ಮಕರಂದವ ಕುಡಿವ ಈ ಬೆಟ್ಟುದ್ದ ಹಕ್ಕಿಗಳು!
ತಾಳಿ ತಾಳಿ ಬೆಟ್ಟುದ್ದ ಹಕ್ಕಿಗಳು ಎಂದ ಕೂಡಲೆ ಹಮ್ಮಿಂಗ್ ಹಕ್ಕಿಗಳು ಎಂದುಕೊಳ್ಳ ಬೇಡಿ! ಹಮ್ಮಿಂಗ್ ಹಕ್ಕಿಗಳು ಭಾರತದಲ್ಲಿ ಇಲ್ಲ. ದಕ್ಷಿಣ ಅಮೇರಿಕಾದಲ್ಲಿ ಕಂಡುಬರುತ್ತವೆ. ನಮ್ಮ ದೇಶದಲ್ಲಿ ಕಂಡುಬರುವ ಪುಟ್ಟಹಕ್ಕಿಗಳು ಹಲವಾರು ಇವೆ, ಸೂರಕ್ಕಿಗಳು, ಹೂ ಕುಟುಕಗಳು, ಜೇಡಹಿಡುಕಗಳು ಹೀಗೆ.
ಇಂದು ನಾವು ಕೇವಲ ಸೂರಕ್ಕಿಗಳನ್ನು ಕುರಿತು ತಿಳಿಯೋಣ. ಇವು ಪುಟ್ಟಗಾತ್ರದ ಆದರೆ ತುಸು ಬಾಗಿದ, ಉದ್ದವಾದ ಕೊಕ್ಕಿರುವ ಹಕ್ಕಿಗಳು. ಈ ರೂಪದ ಕೊಕ್ಕು ಇವಕ್ಕೆ ಹೂವಿನ ತಳಭಾಗವನ್ನು ತಲುಪಿ ಮಕರಂದ ಹೀರಲು ಅನುವು ಮಾಡಿಕೊಡುತ್ತದೆ. ಜೀವಿವಿಕಾಸದಲ್ಲಿ ಆಹಾರ ಹಾಗೂ ಅದರ “ವಾರಸುದಾರರು” ಹೇಗೆ ಜೋಡಿಯಾಗಿರುತ್ತವೆ, ನೋಡಿ. ಅಂದಹಾಗೆ ಇವು ಮಕರಂದವನ್ನು ಕುಡಿದರೂ ಕೀಟಗಳನ್ನು ತಿನ್ನುತ್ತವೆ. ಇವುಗಳ ನಾಲಿಗೆ ಮತ್ತು ಕೊಕ್ಕು ಮಕರಂದ ಹೀರಲು ವಿಕಾಸಗೊಂಡಿದೆ. ಕೊಕ್ಕು ತುಸು ಗರಗಸದಂತಿದ್ದು ಅದು ಕೀಟಗಳನ್ನು ಹಿಡಿಯಲು ಅನುಕೂಲಕರವಾಗಿದೆ.
ಮಕರಂದ ಕುಡಿಯುವ ಹಕ್ಕಿಗಳ ಕುಟುಂಬಕ್ಕೆ ಜೇಡಹಿಡುಕಗಳೂ ಸೇರುತ್ತವೆ. ಜೇಡಹಿಡುಕಗಳೂ ಸೇರಿದಂತೆ ಭಾರತ ಉಪಖಂಡದಲ್ಲಿ 11 ಬಗೆಯವು, ದಕ್ಷಿಣ ಏಷ್ಯಾದಲ್ಲಿ 15 ಮತ್ತು ಜಗತ್ತಿನಲ್ಲಿ ಸುಮಾರು 130 ಪ್ರಭೇದದಗಳು ಮಕರಂದ ಹೀರುವ ಹಕ್ಕಿಯ ಕುಟುಂಬದ ಸದಸ್ಯರುಗಳು!
ಸಾಮಾನ್ಯವಾಗಿ ಗಂಡುಹಕ್ಕಿಗಳು ಹೊಳೆಯುವ ಬಣ್ಣಗಳನ್ನು ಹೊಂದಿರುತ್ತವೆ. ಕತ್ತಲಲ್ಲಿ ಕಪ್ಪಾಗಿ ಕಾಣುತ್ತವೆ ಬಿಸಿಲುಬಿದ್ದರಂತೂ ರೇಡಿಯಂನಂತೆ ವಿಶೇಷವಾಗಿ ಹೊಳೆಯುತ್ತವೆ. ಇದನ್ನು ವರ್ಣಸ್ಫುರಣ ಎನ್ನುತ್ತಾರೆ. ಹೆಚ್ಚು ಬೆಳಕಿಲ್ಲದಲ್ಲಿ ಈ ಬಣ‍್ಣಗಳು ಕಾಣದೆ ಹಕ್ಕಿಯೂ ಒಟ್ಟಾರೆ ಕಪ್ಪಾಗಿ ಕಾಣುತ್ತವೆ. ನಮ್ಮಲ್ಲಿ ಕೆನ್ನೀಲಿ ಸೂರಕ್ಕಿ (ಪರ್ಪಲ್ ಸನ್‍ಬರ್ಡ್), ಕೆನ್ನೀಲಿ ಪೃಷ್ಠದ ಸೂರಕ್ಕಿ (ಪರ್ಪಲ್ ರಮ್ಪಡ್ ಸನ್‍ಬರ್ಡ್) ಸಾಮಾನ್ಯವಾಗಿ ಕಂಡುಬರುತ್ತದೆಯಾದರೂ ಇತರ ಏಳು ಸೂರಕ್ಕಿಗಳು ಭಾರತ ಉಪಖಂಡದಲ್ಲಿ ಕಂಡುಬರುತ್ತೆ. ಕೆಲವು ಸೂರಕ್ಕಿಗಳು (ಬಾತುಗಳಂತೆ) ಮರಿಮಾಡುವ ಕಾಲದ ನಂತರ ಕಳೆಗುಂದಿದ ಪರ್ವಕ್ಕೆ ಸರಿಯುತ್ತದೆ. ಉದುರಿದ ಗರಿಗಳು ಮತ್ತೆ ಕ್ರಮೇಣ ಬೆಳೆಯುತ್ತವೆ. (ವನ್ಯಜೀವಿ ಛಾಯಾಗ್ರಾಹಕ ಶ್ರೀ ಜಿ ಎಸ್ ಶ್ರೀನಾಥರು ಇದರ ಸೊಗಸಾದ ಚಿತ್ರ ತೆಗೆದಿದ್ದಾರೆ, ಲೇಖನದ ಜೊತೆಗಿದೆ, ನೋಡಿ).
ಸೂರಕ್ಕಿಗಳ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ಅವು ಸೇವಿಸುವ ಮಕರಂದಲ್ಲಿರುವ ವಿಷಕಾರಿ ವಸ್ತುಗಳ ವಿಷ ತೀವ್ರತೆಯನ್ನು ಕಡಿಮೆ ಮಾಡಬಲ್ಲವು ಎಂದು ಹೊಸ ಸಂಶೋಧನೆಗಳು ಹೇಳುತ್ತಿವೆ. ಮುಂದೆ ಇದು ಬಹಳ ಉಪಯುಕ್ತ ಸಂಶೋಧನೆಗಳಿಗೆ ದಾರಿ ಮಾಡಿಕೊಡಬಲ್ಲುದು.
ಮೇಲೆ ಹೇಳಿದ ಎರಡು ಸೂರಕ್ಕಿಗಳು ಸಾಮಾನ್ಯವಾಗಿ ಕಂಡುಬರುತ್ತವೆ. ನಿಮ್ಮಲ್ಲಿ ಸಣ್ಣ ಕೈತೋಟವಿದ್ದರೂ ಇವನ್ನು ಕಾಣಬಹುದು. ಇವು ಕೀಟಗಳನ್ನು ನಿಯಂತ್ರಣದಲ್ಲಿಡುವುದರಿಂದಲೂ, ಪರಾಗಸ್ಪರ್ಷದಲ್ಲಿ ಸಹಾಯ ಮಾಡುವುದರಿಂದಲೂ ನಿಸರ್ಗದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಕೆಲವು ಪರಾವಲಂಬಿ ಸಸ್ಯಗಳನ್ನು ಇವು ಹಬ್ಬಿಸುವುದ ಕುಖ್ಯಾತಿಯೂ ಇದಕ್ಕೆ ಇದೆ. ಆದರೆ, ನಿಸರ್ಗದಲ್ಲಿ ಎಲ್ಲದಕ್ಕೂ ಒಂದೊಂದು ಸ್ಥಾನವಿದೆ. ನಾವು ಕೇವಲ ಮನುಷ್ಯರ ದೃಷ್ಟಿಯಿಂದ ಅದನ್ನು ನೋಡಬಾರದು, ಅಲ್ಲವೆ?
ನಮ್ಮ ಮಕ್ಕಳುಗಳು ಈ ಸೂರಕ್ಕಿಗಳನ್ನು ನೋಡಿ ಚಪ್ಪಾಳೆ ತಟ್ಟಿ ನಗುವುದು ನೋಡಲು ಎಷ್ಟು ಚಂದ ಅಲ್ಲವೇ ?
ಅಂತಹ ಸಂದರ್ಭಗಳನ್ನು ನಮಗೆ ksn.bird@gmail.com ಮೇಲ್ ಐಡಿ ಗೆ ಬರೆದು ತಿಳಿಸಿ ಅಥವಾ ಕಾಮೆಂಟ್ ಮಾಡಿ
ಕಲ್ಗುಂಡಿ ನವೀನ್
ಚಿತ್ರಗಳು ಶ್ರೀ ಜಿ ಎಸ್ ಶ್ರೀನಾಥ