ಸುರಕ್ಷಾ ಜಾಗೃತಿ – 6

ಸುರಕ್ಷಾ ಜಾಗೃತಿ – 6 ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು

ಕತ್ತಲೆ ಎಂಬ ಗುಮ್ಮ

ಸಣ್ಣ ಮಕ್ಕಳಾಗಿದ್ದಾಗ ಊಟ ಮಾಡದಿದ್ದರೆ ಅಮ್ಮ ಹೇಳುತ್ತಿದ್ದ ಗುಮ್ಮನ ಕಥೆ ನೆನಪಿಗೆ ಬಂದಿರಬಹುದಲ್ಲವೇ? ಹೌದು ಅಮ್ಮ ಯಾವಾಗಲೂ ಕತ್ತಲನ್ನು ತೋರಿಸಿ ಗುಮ್ಮ ಬರುತ್ತಾನೆ ಬೇಗ ಊಟ ಮಾಡು ಅಂತ ಹೇಳಿ ಊಟವನ್ನು ಮಾಡಿಸುತ್ತಿದ್ದಳು. ಇದು ನನಗೂ ಆಗ ಅಮ್ಮ ಯಾಕೆ ಈ ರೀತಿ ಹೇಳುತ್ತಿದ್ದಳು ಅಂತ ತಿಳಿಯಲಿಲ್ಲ ಆದರೆ ಕ್ರಮೇಣ ಬೆಳೆದಂತೆ ಈ ಸುರಕ್ಷತೆಯ ಬಗ್ಗೆ ಹೆಚ್ಚಿನ ಚಿಂತನೆಯನ್ನು ಮಾಡುತ್ತಾ ಅದರ ಬಗ್ಗೆ ಹೆಚ್ಚಿನ ಜ್ಞಾನಾರ್ಜನೆಯನ್ನು ಮಾಡುತ್ತಿದ್ದಂತೆ ಅಮ್ಮನ ಈ ಕತ್ತಲಿನ ಹಿಂದಿರುವ ಗುಮ್ಮನ ಒಳಮರ್ಮದ ಅರಿವಾಯಿತು. ಅಮ್ಮ ನಮ್ಮನ್ನೆಲ್ಲ ಸಣ್ಣ ವಯಸ್ಸಿನಲ್ಲಿಯೇ ಎಚ್ಚರವಾಗಿರು ಈ ಕತ್ತಲಿನಿಂದ ಅಂತ ಆ ಸುರಕ್ಷಾ ಭೋದನೆಯನ್ನು ಮಾಡಿದ್ದಾಳಲ್ವಾ? ಅವಳ ಆ ದೂರದೃಷ್ಟಿಗೆ ನನ್ನ ದೊಡ್ಡದೊಂದು ಸಲಾಮು.

ಈಗ ಈ ಕತ್ತಲಿನ ಒಳಮರ್ಮವನ್ನು ಬಿಡಿಸುತ್ತಾ ಹೋದಂತೆಲ್ಲಾ ಸುರಕ್ಷತೆಯ ಒಂದೊಂದೇ ಪಾಠ ನಮಗೆ ತಿಳಿಯುತ್ತಾ ಹೋಗುತ್ತದೆ. ಹಿಂದೆ ಮನೆಯಲ್ಲಿ ಸಂಜೆ ಕತ್ತಲಾಗುತ್ತಿದ್ದಂತೆ ಮನೆಗೆ ಬಂದು ಸೇರಬೇಕು ಅಂತ ನಮ್ಮ ಹಿರಿಯರು ನಮಗೆ ಬುದ್ದಿ ಮಾತನ್ನು ಹೇಳುತ್ತಿದ್ದರು ಮತ್ತು ಅದರಂತೆ ಕಿರಿಯರು ನಡೆದುಕೊಳ್ಳುತ್ತಿದ್ದರು. ಆದರೆ ಕಾಲಕ್ರಮೇಣ ಕತ್ತಲಾದನಂತರವೇ ಬಹುತೇಕ ನಮ್ಮ ಎಲ್ಲಾ ಚಟುವಟಿಕೆಗಳು ಜಾಸ್ತಿಯಾಗುತ್ತಾ ಹೋದಂತೆ ಈ ಕತ್ತಲೆಂಬ ಗುಮ್ಮ ನಮ್ಮನ್ನು (ಅಸುರ) ಕ್ಷ ಎಂಬ ಗುಂಡಿಗೆ ನೂಕುತ್ತಿದ್ದಾನೆ.

ಹಾಗಾದರೆ ನಮ್ಮ ಹಿರಿಯರು ಹಾಕಿದ್ದ ಚೌಕಟ್ಟು ಮತ್ತು ಅದರ ಹಿಂದಿದ್ದ ಅವರ ಅಗಾಧವಾದ ದೂರದೃಷ್ಟಿ ಮೆಚ್ಚಲೇಬೇಕಲ್ಲವೇ?

ನಾನು ಇದನ್ನೆಲ್ಲ ಇಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ ನಮ್ಮ ದೇಶದಲ್ಲಿ ನಡೆದಂತಹ ದೌರ್ಜನ್ಯಗಳು ಹೆಚ್ಚಾಗಿ ಈ ಕತ್ತಲಿನಲ್ಲಿಯೇ ನಡೆದಿರುವಂತಹದ್ದು. ಇದನ್ನು ಎಲ್ಲರೂ ಗಮನದಲ್ಲಟ್ಟುಕೊಳ್ಳಬೇಕಾದಂತಹ ಅಂಶ. ಕತ್ತಲಿನಲ್ಲಿ ಅಡಗಿಕೊಂಡಿರುವ ಗುಮ್ಮ ನಮ್ಮ ಮೇಲೆ ಯಾವಾಗ,ಯಾವ ರೀತಿ ಆಕ್ರಮಣ ಮಾಡುತ್ತಾನೆಂದು ಊಹಿಸುವುದೂ ಕಷ್ಟ.

ಆದರೆ ಇಂದಿನ ಈ ಯಾಂತ್ರಿಕ ಯುಗದಲ್ಲಿ ನಾವೆಲ್ಲ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲೇಬೇಕಾಗಿರುವುದರಿಂದ ಈ ಕತ್ತಲೆಂಬ ಗುಮ್ಮನಿಂದ ನಮ್ಮನ್ನು ನಾವು ಮೊದಲು ಸುರಕ್ಷಿಸಿಕೊಳ್ಳಬೇಕು. ಹಾಗಾದರೆ ಇದರಿಂದ ನಾವು ಹೇಗೆ ಪಾರಾಗುವುದು?

ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹೋಗುವವರು ಆದಷ್ಟು ಕತ್ತಲಾವರಿಸುವ ಮುನ್ನವೇ ತಮ್ಮ ಕೆಲಸದ ಜಾಗವನ್ನು ತಲುಪಬೇಕು.

ರಾತ್ರಿಯಲ್ಲಿ ಕೆಲಸ ಮಾಡಲು ಹೋಗುವಾಗ ಸ್ವಂತ ವಾಹನದಲ್ಲಿ ಅಥವಾ ಕಂಪನಿಯಿಂದ ನಿಯೋಜಿಸಿದಂತಹ ವಾಹನದಲ್ಲೇ ಪ್ರಯಾಣಿಸುವುದು ಸೂಕ್ತ.

ಯಾವುದೇ ರೀತಿಯ ಸಣ್ಣ ಅನುಮಾನ ಬಂದರೂ ಕೂಡಲೇ ನಿಮ್ಮ ಹತ್ತಿರದವರಿಗೆ ಅಥವಾ ೧೦೨ ಗೆ ಕರೆ ಮಾಡಿ ಸಹಾಯವನ್ನು ಪಡೆಯುವುದನ್ನು ಮರೆಯಬಾರದು.

ನೀವು ಪ್ರತಿದಿನ ಪ್ರಯಾಣ ಮಾಡುವ ದಾರಿಯನ್ನು ಸರಿಯಾಗಿ ಗಮನಿಸಿಕೊಂಡಿರಬೇಕು. ಅಪ್ಪಿತಪ್ಪಿ ನಿಮ್ಮ ವಾಹನದ ಚಾಲಕ ದಾರಿಯನ್ನು ಬದಲಾವಣೆ ಮಾಡಿದರೆ ಕೂಡಲೇ ನಿಮ್ಮ ಲೊಕೇಷನನ್ನು ನಿಮ್ಮ ಆಪ್ತರಿಗೆ ಅಥವಾ ನಿಮ್ಮ ಕಂಪನಿಯ transport ಆಡಳಿತಾಧಿಕಾರಿಗೆ ತಿಳಿಸಬೇಕು.

ಈಗ ಇರುವಂತಹ ಸಾರಿಗೆ ವಾಹನಗಳಲ್ಲಿ panic button ಇದನ್ನು ಕಡ್ಡಾಯವಾಗಿ ಅಳವಡಿಸಲಾಗಿದೆ.ಯಾವುದೇ ಸಂದರ್ಭದಲ್ಲಿಯೂ ಕೂಡ ದೃತಿಗೆಡದೇ ಈ panic button ಇದನ್ನು ಬಳಸಬೇಕು.

ಆದಷ್ಟು ಹೊತ್ತು ರಾತ್ರಿ ಪಾಳಿಯಲ್ಲಿ ಒಬ್ಬಂಟಿಯಾಗಿರುವುದನ್ನು ಬಿಟ್ಟು ನಿಮ್ಮ ಸಹೋದ್ಯೋಗಿಗಳೊಂದಿಗೆ ಜೊತೆಗೂಡಿ ತಿರುಗಾಡಬೇಕು.

ರಾತ್ರಿ ಪಾಳಿಯಲ್ಲಿ ಕತ್ತಲಿರುವಂತಹ ಪ್ರದೇಶದಿಂದ ದೂರವಿದ್ದಷ್ಟೂ ಒಳ್ಳೆಯದು.

ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರು ತಮ್ಮ ಜೊತೆಯಲ್ಲಿ ಯಾವಾಗಲೂ torch light, emergency light, Battery operated siren, whistle with high pitch sound, pen camera, button camera, belt knife, necklaces with GPS tracker, Ear rings with GPS tracker, safety stick etc., ಇದನ್ನಿಟ್ಟುಕೊಳ್ಳುವುದು ಒಳಿತು.

ರಾತ್ರಿಯಲ್ಲಿ ಕೆಲಸ ಮಾಡುವ ಸಮಯದಲ್ಲಿ ಹೊರಗಡೆಯಿಂದ ಯಾವುದೇ ಆಹಾರವನ್ನೂ ಸ್ವೀಕರಿಸದೆಯೇ ಮನೆಯಿಂದ ತಂದಂತಹ ಆಹಾರವನ್ನೇ ಸ್ವೀಕರಿಸುವುದು ಉತ್ತಮ.

ಅಪರಿಚಿತರಿಂದ ದೂರವಿದ್ದಷ್ಟೂ ಒಳ್ಳೆಯದು.

ನಿಮ್ಮ ಕೆಲಸದ ಸ್ಥಳದ ಇಂಚಿಂಚಿನ ಮಾಹಿತಿಯೂ ನಿಮಗೆ ಚಿರಪರಿಚಿತವಾಗಿರಬೇಕು.

ಎಲ್ಲಾ escape ಮಾರ್ಗಗಳ ಪರಿಚಯ ನಿಮಗಿರಬೇಕು.

Security station ಮತ್ತು ಎಲ್ಲೆಲ್ಲಿ securities ಇದ್ದಾರೆ ಎಂಬ ಮಾಹಿತಿ ನಿಮಗಿರಬೇಕು.

ಈಗಿರುವ ಎಲ್ಲಾ ಕೆಲಸದ buildings ಇದರಲ್ಲಿ fire alarms ಎಂಬ ಸಾಧನ ಅಳವಡಿಸಿರುತ್ತರೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಅಂತ ನಿಮ್ಮ ಗಮನದಲ್ಲಿರಲಿ. ನಿಮ್ಮ ಜೊತೆಯಲ್ಲಿ match box ಇದ್ದರೆ ಈ fire alarm ಇರುವಂತಹ ಜಾಗದಲ್ಲಿ ಬೆಂಕಿ ಹಚ್ಚಿದರೆ ಈ alarmಗಳು ತನ್ನಿಂತಾನೇ ಜೋರಾಗಿ ಬೊಬ್ಬಿಡಲು ಆರಂಭಿಸುತ್ತವೆ. ಇದನ್ನೆಲ್ಲಾ ತಿಳಿದುಕೊಂಡಿದ್ದರೆ ಉತ್ತಮ.

ನೀವು ಕಾರ್ಯನಿರ್ವಹಿಸುತ್ತಿರುವ ಜಾಗದ ಹತ್ತಿರದ police station phone number ನಿಮ್ಮ ಜೊತೆಯಲ್ಲಿ‌ ಯಾವಾಗಲೂ ಇರಬೇಕು.

ನಿಮ್ಮ ಮೊಬೈಲಿನಲ್ಲಿ ತ್ವರಿತ ಕರೆಗಳನ್ನು ಯಾವಾಗಲೂ ನಮೂದಿಸಿಕೊಳ್ಳಿ. ಒಂದರಿಂದ ಒಂಭತ್ತು ಅಂಕೆಗಳಿಗೂ ಒಂದೊಂದು ಆಪ್ತ ಸಂಖ್ಯೆಯನ್ನು ಹೊಂದಿಸಿಟ್ಟುಕೊಳ್ಳಿ. ಯಾವುದೇ ಸಂದರ್ಭದಲ್ಲಿಯೂ ಈ ಯಾವುದೇ ಒಂದು ಸಂಖ್ಯೆಯನ್ನು ಒತ್ತಿದರೂ ಆ ಸಂಖ್ಯೆಯಲ್ಲಿ ನಮೂದಿಸಿದವರಿಗೆ ತ್ವರಿತವಾಗಿ ಕರೆ ಹೋಗುವಂತಿರಬೇಕು.

ರಾತ್ರಿಯ ಸಮಯದಲ್ಲಿ ನಿದ್ರೆಗೆ ಜಾರದಂತೆ ಮುಂಜಾಗ್ರತೆ ವಹಿಸಿ.

ರಾತ್ರಿಯ ಹೊತ್ತು ಆದಷ್ಟು ಪೂರ್ಣಪ್ರಮಾಣದ ಒಳ್ಳೆಯ ಗುಣಮಟ್ಟದ ಸದೃಢವಾದ ಉಡುಪನ್ನು ಧರಿಸಿ ಜೊತೆಗೆ safety shoes ಅನ್ನು ಬಳಸುವುದನ್ನು ಮರೆಯದಿರಿ.

ನಿಮ್ಮ ಮೇಲೆ ನಿಮಗೆ ಎಚ್ಚರಿಕೆ‌ ಇರಲಿ‌ ಹಾಗೆಯೇ ನಿಮ್ಮ ಸುತ್ತ ಮುತ್ತಲಿನ ಆಗುಹೋಗುಗಳ ಕಡೆಗೂ ನಿಮ್ಮ ಗಮನವಿರಲಿ.

ಕತ್ತಲೆಂಬ ಗುಮ್ಮನಿಂದ ನಿಮ್ಮನ್ನು‌ ನೀವು ಸುರಕ್ಷಿತ ವಾಗಿರಿಸಿಕೊಳ್ಳಿ.

ಆಯಾ ಸಂದರ್ಭಗಳಿಗೆ ಅಲ್ಲಿನ ಆಗುಹೋಗುಗಳಿಗೆ ಅನುಗುಣವಾಗಿ ಈ ಮೇಲೆ ತಿಳಿಸಿರುವಂತಹ ಅಂಶಗಳಲ್ಲಿ ಕೆಲವೊಂದು ಮಾರ್ಪಾಡುಗಳಾಗಬಹುದು. ಅದೇನೇ ಇರಲಿ ನಿಮ್ಮ ಸುರಕ್ಷೆ ನಿಮ್ಮ ಕೈಯಲ್ಲಿ ಎಂಬುವುದನ್ನು ಯಾವಾಗಲೂ ಗಮನದಲ್ಲಿಟ್ಟುಕೊಂಡಿರಿ.

ಮುಂದುವರೆಯುವುದು….

ಶ್ರೀನಿಧಿ ಹೊಸಬೆಟ್ಟು

Related post