ಅದೃಷ್ಟದ ಆಟ-1
ಪರಿಚ್ಛೇದ – 1
ಮೋಂಗನ ವಿಲಾಪ
ಕತೆ ಹೇಳುತ್ತಿರುವವನು ‘ಮೋಂಗ್’. ಅವನೊಬ್ಬ ಮುದಿಯ ಹೂಣ ಸೈನಿಕ.
ನಿರ್ಜನವಾದ ಕಾಡುದಾರಿ. ಪಕ್ಕದಲ್ಲಿ ಒಂದು ಅರವಂಟಿಗೆ. ಇದರ ಒಡತಿ ಸುಗೋಪಾ, ಮೋಂಗನ ಪಕ್ಕದಲ್ಲಿ, ಕೆನ್ನೆಯ ಮೇಲೆ ಕೈಗಳನ್ನಿಟ್ಟು ಕತೆ ಕೇಳುತ್ತಿದ್ದಾಳೆ. ಎಲ್ಲಿ ನೋಡಿದರೂ ಕಾಡುಗಲ್ಲು, ಕಗ್ಗಲ್ಲು. ನೆಲ ಸಮನಾಗಿಲ್ಲ. ಇದರ ಮೇಲೆ ದೇವದಾರಿ, ಅರಳಿ, ಹಿಪ್ಪೆ ಮೊದಲಾದ ಮರಗಳಿರುವ ದಟ್ಟವಾದ ಕಾಡು ಬೇರೆ. ಅರವಂಟಿಗೆಯ ಅಕ್ಕಪಕ್ಕದಲ್ಲಿ ಕಾಡು ಅಷ್ಟು ಒತ್ತಾಗಿಲ್ಲ. ದೂರ ಹೋದಂತೆಲ್ಲ ಅದರ ನಿಬಿಡತೆ ಹೆಚ್ಚುತ್ತಾ ಹೋಗುತ್ತದೆ. ಪೊರೆಬಂದ ಹೆಬ್ಬಾವು ನಿದ್ರಿಸುತ್ತಿರುವಂತೆ ಅಲೆಯಲೆಯಾದ ಬೆಟ್ಟಗಳ ಸಾಲು. ಬೇಸಿಗೆಯ ಬಿಸಿಲು ಎಲ್ಲರಿಗೂ ಆಲಸ್ಯವನ್ನು ತಂದೊಡ್ಡಿದೆ. ಹಿಪ್ಪೆಯ ಸುವಾಸನೆಯನ್ನು ಹೊತ್ತ ಗಾಳಿಯೂ ಬೆಚ್ಚಗಾಗಿ ಮೆಲ್ಲಮೆಲ್ಲನೆ ಬೀಸುತ್ತಿದೆ. ಕಾಡಿನ ನಡುವೆ ತಿರುವು- ಮುರುವುಗಳಿಂದ ಕೂಡಿದ ಒಂದು ಸಣ್ಣ ದಾರಿ. ದೂರ ಹೋಗುತ್ತಾ ಹೋಗುತ್ತಾ ಕಣ್ಣಿಗೆ ಕಾಣಿಸದಷ್ಟು ಸಣ್ಣದಾಗಿ ಕಾಡಿನಲ್ಲಿ ಮರೆಯಾಗಿದೆ. ನಡುಹಗಲು. ದಾರಿ ನಿರ್ಜನವಾಗಿದೆ. ಈ ಪರ್ವತ ಪ್ರಾಂತ್ಯದ ಮುಖ್ಯಪಟ್ಟಣ ‘ಕಪೋತಕೂಟ’ ಇಲ್ಲಿಂದ ಸುಮಾರು ಒಂದೆರಡು ಹರಿದಾರಿಯ ದೂರದಲ್ಲಿ ದಕ್ಷಿಣ ದಿಕ್ಕಿಗಿದೆ. ದಾರಿಯ ಪಕ್ಕದಲ್ಲಿ ಎರಡು ಎತ್ತರವಾದ ದೇವದಾರು ವೃಕ್ಷಗಳು. ಒತ್ತಾಗಿ ಬೆಳೆದಿವೆ. ಅದರ ನೆರಳಿನಲ್ಲಿಯೇ ಕಲ್ಲುಗಳಿಂದ ಕಟ್ಟಿದ ಅರವಂಟಿಗೆ. ದೇವದಾರು ಮರದ ಒಂದು ಬುಡದ ಮೇಲೆ ಮೋಂಗ್ ಕುಳಿತಿದ್ದಾನೆ. ಕೈಗಳು ಮಂಡಿಗಳನ್ನು ಬಳಸಿವೆ. ತನ್ನ ಹಿಂದಿನ ಕತೆ ಹೇಳುವುದೆಂದರೆ ಮೋಂಗನಿಗೆ ಎಲ್ಲಿಲ್ಲದ ಉತ್ಸಾಹ.
ಮಹಾರಾಜಾಧಿರಾಜ- ಪರಮ ಭಟ್ಟಾರಕ- ಮಗಧೇಶ್ವರ-ಸ್ಕಂದಗುಪ್ತನ ಶೋಡಷ ರಾಜ್ಯಗಳಲ್ಲಿ ವಾಯುವ್ಯ ಪ್ರದೇಶದ ಒಂದು ಪುಟ್ಟರಾಜ್ಯ ‘ವಿಟಂಕ’. ಅದರ ರಾಜಧಾನಿ ‘ಕಪೋತಕೂಟ’. ರಾಜಧಾನಿಗೆ ಸಮೀಪದಲ್ಲಿಯೇ ಈ ಅರವಂಟಿಗೆ ಇರುವುದು.
ಮೋಂಗ್ ತನ್ನ ಬಾಳಿನಲ್ಲಿ ಅನುಭವಿಸಿದ ಕಷ್ಟಸುಖಗಳನ್ನು ವರ್ಣಿಸಿ ಹೇಳುವುದರಲ್ಲಿ ಬಲುಗಟ್ಟಿಗ. ಅವನ ಅಂದಿನ ಆ ಯುದ್ಧ- ಜೀವನವೆಲ್ಲ ಮುಗಿದಿದೆ. ದೇಹದಲ್ಲಿ ಶಕ್ತಿ ಇನ್ನಿಲ್ಲ.ಇಪ್ಪತ್ತೈದು ವರ್ಷಗಳ ಹಿಂದೆ ವೀರಾವೇಶದಿಂದ ಈ ದೇಶದಲ್ಲಿ ಕಾಲಿಟ್ಟಿದ್ದನು. ಆಗ ಅವನ ಕೈಯಲ್ಲಿ ಬಿಚ್ಚುಗತ್ತಿ ಹೊಳೆಯುತ್ತಿತ್ತು. ಓ…! ಅದನ್ನು ನೆನೆದರೆ ಮೋಂಗನ ಮೈಯಲ್ಲಿ ನವಿರೇಳುವುದು! ಮುಪ್ಪಡಸಿದ ಮೋಂಗ್ ಹೂಣಜಾತಿಯ ಘನತೆ-ಗೌರವಗಳ ಕನಸು ಕಾಣುತ್ತಾನೆ- ಉತ್ತರ ಮೇರುವಾಸಿಗಳು ಸುದೀರ್ಘ ರಾತ್ರಿಯಲ್ಲಿ ಚಳಿಯನ್ನು ತಡೆಯಲಾರದೆ ಬೆಂಕಿ ಹೊತ್ತಿಸಿಕೊಂಡು ಸೂರ್ಯದೇವನ ಸ್ವಪ್ನಕಾಣುವಂತೆ! ಅವನದು ಕುಳ್ಳಾದ ದೇಹ. ಮಾಂಸಖಂಡಗಳು ಕ್ಷೀಣವಾಗಿ ಮೈಮೇಲಿನ ಚರ್ಮ ಸುಕ್ಕಾಗಿದೆ. ಉಬ್ಬಿದ ಕೆನ್ನೆಗಳು, ಹುಬ್ಬಿನ ಮೂಳೆಯ ಮೇಲೆ ಅಲ್ಲೊಂದು
ಇಲ್ಲೊಂದು ಇರುವ ಬಿಳಿಯ ಕುರುಚಲು ಕೂದಲುಗಳು ಬುರುಡೆಯ ಆಕಾರವನ್ನು ಎತ್ತಿ ತೋರಿಸುತ್ತಿವೆ. ಅವನ ಗಟ್ಟಿಮುಟ್ಟಾದ ಮೈಕಟ್ಟು, ಹರವಾದ ಎದೆ ಇವುಗಳನ್ನು ನೋಡಿದರೆ ಮೋಂಗ್ ಒಂದು ಕಾಲಕ್ಕೆ ಬಹಳ ಬಲಿಷ್ಠನಾಗಿದ್ದನೆಂದು ಯಾರು ಬೇಕಾದರೂ ಊಹಿಸಬಹುದು. ಮೋಂಗನ ಕಂಠಧ್ವನಿ ಶ್ರುತಿಮಧುರವಲ್ಲ. ಸಾಮಾನ್ಯವಾಗಿ ಹೂಣ ಜಾತಿಯ ಕಂಠಧ್ವನಿಯೇ ಹಾಗೆ. ಮೋಂಗ್ ಕತೆ ಹೇಳಲು ಮೊದಲು ಮಾಡಿದರೆ, ತುಂಬಿದ ಎತ್ತಿನ ಗಾಡಿಯೊಂದರ ಎಣ್ಣೆ ಸೋಕದ ಚಕ್ರಗಳು ‘ಕರಕರ’ ಶಬ್ದ ಮಾಡುತ್ತಿವೆಯೋ ಎಂಬಂತೆ ಭಾಸವಾಗುತ್ತದೆ. ನಗರದ ಪಾನಶಾಲೆಗಳಲ್ಲಿ ಮೋಂಗ್ ಕತೆ ಪ್ರಾರಂಭಿಸಿದನೆಂದರೆ ಕೇಳುಗರು ಎದ್ದು ಬೇರೆಡೆಗೆ ಹೊರಟು ಹೋಗುವರು. ಆದರೂ ಕೂಡ ಮೋಂಗ್ ನಿರಾಶನಾಗುವವನಲ್ಲ. ಹೇಗೋ ಎಂತೋ ಒಬ್ಬನನ್ನಾದರೂ ಹಿಡಿದು ಕೂಡಿಸಿಕೊಂಡು ತನ್ನ ಹಿಂದಿನ ಕತೆಯನ್ನು ಪ್ರಾರಂಭಿಸುವನು.
ಈಗ ಮೋಂಗನ ಕತೆ ಕೇಳಲು ಒಬ್ಬಳು ಸಿಕ್ಕಿದ್ದಾಳೆ. ಅವಳೇ ಸುಗೋಪಾ. ಬಂಗಾರದ ಮೈ ಬಣ್ಣ, ಇಪ್ಪತ್ತೈದು ವರ್ಷ ವಯಸ್ಸಿನ ತರುಣಿ, ಆದರೆ ನೋಡುವುದಕ್ಕೆ ಇಪ್ಪತ್ತು ವರ್ಷದವಳಂತೆ ಕಾಣುತ್ತಾಳೆ. ತುಟಿಗಳಲ್ಲಿ ಚಂಚಲತೆ, ಕಣ್ಣುಗಳು ನೀಲಮೇಘದಂತೆ ಸ್ನಿಗ್ಧ, ಸರಸ, ಅವಳು ಕಪೋತಕೂಟದ ರಾಜೋದ್ಯಾನದ ಹೂವಾಡಿಗನ ಹೆಂಡತಿ. ಅವಳ ಕೈಯಲ್ಲಿನ ಹೂಮಾಲೆ
ಇಲ್ಲವೆಂದರೆ ರಾಜಕುಮಾರಿ…
ಮೋಂಗ್ ಹಲ್ಲುಜ್ಜುವ ಕಡ್ಡಿಯನ್ನು ಹುಡುಕುತ್ತ ಸಾಮಾನ್ಯವಾಗಿ ಈ ಅರವಂಟಿಗೆಯವರೆಗೂ ಬರುವುದುಂಟು. ಅದು ಬೇರೆ ಕಡೆ ಸಿಗುತ್ತಿರಲಿಲ್ಲ. ಹೀಗೆ ಬಂದವನು ಒಂದೆರಡು ಗಂಟೆ ಹೊತ್ತು ಸುಗೋಪಾಳ ಬಳಿ ಕುಳಿತು ತನಗೆ ಪ್ರಿಯವಾದ ಕತೆಯನ್ನು ಹೇಳುವನು. ಸುಗೋಪಾ ಕೂಡ ಬೇಡವೆನ್ನುತ್ತಿರಲಿಲ್ಲ. ದಿನವೆಲ್ಲ ಒಬ್ಬಂಟಿಗಳಾಗಿ ಅವಳು ಆ ಅರವಂಟಿಗೆಯಲ್ಲಿಯೇ ಇರಬೇಕಾಗುತ್ತಿತ್ತು. ಆಗಾಗ್ಗೆ ನಾಲ್ಕಾರು ಮಂದಿ ದೂರದ ಪ್ರಯಾಣಿಕರು ನೀರು ಕುಡಿಯುವುದಕ್ಕಾಗಿ ಅಲ್ಲಿಗೆ ಬರುವರು. ಬಾಯಾರಿಕೆ ಹೋಗಲಾಡಿಸಿ ಕೊಂಡು, ಕ್ಷಣಕಾಲ ತಂಗಿದ್ದು, ನಗರಾಭಿಮುಖವಾಗಿ ಹೊರಟು ಹೋಗುವರು… ಹೀಗೆ ಯಾರ ಜೊತೆಯೂ ಸುಗೋಪಾಳಿಗೆ ಇಲ್ಲದಿರುವುದರಿಂದ ಕತೆಯೂ ಬೇಸರವೆನಿಸುತ್ತಿರಲಿಲ್ಲ. ಬಹುದೂರದ ‘ವಕ್ಷು’ ನದಿಯ ತೀರದಲ್ಲಿ ಹೂಣರು ಹೇಗೆ ಜೀವನ ಸಾಗಿಸುತ್ತಿದ್ದರು; ಅಲ್ಲಿಂದ ಮುಂದೆ ಅಲೆಮಾರಿಗಳೂ ಹಾಗೂ ಚಂಚಲಸ್ವಭಾವದವರೂ ಆದ ಅವರು ಹೇಗೆ ತಮ್ಮ ಗುಂಪನ್ನು ಗಾಂಧಾರದ ಎಲ್ಲೆಕಟ್ಟಿನ ಪ್ರದೇಶಕ್ಕೆ ಕರೆತಂದು ನಿಲ್ಲಿಸಿದರು; ಆ ನಂತರ ಪಂಚನದ ಪ್ರಾಂತದ ಹಚ್ಚ ಹಸುರಿನ ಪ್ರದೇಶದಿಂದ ಆಕರ್ಷಿತರಾಗಿ ಮಿಡತೆಗಳಂತೆ ಚೆಲ್ಲಾಪಿಲ್ಲಿಯಾಗಿ ಹೋಗಿ ಅಲ್ಲಿಯೇ ನೆಲಸಿದರು… ಸ್ಕಂದಗುಪ್ತನೊಡನೆ ಯುದ್ಧ, ಹೂಣಗಣವು ಸೋತು ಹಿಮ್ಮೆಟ್ಟಿದುದು, ಸ್ವಲ್ಪ ಕಾಲದ ನಂತರ ಹನ್ನೆರಡು ಸಾವಿರ ಹೂಣರು ಈ ವಿಟಂಕ ರಾಜ್ಯವನ್ನು ವಶಪಡಿಸಿಕೊಂಡು ಬಾಳಿದುದು, ರಾಜಧಾನಿಯಾದ ಕಪೋತಕೂಟವನ್ನು ಪ್ರವೇಶಿಸಿ ಅರಮನೆಯನ್ನು ಮುತ್ತಿದುದು… ಇತ್ಯಾದಿ
ಇತ್ಯಾದಿ… ಮೋಂಗ್ ಕತೆ ಹೇಳುತ್ತಿದ್ದನು. ಸುಗೋಪಾ ಹತ್ತಿರದಲ್ಲಿಯೇ ಒಂದು ಕಲ್ಲಿನ ಮೇಲೆ ಕುಳಿತು, ಕೆನ್ನೆಯ ಮೇಲೆ ಕೈಗಳನ್ನಿಟ್ಟು, ಕತೆ ಕೇಳುತ್ತಿದ್ದಳು.
ಕಪ್ಪೆಯ ಧ್ವನಿಯಂತೆ ಒಂದು ಕರ್ಕಶಧ್ವನಿ ಮೋಂಗನ ಕಂಠದಿಂದ ಹೊರಹೊಮ್ಮಿತು- ಅದೇ ಅವನ ನಗು! ತುಸು ಹೊತ್ತು ವಿನೋದವಾಗಿ ಕಾಲ ಕಳೆದ ಮೇಲೆ ‘ಕುರಿಗಳು! ಶುದ್ಧ ಕುರಿಗಳು! ಇನ್ನೆಲ್ಲಿಯ ಹೂಣ ಜಾತಿ? ಕುರಿ… ಕುರಿಗಳಾಗಿ ಹೋದರು! ಇಪ್ಪತ್ತೈದು ವರ್ಷಗಳ ಹಿಂದೆ. ಅವರು… ಓ… ಅವರು ಸಿಂಹ… ಸಿಂಹಗಳಾಗಿದ್ದರು!… ಆದರೆ, ಈ ದಿನ…
ಕುರಿ… ಕುರಿಗಳು’ ಎಂದು ಅವನು ಉದ್ಗಾರ ತೆಗೆದನು. ‘ಯಾರನ್ನು ದೂರಿ ಏನು ಪ್ರಯೋಜನ? ನಮ್ಮ ಮಹಾರಾಜರು… ಹೌದು. ನಮ್ಮ ಮಹಾರಾಜರು.. ಹಿಂದೆ ಇಲ್ಲಿಯ ವೀರ್ಯಹೀನನಾದ ಅಧಿಪತಿಯ ತಲೆಯನ್ನು ತರಿದು, ತಮ್ಮ ಭಲ್ಲೆಯ ತುದಿಗೆ ಸಿಕ್ಕಸಿಕೊಂಡು ಮೆರೆಯಲಿಲ್ಲವೆ? ಅವರೇ… ಆ ಮಹಾರಾಜರೇ ಇಂದು ಅಹಿಂಸಾಧರ್ಮವನ್ನು ಸ್ವೀಕರಿಸಿ, ಒಂದು ಚಿಕ್ಕ ಹಂದಿಯನ್ನೂ ಕೂಡ ಭಕ್ಷಿಸದವರಾಗಿ ಕುಳಿತಿದ್ದಾರೆ. ಧರ್ಮವಂತೆ ಧರ್ಮ! ಯಾರಿಗೆ ಕತ್ತಿಯೊಂದೇ ಏಕಮಾತ್ರ ದೈವವಾಗಿತ್ತೋ, ಅವರೇ ಚೈತ್ಯಗಳನ್ನು ನಿರ್ಮಾಣ ಮಾಡಿಸಿ, ಯಾವನೋ ಒಬ್ಬ ಭಿಕ್ಷುಕನ ಮೂಳೆಗಳನ್ನು ಪೂಜೆ ಮಾಡುತ್ತಿದ್ದಾರೆ!’ ಹ..ಹ್ಹ..ಹ್ಹಾ!! ಈ ರೀತಿ ಮೋಂಗನ ಕಂಠದಿಂದ ಶ್ಲೇಷೆಯಿಂದ ಕೂಡಿದ ಕರ್ಕಶ ಧ್ವನಿ ಹೊರಬಂದಿತು.
ಸುಗೋಪಾ- (ಕೆನ್ನೆಯಿಂದ ಕೈಗಳನ್ನಿಳುಹಿ) “ಮಹಾರಾಜರು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದಾರೆ.”
ಮುಂದುವರೆಯುವುದು……
ಎನ್. ಶಿವರಾಮಯ್ಯ (ನೇನಂಶಿ)
ತುಮಕೂರು