರಜೆಯನ್ನಾಗಿ ರೂಪುಗೊಳಿಸುವಂತಹ ಆಚಾರ, ವಿಚಾರ, ಸಂಸ್ಕಾರವೆಂಬ ಕಟ್ಟುಕಟ್ಟಳೆಗಳನ್ನು ಸರಿಯಾದ ಪ್ರಮಾಣದಲ್ಲಿ ತಿಳಿಸಿಹೇಳಬೇಕು. ನಮ್ಮ ಸಂಸ್ಕೃತಿಯ ಬಗೆಗಿನ ಮಾಹಿತಿ, ಸರಿಯಾದ ನಡುವಳಿಕೆಗಳು, ಸರಿ ತಪ್ಪುಗಳ ಬಗ್ಗೆ ಜಾಗೃತಿಯನ್ನು ನೀಡುತ್ತ ನಮ್ಮ ಮಕ್ಕಳಿಗೆ ಆಧಾರ ಸ್ತಂಭವಾಗಿ ನಿಂತು ಅವರನ್ನು ಒಬ್ಬ ಸಜ್ಜನನನ್ನಾಗಿ ರೂಪುಗೊಳಿಸುವಂತಹ ಗುರುತ್ತರವಾದ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನದ್ದೇ ಆಗಿದೆ.

ಇಲ್ಲಿ ಒಂದು ಸಣ್ಣ ಕಥೆಯನ್ನು ನಾವೆಲ್ಲರೂ ನೆನಪಿಸಿಕೊಳ್ಳಬೇಕು. ಒಂದೇ ಗಿಳಿಯ ಎರಡು ಮರಿಗಳು ಒಂದು ಸನ್ಯಾಸಿಯ ಆಶ್ರಮದಲ್ಲೂ ಮತ್ತೊಂದು ಒಬ್ಬ ಕಟುಕನ ಮನೆಯಲ್ಲೂ ಬೆಳೆಯುತ್ತವೆ. ಸನ್ಯಾಸಿಯ ಆಶ್ರಮದಲ್ಲಿ ಬೆಳೆದಂತಹ ಗಿಳಿ ಆಶ್ರಮಕ್ಕೆ ಬಂದಂತಹವರನ್ನು ಕಂಡು “ಬನ್ನಿ ಸ್ವಾಮಿ, ಕುಳಿತುಕೊಳ್ಳಿ, ಆಯಾಸವಾಯಿತೇ, ಧಣಿವಾರಿಸಿಕೊಳ್ಳಿ, ಕುಡಿಯಲು ನೀರುಬೇಕೆ? ಎಂಬಿತ್ಯಾದಿಯಾಗಿ ಬಂದವರನ್ನು ಸತ್ಕರಿಸುತ್ತಿತ್ತು. ಅದೇ ರೀತಿಯಾಗಿ ಕಟುಕನ ಮನೆಯಲ್ಲಿ ಬೆಳೆದಂತಹ ಗಿಳಿ ಆತನ ಬಳಿಗೆ ಬರುವಂತವರನ್ನು ಕಂಡು ‘ದಷ್ಟಪುಷ್ಟನಾದವ ಬಂದ, ಹಿಡಿಯಿರಿ, ಕಟ್ಟಿರಿ, ಕಡಿಯಿರಿ, ಸುಲಿಯಿರಿ ಅಂತ ಒರಟಾದ ಧ್ವನಿಯಲ್ಲಿ ಒದರುತ್ತಲಿತ್ತು. ಹೀಗೆ ಈ ಒಂದು ಸಣ್ಣ ಕಥೆಯಿಂದ ತಿಳಿಯುವ ವಿಷಯವೆಂದರೆ ನಾವುಗಳು ಬೆಳೆಯುವಂತಹ ಪರಿಸರ ಪ್ರತಿಯೊಬ್ಬರ ಮೇಲೂ ಪರಿಣಾಮವನ್ನು ಬೀರಿ ಅವರನ್ನು ಆಯಾ ಪರಿಸರಕ್ಕೆ ತಕ್ಕಂತೆಯೇ ರೂಪುಗೊಳಿಸುತ್ತದೆ ಎಂದು.

ಅದಕ್ಕಾಗಿಯೇ ಉತ್ತಮವಾದ ಸಂಸ್ಕಾರದ ಜಾಗೃತಿಯನ್ನು ಬಾಲ್ಯದಲ್ಲಿಯೇ ಪ್ರತಿಯೊಬ್ಬರ ಮನೆಯಲ್ಲಿಯೇ ಹೇಳಿಕೊಟ್ಟು ಸದ್ವಿದ್ಯಾ ಪ್ರವೀಣರನ್ನಾಗಿ ಮಾಡಬೇಕು. ಆಗಲೇ ದೇಶ ಬದಲಾಗುವುದು ಮತ್ತು ಒಂದು ಉತ್ತಮವಾದ ಸಮಾಜದ ನಿರ್ಮಾಣವಾಗುವುದು.

ಆದರೆ ಇಂದಿನ ಕಾಲಮಾನದಲ್ಲಿ ಈ ಸಂಸ್ಕಾರದ ಆಚರಣೆಯಲ್ಲಿ ಅಸ್ತವ್ಯಸ್ತಗಳುಂಟಾಗಿ ಹಲವಾರು ಅವಘಡಗಳು,ಅಪಘಾತಗಳು,ಕಿರುಕುಳಗಳು ಪ್ರತಿನಿತ್ಯದ ವಾರ್ತೆಯಲ್ಲಿ ನಾವು ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ ಮತ್ತು ಓದುತ್ತಿದ್ದೇವೆ. ಇಂತಹ ಎಲ್ಲಾ ತೊಂದರೆಗಳಿಗೆ ಮೂಲಕಾರಣವೇ ಸಂಸ್ಕಾರದ ಕೊರತೆ, ಅನಕ್ಷರತೆ, ಸಂಸ್ಕೃತಿಯನ್ನು ಸರಿಯಾಗಿ ತಿಳಿದುಕೊಳ್ಳದೇ ಇರುವುದು ಇದೇ ಮೊದಲಾದುವುಗಳಾಗಿವೆ.

ಹಾಗಾದರೆ ಇಂತಹ ಕಿರುಕುಳಗಳಿಗೆ, ಅನಾಹುತಗಳಿಗೆ, ಅಫಘಾತಗಳಿಗೆ, ಅವಘಡಗಳಿಗೆ ಕಾರಣ ಯಾರು? ಯಾರಿಂದಾಗಿ ಇಂತಹ ತಪ್ಪುಗಳು ಸಮಾಜದಲ್ಲಿ ಪುನರಾವರ್ತನೆಗೊಳ್ಳುತ್ತಿದೆ? ಇದಕ್ಕೆಲ್ಲ ಯಾರು ಹೊಣೆ? ಸದೃಢವಾದ ಸಮಾಜದ, ದೇಶದ ನಿರ್ಮಾಣ ಮಾಡುವ ಜವಾಬ್ದಾರಿ ಪ್ರತಿಯೊಬ್ಬರದಲ್ಲವೇ? ಎಲ್ಲರೂ ಈ ನಿಟ್ಟಿನಲ್ಲಿ ಕೈಜೋಡಿಸಿ ಉತ್ತಮವಾದ ಸಂಸ್ಕಾರವನ್ನು ತಿಳಿಹೇಳುತ್ತ ಕಲಿಸುತ್ತ ಸುಸಂಸ್ಕೃತ ಸಮಾಜವನ್ನು ರೂಪುಗೊಳಿಸುವತ್ತ ಹೆಜ್ಜೆಯನ್ನು ಇಂದಿನಿಂದಲೇ ಇಡಲು ಪ್ರಾರಂಭಿಸೋಣ ಅಲ್ಲವೇ? ಆಗಲೇ ಇಂತಹ ಅವಘಡವೆಲ್ಲವೂ ಮಾಯವಾಗಿ ಒಂದು ಒಳ್ಳೆಯ ಶ್ರೇಷ್ಠ ರಾಷ್ಟ್ರದ ನಿರ್ಮಾಣವಾಗುತ್ತದೆ…ಆಗಲೇಬೇಕೆಂಬ ಆಶಯದೊಂದಿಗೆ…..

ಮುಂದುವರೆಯುವುದು….

ಶ್ರೀನಿಧಿ ಹೊಸಬೆಟ್ಟು

Related post