ಹೆಣ್ಣು ಮತ್ತು ಆರೋಗ್ಯ ಭಾಗ –2
ಈ ಎರಡನೇ ಅಂಕಣದಲ್ಲಿ ನಾನು ಗರ್ಭಿಣಿಯ 4,5,6 ನೆ ತಿಂಗಳುಗಳು ಹೇಗಿರುತ್ತದೆ ಏನನ್ನು ನಿರೀಕ್ಷಿಸಬಹುದು, ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಏನು ಅಂತ ತಿಳಿಸಿಕೊಡುತ್ತೇನೆ.
ಇಡೀ ಗರ್ಭಿಣಿ ಅವಧಿಯಲ್ಲೇ ತುಂಬಾ ಸಂತಸದಾಯಕ ಹಾಗೂ ಆರಾಮದಾಯಕ ತಿಂಗಳುಗಳು ಇವು.
1- ಮೊದಲ 3 ತಿಂಗಳು ಅನುಭವಿಸಿದ ವಾಕರಿಕೆ, ವಾಂತಿ,ಸುಸ್ತು, ಸ್ಥನಗಳ ನೋವು, ಊತ ಕಮ್ಮಿಯಾಗುತ್ತದೆ ಇದಕ್ಕೆ ಕಾರಣ ಒಂದು ಹಾರ್ಮೋನ್ ಕಡಿಮೆಯಾಗುವಿಕೆ ಹಾಗೂ ಜನನ ಪ್ರಕ್ರಿಯೆಗೆ ಬೇಕಾದ ಹಾರ್ಮೋನ್ ಜಾಸ್ತಿಯಾಗುವಿಕೆ.
2- ಹಸಿವು ಹೆಚ್ಚಿ, ತಿನ್ನುವ ಬಯಕೆ ಶುರುವಾಗುತ್ತದೆ
ಆರೋಗ್ಯದಾಯಕ ಹಾಗೂ ಪುಷ್ಟಿದಾಯಕ ಆಹಾರ ಸೇವಿಸುವುದು ಅತಿ ಅವಶ್ಯಕ.
3- 12 ವಾರ ಅಂದ್ರೆ 3 ತಿಂಗಳ ಬಳಿಕ ಡಾಕ್ಟರ್ ಬಳಿಗೆ ತಿಂಗಳಿಗೊಮ್ಮೆ ತಪಾಸಣೆಗೆ ಹೋಗಬೇಕು ಆಗ ಆಗುವ ಪರೀಕ್ಷೆಗಳೆಂದರೆ, ರಕ್ತ ಪರೀಕ್ಷೆ – ದೇಹದಲ್ಲಿ ಐರನ್ ಅಂಶ ಎಷ್ಟಿದೆ ಎಂದು ತಿಳಿದುಕೊಳ್ಳುವುದು, ಮೂತ್ರದಲ್ಲಿ ಸಕ್ಕರೆ ಹಾಗೂ albumin ಅಂಶ ಇದೆಯಾ ಅಂತ ತಿಳಿಯುವುದು, ಹಾಗೂ ಮೂತ್ರದಲ್ಲಿ ಸೋಂಕು ಇದೆಯಾ ಎಂದು ತಿಳಿಯುವುದು. ಥೈರಾಯಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಿಸಿಮೊದಲೇ ಇದ್ದರೆ ಅದರ ಮಾತ್ರೆಯನ್ನು ತಪ್ಪದೆ ತೆಗೆದುಕೊಳ್ಳಬೇಕು
4 – ಇದಲ್ಲದೆ ವೈದ್ಯರು ಗರ್ಭಿಣಿಯ ತೂಕ, ರಕ್ತದ ಒತ್ತಡ
ಹಾಗೂ ಮಗುವಿನ ಬೆಳವಣಿಗೆ ಎರಡನ್ನು ರೆಕಾರ್ಡ್ ಮಾಡುತ್ತಾರೆ, ಮಗುವಿನ ಅಂಗಾಂಗಳೆಲ್ಲ ಬೆಳೆದು ಈಗ ಮಗು ಉದ್ದ ಹಾಗೂ ದಪ್ಪ ಎರಡು ಹೆಚ್ಚಾಗುತ್ತದೆ ಇದರ ನಿಯಮಿತ ಪರೀಕ್ಷೆ ಹಾಗೂ ರೆಕಾರ್ಡ್ ಮಾಡುವುದರಿಂದ ಯಾವ ತಿಂಗಳಿನಲ್ಲಿ ಆಗಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ವೈದ್ಯರಿಗೆ ಬೇಗ ತಿಳಿದು ಹೋಗುತ್ತದೆ ಅದರಿಂದ ನಿಯಮಿತವಾಗಿ ವೈದ್ಯರ ಬಳಿಗೆ ಹೋಗುವುದು ಅತಿ ಅವಶ್ಯಕ.
5 – ನಾಲ್ಕನೇ ತಿಂಗಳಿನಿಂದ ಕಬ್ಬಿಣದ ಮಾತ್ರೆ ಹಾಗೂ ಕ್ಯಾಲ್ಸಿಯಂ ಮಾತ್ರೆ ತೆಗೆದು ಕೊಳ್ಳಲು ಹೇಳುತ್ತಾರೆ ದಿನಕ್ಕೆ ಒಂದವರ್ತಿ ತೆಗೆದುಕೊಳ್ಳಬೇಕು ರಕ್ತದ ಒತ್ತಡ ಇದ್ದರೆ ಅದಕ್ಕೆ ಮಾತ್ರೆ ಕೊಡುತ್ತಾರೆ ಮೂತ್ರದಲ್ಲಿ ಸಕ್ಕರೆ ಜಾಸ್ತಿ ಇದ್ದರೆ, ರಕ್ತ ಪರೀಕ್ಷೆ ಮಾಡಿಸಿ,ಸಕ್ಕರೆ ಕಾಯಿಲೆಗೆ ಮಾತ್ರೆ ಕೊಡುತ್ತಾರೆ
ಆಲಬ್ಯುಮಿನ್ ನ ಜಾಸ್ತಿ ಇದ್ದರೆ,ಹೆಚ್ಚಿನ ಪರೀಕ್ಷೆಗೆ ಒಳಪಡಿಸಿ ಹೆಚ್ಚು ಮುತುವರ್ಜಿ ವಹಿಸಲು ಹೇಳುತ್ತಾರೆ ಸೋಂಕೇನಾದರೂ ಇದ್ದರೆ,ಸೋಂಕು ನಿವಾರಕ ಮಾತ್ರೆಗಳನ್ನು ಹೇಳುತ್ತಾರೆ.
6 -ಗರ್ಭಿಣಿಯಾದವರು ಒಂಬತ್ತು ತಿಂಗಳು ವೈದ್ಯರಿಗೆ ತಿಳಿಸದೆ ಯಾವ ಮಾತ್ರೆಯನ್ನು ತೆಗೆದುಕೊಳ್ಳಕೂಡದು ಏನೇ ತೊಂದರೆಯಾದರೂ ವೈದ್ಯರಿಗೆ ತಿಳಿಸಿ ಆಮೇಲೆ ಮಾತ್ರೆ ತೆಗೆದುಕೊಳ್ಳುವುದು ಒಳ್ಳೆಯದು.
7 -ನಾಲ್ಕನೇ ತಿಂಗಳಿನಲ್ಲಿ NT ಸ್ಕ್ಯಾನ್ ಟೆಸ್ಟ್ ಅನ್ನು ಮಾಡಿಸುತ್ತಾರೆ ಅದು ಮಾಡಿಸುವಾಗ ರಕ್ತ ಪರೀಕ್ಷೆಗೂ ಕೊಡಬೇಕು ಇದು ಮಗುವಿನ ಆರೋಗ್ಯವನ್ನು ಸರಿಯಾಗಿ ತಿಳಿಸಿಕೊಡುತ್ತದೆ.
8 – 5ನೇ ತಿಂಗಳಿನಲ್ಲಿ ಜನ್ಮ ಜಾತ ತೊಂದರೆಗಳು(congenital defects )ಇದ್ದರೆ ತಿಳಿದುಕೊಳ್ಳುವಂತ ಸ್ಕ್ಯಾನ್ ಮಾಡಿಸುತ್ತಾರೆ.
ಇವೆಲ್ಲವೂ ಮಗು ಮತ್ತು ತಾಯಿ ಆರೋಗ್ಯವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ನಡೆಸುವಂತಹ ಪರೀಕ್ಷೆಗಳು ಇದನ್ನು ಎಲ್ಲರೂ ಅವಶ್ಯಕವಾಗಿ ಮಾಡಿಕೊಳ್ಳಬೇಕು.
9 -ಕರಳು ಬಳ್ಳಿಯು ಗಟ್ಟಿಗೊಂಡು ಆಹಾರ ಪದಾರ್ಥಗಳನ್ನು ಮಗುವಿಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿರುತ್ತದೆ
ಆದ್ದರಿಂದ ಯಾವ ಗರ್ಭಿಣಿಯಾದರೂ ಮಧ್ಯಪಾನ ಹಾಗೂ ತಂಬಾಕು, ಸಿಗರೇಟ್ ಸೇವನೆ ಮಾಡುತ್ತಿದ್ದರೆ ಕರುಳಬಳ್ಳಿಯ ಮೂಲಕ ಅವೆಲ್ಲ ಮಗುವನ್ನು ಸೇರಿ ತೊಂದರೆ ಉಂಟು ಮಾಡುವ ಸನ್ನಿವೇಶ ಉಂಟಾಗುತ್ತದೆ ಆದ್ದರಿಂದ ಈ ವಿಷಯದಲ್ಲಿ ಗರ್ಭಿಣಿಯರು ಜಾಗೃತೆ ವಹಿಸಿ,ಅವರ ಪರಿಸರ ಹಾಗೂ ಅವರು ಊಟ ಮಾಡುವ ಎಲ್ಲಾ ಪದಾರ್ಥಗಳು ಆರೋಗ್ಯಕರವಾಗಿರುವಂತೆ ನೋಡಿಕೊಳ್ಳಬೇಕು.
10-ಐದನೇ ತಿಂಗಳಿನಲ್ಲಿ ಮಗುವಿನ ಚಲನೆ ಮೊದಲ ಬಾರಿಗೆ ತಿಳಿಯುತ್ತದೆ ಅದಕ್ಕೆ Quickening ಎಂದು ಕರೆಯುತ್ತೇವೆ
ಇದು ತಂದೆ ತಾಯಿಯರಿಗೆ ಅತ್ಯಂತ ಸಂತಸದಾಯಕವಾದ ವಿಷಯ ಮತ್ತೆ ತಿಂಗಳು ಕಳೆದಂತೆ ಈ ಚಲನೆಯನ್ನು ಗಮನದಲ್ಲಿ ಇಡುವುದು ತಾಯಿಯ ಕರ್ತವ್ಯ ವ್ಯತ್ಯಾಸ ಕಂಡು ಬಂದರೆ ತಕ್ಷಣ ವೈದ್ಯರ ಸಂಪರ್ಕವನ್ನು ಮಾಡಬೇಕು.
11- ಒಳ್ಳೆಯ ಆಹಾರ, ಸದ್ವಿಚಾರ ಚಿಂತನೆ, ಒಳ್ಳೆಯ ಸಂಗೀತ ಪುಸ್ತಕ ಓದುವುದು, ಆದಷ್ಟು ಆರಾಮವಾಗಿ ಇರುವುದರಿಂದ ತಾಯ್ತನದ ಸಂತೋಷ ಇಮ್ಮಡಿಸುತ್ತದೆ ಮಗುವು ಆರೋಗ್ಯವಾಗಿ ಬೆಳೆಯುತ್ತದೆ.
12- ಎಲ್ಲಿಗಾದರೂ ಪ್ರಯಾಣ, ಪ್ರವಾಸ ಮಾಡುವುದಿದ್ದರೆ ವೈದ್ಯರನ್ನು ಕೇಳಿ ಮಾಡುವುದು ಒಳ್ಳೆಯದು
ಪ್ರತಿ ಗರ್ಭವು ಬೇರೆ ಬೇರೆ ರೀತಿಯಾದಾಗಿರುತ್ತದೆ
ಯಾವುದೇ ಒತ್ತಡ ಹಾಗೂ ಕಷ್ಟಕರವಾದ ಪ್ರಯಾಣ ಮಾಡದೇ ಇರುವುದು ಒಳ್ಳೆಯದು.
ಡಾ ರುಕ್ಮಿಣಿ ವ್ಯಾಸರಾಜ
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು