ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ
ಆಕಾಶದಲ್ಲಿ ರಣಕಲಿಯಂತೆ ಹೋರಾಡಿ ಹುತಾತ್ಮನಾದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ. ಪ್ರತೀ ವರ್ಷ ಅಕ್ಟೋಬರ್ 8ನ್ನು ಭಾರತೀಯ ವಾಯುಸೇನಾ ದಿವಸ್ ಎಂಬುದಾಗಿ ಆಚರಿಸಲಾಗುತ್ತದೆ. ಈ ದಿವಸವನ್ನು ಭಾರತೀಯ ವಾಯು ಸೇನೆಯು ದೇಶ ರಕ್ಷಣೆಯ ಮತ್ತು ಯುದ್ಧದ ಸಂದರ್ಭದಲ್ಲಿ ತೋರಿದ ಅಪ್ರತಿಮ ಸಾಹಸ ಮತ್ತು ತ್ಯಾಗದ ಧ್ಯೋತಕವಾಗಿ ಆಚರಿಸಲಾಗುತ್ತದೆ. 1965ರ ಭಾರತ ಪಾಕ್ ಯುದ್ಧದ ಸಮಯದಲ್ಲಿ ದೇಶದ ವಾಯುಸೇನೆಯ ಅತ್ಯಂತ ಹಳೆಯ ಡಕೋಟಾ ಎಕ್ಸ್ಪ್ರೆಸ್ ವಿಮಾನದಲ್ಲಿ ಪಾಕಿಸ್ತಾನಕ್ಕೆ ನುಗ್ಗಿ ಅಲ್ಲಿನ ಸೂಪರ್ ಸಾನಿಕ್ ಎಫ್-104 ಸ್ಟಾರ್ ಫೈಟರ್ ವಿಮಾನದೊಂದಿಗೆ ಡಾಗ್ ಫೈಟ್ ನಡೆಸಿ ಅದನ್ನು ಹೊಡೆದು ಉರುಳಿಸಿ ತಾವೂ ಹುತಾತ್ಮರಾದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ತ್ಯಾಗ, ರೋಮಾಂಚನ ಉಂಟುಮಾಡುತ್ತದೆ.
ಅಂದಿನ ಭಾರತದ ವಾಯುಪಡೆಯ ಶಕ್ತಿಯು ಈಗಿನ ವಾಯುಪಡೆಯಷ್ಟು ಬಲಿಷ್ಠವಾಗಿ ಇರಲಿಲ್ಲ. ಇಂದು ಭಾರತೀಯ ವಾಯುಪಡೆಯಲ್ಲಿ ಪ್ರಪಂಚದ ವಿವಿಧ ದೇಶಗಳ ಅತ್ಯಾಧುನಿಕ ಯುದ್ಧ ವಿಮಾನಗಳು ಇವೆ. 1965ರ ಭಾರತ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಪಾಕಿಸ್ತಾನದ ವಾಯುಸೇನೆಯು ಭಾರತೀಯ ವಾಯುಸೇನೆಗಿಂತ ಅತ್ಯಂತ ಬಲಶಾಲಿ ಆಗಿತ್ತು. ಆಗ ಭಾರತದ ವಾಯುಪಡೆಯ ಬತ್ತಳಿಕೆಯಲ್ಲಿ ಇದ್ದಿದ್ದು ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಹಳೆಯ ಯುದ್ಧ ವಿಮಾನಗಳು ಮಾತ್ರ.
ನಿಮ್ಮ ದೇಶದ ವಾಯುಸೇನೆಯು ಹಳೆಯ ಕಾಲದ ವಸ್ತು ಸಂಗ್ರಹಾಲಯದಂತೆ ಇದೆ, ಮೊದಲು ಅದನ್ನು ವಿಸರ್ಜಿಸಿ ಎಂದು ಅಂದು ಶಸ್ತ್ರಾಸ್ತ್ರ ಖರೀದಿಗೆ ಅಮೆರಿಕಕ್ಕೆ ತೆರಳಿದ್ದ ಭಾರತದ ರಕ್ಷಣಾ ಸಚಿವ ಯಶವಂತರಾವ್ ಚೌಹಾಣ್ ಅವರಿಗೆ ಅಲ್ಲಿನ ರಕ್ಷಣಾ ಕಾರ್ಯದರ್ಶಿ ಲೇವಡಿ ಮಾಡಿದ ರೀತಿಯಿಂದ ನಮ್ಮ ದೇಶದ ವಾಯು ಸೇನೆಯ ಯುದ್ಧ ವಿಮಾನಗಳು ಎಷ್ಟು ಹಳೆಯದಾಗಿತ್ತು ಮತ್ತು ಎಷ್ಟು ದುರ್ಬಲವಾಗಿದ್ದವು ಎನ್ನುವುದು ತಿಳಿಯುತ್ತದೆ. 1965ರ ಸೆಪ್ಟೆಂಬರ್ 6ರಂದು ಪಾಕಿಸ್ತಾನ ಯುದ್ಧ ವಿಮಾನಗಳು ಭಾರತದ ಪ್ರಮುಖ ವಾಯು ನೆಲೆಯಾದ ಪಠಾಣ್ಕೋಟ್, ಅದಂಪುರ, ಅಲ್ವಾರ ಮುಂತಾದ ಕಡೆ ದಾಳಿಯನ್ನು ನಡೆಸಿ ಸಾಕಷ್ಟು ಹಾನಿಯನ್ನು ಮಾಡಿದ್ದವು. ಈ ದಾಳಿಯಿಂದ ಭಾರತದ ಹಲವು ಯುದ್ಧ ವಿಮಾನಗಳು ಹಾಗೂ ವಿಮಾನಗಳು ಹಾರಾಟ ನಡೆಸಲು ಅಗತ್ಯವಿದ್ದ ರನ್ವೇಗಳು ಸಂಪೂರ್ಣವಾಗಿ ಧ್ವಂಸಗೊಂಡಿದ್ದವು. ಇದಕ್ಕೆ ಪ್ರತಿಯಾಗಿ ಮರುದಿನವೇ ಭಾರತದ ಒಟ್ಟು 12 ಯುದ್ಧ ವಿಮಾನಗಳು ಪಾಕಿಸ್ತಾನದ ಕಡೆಗೆ ಹಾರಿ ಬಾಂಬಿನ ಸುರಿಮಳೆಗೈದಿದ್ದವು.
ಪಾಕಿಸ್ಥಾನದ ನೆಲದಲ್ಲಿ ಬಾಂಬ್ ಸುರಿಮಳೆಗೈದಿದ್ದ 12 ಯುದ್ಧ ವಿಮಾನಗಳ ಪೈಕಿ ಕರ್ನಾಟಕದ ಕೊಡಗಿನ ಕಲಿ ಅಜ್ಜಮಾಡ ಬೋಪಯ್ಯ ದೇವಯ್ಯ ತಾವು ಚಲಾಯಿಸುತ್ತಿದ್ದ ಅತ್ಯಂತ ಹಳೆಯದಾದ ಹಾಗೂ ಎದುರಾಳಿಯ ಎದುರು ತೀರಾ ದುರ್ಬಲವಾದ ಡಕೋಟಾ ಎಕ್ಸ್ಪ್ರೆಸ್ ಮಿಸ್ಟ್ರಿ ವಿಮಾನವಾಗಿತ್ತು. ಇದರ ಮೂಲಕ ಪಾಕಿಸ್ತಾನದ ಶಕ್ತಿಶಾಲಿ ಫೈಟರ್ ಸೂಪರ್ ಸಾನಿಕ್ ಎಫ್-104 ವಿಮಾನವನ್ನು ಹೊಡೆದುರುಳಿಸಿ ಭಾರತದ ಇತರ ಹನ್ನೊಂದು ಯುದ್ಧ ವಿಮಾನಗಳನ್ನು ರಕ್ಷಿಸಿದ್ದು ಇಂದಿಗೂ ವಿಶ್ವದ ವೈಮಾನಿಕ ಹೋರಾಟದ ಅಚ್ಚರಿಯಾಗಿದೆ.
1965ರ ಸೆಪ್ಟೆಂಬರ್ 6 ರಂದು ಏನಾಗಿತ್ತು?
ಭಾರತದ ಅದಂಪುರ ವಾಯುನೆಲೆಯ ರಹಸ್ಯ ಕೊಠಡಿಯಲ್ಲಿ ಮಾರನೇ ದಿನ ಪಾಕಿಸ್ತಾನದ ಸರಗೋದಾ ವಾಯುನೆಲೆಯ ಮೇಲೆ ವಾಯುದಾಳಿ ನಡೆಸುವ ಕುರಿತು ಭಾರತೀಯ ಪೈಲಟ್ಗಳಿಗೆ ಸೂಕ್ತ ನಿರ್ದೇಶನಗಳನ್ನು ಹಿರಿಯ ಅಧಿಕಾರಿಗಳು ನೀಡುತ್ತಿದ್ದರು. ಸರ್ಗೋದಾ ವಾಯುನೆಲೆಯು ಭಾರತದ ಗಡಿಯಿಂದ ಸುಮಾರು 100 ಮೈಲು ದೂರ ಇದ್ದುದರಿಂದ ಮತ್ತು ಸರ್ಗೋದಾ ಪಾಕಿಸ್ತಾನದ ಭದ್ರ ನೆಲೆಯಾಗಿದ್ದುದರಿಂದ ಅದರ ಮೇಲೆ ವಾಯು ದಾಳಿಯನ್ನು ಮಾಡುವುದು ಭಾರತೀಯ ಪೈಲಟ್ಗಳಿಗೆ ಸುಲಭದ ಕೆಲಸವಾಗಿರಲಿಲ್ಲ. ಮರುದಿನ ಬೆಳಗ್ಗೆ ಭಾರತದ ಹನ್ನೆರಡು ಯುದ್ಧ ವಿಮಾನಗಳು ಅದಂಪುರ ವಾಯುನೆಲೆಯಿಂದ ಆಕಾಶಕ್ಕೆ ಚಿಮ್ಮಿದವು. ಆ ತಂಡದಲ್ಲಿದ್ದ ಕೊನೆಯ ವಿಮಾನ ನಂ-32 ಸ್ಕ್ವಾಡ್ರನ್ಗೆ ಸೇರಿದ್ದ ಮಿಸ್ಟ್ರಿ ಆಗಿದ್ದು, ಅದರ ಪೈಲಟ್ ಸ್ಕ್ವಾಡ್ರನ್ ಲೀಡರ್ ದೇವಯ್ಯ ಆಗಿದ್ದರು. ಇವರು ಚಲಾಯಿಸುತ್ತಿದ್ದ ವಿಮಾನವು 12 ವಿಮಾನಗಳ ತಂಡದ ಕೊನೆಯಲ್ಲಿದ್ದು, ಇದರ ಕೆಲಸ ಸುತ್ತಲೂ ಹದ್ದಿನ ಕಣ್ಣಿಟ್ಟು ಶತ್ರುಗಳ ದಾಳಿಯನ್ನು ತಿಳಿದುಕೊಂಡು ಉಳಿದ ವಿಮಾನಗಳಿಗೆ ಸಂದೇಶವನ್ನು ನೀಡುವುದಾಗಿತ್ತು. ಭಾರತದ ದಾಳಿಯ ಶಂಕೆಯಿಂದ ಪಾಕಿಸ್ತಾನವು ಮುನ್ನೆಚ್ಚರಿಕೆಯ ಕ್ರಮವಾಗಿ ಸರ್ಗೋದಾದಲ್ಲಿ ಸಂಪೂರ್ಣವಾಗಿ ವಿದ್ಯುತ್ತನ್ನು ತೆಗೆದುಬಿಟ್ಟಿತ್ತು. ಅದರ ಮಧ್ಯೆಯೂ ಭಾರತದ ಹನ್ನೆರಡು ಯುದ್ಧ ವಿಮಾನಗಳು ಸರ್ಗೋದಾ ವಾಯುನೆಲೆಯ ಮೇಲೆ ದಾಳಿ ನಡೆಸಿ ವಾಪಸ್ಸು ಬರುತ್ತಿದ್ದವು. ಆ ಸಂದರ್ಭದಲ್ಲಿ ಭಾರತದ ದಾಳಿಯಿಂದ ಎಚ್ಚೆತ್ತುಕೊಂಡ ಪಾಕಿಸ್ತಾನದ ವಾಯುಸೇನೆಯು ಮರು ದಾಳಿಯನ್ನು ಸಂಘಟಿಸಿತ್ತು.
ಪಾಕಿಸ್ತಾನದ ಯುದ್ಧ ವಿಮಾನವೊಂದು, ಸರ್ಗೋದಾ ಮೇಲೆ ದಾಳಿ ನಡೆಸಿ ವಾಪಾಸು ಬರುತ್ತಿದ್ದ ಭಾರತದ ಈ ಹನ್ನೆರಡು ಯುದ್ಧ ವಿಮಾನಗಳನ್ನು ಅಟ್ಟಿಸಿಕೊಂಡು ಬರುತ್ತಿತ್ತು. ಕ್ಷಣ ಕ್ಷಣಕ್ಕೂ ಆ ಯುದ್ಧ ವಿಮಾನವು ಭಾರತದ ಯುದ್ಧ ವಿಮಾನಗಳ ಸಮೀಪ ಬರುತ್ತಿರುವುದನ್ನು ಮಿಸ್ಟ್ರಿ ವಿಮಾನವನ್ನು ಚಲಾಯಿಸುತ್ತಿದ್ದ ಕೊಡಗಿನ ಹೆಮ್ಮೆಯ ಕುವರ ಸ್ಕ್ವಾಡ್ರನ್ ಲೀಡರ್ ದೇವಯ್ಯ ಗಮನಿಸಿದರು. ಪಾಕಿಸ್ತಾನದ ಕಡೆಯಿಂದ ಬರುತ್ತಿದ್ದ ವಿಮಾನ ಸಾಮಾನ್ಯದ್ದಾಗಿ ಇರದೇ ಅಂದಿನ ವಿಶ್ವದ ಸೂಪರ್ ಸಾನಿಕ್ ಸ್ಟಾರ್ ಫೈಟರ್ ಎಫ್-104 ಆಗಿತ್ತು. ದೇವಯ್ಯ ಚಲಾಯಿಸುತ್ತಿದ್ದ ಮಿಸ್ಟ್ರಿ ವಿಮಾನ ಮತ್ತು ಪಾಕಿಸ್ತಾನದ ಸೂಪರ್ ಸಾನಿಕ್ ಎಫ್-104 ಫೈಟರ್ಗಳ ನಡುವಿನ ವ್ಯತ್ಯಾಸವು ಆನೆ ಮತ್ತು ಇಲಿಯ ನಡುವಿನ ಹೋಲಿಕೆಯಂತೆ ಇತ್ತು. ದೇವಯ್ಯ ಚಲಾಯಿಸುತ್ತಿದ್ದ ಮಿಸ್ಟ್ರಿ ವಿಮಾನದ ಕೇವಲ ಒಂದು ಬದಿಯಿಂದ ಮಾತ್ರ ದಾಳಿ ನಡೆಸಲು ಸಾಧ್ಯವಿದ್ದರೆ, ಸ್ಟಾರ್ ಫೈಟರ್ ಎಲ್ಲಾ ಕೋನಗಳಿಂದ ಏಕಕಾಲದಲ್ಲಿ ದಾಳಿ ನಡೆಸಬಹುದಾದಷ್ಟು ಬಲಿಷ್ಟವಾಗಿತ್ತು. ಅದರ ನಿಖರ ಗುರಿಗೆ ಎದುರಾಳಿಗಳು ತಪ್ಪಿಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಇದು ತನ್ನ ಸೈಡ್ ವಿಂಡರ್ ಮೂಲಕ ಕ್ಷಿಪಣಿಗಳನ್ನು ಉಡಾಯಿಸುವ ಸಾಮಥ್ರ್ಯವನ್ನು ಹೊಂದಿದ್ದು ಮಾತ್ರ ಅಲ್ಲದೇ ಮಿಂಚಿನ ವೇಗವೂ ಅದರ ಪ್ರಮುಖ ಬಲವಾಗಿತ್ತು. ಈ ಎಲ್ಲಾ ಕಾರಣಗಳಿಂದ ಭಾರತದ ಯುದ್ಧ ವಿಮಾನಗಳು ಮರಳಿ ತಮ್ಮ ವಾಯುನೆಲೆಗೆ ತಲುಪುವುದೇ ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಆಕಾಶದಲ್ಲಿ ನಿರ್ಮಾಣವಾಗಿತ್ತು.
ಮಿಸ್ಟ್ರಿ ಯುದ್ಧ ವಿಮಾನಗಳ ಮೂಲಕ ಎಫ್-104 ಯುದ್ಧ ವಿಮಾನಗಳನ್ನು ಎದುರಿಸುವುದು ಕಷ್ಟದ ಕೆಲಸವಾಗಿತ್ತು. ಆದರೂ 12 ವಿಮಾನಗಳ ಪೈಕಿ ಒಂದು ವಿಮಾನದ ಚಾಲಕ ಪ್ರಾಣವನ್ನೇ ಪಣಕ್ಕಿಡುವ ಸಾಹಸಕ್ಕೆ ಕೈ ಹಾಕುತ್ತಾರೆ. ಆ ವಿಮಾನವನ್ನು ಚಲಾಯಿಸುತ್ತಿದ್ದವರು ಬೇರಾರೂ ಆಗಿರದೇ, ಕೊಡಗಿನ ಕಲಿ ಅಜ್ಜಮಾಡ ದೇವಯ್ಯ ಅವರಾಗಿದ್ದರು. ಅವರು ಚಲಾಯಿಸುತ್ತಿದ್ದ ಮಿಸ್ಟ್ರಿ ಯುದ್ಧ ವಿಮಾನದಲ್ಲಿ ಇದ್ದ ಇಂಧನದ ಮೂಲಕ ಶತ್ರು ಪಾಳಯದಲ್ಲಿ ಬಾಂಬ್ ದಾಳಿ ನಡೆಸಿ ಮರಳಿ ತನ್ನ ವಾಯು ನೆಲೆಗೆ ಮರಳಲಷ್ಟೇ ಸಾಧ್ಯವಿತ್ತು. ತನ್ನ ತಂಡದ ಇತರ ಯುದ್ಧ ವಿಮಾನಗಳನ್ನು ಉಳಿಸಬೇಕೆಂದರೆ ತಾನು ಪಾಕಿಸ್ತಾನದ ಸೂಪರ್ ಸಾನಿಕ್ ಎಫ್-104 ಫೈಟರ್ ಜತೆ ಡಾಗ್ ಪೈಟ್ಗೆ ಇಳಿಯಲೇ ಬೇಕು. ಹಾಗೇನಾದರೂ ಡಾಗ್ ಫೈಟ್ಗೆ ಇಳಿದೆನೆಂದರೆ ತಾನು ಮರಳಿ ನನ್ನ ತವರು ವಾಯು ನೆಲೆಯನ್ನು ತಲುಪಲಾರೆ ಎಂಬುವುದೂ ಈ ಕೊಡಗಿನ ಕಲಿಗೆ ತಿಳಿದಿತ್ತು.
ಏನೇ ಆಗಲಿ ಪಾಕಿಸ್ತಾನದ ಫೈಟರ್ ಜೆಟ್ ತನ್ನ ತಂಡದ ಉಳಿದ ಹನ್ನೊಂದು ವಿಮಾನಗಳ ಮೇಲೆ ಹಿಂದಿನಿಂದ ದಾಳಿ ಮಾಡಲು ಬಿಡಬಾರದು ಮತ್ತು ತಾನು ತನ್ನ ತಂಡವನ್ನು ಪಾಕ್ ಯುದ್ಧ ವಿಮಾನದ ದಾಳಿಯಿಂದ ರಕ್ಷಿಸಲೇಬೇಕೆಂದು ನಿರ್ಧರಿಸಿದ್ದ ದೇವಯ್ಯ ಅವರು ತಮ್ಮ ವಿಮಾನವನ್ನು ತನ್ನ ತಂಡದ ಹಾದಿಯಿಂದ ಪ್ರತ್ಯೇಕಿಸಿ ಪಾಕ್ನ ಸೂಪರ್ ಸಾನಿಕ್ ಎಫ್-104 ಫೈಟರ್ ಜೆಟ್ ಕಡೆಗೆ ತಿರುಗಿಸಿ ಪಾಕ್ನ ಶಕ್ತಿಶಾಲಿ ಫೈಟರ್ ಜೆಟ್ ಜತೆಗೆ ಆಗಸದಲ್ಲೇ ಯುದ್ಧಕ್ಕೆ ನಿಲ್ಲುತ್ತಾರೆ. ದೇವಯ್ಯರ ಈ ನಿರ್ಧಾರವನ್ನು ಪಾಕ್ ಪೈಟರ್ನ ಪೈಲಟ್ ಕನಸಲ್ಲೂ ನಿರೀಕ್ಷಿಸಿರಲಿಲ್ಲ. ಭಾರತದ ಎಲ್ಲಾ ಯುದ್ಧ ವಿಮಾನಗಳನ್ನು ಹೊಡೆದು ಉರುಳಿಸಿಯೇ ಬಿಡುತ್ತೇನೆ ಎಂದು ಭಾರತದ ಫೈಟರ್ ಜೆಟ್ಗಳನ್ನು ಬೆನ್ನಟ್ಟಿಕೊಂಡು ಬರುತ್ತಿದ್ದ ಪಾಕ್ ಪೈಲಟ್, ದೇವಯ್ಯರ ಅಚಾನಕ್ ಯು ತಿರುವಿನಿಂದ ಕ್ಷಣ ಕಾಲ ಗಲಿಬಿಲಿಗೊಂಡಿದ್ದ. ಆದರೂ ತನ್ನ ಬಲಶಾಲಿ ಪೈಟರ್ ಜೆಟ್ ಕುರಿತು ಅಪಾರ ನಂಬಿಕೆ ಹೊಂದಿದ್ದ ಪಾಕ್ ಪೈಲಟ್, ದೇವಯ್ಯರ ಸಾಮಾನ್ಯ ಮಿಸ್ಟ್ರಿ ಜೆಟ್ನ್ನು ಧ್ವಂಸಗೊಳಿಸಲು ಮಿಸ್ಟ್ರಿ ಮೇಲೆ ಎರಡು ಬಲಿಷ್ಟ ಕಿಪಣಿಗಳನ್ನು ಉಡಾಯಿಸಿ ಮಿಸ್ಟ್ರಿ ಜೆಟ್ ಕೆಳಗುರುಳುವುದನ್ನು ಕಾಯುತ್ತಿದ್ದ. ಆದರೆ ಅಚ್ಚರಿಯೆಂಬಂತೆ ಮಿಷ್ಟ್ರಿ ಜೆಟ್ ಚಾಕಚಕ್ಯತೆ ತೋರಿ ಎರಡೂ ಕ್ಷಿಪಣಿಗಳಿಂದ ತಪ್ಪಿಸಿಕೊಂಡಿದ್ದರಿಂದ ಪಾಕ್ ಪೈಲಟ್ನ ಗುರಿ ತಪ್ಪಿತ್ತು.
ಛಲ ಬಿಡದ ಪಾಕ್ ಪೈಲಟ್ ತನ್ನ ಜೆಟ್ಗೆ ಅಳವಡಿಸಿದ್ದ ಅಷ್ಟೂ ಕ್ಷಿಪಣಿಗಳನ್ನು ದೇವಯ್ಯರ ಮಿಸ್ಟ್ರಿ ಮೇಲೆ ಒಂದರ ಮೇಲೊಂದರಂತೆ ಪ್ರಯೋಗಿಸಿದ್ದ. ಅವುಗಳ ಪೈಕಿ ಒಂದು ಕ್ಷಿಪಣಿ ಮಿಸ್ಟ್ರಿ ಜೆಟ್ನ ಒಂದು ರೆಕ್ಕೆಗೆ ಬಡಿದಿದ್ದರಿಂದ ಮಿಸ್ಟ್ರಿಗೆ ಬೆಂಕಿ ಹತ್ತಿಕೊಂಡಿತ್ತು. ಇನ್ನೇನು ಮಿಸ್ಟ್ರಿ ಕೆಳಕ್ಕೆ ಬಿದ್ದೇ ಬಿಡುತ್ತದೆ ಎಂದು ಪಾಕ್ ಪೈಲಟ್ ನಿಟ್ಟುಸಿರು ಬಿಟ್ಟಿದ್ದ. ಆದರೆ ಮೂರನೇ ಬಾರಿಯೂ ಆತನಿಗೆ ಅಚ್ಚರಿ ಕಾದಿತ್ತು. ಕೆಳಕ್ಕೆ ಬೀಳಬೇಕಿದ್ದ ಮಿಸ್ಟ್ರಿ ನೇರವಾಗಿ ಪಾಕ್ ಫೈಟರ್ ಕಡೆಗೆ ಮುನ್ನುಗ್ಗಿ ಪಾಕ್ನ ಸೂಪರ್ ಸಾನಿಕ್ ಎಫ್-104 ಫೈಟರ್ ಜೆಟ್ಗೆ ದೇವಯ್ಯ ತನ್ನ ಮಿಸ್ಟ್ರಿ ಜೆಟ್ನ್ನು ಅಪ್ಪಳಿಸಿದ್ದರು. ‘ತನ್ನ ವಿಮಾನಕ್ಕೆ ಬೆಂಕಿ ಹತ್ತಿಕೊಂಡು ತಾನು ಸಾಯುವ ಸ್ಥಿತಿಯಲ್ಲಿ ಇದ್ದರೂ ತಾನು ಪ್ಯಾರಾಚ್ಯೂಟ್ ಇಜೆಕ್ಟ್ ಮಾಡಿ ತನ್ನ ಜೀವವನ್ನು ಉಳಿಸಿಕೊಳ್ಳುವ ಬದಲು ಆ ಕೂರ್ಗಿ ಶೇರ್ (ಸ್ಕ್ವಾಡ್ರನ್ ಲೀಡರ್ ದೇವಯ್ಯ) ಪಾಕ್ ಜೆಟ್ ಮೇಲೆ ಮುಗಿಬಿದ್ದು ಹೊಡೆದುರುಳಿಸಿದ್ದ’ ಎಂದು ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಜಿ.ಡಿ ಭಕ್ಷಿ ಹೇಳಿದ್ದರು.
ಅಂದು ಅಮೆರಿಕಾ ನಿರ್ಮಿತ ಪಾಕ್ನ ಅತ್ಯಾಧುನಿಕ ಎಫ್-104 ಪೈಟರ್ ಜೆಟ್ನ್ನು ಭಾರತದ ದೇವಯ್ಯ ಅವರು ತನ್ನ ಅತ್ಯಂತ ಹಳೆಯ ಕಾಲದ ಮಿಸ್ಟ್ರಿ ಜೆಟ್ ಮೂಲಕ ಹೊಡೆದು ಉರುಳಿಸಿದ್ದರಿಂದ ಅಂದು ಪಾಕ್ನ ಮೇಲೆ ಬಾಂಬ್ ದಾಳಿ ನಡೆಸಿ ಮರಳುತ್ತಿದ್ದ ಮಿಕ್ಕ ಹನ್ನೊಂದು ವಿಮಾನಗಳೂ ಸಣ್ಣ ಹಾನಿಯೂ ಆಗದಂತೆ ಸುರಕ್ಷಿತವಾಗಿ ಭಾರತದ ನೆಲದಲ್ಲಿ ಲ್ಯಾಂಡಿಂಗ್ ಆಗಿದ್ದವು. ಆದರೆ ಸ್ಕ್ವಾಡ್ರನ್ ಲೀಡರ್ ದೇವಯ್ಯ ಮಾತ್ರ ಪಾಕ್ ನೆಲದಲ್ಲೇ ವೀರಮರಣ ಅಪ್ಪಿದರು. ಆದರೆ ಪಾಕ್ ಪೈಲಟ್ ವಿಮಾನದಿಂದ ಪ್ಯಾರಾಚ್ಯೂಟ್ ಇಜೆಕ್ಟ್ ಮೂಲಕ ಧುಮುಕಿ ತನ್ನ ಪ್ರಾಣ ಉಳಿಸಿಕೊಂಡರೆ ದೇವಯ್ಯ ಹುತಾತ್ಮರಾದರು.
ತಾನು ಉಳಿಯುವುದಿಲ್ಲ ಎಂದು ಅರಿತಿದ್ದರಿಂದಲೇ ದೇವಯ್ಯ ಅವರು ಪಾಕ್ ಜೆಟ್ ವಿರುದ್ಧ ಯುದ್ಧಕ್ಕೆ ನಿಂತಿದ್ದರು. ಎರಡು ಜೆಟ್ಗಳು ಮುಖಾಮುಖಿ ಢಿಕ್ಕಿಹೊಡೆದುಕೊಂಡು ಧರೆಗೆ ಉರುಳುವುದನ್ನು ಅನೇಕರು ನೋಡಿದ್ದರು. ಆದರೆ 1965ರಲ್ಲಿ ದೇವಯ್ಯರವರು ನಡೆಸಿದ ಹೋರಾಟದ ಬಗ್ಗೆ ದಶಕಗಳವರೆಗೂ ಹೊರಜಗತ್ತಿಗೆ ಗೊತ್ತೇ ಇರಲಿಲ್ಲ.
ಭಾರತದ ಮಿಸ್ಟ್ರಿ ಫೈಟರ್ ಮತ್ತು ಪಾಕಿಸ್ತಾನದ ಎಫ್-104 ಫೈಟರ್ ನಡುವಿನ ಯುದ್ಧದಲ್ಲಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಹುತಾತ್ಮರಾದರೆ ಪಾಕಿಸ್ತಾನದ ಎಫ್-104 ಫೈಟರ್ನ ಪೈಲಟ್ ಅಮ್ಜದ್ ಹುಸೇನ್ ವಿಮಾನದಿಂದ ಜಿಗಿದು ಬಚಾವಾಗಿದ್ದ. ಇದಾದ ಹಲವು ವರ್ಷಗಳ ತರುವಾಯ ಜಾನ್ ಬೇಕರ್ ಎಂಬ ಬ್ರಿಟಿಷ್ ಪತ್ರಕರ್ತನು ಪಾಕಿಸ್ತಾನದ ವಾಯುಪಡೆಯ ಕೆಲವೊಬ್ಬ ಪೈಲಟ್ಗಳನ್ನು ಸಂದರ್ಶಿಸಿ ಬರೆದ ಪುಸ್ತಕದಲ್ಲಿ ದೇವಯ್ಯರ ಸಾಹಸ ಮತ್ತು ಯುದ್ಧದಲ್ಲಿ ಅವರ ಬಲಿದಾನವಾಗಿದ್ದರ ಕುರಿತು ಉಲ್ಲೇಖಿಸಲಾಗಿತ್ತು. ಆಗಲೇ ಭಾರತಕ್ಕೂ ಬಿ.ದೇವಯ್ಯರ ಸಾಹಸದ ಬಗ್ಗೆ ತಿಳಿದದ್ದು. ಅದುವರೆಗೂ ದೇವಯ್ಯರನ್ನು ‘ಮಿಸ್ಸಿಂಗ್ ಇನ್ ಆಕ್ಷನ್’ (ಕಾರ್ಯಾಚರಣೆಯಲ್ಲಿ ಕಾಣೆಯಾಗಿದ್ದಾರೆ) ಅಂತಲೇ ಸೇನೆಯ ದಾಖಲೆಗಳಲ್ಲಿ ಪರಿಗಣಿಸಲಾಗಿತ್ತು.
ಯಾರಿಗೂ ತಿಳಿದಿರದ ದೇವಯ್ಯರ ಈ ಪರಾಕ್ರಮವನ್ನು ಪಾಕಿಸ್ತಾನದ ವಾಯುಪಡೆಯು ತನ್ನ ಇತಿಹಾಸದಲ್ಲಿ ದಾಖಲಿಸಿತ್ತು. ವಾಯಪಡೆಯ ಸ್ಕ್ವಾಡ್ರನ್ ಲೀಡರ್ ದೇವಯ್ಯರ ಈ ಸಾಹಸವನ್ನು ಗುರುತಿಸಿದ ಭಾರತ ಸರ್ಕಾರ 1988ರಲ್ಲಿ ಅವರಿಗೆ ಎರಡನೆಯ ಅತ್ಯುನ್ನತ ಸೇನಾ ಪ್ರಶಸ್ತಿಯಾದ ‘ಮಹಾವೀರ ಚಕ್ರ’ವನ್ನು ಮರಣೋತ್ತರವಾಗಿ ನೀಡಿ ಗೌರವಿಸಲಾಗಿತ್ತು. ಭಾರತೀಯ ವಾಯು ಪಡೆಯಲ್ಲಿ ಮರಣೋತ್ತರವಾಗಿ ಮಹಾವೀರ ಚಕ್ರ ಪಡೆದೆ ಏಕೈಕ ಅಧಿಕಾರಿ ಎಂದರೆ ಅಜ್ಜಮಾಡ ಬಿ ದೇವಯ್ಯ ಅವರೊಬ್ಬರೇ. ತಾನು ಚಲಾಯಿಸುತ್ತಿದ್ದ ಯುದ್ಧ ವಿಮಾನವು ಎದುರಾಣಿಯ ವಿಮಾನಕ್ಕೆ ಹೋಲಿಸಿದಾಗ ತೀರಾ ಕೆಳ ದರ್ಜೆಯದಾಗಿತ್ತು ಮತ್ತು ತಾನು ಚಲಾಯಿಸುತ್ತಿದ್ದ ವಿಮಾನದಲ್ಲಿ ಇಂಧನದ ಪ್ರಮಾಣವೂ ಕಡಿಮೆ ಇತ್ತು. ತನ್ನ ತಂಡದ ಇತರ ವಿಮಾನಗಳನ್ನು ಶತ್ರು ವಿಮಾನದಿಂದ ಉಳಿಸಬೇಕೆಂದರೆ ಶತ್ರು ವಿಮಾನದ ಜತೆ ಡಾಗ್ ಪೈಟ್ಗೆ ತಾನು ಇಳಿಯಲೇಬೇಕು. ಇದೆಲ್ಲವನ್ನೂ ಸರಿಯಾಗಿ ಅಥರ್Éೈಸಿಕೊಂಡ ದೇವಯ್ಯ, ಯುದ್ಧದಲ್ಲಿ ನಾನು ಸತ್ತರೂ ಪರವಾಗಿಲ್ಲ. ಶತ್ರುವಿನ ಕೈಯಿಂದ ತನ್ನ ದೇಶದ 11 ವಿಮಾನಗಳನ್ನು ಉಳಿಸಲೇಬೇಕು ಎನ್ನುವ ನಿರ್ಧಾರವನ್ನು ಕೈಗೊಂಡು ಶತ್ರು ವಿಮಾನದ ಮೇಲೆ ತನ್ನ ವಿಮಾನವನ್ನು ಅಪ್ಪಳಿಸುವಂತೆ ಮಾಡಿ ಅದರಲ್ಲಿ ಯಶಸ್ವಿಯಾಗಿ ತಾನು ಹುತಾತ್ಮರಾಗಿದ್ದರು.
ಇಂತಹ ಅಪ್ರತಿಮ ವೀರ ಹಾಗೂ ಯುದ್ಧಕಲಿ ಅಜ್ಜಮಾಡ ಬಿ.ದೇವಯ್ಯ ಇವರ ಸಾಹಸವನ್ನು ಗೌರವಿಸಿ ಸದಾ ಸ್ಮರಿಸೋಣ.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160
1 Comment
very nice article