ಹಾಡು ಹಳೆಯದಾದರೇನು..… ರಾಮನ ಅವತಾರ
ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ…?
ಜಾರತನ ಸದೆಬಡೆವ ಸಂಭ್ರಮದ ನೆಪವೋ….?
ರಾಮನ ಅವತಾರಾ …
ರಘುಕುಲ ಸೋಮನ ಅವತಾ…..ರ
ಕು ರ ಸೀ ಅವರ ರಚನೆಯ ರಾಮನ ಅವತಾರ ಕನ್ನಡ ಚಿತ್ರ ಸಾಹಿತ್ಯದ ಆಸ್ತಿ ಎಂದೇ ಪರಿಗಣಿಸಲ್ಪಟ್ಟಿದೆ.
ನಾರಾಯಣನ ಹಲವು ಅವತಾರಗಳಲ್ಲಿ ರಾಮಾವತಾರವೂ ಒಂದು. ಈ ರಾಮಾವತಾರದಲ್ಲಿ ನಡೆಯುವ ಘಟನಾವಳಿಗಳ ಚಿತ್ರಣವೇ ರಾಮಾಯಣ. ಬ್ರಹ್ಮನ ಮಾನಸಪುತ್ರರಿಂಪ ಶಾಪಗ್ರಸ್ತರಾದ ಜಯ-ವಿಜಯರಿಗೆ ,ಶಾಪದಿಂದ ಮುಕ್ತಿಯಾಗಲು ಎರಡು ಆಯ್ಕೆಗಳಿರುತ್ತವೆ.. ಮೊದಲ ಆಯ್ಕೆಯಲ್ಲಿ ಮೂರು ಜನ್ಮಗಳು ವಿಷ್ಣುವಿನ ಶತ್ರುಗಳಾಗಿ ಜನ್ಮತಾಳಿ ವಿಷ್ಣುವಿನಿಂದಲೇ ಸಂಹಾರಗೊಂಡು ಕೊನೆಗೆ ನಾರಾಯಣನ ವೈಕುಂಠಕ್ಕೆ ಮರಳುವುದು ,ಎರಡನೆಯದು ಏಳು ಜನ್ಮಗಳು ಸಾಮಾನ್ಯ ಮನುಷ್ಯರಾಗಿ ಜೀವಿಸುವುದು.
ಜಯವಿಜಯರು ಮೊದಲ ಆಯ್ಕೆ ಮಾಡಿಕೊಂಡರು; ರಾಮಾವತಾರದಲ್ಲಿ ರಾವಣ-ಕುಂಭಕರ್ಣ ರಾಗಿ ಜನ್ಮ ತಾಳಿದರು.
ಕು ರ ಸೀ ರಚನೆಯ ಹಾಡು ಪ್ರಾರಂಭ ಆಗುವುದೇ ಇದರ ಆಧಾರದ ಮೇಲೆ…
ದ್ವಾರ ಪಾಲರ ಮರಳಿ ಬಳಿಗೊಯ್ವ ಕೃಪೆಯೋ…?
ಜಾರತನ ಸದೆಬಡೆವ ಸಂಭ್ರಮದ ನೆಪವೋ..?
(ಜಾರತನವೆಂದರೆ ಪರಸ್ತ್ರೀ ವ್ಯಾಮೋಹ ಎಂಬರ್ಥದಲ್ಲಿ;ರಾವಣನ ಸಂಹಾರಕ್ಕಾಗಿ)
ರಾಮನ ಅವತಾರವಾಯಿತು
ರಘುವಂಶಕ್ಕೆ ಆಶಾಕಿರಣ(ಸೋಮ)ದ ಜನ್ಮವಾಯಿತು.
ಸಾಟಿಯಿಲ್ಲದ ಸಂಯಮಕ್ಕೆ ಹೆಸರಾದವನು ರಾಮ(ನಿರುಪಮ ಸಂಯಮ) ಭೂಲೋಕಕ್ಕೆ ಇಂತಹ ಘನವ್ಯಕ್ತಿತ್ವದ ಅವಶ್ಯಕತೆ ಇತ್ತು ಎಂಬುದು ಆಶಯ.
ವಿಷ್ಣುವನ್ನು ಮಗನನ್ನಾಗಿ ಪಡೆಯುವ ಭಾಗ್ಯವಂತೆ ಕೌಸಲ್ಯೆ…ಅಣ್ಣನನ್ನಾಗಿ ಪಡೆವ ಪುಣ್ಯವಂತರು ಲಕ್ಷ್ಮಣ, ಭರತ ಶತ್ರುಜ್ಞರು.
ತ್ರಿಭುವನ ಪಾಲ :- ೧.ಸ್ವರ್ಗ, ೨.ಭೂಮಿ, ೩.ಪಾತಾಳ.
ಅಹಲ್ಯೆಗೆ ಶಾಪವಿಮೋಚನೆ
ಅಹಲ್ಯೆ ಮಹಾಪತಿವ್ರತೆಯೆಂದು ಪ್ರಸಿದ್ಧಳಾದವಳು. ದಾಂಪತ್ಯ ದ್ರೋಹಕ್ಕಾಗಿ ಅವಳ ಗಂಡನಿಂದ ಶಾಪಗ್ರಸ್ತಳಾಗಿ ಶಿಲೆಯಾಗಿದ್ದಳು.
ಮಹರ್ಷಿ ವಿಶ್ವಾಮಿತ್ರರ ನಿರ್ದೇಶನದಂತೆ ರಾಮನು ತನ್ನ ಪಾದವನ್ನು ಆ ಶಿಲೆಯ ಮೇಲಿರಿಸುತ್ತಾನೆ. ಆಗ, ಶಿಲೆಯು ಅಹಲ್ಯೆಯಾಗಿ ಪರಿವರ್ತಿತವಾಗಿ ಅಹಲ್ಯೆ ಶಾಪವಿಮುಕ್ತಳಾಗುತ್ತಾಳೆ.
ಸೀತೆಯ ಸ್ವಯಂವರದಲ್ಲಿ ಶಿವಧನುಸ್ಸನ್ನು ಮುರಿದು ಅವಳನ್ನು ವರಿಸುವ ಕನಸನ್ನು ಹೊಂದಿದ್ದ ರಾಜರನ್ನು ಸೋಲಿಸುತ್ತಾನೆ.
ಕಪಟನಾಟಕನ(ಅಂದರೆ ಕೃಷ್ಣ/ವಿಷ್ಣುವಿನ) ಪಟ್ಟಾಭಿಷೇಕ ಆಗದೇ ತಾತ್ಕಾಲಿಕ ಶೋಕ ಅನುಭವಿಸುತ್ತಾನೆ.
ಲೋಕದ ಉದ್ಧಾರಕ್ಕಾಗಿ ವನವಾಸವನ್ನುಅನುಭವಿಸುತ್ತಾನೆ.
ಭರತನಿಗೆ ಪಾದುಕೆ ಕೊಟ್ಟು ಭಕ್ತರಿಗೆ ಅಭಯ ನೀಡುತ್ತಾನೆ.
ಬಂಗಾರದ ಜಿಂಕೆಯೆಡೆಗಿನ ಸೀತೆಯ ವ್ಯಾಮೋಹವು ಲಂಕಾಧಿಪತಿಯಾದ ರಾವಣನಿಗೆ ಮುಳುವಾಗಿ ಅವನ ಸಂಹಾರವಾಗುತ್ತದೆ.
ಇನ್ನು ರಾಮನ ಭಂಟನಾದ ಹನುಮನನ್ನು ಕನ್ನಡ ಕುಲಪುಂಗವ ಎಂದು ಕರೆದಿರುವುದು ಆಂಜನೇಯನ ಜನ್ಮಭೂಮಿ ಕರ್ನಾಟಕ ಎಂಬುದನ್ನು ಬಿಂಬಿಸುತ್ತದೆ.
ಮುದ್ರಿಕೆಯ ರೂಪದಲ್ಲಿ ನಾನೇ ಬಂದಿದ್ದೇನೆ ಎನ್ನುವ ಸಂದೇಶವನ್ನು ರಾಮ ಹನುಮನ ಮೂಲಕ ನೀಡುತ್ತಾನೆ.
ದಾನವನಾದ ಬ್ರಾಹ್ಮಣ ಶ್ರೇಷ್ಠ ರಾವಣ ಮಾಡಿದ ಪ್ರಮಾದ ಮನುಕುಲಕ್ಕೆ ಒಂದು ಪಾಠವಾಗಲಿ ಎಂಬ ಆಶಯವನ್ನು ಇಲ್ಲಿ ತೋರ್ಪಡಿಸುತ್ತಾರೆ.
ಅತ್ಯಂತ ಸುಂದರವಾದ ಈ ರಾಮನ ಅವತಾರದ ಕಥೆ ಕು ರ ಸೀ ಅವರ ಲೇಖನಿಯಲ್ಲಿ ಗೀತೆಯಾಗಿ ಮೈದಾಳಿ ಶಿರ್ಕಾಳಿ ಗೋವಿಂದರಾಜನ್ ಅವರ ಧ್ವನಿಯಲ್ಲಿ ಅದ್ಭುತವಾಗಿ ಮೂಡಿಬಂದಿದೆ…
ಚಿತ್ರ ಸಾಹಿತಿಯ ಪರಿಚಯ
ಕು.ರ.ಸೀತಾರಾಮ ಶಾಸ್ತ್ರಿಗಳು
ಕು.ರ.ಸೀತಾರಾಮ ಶಾಸ್ತ್ರಿಗಳು 1920ರ ಸೆಪ್ಟಂಬರ್ 22ರಂದು ಜನಿಸಿದರು. ಕು. ರ. ಸೀತಾರಾಮಶಾಸ್ತ್ರಿಗಳ ತಂದೆ ಕುಮಾರಸ್ವಾಮಿಗಳು ನವಗ್ರಹ ಹೋಮ ಮಾಡುವಾಗ ರವಿಕುಂಡದಿಂದ ಎದ್ದ ಬೆಳಕಿನ ಜ್ವಾಲೆ ಅವರ ಧರ್ಮಪತ್ನಿ ಸುಬ್ಬಮ್ಮನವರ ಗರ್ಭವನ್ನು ಪ್ರವೇಶಿಸಿದಂತೆ ಭಾಸವಾಯಿತಂತೆ.ತಮಗೆ ಜನಿಸಿದ ಮಗನಿಗೆ ರವಿ ಎಂದು ಹೆಸರಿಡಬೇಕು ಎನ್ನುವ ಸಂಕಲ್ಪ ಅವರಲ್ಲಿ ಮೂಡಿತಂತೆ…ತನ್ನ ತಂದೆಯ ಹೆಸರನ್ನೂ ಸೇರಿಸಿ ರವಿಸೀತಾರಾಮ ಶಾಸ್ತ್ರಿ ಎಂದು ಮಗುವಿಗೆ ಹೆಸರಿಟ್ಟರು.
ಹೀಗಾಗಿ ಅವರ ಪೂರ್ಣ ಹೆಸರು ಕುಮಾರಸ್ವಾಮಿ ರವಿಸೀತಾರಾಮ ಶಾಸ್ತ್ರಿ. ನಂತರದ ಕಾಲಘಟ್ಟದಲ್ಲಿ ‘ಕು.ರ.ಸೀ’ ಎಂದು ತಮ್ಮನ್ನು ಕರೆದುಕೊಂಡರು.
ಒಮ್ಮೆ ಸಲೀಲ್ ಚೌಧರಿಯವರೊಂದಿಗೆ ಸವಾಲು ಹಾಕಿ ಎರಡೇ ನಿಮಿಷದಲ್ಲಿ ದೂರದಿಂದ ಬಂದಂತ ಸುಂದರಾಂಗ ಜಾಣ ಗೀತೆಯನ್ನು ರಚಿಸಿದರಂತೆ.
ಕು ರ ಸೀ ಅವರು ಚಿತ್ರಸಾಹಿತಿಯಾಗುವ ಮೊದಲೇ ಕೊಲಂಬಿಯಾ ಸಂಸ್ಥೆ ಅವರು ಬರೆದ್ದಿದ್ದ ದೇಶಭಕ್ತಿಗೀತೆಗಳ ಗ್ರಾಮಾಪೋನ್ ಪ್ಲೇಟ್ ಅನ್ನು ಹೊರತಂದಿತ್ತಂತೆ… ಬಿ.ಜಯಮ್ಮ ಮತ್ತು ಹೊನ್ನಪ್ಪ ಭಾಗವತರ್ ಈ ಗೀತೆಗಳನ್ನು ಹಾಡಿದ್ದು ‘ಭಾರತ ಭಾಸ್ಕರ’, ‘ಮಹಾತ್ಮ ಭಾರತ ಭಾಗ್ಯವಿದಾತ’ ಮೊದಲಾದ ಗೀತೆಗಳು ಜನಪ್ರಿಯ ಕೂಡ ಆಗಿದ್ದವು.
ಅವರ ಬಹಳ ಜನಪ್ರಿಯವಾದ ‘ವೀರಕೇಸರಿ’ ಚಿತ್ರದ ಮೆಲ್ಲುಸುರೀ ಸವಿಗಾನ ವನ್ನು ಎಲ್ಲರೂ ‘ಮೆಲ್ಲುಸಿರೇ ಸವಿಗಾನ’ ಎಂದು ತಪ್ಪಾಗಿ ಹಾಡುತ್ತಾರೆ.
ಕು. ರ. ಸೀ ಅವರು ಬರೆದದ್ದು ಕೇವಲ 143 ಚಿತ್ರಗೀತೆಗಳಷ್ಟೇ ಆದರೂ ಆ ಚಿತ್ರಗೀತೆಗಳೆಲ್ಲವೂ ಪ್ರಸಿದ್ದಿ ಪಡೆದವು .
ಅವರು ಕನ್ನಡದಲ್ಲಿ ಮಹಾಕವಿ ಕಾಳಿದಾಸ, ಸದಾರಮೆ, ಅಣ್ಣ ತಂಗಿ, ರಾಣಿ ಹೊನ್ನಮ್ಮ, ಮನ ಮೆಚ್ಚಿದ ಮಡದಿ, ಬೆರತ ಜೀವ ಮತ್ತು ಕಲ್ಪವೃಕ್ಷ ನಿರ್ದೇಶಿಸಿದ್ದಲ್ಲದೇ ,ಆ ಚಿತ್ರಗಳನ್ನು ತೆಲುಗಿಗೂ ತೆಗೆದುಕೊಂಡು ಹೋದರು.
ಕು ರ ಸೀ ಅವರು ಸಿಂಗಾಪುರಕ್ಕೆ ಹೋಗಿ ಮಲಯ ಭಾಷೆಯಲ್ಲಿ ಕುರಾನ ಕಾವ್ ಮತ್ತು ಈಮಾನ್ ಚಿತ್ರಗಳನ್ನು ನಿರ್ದೇಶಿಸಿ ಜಾಗತಿಕ ಮನ್ನಣೆ ಪಡೆದವರು.
ಕು ರ ಸೀ ಅವರು 1977ರ ನವಂಬರ್ 12ರಂದು ನಿಧನರಾಗುವುದರೊಂದಿಗೆ ಕನ್ನಡ ಚಲನಚಿತ್ರ ಸಾಹಿತ್ಯದ ಕೊಂಡಿಯೊಂದು ಕಳಚಿಬಿದ್ದು ಕನ್ನಡ ಚಲನಚಿತ್ರರಂಗ ಬಡವಾಯಿತು…
ಸುನಿಲ್ ಹಳೆಯೂರು