ಹೆಣ್ಣು ಮತ್ತು ಆರೋಗ್ಯ – 6
ಪ್ರಸವ ಹಾಗೂ ಅದರ ತಯಾರಿ
ಈ ಸಂಚಿಕೆಯಲ್ಲಿ ಇಷ್ಟು ದಿನದಿಂದ, ಜತನದಿಂದ, ಕಾಯ್ದು, ಪ್ರಸವ ಆಗುವ ಸಮಯ ಬಂದಾಗ ಏನು ತಯಾರಿ ಮಾಡಿಕೊಳ್ಳಬೇಕು ಎಂದು ತಿಳಿಸುತ್ತೇನೆ.
1- ಪ್ರಸವ ಆಗುವುದು ಎಲ್ಲಿ ಎಂಬುದು ಮೊದಲೇ ನಿರ್ಧಾರವಾಗಿರುತ್ತದೆ. ಪ್ರಸೂತಿ ತಜ್ಞರ ಮೊಬೈಲ್ ಹಾಗೂ ರೆಸಿಡೆನ್ಸ್ ನಂಬರನ್ನು ಸಿದ್ಧವಾಗಿರಿಕೊಳ್ಳಬೇಕು. ಯಾರ್ಯಾರಿಗೆ ವಿಷಯ ತಿಳಿಸಬೇಕು ಆ ನಂಬರಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು.
ಎಲ್ಲ ತಯಾರಿ 15 ದಿನದ ಮೊದಲೇ ಮಾಡಿಕೊಳ್ಳುವುದು ಉತ್ತಮ.
2- ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ಬ್ಯಾಗ್ ಅನ್ನು ಸಿದ್ಧಪಡಿಸಿಕೊಳ್ಳಬೇಕು. ಅದರಲ್ಲಿ ಎರಡು ದಿನಕ್ಕೆ ಆಗುವಷ್ಟು ತಾಯಿಗೆ ಬಟ್ಟೆ, ಮಗು ಹುಟ್ಟಿದಾಗ ಅದಕ್ಕೆ ಸುತ್ತಲು ಬಟ್ಟೆ, ಟವಲ್ಗಳು. ಮಗುವಿಗೆ ಬೇಕಾಗುವ ಸಾಬೂನು ಹಾಗೂ ಪೌಡರ್ಗಳು. ಸ್ವೆಟ್ಟರು, ತಾಯಿ ದಿನವು ತೆಗೆದುಕೊಳ್ಳಬೇಕಾದ ಮಾತ್ರೆಗಳು.ತಾಯಿಗೂ ಮಗುವಿಗೂ ಬೆಚ್ಚಿಗಿರುವ ಬಟ್ಟೆ, ಸಾಕ್ಸ್, ವಾಪಸ್ಸು ಮನೆಗೆ ಹೋಗಲು ಬಟ್ಟೆ ಇವೆಲ್ಲವನ್ನು ಸಿದ್ಧಪಡಿಸಿಕೊಳ್ಳಬೇಕು.
3- ಮಗುವು ಮನೆಗೆ ಬಂದಾಗ ಇರಬೇಕಾದ ಸ್ಥಳ ಅದಕ್ಕೆ ಬೇಕಾಗುವ ಅನುಕೂಲತೆಗಳನ್ನು ಮೊದಲೇ ನೋಡಿಕೊಂಡು ಶುಚಿಯಾಗಿಟ್ಟುಕೊಳ್ಳುವುದು ಉತ್ತಮ ಈಗ ಹೆಚ್ಚಿನ ಸಂಸಾರಗಳಲ್ಲಿ ಗಂಡ ಹೆಂಡತಿ ಮಾತ್ರವೇ ಇರುವುದರಿಂದ ಮೊದಲೇ ತಯಾರಿ ಮಾಡಿಕೊಳ್ಳುವುದು ಅನುಕೂಲವಾಗುತ್ತದೆ. ಮಗುವಿಗೆ ಅಕ್ಕ ಅಣ್ಣ ಇದ್ದರೆ ಅವರಿಗೆ ಮೊದಲೇ ತಿಳಿಸಿ ಅವರನ್ನು ಮಾನಸಿಕವಾಗಿ ಸಿದ್ಧಪಡಿಸುವುದು ಅನುಕೂಲಕರ.
4- ನೋವು ಶುರುವಾದಾಗ ಕೆಲವು ಸಲ ಫಾಲ್ಸ್ ಪೇನ್ ನಿಂದ ಬಂದಿರುತ್ತದೆ ನಿಜವಾದ ಪ್ರಸವದ ನೋವು ಬೇಗ ಬೇಗ ಹಾಗೂ ಕಾಲ ಸರಿದಂತೆ ನೋವಿನ ಪ್ರಮಾಣ ಜಾಸ್ತಿ ಆಗುತ್ತದೆ, 20 ನಿಮಿಷಕ್ಕೊಮ್ಮೆ ನೋವು ಬರಲು ಶುರುವಾಗಿ ಹೊಟ್ಟೆಯು ಚಂಡಿನಂತೆ ಗಟ್ಟಿಯಾದಾಗ ಅದು ನಿಜವಾದ ಪ್ರಸವನೋವು ಎಂದು ತಿಳಿಯಬೇಕು.
5- ಗಾಬರಿ ಪಟ್ಟುಕೊಳ್ಳದೆ ಸಮಾಧಾನದಿಂದ ಆಸ್ಪತ್ರೆಗೆ ಅಡ್ಮಿಟ್ ಆಗಿ ನಿಮ್ಮ ಡಾಕ್ಟರನ್ನು ಕರೆಸಿಕೊಳ್ಳಿ. ಬಸರಿಯಾದಾಗ ಹೇಳಿಕೊಟ್ಟಿರುವ ನೋವಿನ ಎಕ್ಸರ್ಸೈಜ್ ಅನ್ನು ಮಾಡಬಹುದು.
6- ಗರ್ಭಚೀಲದ ನೀರು ಒಡೆದಾಗ, ರಕ್ತಸ್ರಾವವಾದಾಗ ಪ್ರಸವಕಾಲ ಹತ್ತಿರವಾಗಿದೆ ಎಂದು ಅರ್ಥ ಡಾಕ್ಟರ್, ದಾದಿಯರು ಹೇಳಿದಂತೆ ಕೇಳಿದರೆ ಹೆರಿಗೆ ಸುಲಭವಾಗಿ ಆಗುತ್ತದೆ.
7- ಮಗುವಿನ ಚಲನವಲನ ಹಾಗೂ ಹೃದಯದ ಬಡಿತ ನೋಡಲು ಒಂದು ಮಾನಿಟರ್ ಅನ್ನು ಫಿಕ್ಸ್ ಮಾಡಿರುತ್ತಾರೆ ಅದರ ಮೂಲಕ ಮಗುವಿನ ಸ್ಥಿತಿಗತಿಗಳು ಚೆನ್ನಾಗಿ ಅರಿವಾಗುತ್ತದೆ. ಸರ್ವಿಕ್ಸ್ ಎಷ್ಟು ಅಗಲವಾಗಿದೆ, ಹಾಗೂ ನೋವು ಎಷ್ಟು ಸಮಯದಲ್ಲಿ ಬರುತ್ತಿದೆ ಎನ್ನುವುದರಿಂದ ಪ್ರಸವ ಯಾವಾಗ ಆಗುತ್ತದೆ ಎಂಬುದು ತಿಳಿಯುತ್ತದೆ.
8- ನಾರ್ಮಲ್ ಡೆಲಿವರಿ ಗರ್ಭಚೀಲದ ನೀರು ಒಡೆದ 6-7 ಗಂಟೆಯೊಳಗೆ ಆಗುತ್ತದೆ. ಮೊದಲ ಹೆರಿಗೆಯಾದರೆ 12 -14 ಗಂಟೆಯೂ ತೆಗೆದುಕೊಳ್ಳಬಹುದು ಎರಡು ಅಥವಾ ಮೂರನೇ ಪ್ರಸವವಾದರೆ 2-5 ಗಂಟೆ ಒಳಗು ಮುಗಿದು ಹೋಗಬಹುದು.
9- ಸ್ಟೆಮ್ ಸೆಲ್ ಬ್ಯಾಂಕಿಂಗ್ – Stem cell banking
ಇದು ಮಗುವು ಹುಟ್ಟಿದ ತಕ್ಷಣ ಅದರ stem cells ಗಳನ್ನು ಶೇಖರಿಸಿ ಅದಕ್ಕಾಗೆ ಇರುವ ಒಂದು ಬ್ಯಾಂಕ್ ನಲ್ಲಿ ರಕ್ಷಿಸಿಡುವ ವಿಧಾನ ಇದಕ್ಕೆ ಮೊದಲೇ ನಿಮ್ಮ ವೈದ್ಯರ ಹತ್ರ ಮಾತನಾಡಿ ಹಣ ಪಾವತಿ ಮಾಡಿದ್ದರೆ ಅವರು ಕಾಪಿಡುತ್ತಾರೆ, ಈ stem cell ಇಂದ ಮಗುವಿಗೂ ಅದರ ಸಹೋದರ,ಸಹೋದರಿಯರಿಗೂ ಮುಂದೆ ಬರುವ ಎಷ್ಟೋ ಖಾಯಿಲೆಗಳನ್ನು ಸರಿಪಡಿಸಲು ಉಪಯೋಗವಾಗುತ್ತದೆ, ಇದಕ್ಕಾಗಿ ಮಗುವಿನ ಹೊಕ್ಕುಳ ಬಳ್ಳಿಯಿಂದ ರಕ್ತ ಶೇಖರಿಸುತ್ತಾರೆ.
ಮಗು ಹುಟ್ಟಿದ ಮೇಲೆ ತಾಯಿ ಹಾಗೂ ಮಗುವಿನ ಆರೋಗ್ಯ ಹಾಗೂ ಉಪಚಾರದ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಹೇಳುತ್ತೇನೆ.
ಡಾ. ರುಕ್ಮಿಣಿ ವ್ಯಾಸರಾಜ