ಹಾವು ಕಡಿತಕ್ಕೆ ಚಿಕಿತ್ಸೆ ಹಾಗು ಜಾಗೃತಿ
ನಮ್ಮ ದೇಶದಲ್ಲಿ ಪ್ರತಿ ವರ್ಷ ಐವತ್ತು ಸಾವಿರಕ್ಕಿಂತ ಅಧಿಕ ಜನ ಹಾವು ಕಡಿತಗಳಿಂದ ಮೃತಪಡುತ್ತಿದ್ದು, ಒಂದೂವರೆ ಲಕ್ಷ ಜನ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗುತ್ತಿದ್ದಾರೆ. ಜಾಗತಿಕವಾಗಿ ಅತೀ ಹೆಚ್ಚು ಜನ ನಮ್ಮ ದೇಶದಲ್ಲೆ ಸಾವಿಗೀಡಾಗುತ್ತಿದ್ದಾರೆ.
ನಮ್ಮ ಮಲೆನಾಡು ಭಾಗದಲ್ಲಿ ಹಾವು ಕಡಿತಗಳ ಪ್ರಕರಣಗಳು ಆಗಾಗ ವರದಿಯಾಗುತ್ತಿದ್ದು, ಹಾವು ಕಡಿದಾಗ ಅನುಸರಿಸಬೇಕಾದ ಸಾಮಾನ್ಯ ಜ್ಞಾನದ ಕೊರತೆಯಿಂದ ಅಮೂಲ್ಯ ಜೀವಗಳು ಬಲಿಯಾಗುತ್ತಲೆ ಇವೆ.
ನಮ್ಮಲ್ಲಿ ಹಾವಿನ ಕಡಿತವು ನಿರ್ಲಕ್ಷ್ಯಕ್ಕೆ ಒಳಗಾದ ಒಂದು ಖಾಯಿಲೆ ಎಂದು ಹೇಳಬಹುದು. ಹಾವಿನ ಕಡಿತವನ್ನು ಗಂಭೀರವಾಗಿ ಪರಿಗಣಿಸದೆ ಮಂತ್ರ, ಮೂಢನಂಬಿಕೆಗಳ ಮೊರೆ ಹೋಗುತ್ತಿರುವುದು ಹಾಗು ಸ್ಥಳೀಯ ನಾಟಿ ವೈದ್ಯ ಪದ್ಧತಿಯಂತಹ ಅವೈಜ್ಞಾನಿಕ ವಿಧಾನ ಅನುಸರಿಸುತ್ತಿರುವುದರಿಂದ ಸಾವುಗಳ ಸಂಖ್ಯೆ ಹೆಚ್ಚುತ್ತಿದೆ.
ಇತ್ತೀಚಿಗೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹರತಾಳು ಗ್ರಾ ಪಂ ವ್ಯಾಪ್ತಿಯ ಶುಂಠಿಕೊಪ್ಪದ ಗೃಹಿಣಿಯೊಬ್ಬರಿಗೆ ಹಾವು ಕಡಿದಿತ್ತು, ಅವರು ತುರ್ತಾಗಿ ಆಸ್ಪತ್ರೆಗೆ ಹೋಗುವ ಬದಲಾಗಿ ಗೆಣಸಿನಕುಣಿ ಎಂಬ ಊರಲ್ಲಿ ಕೊಡುವ ಮಂತ್ರ ಚಿಕಿತ್ಸೆ ಪಡೆದು ಮನೆಗೆ ವಾಪಾಸಾಗಿದ್ದರು, ಒಂದೆರಡು ಗಂಟೆಗಳ ಬಳಿಕ ತೀವ್ರ ಅಸ್ವಸ್ಥರಾದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯವ ವೇಳೆ ಮಾರ್ಗ ಮಧ್ಯೆ ಮೃತರಾದರು.
ತೋಟದ ಕೆಲಸ ಮಾಡುವಾಗ ಕೊಳಕುಮಂಡಲ ಹಾವು ಹೆಬ್ಬೈಲು ಸಮೀಪದ ಮದ್ದರಸನ ಕೊಪ್ಪದ ವ್ಯಕ್ತಿಯೊಬ್ಬರ ಕಾಲಿಗೆ ಕಡಿದಿತ್ತು, ತಕ್ಷಣ ನಾಟಿ ಔಷಧವನ್ನು ಕಣ್ಣೂರಲ್ಲಿ ಪಡೆದು ಮನೆಗೆ ವಾಪಾಸಾಗಿದ್ದರು. ನಂತರ ಕಾಲು ವಿಪರೀತ ಊದಿಕೊಂಡ ಪರಿಣಾಮ ಎರಡು ದಿನಗಳ ನಂತರ ಆಸ್ಪತ್ರೆಗೆ ದಾಖಲಾದರು. ಅಷ್ಟರಲ್ಲಾಗಲೆ ಕೊಳಕುಮಂಡಲ ಹಾವಿನ ವಿಷ ಕಿಡ್ನಿಗಳನ್ನು ಹಾನಿಗೊಳಿಸಿತ್ತು, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.
2022 ರಲ್ಲಿ ಹರತಾಳು ಸಮೀಪದ ಲಿಂಗನಕೊಪ್ಪದ ದುಗ್ಗಪ್ಪ ಎಂಬುವವರಿಗೆ ನಾಗರಹಾವು ಕಡಿದಿತ್ತು, ಅವರನ್ನು ಆನಂದಪುರಂ ಸಮೀಪದ ಕಣ್ಣೂರಿಗೆ ಕರೆದೊಯ್ದು ನಾಟಿ ಕೊಡಿಸಿ ನಂತರ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.
ಮೇಲಿನ ಘಟನೆಗಳನ್ನು ಗಮನಿಸಿದಾಗ ಹಾವಿನ ಕಡಿತಕ್ಕೆ ಪರಿಣಾಮಕಾರಿ ಔಷಧಿಗಳು ಆಸ್ಪತ್ರೆಯಲ್ಲಿ ಲಭ್ಯವಿದ್ದರೂ, ಜನ ಮೂಢನಂಬಿಕೆ ಮಂತ್ರ ಚಿಕಿತ್ಸೆ ನಾಟಿ ಔಷಧಿಗಳಂತಹ ಅವೈಜ್ಞಾನಿಕ ವಿಧಾನಗಳ ಮೊರೆ ಹೋಗಿ ತಮ್ಮವರನ್ನು ಕಳೆದುಕೊಳ್ಳುತ್ತಿದ್ದಾರೆ.
ಮಲೆನಾಡಿನ ಹೊಸನಗರ, ಸಾಗರ ತಾಲ್ಲೂಕಿನ ಹಲವರು ಹಾವು ಕಡಿದಾಗ ಗೊಣಸಿನ ಕುಣಿ, ಕಣ್ಣೂರು ಚೋರಡಿ ಆರುಂಡಿಗಳಲ್ಲಿ ಸಿಗುವ ನಾಟಿ /ಮಂತ್ರ ಚಿಕಿತ್ಸೆ ಪಡೆದು ಅನೇಕರು ಗುಣ ಮುಖರಾಗುತ್ತಿದ್ದಾರೆ!! ಇದಕ್ಕೆ ಕಾರಣ ನೋಡುವುದಾದರೆ, ವಿಷಪೂರಿತ ಹಾವುಗಳು ವಿಷವನ್ನು ತಮ್ಮ ಬಲಿ ಪ್ರಾಣಿಗಳನ್ನು ಕೊಲ್ಲಲು ಬಳಸುತ್ತವೆ,ತಮಗೆ ಅಪಾಯ ಉಂಟಾದಾಗಲೂ ತಮ್ಮನ್ನು ರಕ್ಷಿಸಿಕೊಳ್ಳಲು ವಿಷವನ್ನೆ ಬಳಸುತ್ತವೆ. ಉದಾ: ಮನುಷ್ಯ ತುಳಿದಾಗ ಹಾನಿ ಮಾಡಿದಾಗ ನಾಗರಹಾವಾದರೆ ಹೆಡೆ ಬಿಚ್ಚಿ ಬುಸುಗುಟ್ಟಿ ಹೆದರಿಸುತ್ತದೆ, ಮತ್ತೆ ಕೆಲವು ಸಲ ಕಡಿದೇ ಬಿಡುತ್ತದೆ! ತಮ್ಮನ್ನು ತಾವು ರಕ್ಷಿಸಿಕೊಳ್ಳಲು/ಹೆದರಿಸಲು ಮನುಷ್ಯರಿಗೆ ಕಡಿದಾಗ ಬಹುತೇಕ ಸಂದರ್ಬಗಳಲ್ಲಿ ಹಾವುಗಳು ವಿಷವನ್ನೆ ಬಿಡುವುದಿಲ್ಲ (Dry bites) ಆಗ ನಾಟಿ ಔಷಧ, ಮಂತ್ರ ಚಿಕಿತ್ಸೆ ಅಥವಾ ಯಾವುದೇ ಮದ್ದು ಮಾಡದೆ ಮನೆಯಲ್ಲಿದ್ದರೂ ವ್ಯಕ್ತಿ ಬದುಕುಳಿಯುತ್ತಾನೆ. ಇಲ್ಲಿ ಕಡಿಸಿಕೊಂಡವನು ಬದುಕುಳಿಯಲು ಹಾವು ವಿಷ ಬಿಡದೇ ಇರುವುದೆ ಕಾರಣ ಹೊರತು ನಾಟಿ ಔಷಧಿ ಅಥವಾ ಮಂತ್ರ ಚಿಕಿತ್ಸೆಯಲ್ಲ!!
ಹಾವು ವಿಷವನ್ನು ಬಿಟ್ಟರೆ ಇವರ ಮಂತ್ರವಾಗಲಿ, ಗಿಡ ಮೂಲಿಕೆ ಔಷಧವಾಗಲಿ ಕೆಲಸ ಮಾಡುವುದೇ ಇಲ್ಲ, ಒಂದು ವೇಳೆ ವ್ಯಕ್ತಿ ಸತ್ತರೆ, ಬರುವುದು ತಡವಾಯಿತು, ಕಡಿಮೆ ಗಳಿಗೆ ಹಾವು ಕಡಿದಿತ್ತು , ಕೈಮೀರಿ ಹೋಗಿತ್ತು ಇನ್ನೂ ಅನೇಕ ಸುಳ್ಳು ಕಾರಣ ಹೇಳಿ ಔಷಧಿ ಕೊಡುವವರು ನುಣುಚಿಕೊಳ್ಳುತ್ತಾರೆ.
ನಾಟಿ ಔಷಧಿ ಕೊಡುವ ಅನೇಕ ಕಡೆ ವಿಸ್ಕಿ ಜೊತೆಗೆ ನಾಟಿ ಮದ್ದನ್ನು ಕೊಡುತ್ತಾರೆ, ಈ ವಿಸ್ಕಿ ಅಥವಾ ಆಲ್ಕೋಹಾಲ್ ನರಮಂಡಲದ ಖಿನ್ನತೆಯ ವಿಷವಾಗಿದ್ದು, ನಾಗರಹಾವು ಕಟ್ಟಾವು ಕಡಿದಾಗಲೂ ಹಾವಿನ ವಿಷ ನರಮಂಡಲದ ಮೇಲೆ ಪರಿಣಾಮ ಬೀರುವುದರಿಂದ ಆಲ್ಕೋಹಾಲ್ ಸೇವನೆಯು ಆಸ್ಪತ್ರೆಯಲ್ಲಿ ಕೊಡುವ ಚಿಕಿತ್ಸೆಗೆ ಅಡ್ಡಿಪಡಿಸುತ್ತದೆ.
ಹಾವಿನ ಕಡಿತವು ಒಂದು ವೈದ್ಯಕೀಯ ತುರ್ತುಸ್ಥಿತಿ, ಇಲ್ಲಿ ನಾವು ಅನುಸರಿಸುವ ಸರಳ ವಿಧಾನ ಅಮೂಲ್ಯ ಜೀವಗಳನ್ನು ಉಳಿಸಬಲ್ಲದು. ಹಾವು ಕಡಿದಾಗ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.
1) ಗಾಬರಿಗೊಳ್ಳಬೇಡಿ, ಶಾಂತವಾಗಿರಿ, ದೈರ್ಯ ತಂದುಕೊಳ್ಳಿ, ಗಾಬರಿಯಾದಾಗ ಹೃದಯ ಬಡಿತ ಹೆಚ್ಚಾಗಿ ವಿಷ ವೇಗವಾಗಿ ಹರಡುತ್ತದೆ.
2) ಹಾವಿಂದ ದೂರ ಸರಿಯಿರಿ ಅದನ್ನು ಹಿಂಬಾಲಿಸುವುದಾಗಲಿ, ಹಿಡಿಯುವ ಹಾಗೂ ಕೊಲ್ಲುವ ಪ್ರಯತ್ನ ಮಾಡಬೇಡಿ.
3) ಗಾಯದ ಮೇಲೆ ಅಥವಾ ಅಕ್ಕಪಕ್ಕ ತಂತಿ, ದಾರ ಭತ್ತದ ಹುಲ್ಲಿನ ಹಗ್ಗದಿಂದಬಿಗಿಯಾಗಿ ಕಟ್ಟುಗಳನ್ನು ಹಾಕಬೇಡಿ.
4) ಯಾವುದೇ ಹರಿತವಾದ ಸಾಧನಗಳಿಂದ ಗಾಯವನ್ನು ಕತ್ತರಿಸಬೇಡಿ. ಇದರಿಂದ ರೋಗಿಗೆ ರಕ್ತ ಸ್ರಾವವಾಗಿ ಸಾವು ಸಂಭವಿಸಬಹುದು. ಇಲ್ಲವೇ ಗಾಯ ನಂಜಾಗಬಹುದು.
5) ಸಿನಿಮಾ ಶೈಲಿ ಅನುಕರಿಸಿ ಬಾಯಿಂದ ವಿಷ ಹೀರಬೇಡಿ.
6) ಕಡಿದ ಗಾಯದ ಮೇಲೆ ಮಂಜುಗಡ್ಡೆ ಇಡುವುದಾಗಲಿ, ನೀರಲ್ಲಿ ಗಾಯವನ್ನು ಮುಳುಗಿಸುವುದಾಗಲಿ ಮಾಡಬೇಡಿ.
7) ಗಾಯದ ಮೇಲೆ ಯಾವುದೇ ಗಿಡಮೂಲಿಕೆ ಮದ್ದು ಇಡಬೇಡಿ.
8) ಹೊಲ ಗದ್ದೆಗಳಲ್ಲಿ ಹಾವು ಕಡಿದಾಗ ಓಡಿ ಬರುವ ಪ್ರಯತ್ನ ಮಾಡಬೇಡಿ, ಸಾಧ್ಯವಾದರೆ ಅಕ್ಕಪಕ್ಕ ಯಾರಾದರೂ ಇದ್ದರೆ ರೋಗಿಯನ್ನು ಎತ್ತಿಕೊಂಡು ಬರುವ ಪ್ರಯತ್ನ ಮಾಡಲಿ.
9) ತೀರಾ ಅಗತ್ಯ ಇದ್ದರಷ್ಟೇ ಓಡಾಡಿ.
10 ) ಹಾವು ಕಡಿದ ಗಾಯದ ಭಾಗವು ಹೃದಯಕ್ಕಿಂತ ಕೆಳಮಟ್ಟದಲ್ಲಿ ಇರಲಿ
11)ಕಡಿದ ಭಾಗದಲ್ಲಿ ಯಾವುದೇ ಬಳೆ ಉಂಗುರ ವಾಚು ಇದ್ದರೆ ತೆಗೆಯಿರಿ.
ಮೇಲಿನ ಕ್ರಮಗಳು ಹಾವಿನ ವಿಷ ವೇಗವಾಗಿ ಹರಡದಂತೆ ಕೊಂಚ ತಡೆಯಬಹುದೇ ವಿನಹ ಚಿಕಿತ್ಸೆ ಅಲ್ಲ, ಹಾವು ಕಡಿದ ಮೊದಲ ಒಂದು ಗಂಟೆ ಬಹಳ ಅಮೂಲ್ಯವಾದುದು, ಈ ಸಂದರ್ಬದಲ್ಲಿ ಪ್ರಥಮ ಚಿಕಿತ್ಸೆ ಮಾಡುವುದರಲ್ಲಿ ಅಥವ ರೋಗಿಯನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು ಅನ್ನುವ ಗೊಂದಲದಲ್ಲಿ ಕಾಲಹರಣ ಮಾಡದೆ,ತುರ್ತಾಗಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುವುದೊಂದೆ ಪರಿಹಾರ.
ವಿಷಪೂರಿತ ಹಾವು ಕಡಿದಾಗ ಈ ಕೆಳಗಿನ ಲಕ್ಷಣಗಳು ಕಂಡು ಬರಬಹುದು.
1)ಕಡಿದ ಜಾಗದಲ್ಲಿ ವಿಪರೀತ ಉರಿ ನೋವು ಸೆಳೆತ ಕಂಡು ಬರಬಹುದು.
2)ಕಡಿದ ಜಾಗದಲ್ಲಿ ಊತ ಬರಬಹುದು.
3) ಕಡಿದ ಜಾಗದ ಚರ್ಮದ ಬಣ್ಣ ಬದಲಾಗಬಹುದು.
4) ಕಣ್ಣು ತೆರೆಯಲು ಕಷ್ಟವಾಗಿ ಕಣ್ಣುಗುಡ್ಡೆ ಬಿದ್ದು ಹೋಗಬಹುದು (dropping eyelids)
5) ಕಡಿದ ಜಾಗದಿಂದ ರಕ್ತ ಸ್ರಾವವಾಗಬಹುದು.
ವಿಷಪೂರಿತ ಹಾವು ಕಡಿದಾಗ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು ಇವು, ಆದರೆ ಕಟ್ಟಾವು (Krait) ಚಿಕ್ಕದಾದ ವಿಷದ ಹಲ್ಲನ್ನು(fangs) ಹೊಂದಿದ್ದು ಇದರ ಕಡಿತ ಮುಳ್ಳು ಚುಚ್ಚಿದ ಅನುಭವ ನೀಡುತ್ತದೆ, ನಂತರ ಯಾವುದೇ ಉರಿ ನೋವು ಸೆಳೆತ ಕಾಣಿಸದೆ ಕೊನೆಯ ಹಂತದಲ್ಲಿ ವಾಂತಿ ಹೊಟ್ಟೆ ನೋವಿನಂತಹ ಲಕ್ಷಣ ಕಂಡು ಮಾರಣಾಂತಿಕವಾಗಬಲ್ಲದು, ಹಾಗಾಗಿ ಈ ಕಟ್ಟುಹಾವನ್ನು ಸೈಲೆಂಟ್ ಕಿಲ್ಲರ್ ಎನ್ನುತ್ತಾರೆ
ಚಿಕಿತ್ಸೆ: ನಮ್ಮ ದೇಶದಲ್ಲಿ ಹಾವಿನ ಕಡಿತಕ್ಕೆ ಪ್ರಸ್ತುತ ಇರುವ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದರೆ ಅದು ಪ್ರತಿ ವಿಷ ಚಿಕಿತ್ಸೆ ಅಥವಾ ASV( anti snake venom) ಮಾತ್ರ, ಈ ಚಿಕಿತ್ಸೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಎಲ್ಲರಿಗೂ ಲಭ್ಯವಿದೆ, ನಾಗರಹಾವು, ಕೊಳಕು ಮಂಡಲ, ರಕ್ತ ಮಂಡಲ ಕಟ್ಟಾವು ಈ ನಾಲ್ಕು ಹಾವಿನ ಕಡಿತಕ್ಕೆ ಸಧ್ಯ ನಮ್ಮ ದೇಶದಲ್ಲಿ ಒಂದೇ ರೀತಿಯ ಔಷದಿ (ASV) ಲಭ್ಯವಿದ್ದು, ಮುಂದೆ ಆಯಾ ಹಾವಿನ ಕಡಿತಕ್ಕೆ ನಿರ್ದಿಷ್ಟ ಔಷಧಿ ಬರುವ ಸಾಧ್ಯತೆ ಇದೆ.
ವಿಷಪೂರಿತ ಹಾವು ಕಡಿಯಲಿ ಅಥವಾ ವಿಷ ರಹಿತ ಕಡಿಯಲಿ ಮೊದಲು ಆಸ್ಪತ್ರೆಗೆ ದಾಖಲಾಗಿ, ವೈದ್ಯರು ಅಗತ್ಯ ಇದ್ದರೆ ಹಾವಿನ ಕಡಿತದ ಔಷಧಿ (ASV) ನೀಡುತ್ತಾರೆ, ಇಲ್ಲದ್ದಿದ್ದರೆ ನಿಮ್ಮ ಮೇಲೆ ನಿಗಾ ಇಟ್ಟು ದೇಹದ ಬದಲಾವಣೆಗಳನ್ನು ಗಮನಿಸುತ್ತಾರೆ.
ಮಂತ್ರ, ಮದ್ದು ಮತ್ತು ಮೂಢನಂಬಿಕೆ: ಬಹಳಷ್ಟು ಜನ ಹಾವು ಕಡಿದಾಗ ಮಂತ್ರ ಮದ್ದು ನಾಟಿ ಔಷಧಿಗಳ ಮೊರೆ ಹೋಗಿ ವಾಸಿ ಆಗಿರುವ ತಮ್ಮ ಅನುಭವ ಹೇಳುತ್ತಾರೆ, ಹೀಗೆ ವಾಸಿಯಾಗುವುದರ ಹಿಂದೆ ಸರಳ ವೈಜ್ಞಾನಿಕ ಕಾರಣವಿದೆ.
ಕಡಿದ ಎಲ್ಲಾ ಹಾವುಗಳು ವಿಷಪೂರಿತವಾಗಿರುವುದಿಲ್ಲ ಹಾಗು ವಿಷಪೂರಿತ ಹಾವಿನ ಎಲ್ಲಾ ಕಡಿತಗಳು ವಿಷವನ್ನು ಬಿಟ್ಟಿರುವುದಿಲ್ಲ ಎಂಬುದನ್ನು ಗಮನಿಸಬೇಕಿದೆ.
ನಾವು ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ
ಹಾವಿನ ಕಡಿತಗಳನ್ನು ಖಂಡಿತಾ ತಪ್ಪಿಸಬಹುದು.
1) ಹೊಲ ಗದ್ದೆ ತೋಟಗಳಲ್ಲಿ ಓಡಾಡುವಾಗ ಗಂಬೂಟುಗಳನ್ನು ಬಳಸಿ.
2)ರಾತ್ರಿ ಸಂಚರಿಸುವಾಗ ಕಡ್ಡಾಯವಾಗಿ ಟಾರ್ಚ್ಗಳನ್ನು ಬಳಸಿ
3) ರಾತ್ರಿ ಬಯಲು ಮಲ ವಿಸರ್ಜನೆ ತಪ್ಪಿಸಿ
4) ಮನೆಯ ಸುತ್ತಮುತ್ತ ಸ್ವಚ್ಚವಾಗಿರಲಿ, ಕಸಕಡ್ಡಿಗಳು ಇಲಿಗಳನ್ನು ಆಕರ್ಷಿಸುತ್ತವೆ, ಇಲಿಗಳನ್ನು ಬೇಟೆಯಾಡಲು ಹಾವುಗಳು ಸಹಜವಾಗಿ ಬರುತ್ತವೆ.
5) ಮನೆಯಿಂದ ಹೊರಗೆ ಮಲಗುವಾಗ ಚಾಪೆಯ ಸುತ್ತಲು ಸೊಳ್ಳೆ ಪರದೆ ಬಳಸಿ ಇದರಿಂದ ಹಾವುಗಳು ಹಾಸಿಗೆಯೊಳಗೆ ಬರಲು ಸಾಧ್ಯವಾಗುವುದಿಲ್ಲ.
6) ಗುಡಿಸಲು ಮನೆಗಳಾದರೆ ಮಂಚದ ಮೇಲೆ ಮಲಗುವುದು ಸೂಕ್ತ.
7) ಕೋಳಿ ಶೆಡ್ಡು ಕಟ್ಟಿಗೆ ರಾಶಿ, ದನದ ಕೊಟ್ಟಿಗೆಗಳು ಮನೆಯಿಂದ ಸ್ವಲ್ಪ ದೂರದಲ್ಲಿದ್ದರೆ ಉತ್ತಮ.
8) ಮನೆ ಸುತ್ತಲಿರುವ ಇಲಿ ಬಿಲಗಳು,ಸಂದುಗಳನ್ನು ಆಗಾಗ ಮಣ್ಣಿನಿಂದ ಮುಚ್ಚುತ್ತಿರಬೇಕು.
9) ಮನೆಯ ಹೊರಗೆ ಇಟ್ಟ ಶೂಗಳನ್ನು ಧರಿಸುವಾಗ ಪರಿಶೀಲಿಸಬೇಕು.
10)ಮನೆಯ ಕಿಟಕಿಗೆ ತಾಗಿದ ಮರದ ರೆಂಬೆ, ಹೂವಿನ ಗಿಡಗಳನ್ನು ಆಗಾಗ ಕತ್ತರಿಸಬೇಕು.
11) ಮನೆಯ ಬಾಗಿಲನ್ನು ಯಾವಾಗಲೂ ತೆರೆದಿಡದೆ ಮುಚ್ಚಿರಬೇಕು.
ಈ ಕೆಳಕಂಡ ಹಾವಿನ ಕಡಿತಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷ ಮಾಡಬೇಡಿ.
📍ನಾಗರಹಾವು (Spectacled Cobra)
📍ಕಟ್ಟಾವು (Common Krait)
,📍ಕೊಳಕು ಮಂಡಲ( Russell viper)
📍ರಕ್ತಮಂಡಲ / ಉರಿಮಂಡಲ (Saw scaled viper)
📍ತೌಡು ಹಪ್ರೆ ಹಾವು (Hump Nosed pit viper)
ಹಾವಿನ ಕಡಿತವನ್ನು ಅಧಿಸೂಚಿತ ರೋಗಗಳ ಪಟ್ಟಿಗೆ ಸೇರಿಸಿದ
ಮೊದಲ ರಾಜ್ಯ ನಮ್ಮ ಕರ್ನಾಟಕ !
ಹಾವಿನ ಕಡಿತವು ಸಾಂಪ್ರದಾಯಿಕ ಅರ್ಥದಲ್ಲಿ ರೋಗ ಅಲ್ಲದ್ದಿದ್ದರೂ
ಪ್ರಕರಣಗಳ ಕಡಿಮೆ ವರದಿ ಮತ್ತು ಉಚಿತ ಚಿಕಿತ್ಸೆಯ ಅರಿವಿನ
ಕೊರತೆಯನ್ನು ಹೊಂದಿರುವ ಕಾರಣದಿಂದ ಅಧಿಸೂಚಿತ
ಖಾಯಿಲೆಯನ್ನಾಗಿ ಮಾಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.
ವಿಶೇಷ ಸೂಚನೆ
ಒಂದು ವೇಳೆ ರೋಗಿಯು ಸಂಪರ್ಕಿಸುವ ಆರೋಗ್ಯ ಕೇಂದ್ರವು ಹಳ್ಳಿಗಳಿಂದ ಪ್ರಯಾಣ ಸಮಯ 30 ನಿಮಿಷಕ್ಕಿಂತ ಹೆಚ್ಚು ಇದ್ದಲ್ಲಿ, ರೋಗಿಯು ತಮ್ಮ ಹಳ್ಳಿಯಿಂದ 30 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ತಲುಪಬಹುದಾದಂತಹ
ಸಮುದಾಯ ಆರೋಗ್ಯ ಕೇಂದ್ರಗಳನ್ನು ಹಾವು ಕಡಿತದ ಚಿಕಿತ್ಸಾ ಕೇಂದ್ರಗಳಾಗಿ ಕರ್ತವ್ಯ ನಿರ್ವಹಿಸಲು ಆದೇಶ ಹೊರಡಿಸಿದೆ.
ಹಾವಿನ ಕಡಿತದ ಚಿಕಿತ್ಸೆ ಸರ್ಕಾರಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತವಿದೆ.
ಹಾವುಗಳು ನಮ್ಮ ಪರಿಸರದ ಆಹಾರ ಸರಪಳಿಯ ಕೊಂಡಿಗಳು, ಇಲ್ಲಿ ಸ್ವಲ್ಪ ಏರುಪೇರಾದರೂ ಅಪಾಯ ಖಚಿತ.ಮನುಷ್ಯ ಹಾವುಗಳಿಂದ ತನಗೇನು ಲಾಭ ಎಂದು ಯೋಚಿಸಿದರೆ, ಇಲಿಗಳಿಂದ ರೈತನ ಬೆಳೆಗಳಿಗಾಗುವ ಹಾನಿಯನ್ನು ತಪ್ಪಿಸಿ ರೈತನ ಆದಾಯವನ್ನು ಹೆಚ್ಚಿಸುತ್ತವೆ, ಇಲಿಗಳಿಂದ ಹರಡುವ ಕೆಲ ರೋಗಗಳನ್ನು ನಿಯಂತ್ರಿಸಬಲ್ಲವು, ಹಾವಿನ ವಿಷವನ್ನು ನೋವು ನಿವಾರಕವಾಗಿಯೂ ಬಳಸುತ್ತಾರೆ.ಹಾವು ಕಡಿದಾಗ ಆಸ್ಪತ್ರೆಯಲ್ಲಿ ನಮಗೆ ಕೊಡುವ ಔಷಧ ಹಾವಿನ ವಿಷದಿಂದಲೇ ತಯಾರಾಗುವುದು ಎನ್ನುವುದು ವಿಶೇಷ.
ನಾಗರಾಜ್ ಬೆಳ್ಳೂರು
ಮೊಬೈಲ್ : 9341461867
Nisarga Conservation Trust