ಹೆಣ್ಣು ಮತ್ತು ಆರೋಗ್ಯ -4
ಈ ಒಂಬತ್ತು ತಿಂಗಳಲ್ಲಿ ಸಾಮಾನ್ಯವಾಗಿ ಗರ್ಭಿಣಿಯರಿಗೆ ದೇಹಸ್ಥಿತಿ ಹೇಗಿರುತ್ತದೆ ಎಂಬುದನ್ನು ಇದುವರೆಗೂ ನಾನು ಹೇಳಿದ್ದೇನೆ. ಆಗ ಆಗುವ ಸಾಮಾನ್ಯ ತೊಂದರೆಗಳು ಅದಕ್ಕೆ ಸಾಮಾನ್ಯ ಪರಿಹಾರಗಳನ್ನು ಹೇಳಿದ್ದೇನೆ.
ಇನ್ನು ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಖಂಡಿತ ಮಾಡಿಕೊಳ್ಳಬೇಕಾಗುತ್ತದೆ ಅದರ ಬಗ್ಗೆ ಮೊದಲು ಹೇಳಿ ನಂತರ ಏನು ಮಾಡುವುದರಿಂದ ಗರ್ಭವತಿ ಹಾಗೂ ಗರ್ಭದಲ್ಲಿರುವ ಶಿಶುವಿಗೆ ಒಳ್ಳೆಯದಾಗುತ್ತದೆ ಎಂದು ತಿಳಿಸಿಕೊಡುತ್ತೇನೆ.
ಆಹಾರದ ವಿಷಯಕ್ಕೆ ಬಂದರೆ ಒಂಬತ್ತು ತಿಂಗಳು ಕೂಡ ಗರ್ಭಿಣಿ ಎಲ್ಲಾ ಪೋಷಕಾಂಶಗಳು ಇರುವಂತ ಸತ್ವಯುತವಾದ ಆಹಾರವನ್ನು ಸ್ವೀಕರಿಸುವುದು ಅತಿ ಅವಶ್ಯಕ. ಮಗುವಿಗೆ ಬೆಳೆಯಲು ಸಹಕಾರಿಯಾಗುವಂತ ಪ್ರೋಟೀನ್ ಅಂಶ ಹಾಗೂ ಕ್ಯಾಲ್ಸಿಯಂ ಇರುವಂತಹ ಆಹಾರವನ್ನು ಹೆಚ್ಚು ಸೇವಿಸುವುದು ಒಳ್ಳೆಯದು.
ಜೊತೆಗೆ ರಾತ್ರಿ ಮಲಗುವಾಗ ಬಿಸಿ ಹಾಲನ್ನು ಕುಡಿದರೆ ಸರಾಗವಾಗಿ ನಿದ್ದೆ ಬರುತ್ತದೆ. ಗರ್ಭಿಣಿಗೆ ಹಾಲಿನಲ್ಲಿ ಕೇಸರಿಯನ್ನು ಹಾಕಿ ಕೊಡುತ್ತಾರೆ. ಇದರ ಪ್ರಮಾಣ ಮಿತವಾಗಿದ್ದರೆ ಏನು ತೊಂದರೆ ಇಲ್ಲ.
ಉಷ್ಣಾಂಶ ಇರುವಂತ ಪದಾರ್ಥವಾದ್ದರಿಂದ ಹೆಚ್ಚು ಸೇವನೆ ಒಳ್ಳೆಯದಲ್ಲ ಅಥವಾ ಐದನೇ ತಿಂಗಳಿಗಿಂತ ಮುಂಚೆ ಇದನ್ನು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಸಕ್ಕರೆ ಮತ್ತು ಜಿಡ್ಡಿನ ಅಂಶ ಜಾಸ್ತಿ ತೆಗೆದುಕೊಳ್ಳದಿದ್ದರೆ ಒಳ್ಳೆಯದು.
9 ತಿಂಗಳಲ್ಲಿ ಗರ್ಭಿಣಿಗೆ 9 ರಿಂದ 15 ಕೆಜಿ ತೂಕ ಜಾಸ್ತಿ ಆಗುತ್ತದೆ. ಆದ್ದರಿಂದ ಜಿಡ್ಡು ಮತ್ತು ಸಕ್ಕರೆ ಅಂಶವನ್ನು ಅಲ್ಪವಾಗಿ ಸೇವಿಸಬೇಕು. ಇನ್ನು ಸಾಮಾನ್ಯ ತೊಂದರೆಗಳು ಜ್ವರ ಅಥವಾ ವಾಂತಿ ಭೇದಿ ಹೊಟ್ಟೆ ನೋವು ಕೈ ಕಾಲು ಎಳೆತ ಕಾಲು ಊದುವಿಕೆ ಇಂತಹ ತೊಂದರೆಗಳು ಬಂದಾಗ ಸ್ವತಃ ಮಾತ್ರೆಯನ್ನು ತೆಗೆದುಕೊಳ್ಳದೆ ವೈದ್ಯರ ಬಳಿಗೆ ತೋರಿಸಬೇಕು ಕೆಲಮಟ್ಟಿಗೆ ಮನೆಮದ್ದುಗಳು ಸಹಾಯವಾಗುತ್ತದೆ. ಬೇಧಿ ಆದಾಗ ನೀರು ಹೆಚ್ಚಾಗಿ ತೆಗೆದುಕೊಂಡು, ಮೊಸರು ಮೆಂತ್ಯ ತಿನ್ನುವುದು, ಸ್ವಲ್ಪ ಕೆಮ್ಮು ಆದಾಗ, ಗಂಟಲು ಕೆರೆದಾಗ, ತುಳಸಿ ನೀರು, ಹರಿಶಿಣದ ಹಾಲು ಇವುಗಳನ್ನು ಬಳಸುವುದು, ಕಾಲು ನೋವು, ಮೈ ಭಾರವಾದಾಗ ಚೆನ್ನಾಗಿ ನೀವಿಸಿಕೊಂಡು ಬಿಸಿ ಬಿಸಿ ನೀರಿನಿಂದ ಅಭ್ಯಂಜನ ಮಾಡುವುದು.
ಮಧ್ಯಾನ್ಹ ಅರ್ಧ ಗಂಟೆ ಮಲಗುವುದು, ಮಜ್ಜಿಗೆ ಬಳಕೆ ಮಾಡುವುದು, ಸುಸ್ತಾದಾಗ ನಿಂಬೆಹಣ್ಣಿನ ರಸ ತೆಗೆದುಕೊಳ್ಳುವುದು, ಜೀರಿಗೆ ನೀರು ಕುಡಿಯುವುದು, ಬೆನ್ನಿಗೆ ಎಣ್ಣೆ ಹಚ್ಚಿಸಿಕೊಳ್ಳುವುದು
ಗರ್ಭಿಣಿಯರಿಗೆ ಎಂದು ಇರುವಂತಹ ಯೋಗವನ್ನು, ಆಸನಗಳನ್ನು ತಿಳಿದವರಿಂದ ಕಲಿತು ಕೇಳಿ ಮಾಡುವುದು
ದಿನನಿತ್ಯ ನಡಿಗೆಯನ್ನು ಅಭ್ಯಾಸ ಮಾಡಿಕೊಳ್ಳುವುದು, ಗರ್ಭಿಣಿಯರಿಗೆ ಎಂದು ಇರುವಂತಹ ಎಕ್ಸರ್ಸೈಜ್ ಗಳನ್ನು ಮಾಡುವುದು, ಮೆಲುವಾದ ಸಂಗೀತ ಕೇಳುವುದು, ದೇವರ ನಾಮಗಳನ್ನು ಹಾಡಿಕೊಳ್ಳುವುದು
ಆದಷ್ಟು ಆತಂಕವಿಲ್ಲದೆ ಇರುವುದು, ತಾಯಿಯ ದೇಹ ಸ್ಥಿತಿ ಉತ್ತಮವಾಗಿದ್ದರೆ, ಅದು ಮಗುವಿನ ಬೆಳವಣಿಗೆಗೂ ಪೂರಕವಾಗಿರುತ್ತದೆ.
ಕೆಲವೊಮ್ಮೆ ಮಗುವಿನ ಚಲನವಲನಗಳು ಗೊತ್ತಾಗದೆ ಹೋಗಬಹುದು ಆಗ ಗಾಬರಿಗೊಳ್ಳದೆ ಒಂದು ಲೋಟ ಸಕ್ಕರೆ ನೀರು ಕುಡಿದು ಜೊತೆಗೆ ಒಂದು ಗಂಟೆಯನ್ನು ಹೊಟ್ಟೆಯ ಪಕ್ಕದಲ್ಲಿ ಅಲ್ಲಾಡಿಸಿದಾಗ ಮಗುವಿನ ಚಲನ ವಲನಗಳು ಶುರುವಾಗುತ್ತದೆ ಹಾಗೂ ಆಗದಿದ್ದರೆ ವೈದ್ಯರನ್ನ ಖಂಡಿತ ಸಂಪರ್ಕಿಸಬೇಕು.
Eclampsia ಎನ್ನುವುದು ಗರ್ಭಿಣಿ ಸ್ತ್ರೀಯರಿಗೆ ಬರಬಹುದಾದಂತ ಒಂದು ಕಾಯಿಲೆ ಇದರಲ್ಲಿ ಬಿಪಿ ಹೆಚ್ಚಾಗಿದ್ದು,ದೇಹದ ತೂಕ ಹೆಚ್ಚಾಗಿದ್ದು, ಅಲ್ಬಿಮಿನ್ ಅಂಶ ಮೂತ್ರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ
ಈ ಪರಿಸ್ಥಿತಿ ಮುಂದುವರೆದರೆ ತಹ ಬದಿಗೆ ಬರದಿದ್ದರೆ ಮಗುವಿನ ಪ್ರಸವದ ವೇಳೆಯಲ್ಲಿ ಮೂರ್ಛೆ ರೋಗ ಫಿಟ್ಸ್ ಬರುವ ಸಾಧ್ಯತೆ ಹೆಚ್ಚು. ಅದರಿಂದ ಮಗುವಿಗೆ ಅಪಾಯ ಅದಕ್ಕೆ ಆದಷ್ಟು ಜಾಗ್ರತೆವಹಿಸಿ ನೋಡಿಕೊಳ್ಳುವುದು ಉತ್ತಮ.
ಪದೇ ಪದೇ ಗರ್ಭಪಾತವಾಗುತ್ತಿರುವ ಗರ್ಭಿಣಿ ಸ್ತ್ರೀಯರಿಗೆ 5ನೇ ತಿಂಗಳಲ್ಲಿ ಸರ್ವೈಯ್ಕಲ್ ಸ್ಟಿಚ್ ಎಂದು ಹಾಕಿ ಗರ್ಭಪಾತವನ್ನು ತಡೆಯುತ್ತಾರೆ. ಮಗುವಿನ ಜನನದ ವೇಳೆ ಈ ಸ್ಟೇಜನ್ನು ಬಿಚ್ಚಿ ಪ್ರಸವವಾಗುವಂತೆ ನೋಡಿಕೊಳ್ಳುತ್ತಾರೆ ಅಗತ್ಯವಿರುವವರು ಇದನ್ನು ಮಾಡಿಸಬೇಕು
ಸಕ್ಕರೆ ಕಾಯಿಲೆ ಹೆಚ್ಚಾದಾಗ ಮಗು ತೀರ ದಪ್ಪವಾಗುತ್ತದೆ ಆಗ ಪ್ರಸವ ಸುಲಭವಾಗದೆ ಸಿಜೆರೇನ್ ಆಗುವ ಚಾನ್ಸಸ್ ಹೆಚ್ಚು ಆದ ಕಾರಣ ಸಕ್ಕರೆ ಕಾಯಿಲೆ ಬರೆದಂತೆ ಅಥವಾ ಬಂದರೆ ಸರಿಯಾದ ಮಾತ್ರೆಗಳಿಂದ ಅದು ಕಮ್ಮಿ ಇರುವಂತೆ ನೋಡಿಕೊಳ್ಳಬೇಕು. ತಾಯಿಯಲ್ಲಿ ಕಬ್ಬಿಣದ ಅಂಶ ಕಮ್ಮಿಯಾದರೆ, ಮಗುವಿನ ಬೆಳವಣಿಗೆ ಕುಂಠಿತವಾಗುತ್ತದೆ ಆದ್ದರಿಂದ ಮೂರು ತಿಂಗಳಾದ ಮೇಲೆ ದಿನವೂ ಕಬ್ಬಿಣದ ಮಾತ್ರೆಯನ್ನು ತೆಗೆದುಕೊಳ್ಳಬೇಕಾದುದು ಅತ್ಯವಶ್ಯಕ. ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಂಡ ತಾಯಿಗೆ ಆರೋಗ್ಯವಂತವಾದ ಮಗು ಹಾಗೂ ಸುಲಭವಾದ ಪ್ರಸವ ಆಗುವುದರಲ್ಲಿ ಸಂಶಯವಿಲ್ಲ.
ಡಾ. ರುಕ್ಮಿಣಿ ವ್ಯಾಸರಾಜ🩺
ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು