ಸೃಜನಶೀಲತೆ ಕ್ಷೀಣಿಸುತ್ತಿದೆಯೇ ?
ನಮ್ಮಲ್ಲಿ ಸೃಜನಶೀಲತೆಯ ಕೊರತೆ ಉಂಟಾಗಿದೆಯೆ? ಹೌದೆನ್ನುತ್ತದೆ ಎಷ್ಟೋ ಸಂಶೋಧನೆಗಳು. ಈಗಿನ ತಂತ್ರಜ್ಞಾನ ನಮ್ಮನ್ನು ಎಷ್ಟೊಂದು ಆವರಿಸಿಕೊಂಡಿದೆ, ನಾವು ಎಷ್ಟು ತಂತ್ರಜ್ಞಾನದ ಮೇಲೆ ಅವಲಂಬಿತವಾಗಿದ್ದೇವೆ ಎಂದರೆ, ಉಸಿರಾಡುವಷ್ಟೇ ಅದು ಕೂಡ ಅವಶ್ಯಕ ಎನ್ನುವಷ್ಟು!. ಲೆಕ್ಕವಿಲ್ಲದಷ್ಟು ಸಾಮಾಜಿಕ ಜಾಲತಾಣಗಳು ನಮ್ಮ ಸೃಜನಶೀಲತೆಯನ್ನು ನುಂಗಿಹಾಕಿವೆ ಎಂದರೆ ತಪ್ಪಾಗಲಾರದು.
ಈಗ ಶುರುವಾಗಿರುವ ಕೃತಕಬುದ್ಧಿಮತ್ತೆಯ ತಂತ್ರಜ್ಞಾನವಂತೂ ಮೊದಲು ಅಚ್ಚರಿ ಮೂಡಿಸಿ ಈಗ ಎಲ್ಲರನ್ನು ಬೆಚ್ಚಿ ಬೀಳಿಸುತ್ತಿದೆ. ಕುತ್ತಿಗೆಯವರೆಗಿನ ಯಾರದೋ ದೇಹವನ್ನು ಉಪಯೋಗಿಸಿ ಇನ್ನ್ಯಾರದೋ ತಲೆಯನ್ನು ಜೋಡಿಸಿ ಒಂದು ಚೂರು ಸಂಶಯ ಬರದಂತೆ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಇದರ ಹಾವಳಿಯನ್ನು ಹತ್ತಿಕ್ಕಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ನೆಡೆಯುತ್ತಿದೆ.
ತಂತ್ರಜ್ಞಾನ ಬಳಕೆ ನಮಗೆ ಬಹಳ ಮುಖ್ಯ ನಿಜ. ಆದರೆ ಅದರ ಅತಿಯಾದ ಅವಲಂಬನೆ ನಮ್ಮ ಮೆದುಳಿಗೆ ನಕಾರಾತ್ಮಕ ಪ್ರಚೋದನೆ ನೀಡಿ, ನಮ್ಮ ಸ್ವಂತ ಬುದ್ಧಿಗೆ ನಾವೇ ಪೂರ್ತಿ ವಿಶ್ರಾಂತಿ ಕೊಟ್ಟಂತಾಗಿದೆ. ಅದು ಮನೋರಂಜನೆ ಇರಬಹುದು ಅಥವಾ ಯಾವುದೇ ವಿಷಯದ ಮಾಹಿತಿ ಇರಬಹುದು, ಎಲ್ಲವನ್ನೂ ಸಹ ನಾವು ಯೋಚನೆಯನ್ನೂ ಮಾಡದೆ, ಅತಿವೇಗದಲ್ಲಿ ಕೆಲಸ ಮಾಡಿ ಮುಗಿಸುವ ಭರದಲ್ಲಿ ಸಂಪೂರ್ಣವಾಗಿ ಜಾಲತಾಣಗಳ ದಾಸರಾಗಿದ್ದೇವೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮಾನವನ ಸೃಜನಶೀಲತೆಗೆ ಎಂದೂ ಸಾಟಿಯಾಗಲಾರದು. ಏಕೆಂದರೆ ಅದನ್ನೂ ಕೂಡ ಮಾನವನೇ ಕಂಡುಹಿಡಿದದ್ದು. ಅದು ಎಂದಿಗೂ ಯಂತ್ರವೇ ಸರಿ. ಅದು ನಮ್ಮ ನಿಯಂತ್ರಣದಲ್ಲಿ ಇರಬೇಕೇ ಹೊರತು ನಾವು ಅದರ ನಿಯಂತ್ರಣದಲ್ಲಿ ಅಲ್ಲ.
ಕೆಲವೊಮ್ಮೆ ಸ್ನೇಹಿತರು, ಸಂಬಂಧಿಕರ ಜೊತೆ, ಹಾಡು, ಹರಟೆ ಹೊಡೆಯುತ್ತ ಕಾಲ ಕಳೆಯುವ ಸಮಯವನ್ನೂ ಸಹ ಈ ಜಾಲತಾಣಗಳು ಆವರಿಸಿ ಕೊಂಡಿವೆ. ಪ್ರತಿಯೊಬ್ಬರೂ ಇದರ ಗುಲಾಮರಾಗಿ ಇರುವುದು ವಿಷಾದನೀಯ. ಜೊತೆಗಾರರೊಂದಿಗಿನ ಚರ್ಚೆ, ಸಂಭಾಷಣೆ, ವಿಚಾರ ವಿನಿಮಯ, ಅನುಭವ ಎಲ್ಲವೂ ಈಗಿನ ದಿನಗಳಲ್ಲಿ ಕಾಣೆಯಾಗಿದೆ. ಅದೂ ಅಲ್ಲದೆ ನಮ್ಮ ಸ್ವಂತ ಬುದ್ಧಿವಂತಿಕೆ, ಪ್ರತಿಭೆ ಎಲ್ಲೋ ಕಳೆದು ಹೋಗುತ್ತಿರುವ ಭಯ ಕಾಡುತ್ತಿದೆ.
ಹೀಗೆ ರೋಬೋಟ್ ನಂತೆ ಜೀವಿಸುವುದು ಎಷ್ಟು ಸರಿ ಒಮ್ಮೆ ಯೋಚಿಸಿ!! ಜೀವನವನ್ನು ಪ್ರೀತಿಸಿ ಸುಂದರ ವಾಗಿಸುವುದು ನಮ್ಮ ಕೈಯಲ್ಲೇ ಇದೆ. ನಮ್ಮ ಸುತ್ತಮುತ್ತಲೂ ನಡೆಯುವ ವಿಷಯಗಳನ್ನು ಆದಷ್ಟು ಗಮನಿಸಿ ನೋಡಿ , ಸಾಧನೆ ಮಾಡಲು ಅಲ್ಲ, ಸಣ್ಣ ಸಣ್ಣ ಖುಷಿಯನ್ನು ಅನುಭವಿಸಲು, ತಂತ್ರಜ್ಞಾನದಲ್ಲಿ ಇಲ್ಲದ ಎಷ್ಟೋ ವಿಚಾರ ನಮ್ಮ ಸುತ್ತಮುತ್ತ ಪರಿಸರದಲ್ಲಿ ಅಡಗಿದೆ, ಪ್ರತಿ ದಿನ ಹೊಸ ಹೊಸ ಗೆಳೆತನ ಮಾಡಿ, ಒಳ್ಳೆಯ ಪುಸ್ತಕಗಳನ್ನು ಓದಿ. ಅಲ್ಲಿ ಸಿಗುವ ಹೊಸ ವಿಷಯ, ಹೊಸ ವ್ಯಕ್ತಿತ್ವ, ಹಾಗೂ ಅನೇಕ ಮಾಹಿತಿಗಳನ್ನು ಸ್ನೇಹಿತರಿಗೂ ಹಂಚಿ.
ಇನ್ನಾದರೂ ಆದಷ್ಟು ಜಾಲತಾಣಗಳಿಂದ ನಮ್ಮನ್ನು ನಾವು ರಕ್ಷಿಸೋಣ. ನಮ್ಮ ಸ್ವಂತ ಬುದ್ಧಿಯನ್ನೇ ತಂತ್ರವಾಗಿಸಿ, ಜ್ಞಾನವನ್ನು ಹೆಚ್ಚಿಸೋಣ. ಮುಂದಿನ ಪೀಳಿಗೆಯೂ ನಮ್ಮನ್ನೇ ಅನುಸರಿಸುತ್ತದೆ.,,ಅದಕ್ಕಾಗಿಯಾದರೂ ತಂತ್ರಜ್ಞಾನದಿಂದ ದೂರವಿದ್ದು , ಸೃಜನ ಶೀಲತೆ ಕೊರತೆಯನ್ನು ನೀಗಿಸಲು ಮುಂದಾಗೋಣ.
ರಕ್ಷಿತಾ.ಎಲ್
ಬೆಂಗಳೂರು