ಸುರಹೊನ್ನೆ

ಸುರಹೊನ್ನೆ

ಕಂಡೆ ನಾನೊಂದು
ಅಪರೂಪ ಕುಸುಮವನು,
ಬಳಿಸಾರಿ ಕೇಳಿದೆನದನು
ನಿನ್ನ ಹೆಸರೇನೆಂದು ;

ಬರಿದೆ ತಲೆಯಾಡಿಸುತ,
ನಗುವೇ ಅದರಾ ಮೊಗದ
ಹೆಗ್ಗುರುತು ತಾನಾಗಿರಲು
ಹೆಸರಲಿನ್ನೇನಿಹುದು :

ಹೃದಯದಾ ಬಳಿ ತಂದು
ಕೇಳಿದೆನು ಅದ ನಾನು
ಬಂದೆ ನೀನೆಲ್ಲಿಂದ,
ನಿನ್ನ ನೆಲೆಯಾವುದು ?

ಹೃದಯಕ್ಕೊರಗಿದ ಹೂವಿನಾ
ಮುಗುಳುನಗೆಯೆನಗರುಹಿತ್ತು,
ನನ್ನನರಿತವರ ಮನವೆನ್ನ
ಚಂದದರಮನೆಯು :

ಹೂಮೊಗವನು ಎತ್ತಿ
ಬಗ್ಗಿ ಪಿಸುದನಿಯಲ್ಲಿ,
ನಿನ್ನದೆಂತಹ ಭಾಷೆ
ಎಂದು ನಾ ಕೇಳುತಿರೆ:

ಸುಗಂಧ ಸೌರಭವೇ
ನನ್ನ ಮಾತಾಗಿಹುದೆಂದ,
ಅದರ ಮೌನದಿಂದಲೇ
ನನ್ನ ಉಸಿರಿಗರಿವಾಯ್ತು!

ನನ್ನ ನೀ ಮರೆಯುವೆಯಾ ?
ಎಂದು ಕೇಳಲು ನಾನು
ಬರಿದೇ ನಗುತಲಿ ಸುಮವು
ತಲೆ ಬಾಗಿ ನಿಂದಿರಲು;

ಅರಿವಾಯ್ತು ನನಗಾಗ
ಮುಂದೊಮ್ಮೆ ಇಲ್ಲಿಂದ ನಾ
ಹೊರಟು ಬಂದಾಗ, ಸುಮದ
ಕನಸಿನಲಿ ನಾನಿರುವೆನೆಂದು!

ಶ್ರೀವಲ್ಲಿ ಮಂಜುನಾಥ
(ರವೀಂದ್ರರ ಒಂದು ಕವನದ ಪ್ರೇರಣೆ)

Related post

Leave a Reply

Your email address will not be published. Required fields are marked *