ಸೌರವ್ಯೂಹ – 8 ಶನಿ ಗ್ರಹ

ಶನಿ ಗ್ರಹ

ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ II
ಛಾಯಾ ಮಾರ್ತಾಂಡ ಸಂಭೂತಾಂ ತಂ ನಮಾಮಿ ಶನೈಶ್ಚರಂ ||

ಸೌರವ್ಯೂಹದ ಆರನೇ ಗ್ರಹ ಶನಿ. ಅನಿಲ ರೂಪಿಯಾದ ಶನಿಯು ಗುರು ಗ್ರಹದ ನಂತರ ಸೌರಮಂಡಲದಲ್ಲಿ 2 ನೇ ಅತಿ ದೊಡ್ಡ ಗ್ರಹ. ಶನಿಯು ಎದ್ದು ಕಾಣುವಂತಹ ಉಂಗುರ ವ್ಯವಸ್ಥೆಯನ್ನು ಹೊಂದಿದೆ. ಶನಿಯು 83 ಉಪಗ್ರಹಗಳನ್ನು ಹೊಂದಿದ್ದು ಟೈಟಾನ್ ಇದರ ಮುಖ್ಯ ಹಾಗು ದೊಡ್ಡ ಉಪಗ್ರಹ. ಟೈಟಾನ್ ‘ಬುಧ’ ಗ್ರಹಕ್ಕಿಂತ ದೊಡ್ಡದಾಗಿದೆ.

ಗುಣಲಕ್ಷಣಗಳು

ಶನಿಯು ಭೂಮಿಯಂತೆಯೇ ಧ್ರುವಗಳಲ್ಲಿ ಸ್ವಲ್ಪ ಚಪ್ಪಟೆಯಾಗಿದ್ದು ಸಮಭಾಜಕದಲ್ಲಿ ಉಬ್ಬಿಕೊಂಡಿದೆ. ಈ ಆಕಾರಕ್ಕೆ ಅದರ ಅನಿಲರೂಪ ಮತ್ತು ತ್ವರಿತವಾದ ಅಕ್ಷೀಯ ಪರಿಭ್ರಮಣಗಳು ಕಾರಣ. ಉಳಿದ ಅನಿಲ ರೂಪಿ ಗ್ರಹಗಳು ಈ ರೀತಿಯ ಆಕಾರವನ್ನು ಹೊಂದಿದ್ದರು ಶನಿಯಲ್ಲಿ ಇದು ಎದ್ದು ಕಾಣುತ್ತದೆ. ಸೌರಮಂಡಲದಲ್ಲಿ ನೀರಿಗಿಂತ ಕಡಿಮೆ ಸಾಂದ್ರತೆಯುಳ್ಳ ಏಕೈಕ ಗ್ರಹ ಶನಿ. ಇದರ ಸರಾಸರಿ ಸಾಂದ್ರತೆಯು ನೀರಿನ 69% ರಷ್ಟಿದೆ. ಶನಿಯ ವಾಯುಮಂಡಲವು ನೀರಿಗಿಂತ ಹಗುರವಾಗಿದೆ ಮತ್ತು ಗ್ರಹದ ಒಳಭಾಗವು ಗಮನಾರ್ಹವಾಗಿ ಹೆಚ್ಚು ಸಾಂದ್ರತೆಯನ್ನು ಹೊಂದಿದೆ.

ಶನಿಯ ಒಳಭಾಗವು ಗುರುವಿನ ಒಳಭಾಗದಂತೆಯೇ ರಚಿತವಾಗಿದೆ. ಒಳಭಾಗದ ಮಧ್ಯವು ಸಣ್ಣ ಶಿಲೆಗಳಿಂದ ಕೂಡಿದ್ದು ಅದರ ಸುತ್ತ ದ್ರವೀಕೃತ ಲೋಹರೂಪಿ ಜಲಜನಕದ ಒಂದು ಪದರವಿದೆ. ಇದರ ಮೇಲೆ ಅನಿಲರೂಪಿ ಜಲಜನಕದ ಇನ್ನೊಂದು ಪದರವಿದೆ. ನಾನಾ ರೀತಿಯ ಹಿಮದ ಜಾಡುಗಳನ್ನು ಇಲ್ಲಿ ಕಾಣಬಹುದಾಗಿದೆ. ಶನಿಯು ತಾನು ಸೂರ್ಯನಿಂದ ಪಡೆಯುವ ಶಾಖಕ್ಕಿಂತ ಹೆಚ್ಚು ಶಾಖವನ್ನು ಬಾಹ್ಯಾಕಾಶಕ್ಕೆ ಹೊರಹಾಕುತ್ತದೆ. ಶನಿಯ ಹೆಚ್ಚುವರಿ ಶಾಖವು ಹೀಲಿಯಂ ಅನ್ನು ಅದರ ಲೋಹೀಯ ಹೈಡ್ರೋಜನ್ ಕೋರ್‌ಗೆ ಅವಕ್ಷೇಪಿಸುವುದರಿಂದ ಉತ್ಪತ್ತಿಯಾಗುತ್ತದೆ. ಗುರುತ್ವ ಬಲದಿಂದ ಗ್ರಹವು ಉದ್ಭವವಾಗುತ್ತದೆ. ಆದರೆ ಹೆಚ್ಚುವರಿ ಶಾಖವನ್ನು ಉತ್ಪಾದಿಸಲು ಈ ಪ್ರಕ್ರಿಯೆಯೊಂದೇ ಸಾಲದು, ಶನಿಯ ಒಳಭಾಗದಲ್ಲಿ ಹಗುರವಾದ ಜಲಜನಕದ ಅಣುಗಳ ಮೂಲಕ ಹೆಚ್ಚು ಬಾರವಾದ ಹೀಲಿಯಂ ಅಣುಗಳು ಕೆಳಗೆ ಬಿದ್ದಾಗ ಉಂಟಾಗುವ ಘರ್ಷದಿಂದಲೂ ಸ್ವಲ್ಪ ಶಾಖೋತ್ಪನ್ನವಾಗುತ್ತದೆಯೆಂದು ಪ್ರತಿಪಾದಿಸಲಾಗಿದೆ.

ಶನಿಯ ಉಂಗುರದ ಕಥೆ

ಉಂಗುರದ ಕಾರಣವಾಗಿಯೇ ಶನಿ ಗ್ರಹವು ಬಹಳಷ್ಟು ಪ್ರಸಿದ್ದಿಯನ್ನು ಹೊಂದಿದೆ. 1610 ರಲ್ಲಿ ಮೊದಲ ಬಾರಿಗೆ ಗೆಲೆಲಿಯೋ ತನ್ನ ದೂರದರ್ಶಕದ ಸಹಾಯದಿಂದ ಈ ಉಂಗುರಗಳನ್ನು ವೀಕ್ಷಿಸಿದನು. ಈ ಉಂಗುರಗಳು ಮುಖ್ಯವಾಗಿ ಮಂಜಿನ ಪುಡಿಯಿಂದ ರಚಿತವಾಗಿದ್ದು. ಸ್ವಲ್ಪ ಕಲ್ಲಿನ ಚೂರುಗಳು ಹಾಗು ದೂಳು ಸಹ ಇವುಗಳಲ್ಲಿ ಕಂಡು ಬರುತ್ತದೆ. ಈ ಉಂಗುರಗಳ ಕಾರಣದಿಂದ ಶನಿಯು ನೋಟದಲ್ಲಿ ಮನಸೆಳೆಯುವ ಒಂದು ಗ್ರಹವಾಗಿದೆ.

ಗೆಲೆಲಿಯೋ ತನ್ನ ಪತ್ರದಲ್ಲಿ ಟಸ್ಕನಿಯ ರಾಜನಿಗೆ “ಶನಿ ಗ್ರಹವು ಒಂದೇ ಗ್ರಹವಾಗಿರದೆ ಮೂರು ಗ್ರಹಗಳಿಂದ ಕೂಡಿದೆ. ಈ ಮೂರು ಒಂದನ್ನೊಂದು ಮುಟ್ಟುವುದಿಲ್ಲ ಮತ್ತು ಒಂದಿನ್ನೂದರಿಂದ ಚಲಿಸುವುದು ಇಲ್ಲ. ಇವು ನಕ್ಷತ್ರ ರಾಶಿಯ ರೇಖೆಗೆ ಸಮಾನಾಂತರವಾಗಿ ಸ್ಥಿರವಾಗಿವೆ. ಮಧ್ಯದ ಕಾಯವು (ಶನಿ) ಪಕ್ಕದವುಗಳಿಗಿಂತ (ಉಂಗುರದ ತುದಿಗಳು) 3 ಪಟ್ಟು ದೊಡ್ಡದಾಗಿವೆ ಹಾಗು ಶನಿಗೆ ಕಿವಿಗಳು ಇವೆ” ಯೆಂದೂ ಬರೆದು ತಿಳಿಸಿದ್ದನು. 1612 ರಲ್ಲಿ ಉಂಗುರಗಳ ಸಮತಳವು ಭೂಮಿಯತ್ತ ನೇರವಾಗಿ ಹೊಂದಿಕೊಂಡಿರುವುದರಿಂದ ಉಂಗುರಗಳು ಮಾಯವಾದಂತೆ ಕಂಡವು. ಆದರೆ 1613 ರಲ್ಲಿ ಈ ಉಂಗುರಗಳು ಮತ್ತೆ ಗೋಚರಿಸಿದವು ಇದರಿಂದ ಗೆಲೆಲಿಯೋ ಮತ್ತಷ್ಟು ಗೊಂದಲಕೀಡಾದನು.

ಗೆಲೆಲಿಯೋ ಸಾಂದರ್ಭಿಕ ಚಿತ್ರ

ಕ್ರಿಸ್ಟಿಯಾನ್ ಹುಯ್ ಗೇನ್ಸ್ 1655 ರಲ್ಲಿ ಮೊದಲಬಾರಿಗೆ ಶನಿಯು ಉಂಗುರಗಳಿಂದ ಆವೃತವಾಗಿರುವುದೆಂದು ಸೂಚಿಸಿದನು. ಗೆಲೆಲಿಯೋಗೆ ಲಭ್ಯವಿದ್ದುದಕ್ಕಿಂತ ಬಹಳ ಉತ್ತಮ ದರ್ಜೆಯ ದೂರದರ್ಶಕವನ್ನು ಬಳಸಿ ಅವನು ಶನಿಯನ್ನು ಅವಲೋಕಿಸಿ “ಶನಿಯು ತೆಳುವಾದ ಮತ್ತು ಚಪ್ಪಟೆಯಾದ ಉಂಗುರಗಳಿಂದ ಆವೃತವಾಗಿದೆ, ಈ ಉಂಗುರಗಳು ಗ್ರಹವನ್ನು ಎಲ್ಲೂ ಮುಟ್ಟದೆ ಗ್ರಹದ ಕಕ್ಷೆಯ ಸಮತಳಕ್ಕೆ ಓರೆಯಲ್ಲಿವೆ. ಈ ಉಂಗುರಗಳು ಹಲವಾರು ಸಣ್ಣ ಉಂಗುರಗಳಿಂದ ಕೂಡಿದ್ದು ಇವುಗಳ ನಡುವೆ ಸಂದುಗಳು ಇವೆಯೆಂದೂ ಜಿಯೊವಾನಿ ಡೊಮೆನಿಕೋ ಕ್ಯಾಸನಿಯು 1675 ರಲ್ಲಿ ಕಂಡು ಹಿಡಿದನು. ಇವುಗಳಲ್ಲಿ ಅತಿದೊಡ್ಡ ಅಂತರಕ್ಕೆ ಕ್ಯಾಸಿನಿ ಅಂತರವೆಂದು ಹೆಸರಿಡಲಾಯಿತು.

ನೈಸರ್ಗಿಕ ಉಪಗ್ರಹಗಳು

ಟೈಟಾನ್

ಶನಿಗ್ರಹವು ಹಲವಾರು ನೈಸರ್ಗಿಕ ಉಪಗ್ರಹಗಳನ್ನು ಹೊಂದಿದೆ. ಇದರ ಸುತ್ತ ಸುತ್ತುತ್ತಿರುವ ಎಲ್ಲ ಹಿಮದ ತುಣುಕುಗಳನ್ನೂ ಪಾರಿಭಾಷಿಕವಾಗಿ ಉಪಗ್ರಹಗಳೆಂದೇ ಪರಿಗಣಿಸಬಹುದು. ಇದಲ್ಲದೆ 83 ಉಪಗ್ರಹಗಳಲ್ಲಿ 53 ಉಪಗ್ರಹಗಳು ಔಪಚಾರಿಕ ಹೆಸರುಗಳನ್ನೂ ಹೊಂದಿದೆ. “ಟೈಟಾನ್, ಮಿಮಾಸ್, ಎನ್ಸೆಲಾಡಸ್, ಟೆಥಿಸ್, ಡಿಯೋನ್, ರಿಯಾ, ಹೈಪರಿಯನ್, ಲಾಪೆಟಸ್, ಫೋಬೆ ಇನ್ನು ಮುಂತಾದವು ಇದರ ಹೆಸರುಗಳು.

ಶನಿ ಗ್ರಹಕ್ಕೆ ಸಂಪತ್ತು ಮತ್ತು ಕೃಷಿಯ ರೋಮನ್ ದೇವರ ಹೆಸರನ್ನು ಇಡಲಾಗಿದೆ. ವಾರದ ಏಳನೇ ದಿನವನ್ನು ಶನಿ ಗ್ರಹಕ್ಕೆ ಶನಿವಾರ, ಸಾತುರ್ನಿ ಡೈಸ್, (ಶನಿಯ ದಿನ) ಎಂದು ಹೆಸರಿಸಿದ್ದಾರೆ. ಪ್ರಾಚೀನ ಗ್ರೀಕ್ ನಲ್ಲಿ ಶನಿಗ್ರಹವನ್ನು ಫೈನಾನ್ ಎಂದು ಕರೆಯಲಾಗುತಿತ್ತು.

ಕನಸು

Related post

Leave a Reply

Your email address will not be published. Required fields are marked *