ಸುರಕ್ಷಾ ಜಾಗೃತಿ – 4
(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು)

ಮನೆಯಲ್ಲಿ ಉತ್ತಮ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ತಿಳಿದುಕೊಂಡನಂತರ ನಾವೆಲ್ಲರೂ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸ್ವಲ್ಪ ಆಟದ ಕಡೆಗೂ ಗಮನವನ್ನು ಕೊಡಬೇಕು. ಆಟವೇ? ಹಾಗಾದರೆ ಈ ಆಟ ನಮಗೆ ಜಾಗೃತಿಯನ್ನು ಹೇಗೆ ಮೂಡಿಸುತ್ತದೆ? ಸುರಕ್ಷೆಯ ದೃಷ್ಟಿಯಲ್ಲಿ ಆಟಗಳ ಮಹತ್ವವೇನು? ಆಟಗಳು ಹೇಗೆ ಸಹಕಾರಿಯಾಗುತ್ತದೆ? ಹಾಗಾದರೆ ಅಂತಹ ಆಟಗಳು ಯಾವುವು? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಉದ್ಬವವಾಯಿತಲ್ಲವೇ? ಸರಿ ಹಾಗಾದರೆ ಈ ಸುರಕ್ಷಾ ಜಾಗೃತಿಯಲ್ಲಿ ಆಟಗಳ ಮಹತ್ವವೇನು? ನಾವು ಸಣ್ಣವವರಿದ್ದಾಗ ಕಲಿತ ಕೆಲವೊಂದು ಉಪಯುತ್ತವಾದ ಆಟಗಳು ನಮ್ಮನ್ನು ಸುರಕ್ಷಾ ದೃಷ್ಟಿಯಲ್ಲಿ ಹೇಗೆ ಸಹಕರಿಸುತ್ತದೆ? ನಾವು ಸುರಕ್ಷಾ ಜಾಗೃತಿಯ ಸಲುವಾಗಿ ಯಾವ ಯಾವ ರೀತಿಯ ಆಟಗಳನ್ನು ಕಲಿತುಕೊಳ್ಳಬೇಕು? ಇದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ಪಡೆದುಕೊಳ್ಳೋಣವೇ ಏನಂತೀರ…

ನಾವೆಲ್ಲರೂ ಸಣ್ಣವರಾಗಿದ್ದಾಗ ನಮ್ಮ ಶಾಲೆಯಲ್ಲಿ, ನಮ್ಮ ವಠಾರಗಳಲ್ಲಿ ಈ ಕೆಲವೊಂದು ಆಟವನ್ನು ಆಡಿರುವುದನ್ನು ನೆನಪಿಸಿಕೊಳ್ಳಿ.. ಕಪ್ಪೆ ಜಿಗಿತ, ಗೋಣಿ ಚೀಲದ ಓಟ ,ಉರುಳುವುದು, ಜಾರುವ ಬಂಡಿಯಲ್ಲಿ ಜಾರುವುದು, ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆಯನ್ನು ಒಡೆಯುವುದು, ಕಣ್ಣಿಗೆ ಬಟ್ಟೆ ಕಟ್ಟಿ ಸ್ಥಳವನ್ನು ಗುರುತಿಸುವುದು, ಕಣ್ಣಿಗೆ ಬಟ್ಟೆ ಕಟ್ಟಿ ಎದುರಿಗಿರುವ ವ್ಯಕ್ತಿಯನ್ನು ಹಿಡಿಯುವುದು, ತೆವಳುವುದು, ಮುಂಗಾಲಿನಿಂದ ನಡೆಯುವುದು, ನೆಲದ ಮೇಲೆ ಈಜುವುದು, ಎಡಗೈಯಿಂದ ಕಲ್ಲನ್ನು ಬೀಸುವುದು, ಕುಂಟಪಿಲ್ಲೆ ಆಟ, ಬಾಯಿಯ ಸಹಾಯದಿಂದ ವಸ್ತುವನ್ನು ಹಿಡಿದು ಅದನ್ನು ಬೇರೆಯ ಕಡೆ ವರ್ಗಾಯಿಸುವುದು, ಕಡು ಕತ್ತಲಿನಲ್ಲಿ ನಡೆಯುವುದು…ಇತ್ಯಾದಿ. ಈ ಆಟಗಳನ್ನು ಕ್ರಿಯೆಗಳನ್ನು ಗಮನಿಸಿದಾಗ ನೀವು ಅಂದುಕೊಳ್ಳಬಹುದು ಈ ಮನುಷ್ಯ ಈ ಆಟಗಳಿಂದ ಜಾಗೃತಿಯನ್ನು ಹೇಗೆ ಮೂಡಿಸುತ್ತಾನೆ ಅಂತ? ಅಥವಾ ಇವನಿಗೇನೋ ತಲೆ ಕೆಟ್ಟಿರಬಹುದು ಅಂತ?.. ಆದರೆ ನಾವು ಯಾವಾಗಲೂ ಒಂದು ವಿಚಾರವನ್ನು ಅರ್ಥ ಮಾಡಿಕೊಳ್ಳಲೇ ಬೇಕು. ಅದೇನಂದರೆ out of the box thinking ಮತ್ತು try things differently ಎಂದು.

ಯಾವಾಗ ನೀವು ಈ ಎರಡು ವಾಕ್ಯಗಳನ್ನು ಆಯಾ ಸಂದರ್ಭದಲ್ಲಿ ಸೂಕ್ತವಾಗಿ ಬಳಸುವುದನ್ನು ಅರ್ಥೈಸಿಕೊಳ್ಳುತ್ತೀರೋ ಆಗ ನಿಮಗೆ ಈ ಆಟವೂ ಕೂಡ ಸುರಕ್ಷಾ ಜಾಗೃತಿಯ ಹಲವಾರು ಸಂದರ್ಭಗಳಲ್ಲಿ ಅದರದ್ದೇ ಆದ ಕೊಡುಗೆಯನ್ನು ಕೊಡಲು ಸಹಕಾರಿ ಆಗುತ್ತದೆ ಎಂಬ ಮನವರಿಕೆ ಆಗುತ್ತದೆ.

೧) ಕಪ್ಪೆಜಿಗಿತ / ಗೋಣಿ ಚೀಲದ ಓಟ / ಉರುಳುಸೇವೆಯಂತೆ ಹೊರಳುವುದು: ಇಲ್ಲಿ ಈ ಆಟಗಳನ್ನು ಕೇವಲ ಆಟದಂತೆ ನೋಡದೇ ಇದನ್ನು ಸುರಕ್ಷೆಯ ದೃಷ್ಟಿಯಿಂದ ಒಮ್ಮೆ ನೋಡಿ. ಉದಾಹರಣೆಗೆ ಯಾವುದೇ ಆಪತ್ತಿನ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯ ಕೈ ಮತ್ತು ಕಾಲನ್ನು ಕಟ್ಟಿ ಹಾಕಿದಾಗ ಈ ಆಟವನ್ನು ನೆನಪಿಸಿಕೊಳ್ಳಲೇಬೇಕು ಹಾಗೂ ಅವಕಾಶವಿದ್ದರೆ ಈ ಆಟವನ್ನು ಬಳಸಿಕೊಂಡು ಆ ಆಪತ್ತಿನ ಜಾಗದಿಂದ ಸುರಕ್ಷವಾದ ಸ್ಥಾನಕ್ಕೆ ತಲುಪಲು ಈ ಆಟವನ್ನು ಬಳಸಿಕೊಳ್ಳಬೇಕು.

೨) ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವುದು / ಕಣ್ಣಿಗೆ ಬಟ್ಟೆ ಕಟ್ಟಿ ಸ್ಥಳ ಕಂಡುಹಿಡಿಯುವುದು / ಎದುರಿಗಿರುವ ವ್ಯಕ್ತಿಯನ್ನು ಹಿಡಿಯುವುದು / ನಡೆಯುವುದು / ಕಡುಕತ್ತಲಿನಲ್ಲಿ ನಡೆಯುವುದು: ಕೆಲವೊಂದು ಸಂದರ್ಭದಲ್ಲಿ ಯಾವುದೇ ವ್ಯಕ್ತಿಯ ಕಣ್ಣಿಗೆ ಬಟ್ಟೆಯನ್ನು ಕಟ್ಟಿ ಕೂಡಿ ಹಾಕಿದಾಗ ಈ ಒಂದು ಪ್ರತಿಭೆಯ ಅನಾವರಣ ಮಾಡಲು ಅದು ಸೂಕ್ತವಾದ ಸಂದರ್ಭವಾಗುತ್ತದೆ. ಹಿಂದಿನ ಕಾಲದಲ್ಲಿ ಶಬ್ದವೇದಿ ವಿದ್ಯೆಯನ್ನು ಕಲಿತು ಅದರಂತೆ ಬಾಣವನ್ನು ಪ್ರಯೋಗಿಸುತ್ತಿದ್ದರು, ಕತ್ತಿವರಸೆಯನ್ನು ಮಾಡುತ್ತಿದ್ದರು, ಇಲ್ಲೂ ಕೂಡ ಹಾಗೆಯೇ ಕಣ್ಣಿಗೆ ಖಾರದ ಪುಡಿಯನ್ನು ಎರಚಿದ್ದರೆ ಅಥವಾ ಇನ್ನಾವುದೋ ರಸಾಯನಿಕವನ್ನು ಬಳಸಿ ನಿಮಗೆ ಕಣ್ಣು ಬಿಡಲು ಆಗದಂತಹ ಸಂದರ್ಭ ಎದುರಾಗಿದ್ದರೆ ನೀವು ನಿಮ್ಮ ಸುತ್ತಮುತ್ತ ಕೈಗೆ ದೊರೆತಂತಹ ಯಾವುದೇ ವಸ್ತುವನ್ನು ಎದುರಿಗಿರುವ ವ್ಯಕ್ತಿಯ ಮೇಲೆ ಸರಿಯಾಗಿ ಪ್ರಹಾರ ಮಾಡಬಹುದು. ಇನ್ನು ನಿಮಗೆ ನಿಮ್ಮ ಮನೆಯಲ್ಲಿ ಕತ್ತಲಲ್ಲಿ ಸೂಕ್ತವಾದ ವಸ್ತುವಿನ ಜಾಗವನ್ನು ಕಂಡು ಹಿಡಿಯಲು ತಿಳಿದಿದ್ದರೆ ಆಪತ್ತಿನ ಸಮಯದಲ್ಲಿ ದೇವರ ಮನೆಗೆ ತಲುಪಿ ಅಲ್ಲಿ ಇಟ್ಟಿರುವ ಜಾಗಟೆ, ಶಂಖವನ್ನು ಊದುತ್ತ ನೆರೆಹೊರೆಯವರನ್ನು ಎಚ್ಚರಿಸಿ ಆಪತ್ತಿನಿಂದ ಪಾರಾಗುವ ಮಾರ್ಗವನ್ನು ಕಂಡುಕೊಳ್ಳಬಹುದು.

೩) ತೆವಳುವುದು / ನೆಲದ ಮೇಲೆ ಈಜುವುದು / ನಾಲ್ಕು ಕಾಲಿನ ನಡಿಗೆ: ಯಾವುದೇ ಸಂದರ್ಭದಲ್ಲಿ ಹೊಗೆ ಆವರಿಸಿಕೊಂಡಾಗ ಆ ಸಮಯದಲ್ಲಿ‌ ಈ ಒಂದು‌ ಆಟ ಅಥವಾ ಪ್ರತಿಭೆಯ ಅನಾವರಣ ತುಂಬಾ ಉಪಯುಕ್ತವಾಗಿ ಪರಿಣಮಿಸುತ್ತದೆ. ಹೊಗೆ ಆವರಿಸಿದಾಗ ತೆವಳಿಕೊಂಡು ಅಥವಾ ನಾಲ್ಕು ಕಾಲಿನಿಂದ ಸುರಕ್ಷಿತ ಜಾಗಕ್ಕೆ ನಿಮ್ಮನ್ನು‌ ನೀವು ಕೊಂಡೊಯ್ಯಬಹುದು.

೪) ಜಾರುವ ಆಟ: ಎಲ್ಲರೂ ಈ ಆಟವನ್ನು ಆಡಿದ್ದೇವೆ ಅಲ್ಲವೇ. ಕೆಲವೊಂದು ಸಂದರ್ಭದಲ್ಲಿ staircase ನಲ್ಲಿ ಅತಿ ವೇಗವಾಗಿ ಇಳಿಯಬೇಕಾದಾಗ ಅಥವಾ ನಿಮ್ಮ ವೈರಿಯಿಂದ ನೀವು ತಪ್ಪಿಸಿಕೊಳ್ಳಬೇಕಾದಾಗ staircase handleನ್ನು ಜಾರೋ ಬಂಡಿಯ ಹಾಗೆ ಬಳಸಿಕೊಂಡು ವೇಗವಾಗಿ ಕೆಳಗಿನ ಜಾಗಕ್ಕೆ ತಲುಪಬಹುದು.

೫) ಎಡಗೈಯಲ್ಲಿ ಕಲ್ಲನ್ನು ಎಸೆಯುವುದು, ಕುಂಟಾಪಿಲ್ಲೆ ಆಟ, ಹಲ್ಲಿನಿಂದ ವಸ್ತುವನ್ನು ಹಿಡಿದು ಸ್ಥಳಾಂತರಿಸುವುದು: ಇವೆಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ನಮಗೆ ಆಯಾ ಸಮಯ ಸಂದರ್ಭಗಳಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತದೆ. ಉದಾಹರಣೆಗೆ ನಿಮ್ಮ ಬಲಗೈಯನ್ನು ಯಾರೋ ಗಟ್ಟಿಯಾಗಿ ಹಿಡಿದಿದ್ದರೆ ಅಂತಹ ಸಮಯದಲ್ಲಿ ನಿಮಗೆ ಎಡಗೈಯ ಬಳಕೆ ಬಲಗೈಯಷ್ಟೆ ಶಕ್ತಿ ಸಾಮರ್ಥ್ಯದಿಂದ ಬಳಸುವ ತಂತ್ರ ಸಿದ್ದಿ ಆಗಿದ್ದರೆ ನೀವು ನಿಮ್ಮ ಎಡಗೈಯನ್ನು ಬಳಸಿ ಆ ವ್ಯಕ್ತಿಯನ್ನು ಎದುರಿಸಬಹುದು.
ಇನ್ನು ಕುಂಟಾಪಿಲ್ಲೆ ಆಟದಲ್ಲಿ ಹೇಗೆ ಕಾಲಿನ ಬೆರಳುಗಳನ್ನು ಬಳಸಿ ಕಲ್ಲನ್ನು‌ಹಿಡಿದು ಕುಂಟುತ್ತಾ ಮನೆಯನ್ನು ದಾಟುತ್ತೇವೆಯೋ ಅದೇ ರೀತಿ ಈ ಆಟವನ್ನು ನಿಯಮಿತವಾಗಿ ಕಲಿತು ಕಾಲಿನ ಬೆರಳುಗಳಿಗೆ ಕೆಲಸವನ್ನು ಕೊಟ್ಟರೆ ನೀವು ಹಲವಾರು ಸಂದರ್ಭದಲ್ಲಿ ಕಾಲಿನ ಬಳಕೆಯನ್ನು ಸೂಕ್ತವಾಗಿ ಬಳಸಿಕೊಳ್ಳಬಹುದು. ಕಾಲಿನ ಸಹಾಯದಿಂದಲೇ ಬಿಲ್ಗಾರಿಕೆಯನ್ನು ಮಾಡಿರುವವರನ್ನು ನಾವು ಕಾಣಬಹುದಾಗಿದೆ. ಕಾಲಿನ ಸಹಾಯದಿಂದಲೇ ವಾಹನವನ್ನು ಚಲಾಯಿಸುವವರನ್ನು ನಾವು ನೋಡಿದ್ದೇವೆ, ಕೇವಲ ಕಾಲನ್ನು ಬಳಸಿ kick boxing ನ್ನೂ ಮಾಡಬಹುದಾಗಿದೆ.
೬) ಹಲ್ಲು ಮತ್ತು ಬಾಯಿಯ ಸಹಾಯದಿಂದ ವಸ್ತುವಿನ ಸ್ಥಾನ ಪಲ್ಲಟನೆ: ಕಾಲು ಮತ್ತು ಕೈಯನ್ನು ಕಟ್ಟಿ ಕೂಡಿಟ್ಟಾಗ ನಿಮಗೆ ಬಾಯಿ ಮತ್ತು ಹಲ್ಲಿನ ಸರಿಯಾದ ಉಪಯೋಗ ತಿಳಿದಿದ್ದರೆ ನೀವು ಇದನ್ನು ಬಳಸಿ ಆಯಾ ಸಂದರ್ಭಕ್ಕೆ ಅನುಗುಣವಾಗಿ ಇದರ ಪ್ರಯೋಗವನ್ನು ಮಾಡಬಹುದಾಗಿದೆ. ಹಲ್ಲಿನಿಂದ ತೆಂಗಿನ ಕಾಯಿಯ ಸಿಪ್ಪೆಯನ್ನು ಸುಲಿಯುವವರು ನಮ್ಮೊಂದಿಗಿದ್ದಾರೆ, ಹಲ್ಲಿನಿಂದ ವಾಹನವನ್ನು ಎಳೆಯುವವರನ್ನೂ ನಾವು ನೋಡಬಹುದು, ಹಲ್ಲಿನಿಂದ ಚಾಕುವನ್ನು ಬಳಸಿಕೊಂಡು ಹಗ್ಗವನ್ನೂ ತುಂಡರಿಸಬಹುದು.

ಹೀಗೆ ನಾವು ಕಲಿತಂತಹ ಆಟ ಮತ್ತು ನಮ್ಮೊಳಗೆ ಅವಿತಿರುವಂತಹ ಪ್ರತಿಭೆಗಳನ್ನು ನಾವು ಆಯಾ ಸಮಯ ಸಂದರ್ಭಕ್ಕೆ ಸರಿಯಾಗಿ ಬಳಸಿಕೊಳ್ಳುವುದನ್ನು ಕಲಿತುಕೊಂಡರೆ ಯಾವುದೇ ಆಪತ್ತಿನಿಂದಲೂ ನಾವು ಪಾರಾಗಬಹುದಾಗಿದೆ. ಇವೆಲ್ಲವನ್ನೂ ಆಯಾ ಸಮಯ ಸಂದರ್ಭಕ್ಕೆ ಅನುಗುಣವಾಗಿ ಉಪಯೋಗಿಸುವಂತಹ ಸಮಯಪ್ರಜ್ಞೆ ನಮ್ಮೊಳಗೆ ಸರಿಯಾದ ಸಮಯಕ್ಕೆ ಜಾಗೃತವಾಗಿ ನಮಗೆ ಸೂಕ್ತವಾದ ಸುರಕ್ಷಾ ಜಾಗೃತಿಯನ್ನು ಮೂಡಿಸಬೇಕಷ್ಟೇ….ಇಲ್ಲಿ ಕೆಲವೊಂದು ಆಟವನ್ನು ಪರಿಚಯಿಸಿ ತಿಳಿಸಿರುವೆನು. ಇದರಂತೆ ಇನ್ನೂ ಹತ್ತು ಹಲವಾರು ಆಟಗಳು ನಮ್ಮಲ್ಲಿವೆ ಮತ್ತು ನಿಮಗೆ ತಿಳಿದಿರಲೂಬಹುದು. ಯಾವುದೇ ಸಂದರ್ಭದಲ್ಲಿಯೂ ಕೂಡ ದೃತಿಗೆಡದೇ ಆಯಾ ಆಪತ್ತಿನಿಂದ ಹೇಗೆ ಪಾರಾಗಬಹುದು ಅಂತ ಯೋಚಿಸಿ out of the box thinkingನ್ನು ಅಳವಡಿಸಿಕೊಂಡು ನಮ್ಮನ್ನು ನಾವು ಬಚಾವು ಮಾಡಿಕೊಳ್ಳಬೇಕು.ನಮ್ಮೊಂದಿಗೆ ಇತರರನ್ನೂ ನಾವು ಆಪತ್ತಿನಿಂದ ರಕ್ಷಿಸುವುದು ಕೂಡ ನಮ್ಮ ನಿಮ್ಮೆಲ್ಲರ ಹೊಣೆ ಅಲ್ಲವೇ….? ಸುರಕ್ಷೆ ಎಂಬುವುದು ಪ್ರತಿಯೊಬ್ಬರ ಹೊಣೆಯೂ ಆಗಿದೆ…….

ಮುಂದುವರೆಯುವುದು….

ಶ್ರೀನಿಧಿ ಹೊಸಬೆಟ್ಟು

Related post