ಸ್ಟೂಡಿಯೋ ಪ್ಲಾಟ್

ಸ್ಟೂಡಿಯೋ ಪ್ಲಾಟ್

ವಿದೇಶ ಪ್ರವಾಸ ಎಂದರೆ ಸ್ವಲ್ಪ ಖರ್ಚು ಜಾಸ್ತಿಯೇ! ಅದರಲ್ಲೂ ಯೂರೋಪ್ ಪ್ರವಾಸ ಎಂದರೆ ಮುಗಿಯಿತು. ಹೋಟೆಲ್‌ಗಳು ಬಹಳ ದುಬಾರಿ, ಆದರೂ ಸರಿಯಾಗಿ ಪ್ಲಾನ್ ಮಾಡಿದರೆ ಸ್ವಲ್ಪ ಹಣವನ್ನು ಉಳಿಸಿ ಚೆನ್ನಾಗಿ ಪ್ರವಾಸ ಮಾಡಬಹುದು. ಹಾಗಾದರೇ ಏನು ಮಾಡುವುದು? ಅದಕ್ಕೊಂದು ಪರಿಹಾರವಿದೆ. ವಿದೇಶಗಳಲ್ಲಿ ಅದರಲ್ಲೂ ಯೂರೋಪ್‌ನಲ್ಲಿ ಸ್ಟೂಡಿಯೋ ಪ್ಲಾಟ್ ಹಾಗೂ ಹಾಸ್ಟೆಲ್ ಎಂಬ ಪ್ರವಾಸಿ ಗೃಹಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ನಾನು ಯೂರೋಪ್ ಪ್ರವಾಸ ಹೋಗಿದ್ದಾಗ ಪ್ಯಾರಿಸ್‌ನಲ್ಲಿ ಈ ರೀತಿಯ ಸ್ಟೂಡಿಯೋ ಪ್ಲಾಟ್‌ನಲ್ಲಿ ಉಳಿದುಕೊಳ್ಳಬೇಕೆಂದು ನಿರ್ಧರಿಸಿ RBNBಯ ಮೂಲಕ ಇದನ್ನು ಕಾದಿರಿಸಿದ್ದೆ. ಹೋಟೇಲ್‌ಗಳಿಗೆ ಹೋಲಿಸಿಕೊಂಡರೆ ಇದು ತುಂಬಾ ಸೋವಿ ಹಾಗೂ ಆರಾಮದಾಯಕವಾಗಿರುತ್ತದೆ. ನಾವು ಮೂರು ದಿನ ಉಳಿದುಕೊಂಡದ್ದಕ್ಕೆ ಬರಿ 6000 ರೂಪಾಯಿ ಅಗಿತ್ತು ಎಂದರೆ ನಿಮಗೆ ಆಶ್ಚರ್ಯವಾಗಬಹುದು!

ಯುರೋಪ್‌ನಲ್ಲಿ ಸ್ಟೂಡಿಯೋ ಪ್ಲಾಟ್ ಗಳು ಹಾಗೂ ಅಪಾರ್ಟ್ಮೆಂಟ್‌ಗಳು ಬಾಡಿಗೆಗೆ ಸಿಗುತ್ತದೆ. ಎರಡು ಮೂರು ರೂಂಗಳಿರುವ ಅಪಾರ್ಟ್ಮೆಂಟ್‌ಗಳಲ್ಲಿ ಮನೆಯ ಮಾಲೀಕರು ಒಂದು ರೂಮನ್ನು ತಮ್ಮ ಉಪಯೋಗಕ್ಕೆ ಉಳಿಸಿಕೊಂಡು ಇನ್ನುಳಿದೆರಡು ರೂಮನ್ನು ಪ್ರವಾಸಿಗರಿಗೆ ಬಾಡಿಗೆಗೆ ಕೊಡುತ್ತಾರೆ. ಮಾಲೀಕರ ಜೊತೆಯಲ್ಲೇ ಅವರ ಮನೆಯಲ್ಲೇ 2-3 ದಿನ ಇರಬಹುದು. ಇನ್ನೂ ಸ್ಟೂಡಿಯೋ ಪ್ಲಾಟ್ ಗಳೆಂದರೆ 10×12 ಅಥವಾ 10×15 ರಲ್ಲಿ ಕಟ್ಟಿದ ಸಣ್ಣ ಕೊಠಡಿ. ನೀವು ಪ್ರವಾಸ ಹೋಗುವ ಸಂದರ್ಭದಲ್ಲಿ ಇದು ಖಾಲಿ ಇದ್ದರೆ, ಅಂದರೆ ಮನೆಯವರು ಬೇರೆಲ್ಲಿಗೋ ಪ್ರವಾಸ ಹೋಗುವುದ್ದಿದರೆ ಪೂರ್ತಿ ಪ್ಲಾಟ್ ಅನ್ನು ಪ್ರವಾಸಿಗರಿಗೆ ಬಾಡಿಗೆ ಕೊಟ್ಟು ಹೋಗುತ್ತಾರೆ. ಅಲ್ಲಿರುವ ಎಲ್ಲಾ ವಸ್ತುಗಳನ್ನು ನೀವು ಉಪಯೋಗಿಸಿಕೊಳ್ಳಬಹುದು. ಇದು ಖಾಲಿ ಇದ್ದರೆ RBNB ಯಂತಹ ರೂಮ್ ಕಾದಿರಿಸುವ ಬಗ್ಗೆ ಜಾಲತಾಣಗಳಲ್ಲಿ ತಿಳಿಯುತ್ತದೆ.

ನಾವು ಕಾದಿರಿಸಿದ್ದ ಸ್ಟೂಡಿಯೋ ಪ್ಲಾಟ್ ನ ಮಾಲೀಕ ಅರೇಬಿಯನ್, ಮನೆಯನ್ನು ತುಂಬಾ ಅಚ್ಚುಕಟ್ಟಾಗಿ ಇಟ್ಟುಕೊಂಡಿದ್ದ. ಅದರಲ್ಲೇ ಒಂದು ಮೂಲೆಯಲ್ಲಿ ಅಡುಗೆಮನೆ. ಒಂದು ಸ್ಲಾಬ್ ಅದರ ಕೆಳಗೆ ಅಡುಗೆ ಪದಾರ್ಥಗಳನ್ನು ಇಟ್ಟುಕೊಳ್ಳಲು ಕಬೋರ್ಡ್. ಮೇಲಿನ ಗೋಡೆಯಲ್ಲೂ ಸಹ ಚಿಕ್ಕ ಕಬೋರ್ಡ್. ಒಂದು ಚಿಕ್ಕ ವಿದ್ಯುತ್ ಒಲೆ, ಸ್ಲಾಬಿನ ಒಂದು ಮೂಲೆಯಲ್ಲಿ ಓವನ್ ,ಬಟ್ಟೆ ಇಟ್ಟುಕೊಳ್ಳಲು ಒಂದು ಸಣ್ಣ ಮರದ ಬೀರು, ಮಂಚ, ಮಂಚದ ಕೆಳಗೆ ಬಟ್ಟೆ ಇಟ್ಟುಕೊಳ್ಳುವ ವ್ಯವಸ್ತೆ, ಒಂದು ಚಿಕ್ಕ ಪೈಕಾನಿ ಇರುವ ಸ್ನಾನದ ಮನೆ, ಒಟ್ಟಿನಲ್ಲಿ ಅಚ್ಚುಕಟ್ಟಾದ ಪ್ಲಾಟ್ .

ಮನೆಯಲ್ಲಿರುವ ವಿದ್ಯುತ್ ಒಲೆ ಹಾಗೂ ಸ್ನಾನದ ಮನೆಯಲ್ಲಿರುವ ಗೀಸರ್ ಹೇಗೆ ಬಳಸಬೇಕು? ವೈಫ್ವೈ ಪಾಸ್‌ವರ್ಡ್ ಎಲ್ಲವನ್ನು ಬರೆದು ಅಡುಗೆ ಮನೆಯ ಸ್ಲಾಬ್ ಮೇಲೆ ಇಟ್ಟಿದ್ದ. ಕಾಫಿ ಪೌಡರ್ ಹಾಗೂ ಸಕ್ಕರೆ ಇದೆ, ಮನೆಯ ಹತ್ತಿರ ಸೂಪರ್ ಮಾರ್ಕೆಟ್ ಎಲ್ಲಿದೆ, ಅಲ್ಲಿಂದ ಹಾಲು ತಂದು ಕಾಫಿ ಮಾಡಿಕೊಳ್ಳಬಹುದೆಂದು ಬರೆದಿಟ್ಟಿದ್ದ. ನಾವು ಡೆನ್ಮಾರ್ಕ್ನಿಂದ ಹೊರಡುವಾಗ ಕಾಫಿ ಪುಡಿಯನ್ನು ತಂದಿದ್ದೆವು ಹಾಗಾಗಿ ಸೂಪರ್ ಬಜಾರ್‌ನಿಂದ ಹಾಲು ತಂದು ಮೂರು ದಿನವು ಕಾಫಿ ಮಾಡಿಕೊಂಡು ಕುಡಿದಿದ್ದೆವು. ಅಷ್ಟೇ ಅಲ್ಲಾ ಒಂದು ದಿನ ಒಗ್ಗರಣೆ ಅವಲಕ್ಕಿಯನ್ನು ಸಹ ಮಾಡಿಕೊಂಡಿದ್ದೆವು!

ನಾವು ಪ್ಯಾರಿಸ್‌ಗೆ ಬರುವ ಎರಡು ದಿನ ಮೊದಲಿಂದಲೂ ಫ್ಲಾಟ್ ನ ಮಾಲೀಕ ಅರೇಬಿಯನ್ ನಮ್ಮ ಸಂಪರ್ಕದಲ್ಲಿದ್ದ. ನಾವು ಪ್ಯಾರಿಸ್ ತಲುಪಿದಾಗ ಅವನು ಮನೆಯಲ್ಲಿದ್ದರೆ ಮನೆಯ ಕೀ ಕೊಡುವುದಾಗಿಯೂ ಇಲ್ಲದ್ದಿದ್ದರೆ ಕೀ ಎಲ್ಲಿರುತ್ತದೆ ಎಂದು ಹೇಳುವುದಾಗಿ ಹೇಳಿದ್ದ. ನಾವು ಪ್ಯಾರಿಸ್‌ಗೆ ಬಂದು ಶರವಣ ಭವನದಲ್ಲಿ ಊಟ ಮಾಡಿಕೊಂಡು ಬರುವುದರೊಳಗೆ ಅವನು ಪ್ರವಾಸಕ್ಕೆ ಹೊರಡುವವನಿದ್ದ. ಹಾಗಾಗಿ ಮನೆಯ ಕೀ ಎಲ್ಲಿದೆ ಎಂದು ಹೀಗೆ ವಿವರಣೆ ನೀಡಿದ್ದ. ಸಿಕ್ರೇಟ್ ಅಂಕಿಗಳಿರುವ ಮುಂಬಾಗಿಲನ್ನು ತೆರೆದು ಒಳ ಪ್ರವೇಶಿಸಿದರೆ ಅಲ್ಲೊಂದು ಚಿಕ್ಕ ಹಾಲ್, ಅಲ್ಲಿ ಒಂದು ಕಾರ್ಪೆಟ್ ಇದೆ, ಅದರ ಕೆಳಗೆ ಒಂದು ಟೇಪು ಅಂಟಿಸಿದೆ, ಅದರ ಕೆಳಗಡೆ ಕೀ ಇದೆ, ಈ ಕೀ ಇಂದ 12ನೇ ನಂಬರಿನ ಪೋಸ್ಟ್ ಬಾಕ್ಸ್ ತೆರೆದರೆ ಮನೆ ಕೀ ಇರುವುದಾಗಿ ತಿಳಿಸಿದ್ದ. ಆ ಕೀ ಪಡೆದು ನಾವು ಫ್ಲಾಟ್ ಪ್ರವೇಶಿಸಿದ್ದೆವು.

ಒಂದು ದೊಡ್ಡ ಕಟ್ಟಡದಲ್ಲಿ ಈ ರೀತಿಯ ಏಳೆಂಟು ಸ್ಟೂಡಿಯೋ ಫ್ಲಾಟ್ ಗಳಿದ್ದವು. ಅಚ್ಚುಕಟ್ಟಾದ ಫ್ಲಾಟ್, ನಮ್ಮಲೆಲ್ಲಾ 40×60 ಸೈಟಿನಲ್ಲಿ ಮನೆಕಟ್ಟಿಸಿದರು ಸಾಕಾಗುವುದಿಲ್ಲಾ. 10/15ರ ರೂಮ್‌ನಲ್ಲಿ ಮನೆಯನ್ನು ಎಷ್ಟು ಅಲಂಕರಿಸಿ ವಾಸ ಮಾಡುತ್ತಾರೆ ಒಮ್ಮೆ ನೋಡಬೇಕು.

ಡಾ. ಪ್ರಕಾಶ್.ಕೆ.ನಾಡಿಗ್

Related post