ಚಿಂತನ – ಮಂಥನ
ಬ್ರಿಟೀಷರು ಭಾರತ ಬಿಟ್ಟು ಹೋಗಿದ್ದೇ ಸ್ವತಂತ್ರವ? ನಾವೆಲ್ಲರು ಧೈರ್ಯವಾಗಿ ರಸ್ತೆಗಳಲ್ಲಿ ಯಾವುದರ ಭಯವೂ ಇಲ್ಲದೆ ಓಡಾಡುವುದೇ ಸ್ವತಂತ್ರವೇ? ಅಥವಾ ರಾಜರ ಆಡಳಿತದಿಂದ ರಾಜಕಾರಣಿಗಳ ಆಡಳಿತಕ್ಕೆ ದೇಶ ಒಗ್ಗಿಕೊಂಡದ್ದೇ ಸ್ವತಂತ್ರವೆ?
ಬಹಳ ಸುಲಭದ ಈ ಪ್ರಶ್ನೆಗೆ ನಿಖರ ಉತ್ತರವೇನಾದರೂ ಸಿಕ್ಕರೆ ಅಂದು ನಾವು ನಿಜಕ್ಕೂ ಸ್ವತಂತ್ರರೆಂದುಕೊಳ್ಳಬಹುದು.
ಏಳು ದಶಕಗಳ ಹಿಂದೆ ನಡೆದ ಘಟನೆಗಳೇ ನಮಗೆ ಗೂತ್ತಿಲ್ಲ. ಕೆಲವರಿಗೆ ಗೊತ್ತಿದ್ದರು ನೆನಪಿಲ್ಲ. ಇನ್ನು ಸ್ವಾತಂತ್ರ್ಯದ ಬಗ್ಗೆ ಮಾತನಾಡು ಎಂದರೆ, ವಾಟ್ಸಪ್ ಸ್ಟೇಟಸ್ ಹಾಕುವುದು, ಸ್ಟೋರಿ ಅಪ್ಲೋಡ್ ಮಾಡುವುದು ಮತ್ತು ಸಂಪರ್ಕದಲ್ಲಿರುವವರಿಗೆಲ್ಲಾ ಒಂದು ಫೋಸ್ಟರ್ ಜೊತೆಗೆ ನಾಲ್ಕು ಸಾಲಿನ ಕವನ ಹಂಚುವುದು. ಇಷ್ಟೇ ನಮ್ಮಗಳ ಸ್ವಾತಂತ್ರ್ಯ. ಮೂರುನೂರು ವರ್ಷಗಳ ಕಾಲ ಭಾರತ ದೇಶವನ್ನು ಆಳಿದ ಬ್ರಿಟೀಷರಿಗೆ 1947 ರಲ್ಲಿ ಸ್ವಾತಂತ್ರ್ಯ ಸಿಕ್ಕಿತೋ ಅಥವಾ ಅವರಿಂದ ಆಳಿಸಿಕೊಂಡು ಅಸಹಾಯಕರಾಗಿದ್ದ ನಮಗೆ ಕೆಲವರ ಸಾಹಸಗಳಿಂದ ಸ್ವಾತಂತ್ರ್ಯ ಸಿಕ್ಕಿತೋ… ಯಾರಿಗೆ ಗೊತ್ತು? ಇತಿಹಾಸ ಇಷ್ಟೇ ನಿಖರ ಎಂದು ಖಚಿತವಾಗಿ ಹೇಳಲು ಸಾಧ್ಯವೇ ಇಲ್ಲ.
ಹಾಗಂತ ಅದೆಲ್ಲ ನಡೆದೇ ಇಲ್ಲ ಎಂದು ಹೇಳಲು ನಮ್ಮ ಬಳಿ ಯಾವ ಸಾಕ್ಷಿ-ಪುರಾವೆಗಳಿಲ್ಲ. ಅವಾಗಿನ ಜನರ ಬದುಕು ಹೀಗಿತ್ತಂತೆ ನಂತರ ಹೀಗಾಯ್ತಂತೆ.. ಮುಂದೇನಾಗುವುದೆಂದು ಕಾದು ನೋಡ್ಬೇಕಂತೆ. ಇದರ ಆಧಾರದ ಮೇಲೆ ಕೆಲವೊಂದು ನಿರ್ಧಾರಗಳಿಗೆ ಬರಬಹುದಷ್ಟೇ.. ಭಾರತ ಹಣಕಾಸಿನಲ್ಲಿ ಬಡ ದೇಶ, ಹಳ್ಳಿಗಳ ದೇಶ ಮತ್ತು ಮಸಾಲ ಪದಾರ್ಥಗಳಿಂದ ತುಂಬಿದ ಸಂಪತ್ಭರಿತ ದೇಶ. ಅಂತೆಯೇ ಸದ್ಗುಣವಂತ ಜನರಿಂದ ಕಿಕ್ಕಿರಿದ ದೇಶ. ಉದಾರಿಗಳಾದ ನಮ್ಮ ತಾಯ್ತನವೇ ಬ್ರಿಟೀಷರನ್ನು ಆಕರ್ಷಿಸಿತು. ಸುಮ್ಮನೆ ಒಮ್ಮೆ ಪ್ರವಾಸಕ್ಕೆಂದು ಬಂದವರು ಭಾರತವನ್ನೇ ತವರುಮನೆ ಮಾಡಿಕೊಂಡು ಇಲ್ಲೇ ಬೇರೂರಿದರು. ಸಂಪತ್ತನ್ನು ದೋಚಿದಾಗ ಸುಮ್ಮನಿದ್ದ ನಮ್ಮ ಜನ ಸ್ವಾಭಿಮಾನ ಕಸಿದುಕೊಳ್ಳಲು ಬಂದಾಗ ತೊಡೆ ತಟ್ಟಿ, ಎದೆಯೊಡ್ಡಿ ಸಾಲಾಗಿ ನಿಂತರು. ಕೊನೆಗೆ ಸಾಲಾಗಿ ಸತ್ತರು ಕೂಡ. ಅವರ ದೇಶ ಪ್ರೇಮವನ್ನು ಮುಂದಿನ ಎಲ್ಲಾ ಪೀಳಿಗೆಯವರೆಗೆ ತಲುಪಿಸಿ.. ಭಾರತ ಇನ್ನೆಂದೂ ಯಾರ ಕೈವಶವಾಗದ ಹಾಗೆ ನೋಡಿಕೊಳ್ಳುವ ಸವಾಲನ್ನು ಎಲ್ಲರೂ ಸ್ವೀಕರಿಸಲು ಒಂದು ದಿನ ಬೇಕಿತ್ತು. ಅದೇ ಆಗಸ್ಟ್ 15.
ಆದರೆ ನಾವು ಇಂದು ಮಾಡುತ್ತಿರುವುದಾದರೂ ಏನು? ವಾಕ್ ಸ್ವಾತಂತ್ರ್ಯವಿದೆ ಎಂದು ಮೈಕ್ ಹಿಡಿದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಬಂದು ಬಾಯಿಗೆ ಬಂದದ್ದನ್ನೆಲ್ಲ ವದರಿ, ಅರ್ಥವಾಗದವರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತೇವೆ. ಇಷ್ಟ ಪಟ್ಟಿದ್ದನ್ನು ತಿನ್ನುತ್ತೇವೆ. ಇಷ್ಟವಾದ ಬಟ್ಟೆಗಳನ್ನೇ ಧರಿಸುತ್ತೇವೆ. ಇಷ್ಟ ಬಂದಹಾಗೆಯೇ ನಡೆದುಕೊಳ್ಳುತ್ತೇವೆ. ಯಾರಾದರೂ ಪ್ರಶ್ನಿಸಿದರೆ, ‘ನನ್ನಿಷ್ಟ.. It’s not your business’ ಅಂತ ಹೇಳಿ ಅಲ್ಲಿಂದ ನುಣುಚಿಕೊಳ್ಳುತ್ತೇವೆ. ಸಧ್ಯಕ್ಕೆ ಸ್ವಾತಂತ್ರ್ಯ ಎಂದರೆ ತಾವು ಹೇಗೇ ಇದ್ದರೂ ಇತರರು ಅವರನ್ನು ಒಪ್ಪಿಕೊಳ್ಳಬೇಕು. ಮತ್ತು ಹೊಗಳಬೇಕು. ಹೀಗೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದನ್ನೇ ಸ್ವಾತಂತ್ರ್ಯ ಎಂದು ತಿಳಿದುಬಿಟ್ಟಿದ್ದಾರೆ. ಆದರೆ, ನಮ್ಮ ಇಂದಿನ ಬದುಕಿಗಾಗಿ ಬಹಳ ಹಿಂದೆಯೇ ಅವರ ಬದುಕನ್ನು ಮುಡಿಪಾಗಿಟ್ಟ ದೇಶಭಕ್ತರನ್ನು ನಾವು ಆತ್ಮಸಾಕ್ಷಿಯಾಗಿ ಒಂದಿಚೂ ನೆನೆಯುವುದಿಲ್ಲ.
ಬ್ರಿಟೀಷರು ಭಾರತದಲ್ಲಿದ್ದಾಗ ನಾವು ಸ್ವತಂತ್ರರು ಎಂದು ಹೇಳಿಕೊಳ್ಳುವ ಧೈರ್ಯ ನಮಗಿರಲಿಲ್ಲ. ಆ ಕೆಲಸ ಮಾಡಿದವರು ಕೆಲವರು ಮಾತ್ರ. ಆಗಲೂ ಹೊಟ್ಟೆಗೆ ತಿನ್ನುತ್ತಿದ್ದೆವು ಈಗಲೂ ತಿನ್ನುತ್ತಿದ್ದೇವೆ. ಆಗಲೂ ಆಳಿಸಿಕೊಳ್ಳುತ್ತಿದ್ದೆವು ಈಗಲೂ ಆಳಿಸಿಕೊಳ್ಳುತ್ತಿದ್ದೇವೆ. ಆಗಲೂ ದುಡಿಯುತ್ತಿದ್ದೆವು ಈಗಲೂ ದುಡಿಯುತ್ತಿದ್ದೇವೆ. ಆಗಲೂ ನಮ್ಮ ಮಧ್ಯೆ ಪರಕೀಯರಿದ್ದರು. ಈಗಲೂ ಇದ್ದಾರೆ. ಹಾಗಾದರೆ 1947 ರ ಮುಂಚೆಗೂ.. ಈಚೆಗೂ ಏನು ವ್ಯತ್ಯಾಸವಿದೆ? ಆಗ ಸ್ವತಂತ್ರರೆಂಬುದು ಮನಸ್ಸಿನ ಮೂಲೆಯಲ್ಲಿ ಕೂತಿತ್ತು. ಈಗೆಲ್ಲ ನಾವು ಸ್ವತಂತ್ರರು ಎಂಬುದು ನಮ್ಮ ತಲೆಯನ್ನೇ ಹಾಳುಮಾಡಿಬಿಟ್ಟಿದೆ. ಅದಕ್ಕಾಗಿ ಯಾವ ತಲೆಗಳೂ ಸರಿಯಾಗಿ ನಿಲ್ಲುತ್ತಿಲ್ಲ.
ಈ ರೀತಿ ಬೇರೆಯವರನ್ನು ದೂರುವುದು ನಮಗೆ ಪಾರಂಪರಿಕವಾಗಿ ಬಂದಿರಬೇಕು. ಒಂದೆಡೆ ನೆಲೆಯಾಗಿ ನಮ್ಮನ್ನೇ ನಾವು ಅವಲೋಕಿಸಿಕೊಳ್ಳುವ ಬುದ್ದಿ ಅದ್ಯಾವಾಗ ಬರುವುದೋ ಕಾದುನೋಡಬೇಕಿದೆ. ಇಲ್ಲಾ ಕಾಯುವುದನ್ನು ಬಿಟ್ಟು ಒಂದಷ್ಟು ಸಮತೋಲನ ಸಾರುವ ಕೆಲಸಗಳನ್ನು ಮಾಡಬೇಕಿದೆ. ಸ್ವತಂತ್ರ ಎಂದರೆ ಮೇಲು ಕೀಳುಗಳಿಲ್ಲದೆ, ಎಲ್ಲರೂ ಸಮಾನರಾಗಿ, ಸಾಮರಸ್ಯದ ಬದುಕು ಕಟ್ಟಿಕೊಳ್ಳುವುದೇ ಆಗಿದೆ. ಆದರೆ ಇಂದು ಕಿತ್ತಾಟ, ಹೋಯ್ದಾಟಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡು ನಮ್ಮನ್ನು ನಾವೇ ಪಿಶಾಚಿಗಳಂತೆ ಕಾಣುತ್ತಿದ್ದೇವೆ. ಇದು ನಾಗರೀಕತೆ ಬೆಳೆದುದರ ಪರಿಣಾಮವೋ.. ಆಡಳಿತದ ವೈಫಲ್ಯವೋ.. ಅತಿರಿಕ್ತವಾಗಿ ಬೆಳೆದಿರುವ ತಂತ್ರಜ್ಞಾನದ ಪರಿಣಾಮವೋ.. ಅಥವಾ ಯಾವುದನ್ನೂ ಲಕ್ಷಿಸದೆ ನಮ್ಮ ಮೂಗಿನ ನೇರಕ್ಕೆ ನಮ್ಮನ್ನೇ ನಾವು ತೂಗಿಕೊಂಡು ಯಂತ್ರಗಳಾಗುತ್ತಿರುವುದರ ಫಲವೋ.. ಕೂತು ಯೋಚಿಸಿ ನಿರ್ಧರಿಸಬೇಕಿದೆ. ಸಧ್ಯ ಎಲ್ಲರೂ ಒಗ್ಗೂಡಬೇಕಿದೆ. ಭಾರತದ ಹೆಮ್ಮೆಯ ಮಕ್ಕಳಾಗಿ ಸಾಮರಸ್ಯ ಬಿತ್ತಬೇಕಿದೆ. ವಿಜ್ಞಾನದ ಬಗ್ಗೆ ಅರಿವು ಮೂಡಿಸಬೇಕಿದೆ. ಇತಿಹಾಸ ಸೇರಿರುವ ದೇಶಭಕ್ತರ ಮತ್ತು ವೀರಯೋಧರ ಅರ್ಥಪೂರ್ಣ ಸ್ಮರಣೆಯಾಗಬೇಕಿದೆ. ಅದರ ಮೂಲಕ ಎಲ್ಲರಲ್ಲೂ ದೇಶಪ್ರೇಮ ಉಕ್ಕಬೇಕಿದೆ.
ನಿಮ್ಮ ಅಮೂಲ್ಯ ಅನಿಸಿಕೆಗಳನ್ನು ಅತ್ಯವಶ್ಯಕ ಹಾಗಾಗಿ ದಯವಿಟ್ಟು ಕಾಮೆಂಟ್ ಮಾಡಿ
ಅನಂತ ಕುಣಿಗಲ್
ಯುವಬರಹಗಾರ & ರಂಗಕಲಾವಿದ
ಚಿತ್ರ ಕೃಪೆ : ಶಂತನು ಸೇನ್
1 Comment
ಅದ್ಭುತವಾಗಿದೆ ಸರ್ ಲೇಖನ..👌🏻🙏🏻
*ಸ್ವತಂತ್ರ ಅಂದ್ರೆ ಏನು? ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದೆ ಸ್ವತಂತ್ರವ?* ಹೀಗೆ ಮೂಢರಂತಾಗುತಿರುವ ನಮಗೆ ಅಂತರಂಗದಿಂದ ಸರ್ವಸ್ವತಂತ್ರವನ್ನು ಪಡೆಯುವಂತ ಕಿಚ್ಚು ಪುಟಿದೇಳುವಂತೆ ಈ ಬರಹದಲ್ಲಿ ಒಂದೊಂದು ಪದಗಳು ಮಾರ್ದನಿಸುತಿವೆ. ಹೀಗೆ ಮೂರ್ಖರಾಗುವುದು ಸಾಕು😒..ಇನ್ನಾದರೂ ಅನ್ಯಾಯದ ವಿರುದ್ಧ ನಮ್ಮೆಲ್ಲರ ಒಗ್ಗಟ್ಟಿನ ಕೂಗು ಭ್ರಷ್ಟರು,ವಂಚಕರ ಮೈಮನ ನಡುಗುವಂತಾಗಬೇಕು🥺..ಬಡವ ಬಲ್ಲವನೆಂಬ ತಾರತಮ್ಯ ದೂರಾಗಿ ಸ್ವತಂತ್ರತೆ ಎಂಬುದು ಸಮಾನತೆಯ ರೂಪದಿ ಎಲ್ಲೆಡೆ ಮೊಳಗಬೇಕೆಂಬುದೆ ಕನಸಾಗಿದೆ…..🇮🇳🙏🏻